Home ಅಂಕಣ ವೆಂಕಟಾಲ Chronicle: ಭಾಗ – 1, ಹನುಮಕ್ಕನ ವಲಸೆ

ವೆಂಕಟಾಲ Chronicle: ಭಾಗ – 1, ಹನುಮಕ್ಕನ ವಲಸೆ

0


ಹನುಮಕ್ಕ ದಿನಕ್ಕೆ ನೂರು ಮುದ್ದೆ ತಿರುವಿಹಾಕುವ ಮನೆಗೆ ಸೊಸೆಯಾಗಿ ಹೋದದ್ದು ತನ್ನ ಹನ್ನೆರಡನೇ ವಯಸ್ಸಿನಲ್ಲಿ. ತನ್ನ ಮಾವನ ಮೊದಲನೇ ಮಗ ನರಸಿಂಹಯ್ಯನನ್ನು ಕಟ್ಟಿಕೊಂಡು, ದೊಡ್ಡಬಳ್ಳಾಪುರದ ಸಿಂಪಾಡಿಪುರದಿಂದ, ನೆಲಮಂಗಲ, ತುಮಕೂರು ಅಂಚಿನ ಹೆಗ್ಗುಂದವೆಂಬ ಗ್ರಾಮಕ್ಕೆ ಹೋದಳು. ಮಾದಿಗರ ಹಟ್ಟಿಯಾದರೂ ಊರಿಗೇ ಶ್ರೀಮಂತರ ಮನೆ. ಮಾಳಿಗೆ ಮನೆ, ದಿನಕ್ಕೆ ಅಲ್ಲಿ ತಯಾರಾಗುತ್ತಿದ್ದದ್ದು ಬರೋಬ್ಬರಿ ನೂರು ಮುದ್ದೆಗಳು. ತನ್ನ ಮಾವನ ಏಳೆಂಟು ಎಕರೆ ಜಮೀನುಗಳಲ್ಲಿ ದುಡಿಯುತ್ತಿದ್ದ ಆಳುಕಾಳುಗಳಿಗೆ ನೂರು ಮುದ್ದೆಗಳು ಕೆಲವೊಮ್ಮೆ ಶಾರ್ಟೇಜ್‌ ಆಗುತ್ತಿತ್ತು. ಮಾಳಿಗೆ ಮನೆಯ ಮೇಲೆ ಒಣಾಕಿರುವ ಎಮ್ಮೆ, ದನದ ಕೊರಬಾಡಿನ ಸಾರು, ಮುದ್ದೆಗಳನ್ನು ತನ್ನೊಳಗೆ ಮುಳುಗಿಸಿಕೊಳ್ಳುತ್ತಿತ್ತು. ಹನುಮಕ್ಕನ ಮಾವ ಮಾದಿಗನಾದರೂ ಊರಿಗೆ ಯಜಮಾನನಂತೆ ಕಂಗೊಳಿಸುತ್ತಿದ್ದ.
ಮನೆಯ ತುಂಬಾ ನಾಲ್ಕೈದು ಸೊಸೆಯಂದಿರು, ಅವರ ಹತ್ತಾರು ಮಕ್ಕಳು ಓಡಾಡಿಕೊಂಡು, ಮಾಳಿಗೆ ಮನೆಯನ್ನು ಅಂಗನವಾಡಿಯನ್ನಾಗಿ ಮಾಡಿತ್ತು. ಹನುಮಕ್ಕ ಮತ್ತವರ ವಾರಗಿತ್ತಿಯರು, ದಿನಬೆಳಗಾದರೆ ಕೆಲಸ ಹಂಚಿಕೊಂಡು, ರಾಗಿಯನ್ನು ಬೀಸುವ ಕಲ್ಲಿಗೆ ಹಾಕಿ, ಹಾಡು ಹಾಡಿಕೊಳ್ಳುತ್ತಾ, ಎಡಗೈಗೆ ಸುಸ್ತಾದರೆ ಬಲಗೈ, ಬಲಗೈಗೆ ಸುಸ್ತಾದರೆ ಎಡಗೈಗೆ ಕೈ ಅದಲು ಬದಲು ಮಾಡಿಕೊಂಡು, ಹತ್ತರಿಂದ ಹದಿನೈದು ಸೇರು ರಾಗಿ ಬೀಸುವವರು ಒಂದು ಗುಂಪಾದರೆ, ಅಡುಗೆ ಮಾಡುವ ವಪಾರದಲ್ಲಿ ದೊಡ್ಡ ಮಣ್ಣಿನ ಬಾನೆಯಲ್ಲಿ ಹಿಟ್ಟು ಬೇಯಿಸಲು, ಸಾರು ಮಾಡಲು ಮತ್ತೊಂದು ಗುಂಪು ಶಸ್ತ್ರಸಜ್ಜಿತವಾಗಿ ನಿಲ್ಲುತ್ತಿತ್ತು.
