Home ಅಂಕಣ ಮಗಳ ದಿನದಂದು ಮೂಡಿದ ಅರಿವು

ಮಗಳ ದಿನದಂದು ಮೂಡಿದ ಅರಿವು

0

“ನಾವು ನಮ್ಮ ಮಕ್ಕಳನ್ನ ಭೂತವಾಗಿ ಕಾಡುತ್ತೇವೆಯೇ ಅಥವಾ ದಾರಿ ದೀಪವಾಗುವ ಹಿರಿಯರಾಗುತ್ತೇವೆಯೇ? ಅವರ ಪೀಡಕರಾಗುತ್ತೇವೆಯೇ ಅಥವಾ ಮಾರ್ಗದರ್ಶಕರಾಗುತ್ತೇವೆಯೇ?..” ಹರೀಶ್ ಗಂಗಾಧರ್ ಅವರ ಬರಹದಲ್ಲಿ

ನೀವು ಒಂದೇ ನದಿಯನ್ನು ಎರಡು ಬಾರಿ ದಾಟಲಾರಿರಿ ಎಂಬ ಮಾತಿದೆ. ಹರಿಯುವ ನದಿ ಮುಂದೆ ಮುಂದೆ ಸಾಗುತ್ತಲೇ ಇರುತ್ತದೆ. ನೀವು ಕೂಡ ಪ್ರತಿ ಕ್ಷಣವೂ ಬದಲಾಗುತ್ತಲೇ ಇರುತ್ತೀರಿ. ಬದಲಾವಣೆಯೊಂದೇ ಶಾಶ್ವತ. ನಾನು ಬದಲಾಗಿದ್ದೇನೆ!

ಬದುಕಿನ ಈ ಹಂತದಲ್ಲಿ ಭ್ರಷ್ಟ ವ್ಯವಸ್ಥೆ, ಸಾಮಾಜಿಕ ಪಿಡುಗುಗಳು, ಆತಂಕ ಹುಟ್ಟಿಸುವ ಅತ್ಯಾಚಾರಗಳು ನನ್ನಲ್ಲಿ ನಡುಕ ಹುಟ್ಟಿಸುತ್ತದೆ ನಿಜ ಆದರೆ ದೊಡ್ಡ ಮಟ್ಟದ ಸಾಮಾಜಿಕ ಬದಲಾವಣೆ, ನಮ್ಮನ್ನು ಕಾಡುತ್ತಿರುವ ಪಿಡುಗುಗಳಿಗೆ ಶಾಶ್ವತ ಪರಿಹಾರ ಆತ್ಮಾವಲೋಕನದಿಂದ ಮತ್ತು ಮುಂದಿನ ಪೀಳಿಗೆಯ ಆರೋಗ್ಯಕರ ಬೆಳವಣಿಗೆಯಿಂದ ಮಾತ್ರ ಸಾಧ್ಯವೆಂಬ ನಂಬಿಕೆ ಈ ಕ್ಷಣಕ್ಕೆ ನನ್ನದಾಗಿದೆ.

ಮುಂದಿನ ಪೀಳಿಗೆಯ ಪ್ರಾಥಮಿಕ ಬೆಳವಣಿಗೆ, ಅನುಭವ ಲೋಕ, ಮತ್ತು ಅವುಗಳ ಪ್ರಥಮ ಕಣ್ಮಣಿಗಳು ಪೋಷಕರೇ ಆಗಿರುತ್ತಾರೆ. ಮುಂದಿನ ಪೀಳಿಗೆ ರೂಪಗೊಳ್ಳುತ್ತಿರುವುದೇ ಪುಟ್ಟ ಪುಟ್ಟ ಮನೆಗಳಲ್ಲಿ. ಮನೆಯ ವಾತಾವರಣ, ಪೋಷಕರ ಪ್ರಭಾವ ಮುಂದಿನ ಪೀಳಿಗೆಯ ನೋಟವನ್ನು, ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಹಾಗಿದ್ದಾಗ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಪಾತ್ರ ಮಹತ್ವದ್ದೇ ಆಗಿರುತ್ತದೆ.

