ಅಮೇರಿಕದ ಅಧ್ಯಕ್ಷೀಯ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು ಟ್ರಂಪ್ ಮೇಲಿನ ದಾಳಿಯ ನಂತರ ಈಗ ಕಮಲಾ ಹ್ಯಾರಿಸ್ ಅವರ ಕಚೇರಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅರಿಜೋನಾದಲ್ಲಿರುವ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರದ ಕಚೇರಿಯ ಮೇಲೆ ಮಧ್ಯರಾತ್ರಿ ಹಲವಾರು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಬುಧವಾರ ದೃಢಪಡಿಸಿದ್ದಾರೆ.
ʼʼಕಟ್ಟಡದ ಕಿಟಕಿಗಳಿಂದ ಗುಂಡು ಹಾರಿಸಲಾಗಿದ್ದು, ಮಧ್ಯರಾತ್ರಿ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆʼʼ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಗುಂಡಿನ ದಾಳಿಯಲ್ಲಿ ಯಾವುದೇ ಮಾರಣಾಂತಿಕ ಅನಾಹುತ ಆಗಿಲ್ಲ. ಮಧ್ಯರಾತ್ರಿ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆʼʼ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ʼʼಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಇದು ಆ ಕಟ್ಟಡದಲ್ಲಿ ಕೆಲಸ ಮಾಡುವವರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟು ಮಾಡಿದೆʼʼ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಸಾರ್ಜೆಂಟ್ ರಯಾನ್ ಕುಕ್ ಹೇಳಿದ್ದಾರೆ. ಮುಂಭಾಗದ ಕಟ್ಟಡದ ಕಿಟಕಿಗಳ ಮೂಲಕ ಗುಂಡು ಹಾರಿಸಿರಬಹುದು ಎಂದು ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಪ್ರಚಾರ ಕಚೇರಿಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಪ್ರಚಾರ ಆರಂಭಿಸಿದ ಬಳಿಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ 2 ಬಾರಿ ದಾಳಿ ನಡೆದಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆ ಮೊದಲ ಗುಂಡಿನ ದಾಳಿ ನಡೆದಿತ್ತು. ಆಗ ಟ್ರಂಪ್ ಕೂದಲೆಳೆ ಅಂತರದಿಂದ ಪಾರಾಗಿದ್ದರು. ಅದಾದ ಬಳಿಕ ಸೆಪ್ಟೆಂಬರ್ 15ರಂದು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯಿಂದಲೂ ಅವರು ಪಾರಾಗಿದ್ದರು. ಈ ಎರಡು ದಾಳಿಯ ನಂತರ ಈಗ ಕಮಲಾ ಹ್ಯಾರಿಸ್ ಅವರ ಕಛೇರಿ ಮೇಲಿನ ದಾಳಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಏಷ್ಯನ್-ಅಮೆರಿಕನ್ ಮತದಾರರಲ್ಲಿ ಶೇ. 38ರಷ್ಟು ಅಂಕಗಳೊಂದಿಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುಂದಿದ್ದಾರೆ ಸಮೀಕ್ಷೆ ತಿಳಿಸಿದೆ.