ಹೀಗಿರುವಾಗ ಇಡೀ ಇಂಡಿಯಾಗೆ ಬಂದ ಬರ, ಹೆಗ್ಗುಂದದ ಮಾದಿಗರ ಹಟ್ಟಿಗೆ ಅಪ್ಪಳಿಸುವುದಕ್ಕೆ ಜಾಸ್ತಿ ಟೈಮ್‌ ತೆಗೆದುಕೊಳ್ಳಲಿಲ್ಲ. ಅರವತ್ತರ ದಶಕದ ಮಧ್ಯಭಾಗದಲ್ಲಿ ಅಪ್ಪಳಿಸಿದ ಭೀಕರ ಬರದಲ್ಲೂ, ಹನುಮಕ್ಕ ತನ್ನ ವಾರಗಿತ್ತಿಯರ ಜತೆಗೆ ಕುಳಿತುಕೊಂಡು ರಾಗಿ ಬೀಸುವ ಕಾಯಕವನ್ನು ನಿಲ್ಲಿಸಲಿಲ್ಲ. ಊರಿನ ಮೇಲ್ಜಾತಿಗಳ ಜನ ಕೂಡಾ ಆವತ್ತಿಗೆ ಹನುಮಕ್ಕ ಕೊಡುತ್ತಿದ್ದ ಸೇರು, ಪಾವು ರಾಗಿಹಿಟ್ಟಿನಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಮೊದಲೆಲ್ಲಾ ಗಟ್ಟಿಕಾಳುಗಳನ್ನಷ್ಟೇ ಬೇರ್ಪಡಿಸಿ ಅದನ್ನು ಬೀಸುವ ಕಲ್ಲಿಗೆ ಒಡ್ಡುತ್ತಿದ್ದ ಹನುಮಕ್ಕ ಮತ್ತವರ ವಾರಗಿತ್ತಿಯರು, ಬರುಬರುತ್ತಾ, ತಗ್ಗಲು ರಾಗಿ (ಜೊಳ್ಳುಕಾಳು)ಯನ್ನೂ ಒಡ್ಡುವ ಹಂತಕ್ಕೆ ಬಂದುಬಿಟ್ಟರು. ಕಣ ಮಾಡಿದ ಮೇಲೆ ರಾಗಿಯನ್ನು ಪಲ್ಲದ ಗೋಣಿ ಚೀಲಗಳಿಗೆ ತುಂಬಿ ಒಂದೆಡೆ ಒಡ್ಡುತ್ತಿದ್ದರು. ತಳದಲ್ಲಿದ್ದ ಮೂಟೆ ಬಹುತೇಕ ಮುಗ್ಗುಲು ಅಂದರೆ ಬೂಸ್ಟ್‌ ಹಿಡಿದುಬಿಡುತ್ತಿತ್ತು. ಅದನ್ನು ತೊಳದು ಹಸುಗಳಿಗೆ ತಿನ್ನಿಸುತ್ತಿದ್ದರು. ಆದರೆ ಬರ ಅನ್ನುವುದು ಒಡಿದ್ದ ಬರೆ, ಮುಗ್ಗುಲು ರಾಗಿಯೂ ಮನುಷ್ಯ ಹೊಟ್ಟೆಯೆಂಬ ಪಾತಾಳ ಸೇರಿ ಕೃತಾರ್ಥವಾಗುತ್ತಿತ್ತು.