ದುರಂತವೇನೆಂದರೆ ಭಾರತದಂತಹ ರಾಷ್ಟ್ರಗಳಲ್ಲಿ ಉತ್ತಮ ಪೋಷಕರಾಗುವುದು ಹೇಗೆ ಎಂಬ ತರಬೇತಿಯಾಗಲಿ ಅಥವಾ ಮಾರ್ಗದರ್ಶನವಾಗಲಿ ಸಿಗುವುದೇ ಇಲ್ಲ. ಸಾಕಷ್ಟು ಮಕ್ಕಳಿಗೆ ಬಾಲ್ಯವೆನ್ನುವುದು ಹಿತಕರವಾಗಿರದೆ ಭಯಾನಕ ದುಃಸ್ವಪ್ನವದು ಎಂಬಂತಾಗಿರುತ್ತದೆ. ಮಕ್ಕಳನ್ನು ಎಲ್ಲರ ಮುಂದೆ ಹಿಗ್ಗಾ ಮುಗ್ಗಾ ಥಳಿಸುವುದು, ಅವಮಾನ ಮಾಡುವುದು, ಮಾನಸಿಕವಾಗಿ ನೋಯಿಸುವುದು, ಅಸಭ್ಯವಾಗಿ ನಡೆದುಕೊಳ್ಳುವುದು, ಮಕ್ಕಳ ಸಮಕ್ಷಮದಲ್ಲಿ ಹೆಂಡತಿ/ಗಂಡನನ್ನು/ಸಂಬಂಧಿಕರನ್ನು ನಿಂದಿಸುವುದು, ಪರರೊಡನೆ ಹೋಲಿಕೆ ಮಾಡುವುದು, ಅಸೂಯೆ ಪಡುವುದು, ಜನ ನಂಬಿಕೆಗೆ ಅರ್ಹರಲ್ಲವೆಂದು ಮತ್ತೆ ಮತ್ತೆ ಹೇಳುವುದು, ಧರ್ಮ/ಜಾತಿಯ ಹೆಸರಲ್ಲಿ ನಂಜು ತುಂಬುವುದು, ತಮ್ಮ ಈಡೇರದ ಕನಸಗಳನ್ನು ಮಕ್ಕಳ ಮೇಲೆ ಹೇರುವುದು ನಮ್ಮ ಮಕ್ಕಳ ಬಾಲ್ಯದ ಕೆಲ ಅನುಭವಗಳು.

ಒಂದಂತೂ ದಿಟ, ಈ ದೇಶದ ಜನರಿಗೆ ಮಕ್ಕಳಿದ್ದಾರೆ ಆದರೆ ಮಕ್ಕಳಿರುವ ಜನರಿಗೆಲ್ಲಾ ಪೋಷಕರಿಲ್ಲ. ಮಕ್ಕಳ ಸೃಷ್ಟಿ ಬಯೋಲಾಜಿಕಲ್ ಆದರೂ ಪೋಷಕರಾಗುವ ಪ್ರಕ್ರಿಯೆ ಸೈಕಲಾಜಿಕಲಾದುದು. ಪೋಷಕರಾಗುವುದೊಂದು ಪ್ರಜ್ಞಾಪೂರ್ವಕ ಆಯ್ಕೆ. ಅಲ್ಲಿ ಮಕ್ಕಳನ್ನು ಬೆಳೆಸುವ ಬದ್ಧತೆಯಿರುತ್ತದೆ, ನಿರ್ದಿಷ್ಟ ಆದ್ಯತೆಗಳಿರುತ್ತವೆ, ತ್ಯಾಗಗಳಿರುತ್ತವೆ, ಫಲಾಪೇಕ್ಷೆಯಿಲ್ಲದ ಸೇವೆಯಿರುತ್ತವೆ, ಕಠಿಣ ನಿರ್ಧಾರಗಳಿರುತ್ತವೆ, ಎಲ್ಲಕ್ಕಿಂತ ಹೆಚ್ಚಾಗಿ ಕ್ಷೀಣಿಸದ ಪ್ರೀತಿಯಿರುತ್ತದೆ.

ನನಗಿನ್ನು ನೆನಪಿದೆ ಒಮ್ಮೆ ಯಾರದೋ ಮಾತು ಕೇಳಿಕೊಂಡು ಅಪ್ಪ ನನ್ನನ್ನು ಥಳಿಸಿದ್ದು. ಹಾಗೆಯೆ ನಾನು ನನ್ನ ಹೆಂಡತಿ ಜಗಳವಾಡುವಾಗ ನನ್ನ ಪುಟ್ಟ ಮಗಳು ಒಂದು ಮೂಲೆಯಲ್ಲಿ ನಿಂತು ಕಣ್ಣೀರಿಡುತ್ತಾ ನಡುಗುತ್ತಿದ್ದುದು ಕೂಡ ನೆನಪಿದೆ. ಐವತ್ತು ಅರವತ್ತು ವರ್ಷಗಳ ಕೆಳಗೆ ಭಾರತದ ಬಹುಪಾಲು ಮಕ್ಕಳು ತಮ್ಮ ಹತ್ತನೇ ವಯಸ್ಸು ದಾಟುವುದೇ ಬಹುದೊಡ್ಡ ಸವಾಲಾಗಿತ್ತು. ಬಹಳಷ್ಟು ಮಕ್ಕಳು ಹೆರಿಗೆಯ ಸಮಯದಲ್ಲೇ ಅಸುನೀಗಿದರೆ, ಉಳಿದ ಮಕ್ಕಳು ಸಿಡುಬು, ಪ್ಲೇಗ್, ಟೈಫಾಯಿಡ್, ಕಾಲೆರ, ಮೆದುಳು ಜ್ವರಕ್ಕೆ ಬಲಿಯಾಗುತ್ತಿದ್ದರು. ಅಂಗವೈಕಲ್ಯ, ಪೋಲಿಯೋ ಕೂಡ ಸರ್ವೇ ಸಾಮಾನ್ಯವಾಗಿತ್ತು. ಆರೈಕೆ, ಪ್ರೀತಿ ಬಿಡಿ ಅಂದಿನ ಕಾಲಕ್ಕೆ ಮಕ್ಕಳನ್ನು ಹತ್ತರ ವಯಸ್ಸು ದಾಟಿಸುವುದೇ ಪೋಷಕರ ಸಾಧನೆಯಾಗಿರುತಿತ್ತು! ಮುಂದುವರೆದು ಮಕ್ಕಳು ಸಂಖ್ಯೆ ಹೆಚ್ಚಾದಂತೆ ದುಡಿಯುವ ಕೈಗಳು ಕೂಡ ಹೆಚ್ಚಾಗುತ್ತವೆ ಎಂಬ ಭ್ರಮೆಯಲ್ಲಿ ಪೋಷಕರಿದ್ದ ಕಾಲಕ್ಕೆ ನಮ್ಮ ಬಾಲ್ಯ ಸಹನೀಯವಾಯಿಯೇ ಇತ್ತು ಎಂದರೆ ತಪ್ಪಾಗಲಾರದು. ಪೋಷಕರು ನಮ್ಮನ್ನು ಸರಿಯಾಗಿಯೇ ನೋಡಿಕೊಂಡರೆಂದು ಅನಿಸುತ್ತೆ.