ಅಂಥ ತಗ್ಗುಲುರಾಗಿ ಮುಗ್ಗಲು ಹಿಟ್ಟಿನ ಮುದ್ದೆ ಉಣ್ಣುವ ಕಾಲದಲ್ಲೇ ಹನುಮಕ್ಕನಿಗಾಗಲೇ 9 ಮಕ್ಕಳು ಜನಿಸಿದ್ದವು. ಅವುಗಳಲ್ಲಿ ಎರಡು ಮೂರು ಮಕ್ಕಳಿಗೆ ಪೊಲೀಯೋ, ಮೊತ್ತೊಂದು ಕಿವುಡು, ಮಗದೊಂದು ಕೃಶಕಾಯ, ಇನ್ನೊಂದು ಬಿಕ್ಕಲು. ಇಂಥ ನಾನಾ ಬಗೆಯ ಮಕ್ಕಳನ್ನು ಸಲುಹಿ, ಬರಗಾಲದಲ್ಲೂ ಬದುಕಿ ಉಳಿದಿದ್ದವು. ಬಹುಶಃ ಇದೇ ಹನುಮಕ್ಕನಿಗೆ ಮುಳುವಾಯಿತು. ದೇಶಾದ್ಯಂತ ಬರಕ್ಕೆ ಸಿಲುಕಿ ಎಷ್ಟೋಜನ ಸಾವನ್ನಪ್ಪುತ್ತಿದ್ದರೂ, ಹನುಮಕ್ಕನ ಹೊಟ್ಟೆಯಿಂದ ಅವತರಿಸಿದ ನವಗ್ರಹಗಳಿಗೆ ಯಾವುದೇ ಅಪಾಯ ತಟ್ಟಿರಲಿಲ್ಲ. ಅವೆಲ್ಲವೂ ಮೃತ್ಯುಂಜಯರಂತೆ, ಮಾಳಿಗೆ ಮನೆಯ ಒಳಹೊರಗೆ ಕೈಕಾಲು ಆಡಿಸಿಕೊಂಡು ಚೆನ್ನಾಗೇ ಇದ್ದವು.
ಇನ್ನು ಹನುಮಕ್ಕನ ತವರು ಮನೆಯವರೇನೂ ಕಡಿಮೆಯಲ್ಲ. ಭಾರತದಲ್ಲೇ ಪ್ರಸಿದ್ಧವಾದ ವೀಣೆ ತಯಾರಿ ಮಾಡುವ ಸಿಂಪಾಡಿಪುರವೆಂಬ ಗ್ರಾಮದಲ್ಲಿ ತಳವಾರಿಕೆ ಮಾಡುತ್ತಿದ್ದ ಕುಟುಂಬದ ಹನುಮಕ್ಕ ಗಟ್ಟಿ ಹೆಣ್ಣು. ತಳವಾರಿಕೆಯಲ್ಲಿ ಸಿಗುತ್ತಿದ್ದ ರಾಗಿ, ತರಕಾರಿ ಪಾಲಷ್ಟೇ ಅಲ್ಲದೆ, ಅವಳ ತಮ್ಮ ಆಂಜಿನಪ್ಪ ಮಾಡುತ್ತಿದ್ದ ವೀಣೆಯ ಹಣ ತಕ್ಕಮಟ್ಟಿಗೆ ಉಳ್ಳವರ ಸ್ಥಾನದಲ್ಲಿ ಕೂರಿಸಿತ್ತು. ಮುಳ್ಳಿನ ಮೇಲೆ ತಬಸ್ಸು (ತಪಸ್ಸು) ಮಾಡುವ ಮುಳ್ಳುಕಟ್ಟಮ್ಮ ದೇವಿಯ ಮೂಲಸ್ಥರಾದ ಹನುಮಕ್ಕನ ಕುಟುಂಬ ಈ ದೇವಿಯನ್ನು ಅತ್ಯಂತ ವಿಜೃಂಭಣೆಯಿಂದ ಪೂಜಿಸುತ್ತಿದ್ದರು. ಹೀಗಾಗಿ, ಹನುಮಕ್ಕ 16 ಮೈಲು ದೂರದ ಹೆಗ್ಗುಂದಕ್ಕೆ ಮದುವೆಯಾಗಿ ಹೋಗುವಾಗ ತನಗೆ ಮುಳ್ಳುಕಟ್ಟಮ್ಮ ದೇವಿಯಲ್ಲೂ ಪಾಲು ಬೇಕೆಂದು ಪಟ್ಟುಹಿಡಿದು, ತನ್ನ ಒಬ್ಬನೇ ತಮ್ಮನಾದ ಆಂಜಿನಪ್ಪನ ಹತ್ತಿರ ಬೇಲಾಡಿ, ಆ ದೇವಿಯನ್ನು