ಪೋಷಕರೆಂದರೆ- ತಂದೆ ಮತ್ತು ತಾಯಿ. ಆದರೆ ಭಾರತೀಯರು ಸಾಮಾನ್ಯವಾಗಿ ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ತಾಯಿಯ ಮೇಲೆ ಹೊರಿಸಿಬಿಡುವ ಸಂಪ್ರದಾಯವು ಇದೆ. ತಂದೆ ಮನೆಯ ಹೊರಗೆ ದುಡಿಯುತ್ತಾನೆ, ತಾಯಿ ಮಕ್ಕಳ ಪೋಷಣೆ ಮಾಡಬೇಕು ಎಂಬುದು ಇಲ್ಲಿ ಅಲಿಖಿತ ನಿಯಮ. ಇಂತಹ ಅಂಧ ನಂಬಿಕೆ, ನಿಯಮಗಳಿಂದ ತಂದೆ ಮಕ್ಕಳ ನಡುವೆ ಆತ್ಮೀಯತೆ ಬೆಳೆಯದೆ ಒಂದು ಅಫೀಷಿಯಲ್ ಅಂತರ ಮೈನ್ಟೈನ್ ಮಾಡೋದು ಸಂಸ್ಕೃತಿಯಾಗಿ ಒಪ್ಪಿತವಾಗುತ್ತದೆ. ಈ ಅಂತರದಿಂದ ಅಪ್ಪ ಮತ್ತು ಮಕ್ಕಳ ನಡುವೆ ಜೀವನದಲ್ಲಿ ಒಂದು ಅರ್ಥಪೂರ್ಣ ಸಂವಾದ ಕೂಡ ಆಗದೆ ಹೋಗುತ್ತದೆ! ಒಮ್ಮೆ ವಿನ್ಸ್ ಟನ್ ಚರ್ಚಿಲ್ ಮಗ ರಾಂಡಾಲ್ಫ್ ನೊಂದಿಗೆ ಹಲವು ದಿನಗಳನ್ನು ಕಳೆದನಂತೆ. ರಾಂಡಾಲ್ಫ್ ಶಾಲಾ ರಜಾ ದಿನಗಳವು. ಅಪ್ಪ ಮಗನ ನಡುವೆ ಸಾಕಷ್ಟು ಮಾತುಕತೆ, ಹರಟೆ ನಡೆದ ದಿನಗಳವು. ರಜಾ ದಿನಗಳು ಮುಗಿದ ನಂತರ ಚರ್ಚಿಲ್ ನಿಟ್ಟುಸಿರು ಬಿಡುತ್ತ ಹೇಳಿದನಂತೆ ” ನಾನು ನೀನು ಈ ರಜಾ ದಿನಗಳಲ್ಲಿ ಮಾತನಾಡಿದಷ್ಟು, ನಾನು ನನ್ನಪ್ಪ ಇಡೀ ಜೀವನದಲ್ಲಿ ಮಾತನಾಡಿರಲಿಲ್ಲ ಕಣೋ” ಎಂದು.

ಕಾಲ ಬದಲಾಗಿದೆ ವಿಜ್ಞಾನ ಬೆಳೆದಿದೆ. ಜನರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಮಕ್ಕಳು ಬದುಕುಳಿಯುತ್ತಿದ್ದಾರೆ. ಪೋಷಣೆ ತಾಯಿಯ ಜವಾಬ್ದಾರಿಯಾಗದೆ ತಂದೆಯ ಜವಾಬ್ದಾರಿಯು ಕೂಡ ಎಂಬ ಅರಿವು ನಿಧಾನವಾಗಿ ಮೂಡುತ್ತಿದ್ದೆ. ವಿಜ್ಞಾನ ಬೆಳೆದಿದೆ. ಜನರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಮಕ್ಕಳು ಬದುಕುಳಿಯುತ್ತಿದ್ದಾರೆ. ಪೋಷಣೆ ತಾಯಿಯ ಜವಾಬ್ದಾರಿಯಾಗದೆ ತಂದೆಯ ಜವಾಬ್ದಾರಿಯು ಕೂಡ ಎಂಬ ಅರಿವು ನಿಧಾನವಾಗಿ ಮೂಡುತ್ತಿದ್ದೆ. “ಲೋಕದ ಡೊಂಕನ್ನೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.” ಎಂಬ ಬಸವಣ್ಣನವರ ವಚನ ಮತ್ತೆ ಮತ್ತೆ ನನ್ನ ಕಣ್ಮುಂದೆ ಬಂದು ನಾನು ಕೂಡ ಅಂತರ್ಮುಖಿಯಾಗುತ್ತಿದ್ದೇನೆ.

ಬಸವ, ಬುದ್ಧ, ಅಲ್ಲಮರ ಮಾರ್ಗವೇ ಅದಾಗಿತ್ತು. They were so conscious about the self. ನನ್ನಲ್ಲಿ ಒಂದು ಮಟ್ಟದ ಸುಧಾರಣೆ ಬಂದಾಗ ಮಾತ್ರ ನಾನು ಸಮಾಜವನ್ನು ತಿದ್ದುವ ಅಥವಾ ಟೀಕಿಸು ಸಾಹಸಕ್ಕೆ ಕೈ ಹಾಕಬಲ್ಲೆ ಎಂಬ ಆಂತರಿಕ ಎಚ್ಚರ ಮೂಡಿದೆ. ನನ್ನಲ್ಲಿ ನಾನು ಸುಧಾರಣೆ ಮಾಡಿಕೊಳ್ಳದೆ, ನಾನು ಮನೆಯಲ್ಲಿ ಒಳ್ಳೆಯ ಪೋಷಕನಾಗದೆ ಸಮಾಜವನ್ನು ಸುಧಾರಿಸಲು ಹೊರಟರೆ ಅದು ನಿಜವಾಗಿಯೂ ಅಲ್ಲಮ ಹೇಳುವಂತೆ ಕತ್ತೆಗೆ ಕರ್ಪೂರವ ಹೇರಿದಂತಾಗುತ್ತದೆ!

ಪುಟ್ಟ ಪೋರನೊಬ್ಬ ತತ್ವಜ್ಞಾನಿ ಪ್ಲೇಟೋ ಮನೆಯಲ್ಲಿದ್ದನಂತೆ. ಆತ ಮಹಾನ್ ತತ್ವಜ್ಞಾನಿಯ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದನಂತೆ. ಬಿಡುವಿನ ದಿನಗಳಲ್ಲಿ ಮನೆಗೆ ಬಂದಾಗ ಪುಟ್ಟ ಪೋರನ ತಂದೆ ಮನೆಯಲ್ಲಿ ಅರಚುತ್ತಿದ್ದುದು, ಹಿಂಸಾ ಪ್ರವೃತ್ತಿ ಪ್ರದರ್ಶಿಸುತ್ತಿದ್ದುದು ಆತನಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಪುಟ್ಟ ಪೋರ ಮುಗ್ಧನಂತೆ ” ಪ್ಲೇಟೋ ಮನೆಯಲ್ಲಿ ಯಾರು ಕೂಡ ನಿನ್ನಂತೆ ಆಡಿದ್ದನ್ನು ನಾನೆಂದು ಕಂಡಿಲ್ಲ” ಎಂದ.

ಮನೆಯಲ್ಲಿ ನಾವು ಮಕ್ಕಳ ಮುಂದೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿ ಹಿಂಸೆ, ನಿಂದನೆ, ಹಗೆತನ, ಅಸೂಯೆ, ಅಪನಂಬಿಕೆ, ಆಕ್ರೋಶ, ಕ್ರೌರ್ಯ, ಒರಟುತನ ಹೇರಳವಾಗಿದ್ದರೆ ಮಕ್ಕಳಿಗೆ ಇವೆಲ್ಲವೂ ಸಹಜವೆಂಬಂತಾಗುತ್ತದೆ. ಪ್ರೀತಿಸುವವರನ್ನೂ ಒರಟಾಗಿ ಕಾಣಬಹುದು ಎಂದಾಗುತ್ತದೆ, ಸಂಗಾತಿಯನ್ನು ನಿಂದಿಸುವುದು ಸರಿಯೆಂದಾಗುತ್ತದೆ. ಮಕ್ಕಳ ಮುಂದೆ ಸಣ್ಣ ಸಣ್ಣ ವಿಷಯಗಳಿಗೂ ಆತಂಕಕ್ಕೊಳಗಾದರೆ ಮಕ್ಕಳಿಗೆ ಇಡೀ ಜಗತ್ತೇ ಭಯಾನಕ ತಾಣವಾಗಿ ಬಿಡುತ್ತದೆ. ನಾವು ಅನೈತಿಕ ಮಾರ್ಗವಿಡಿದರೆ, ಸುಳ್ಳು ಹೇಳುವುದು, ಮೋಸ ಮಾಡುವುದು ಒಪ್ಪಿತವೆಂದು ಮಕ್ಕಳು ಮನನ ಮಾಡಿಕೊಳ್ಳುತ್ತಾರೆ.

“ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲವೆಂದು ಚಿಂತಿಸಬೇಡಿ; ಅವರು ನಿಮ್ಮನ್ನು ಸದಾ ಗಮನಿಸುತ್ತಲೇ ಇರುತ್ತಾರೆಂದು ಚಿಂತಿಸಿ” ಎಂದ ಲೇಖಕ ರಾಬರ್ಟ್ ಫುಲ್ಗಮ್ ಅವರ ಮಾತುಗಳು ಎಷ್ಟು ಸತ್ಯವಲ್ಲವೇ? ನಮ್ಮ ಮಕ್ಕಳ ತಪ್ಪುಗಳು ನಮ್ಮ ತಪ್ಪುಗಳೇ. ಅವರ ದುರ್ನಡತೆ ನಮ್ಮ ದುರ್ನಡತೆಯೇ ಆಗಿರುತ್ತದೆ. ಈ ಪೀಳಿಗೆಯ ಆತಂಕ, ಆಘಾತ, ಖಿನ್ನತೆ, ಅಂಧತೆ, ಅಂಧಾಭಿಮಾನಗಳೆಲ್ಲವೂ ನಮ್ಮ ಪೀಳಿಗೆಯ ಕೊಡುಗೆಗಳೇ ಆಗಿವೆ.

ನಾವು ನಮ್ಮ ಮಕ್ಕಳನ್ನ ಭೂತವಾಗಿ ಕಾಡುತ್ತೇವೆಯೇ ಅಥವಾ ದಾರಿ ದೀಪವಾಗುವ ಹಿರಿಯರಾಗುತ್ತೇವೆಯೇ? ಅವರ ಪೀಡಕರಾಗುತ್ತೇವೆಯೇ ಅಥವಾ ಮಾರ್ಗದರ್ಶಕರಾಗುತ್ತೇವೆಯೇ? ಅವರನ್ನು ಧರ್ಮ, ಜಾತಿಗಳೆಂಬ ಸಂಕುಚಿತ ಸರಪಳಿಗಳಿಂದ ಬಂಧಿಸುತ್ತೇವೆಯೇ ಅಥವಾ ಸ್ವಚ್ಛಂದವಾಗಿ ಹಾರಾಡುವ ಹಾಗೆ ಮಾಡುತ್ತೇವೆಯೇ? ಅವರಿಗೆ ಶಾಪವಾಗುತ್ತೇವೆಯೇ ಅಥವಾ ಸ್ಪೂರ್ತಿಯಾಗುತ್ತೇವೆಯೇ? ಉತ್ತರ ಸ್ಪಷ್ಟವಾಗಿದೆ ಆದರೆ ನಡೆಯುವ ಹಾದಿ ಸವಾಲುಗಳಿಂದ ತುಂಬಿದೆ, ಕ್ರಮಿಸಬೇಕಾದ ದೂರ ನೂರಾರು ಮೈಲಿಯಿದೆ ಆದರಿಂದು ಆ ಪಯಣದ ಶುಭಾರಂಭವಾಗಲಿ… ಉತ್ತಮ ಪೋಷಕರಾಗುವ ಸದವಾಕಾಶ ಕೈಜಾರಿ ಹೋಗದಿರಲಿ. Change begins at home. Parenting is at the core of addressing all the social evils. Happy Daughter’s day.

  • ಹರೀಶ್ ಗಂಗಾಧರ್
    ಸ್ಪೂರ್ತಿ: ರಯನ್ ಹಾಲಿಡೇ

You cannot copy content of this page

Exit mobile version