ಹೆಗ್ಗುಂದಕ್ಕೆ ಹೊತ್ತು ತಂದಳು. ಹೀಗೆ ಬಂದ ಮುಳ್ಳುಕಟ್ಟಮ್ಮ ರಾಮದೇವರ ಬೆಟ್ಟದ ತಪ್ಪಲಲ್ಲಿದ್ದ ಮಾಳಿಗೆ ಮನೆಯಲ್ಲಿ ನೆಲೆಗೊಂಡಳು. ವರ್ಷಕ್ಕೊಮ್ಮೆ ಕೋಣ, ಕೋಳಿಗಳನ್ನು ಬಲಿಕೊಟ್ಟು ಇಡೀ ಮಾದಿಗರ ಹಟ್ಟಿಗೆ ಊಟ ಹಾಕಿಸುತ್ತಿದ್ದ ಹನುಮಕ್ಕನ ಕುಟುಂಬದ ಮೇಲೆ ಮುಂದುವರೆದ ಜಾತಿಯ ಒಂದಷ್ಟು ಜನಕ್ಕೆ ಕಣ್ಣಾಸ್ರ ಹುಟ್ಟಿಕೊಂಡಿತ್ತು. ʻಪರಮ ಪವಿತ್ರವಾದ ರಾಮದೇವರು ಇರುವ ಕಾರಣ ಬಹಿರಂಗವಾಗಿ ಬಾಡೂಟ ಮಾಡುವುದು ಊರಿಗೆ ಕೇಡು ಒದಗಿಸುತ್ತದೆʼ ಎಂಬ ಬೆದರಿಕೆಯ ಮಾತುಗಳು ಅಲ್ಲಲ್ಲಿ ಎದ್ದು ಮಲಗುತ್ತಿದ್ದವು. ಇಂಥ ಕಾಲದಲ್ಲೇ ಅಪ್ಪಳಿಸಿದ್ದು ಬರ!
ಹಣ್ಣು ತೊಟ್ಟು ಕಳಚಿ ಬೀಳುವುದಕ್ಕೂ, ಕಲ್ಲು ಒಗೆಯುವದಕ್ಕೂ ಏಕವಾದಂತೆ ಮುಳ್ಳುಕಟ್ಟಮ್ಮ ಊರಿಗೆ ಬಂದದ್ದೇ ಬರಕ್ಕೆ ಕಾರಣ ಎಂಬ ನಂಬಿಕೆಗಳು ಮಾದಿಗರ ಹಟ್ಟಿಗೂ ನುಸುಳಿ, ಬಲವಾಗಿ ಬೇರೂರುವುದಕ್ಕೆ ಹೆಚ್ಚಿನ ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ಮಾದಿಗರಾದರೂ ನೂರಾರು ಮುದ್ದೆಗಳನ್ನು ಮಾಡುತ್ತಿದ್ದ ಮಾಳಿಗೆ ಮನೆಯನ್ನು ಹೇಗಾದರೂ ಮಾಡಿ ಕೆಡವಬೇಕೆಂಬ ಕಾರಣ ಹುಡುಕುತ್ತಿದ್ದ ಗಳಿಗೆಯಲ್ಲೇ ಮುಳ್ಳುಕಟ್ಟಮ್ಮನ ಪುರಪ್ರವೇಶವಾಗಿತ್ತು. ಆ ದೇವಿಯ ಆಹಾರಪದ್ಧತಿ, ನೆಲಮೂಲದ ಸಾಂಸ್ಕೃತಿಕ ಐಭೋಗದಿಂದ ಮೆಲ್ಲಗೆ ಇಲ್ಲಿನ ಮಾದಿಗರಿಗೆ ಹತ್ತಿರವಾಗುತ್ತಿದ್ದಳು. ವರ್ಷಕ್ಕೊಮ್ಮೆ ನಡೆಯುವ ರಾಮದೇವರ ಜಾತ್ರೆಯ ನಿರ್ದಿಷ್ಟವಾದ ದಿನದ ಒಂದು ಹೊತ್ತಿಗೆ ಮಾತ್ರ, ಬೆಟ್ಟ ಹತ್ತಿ ರಾಮದೇವನ ದರ್ಶನ ಮಾಡಲು ಅವಕಾಶವಷ್ಟೇ ಇದ್ದ ಮಾದಿಗರನ್ನು ಮುಳ್ಳುಕಟ್ಟಮ್ಮ ಮುಟ್ಟಿಸಿಕೊಳ್ಳುತ್ತಿದ್ದಳು, ಅಪ್ಪಿಕೊಳ್ಳುತ್ತಿದ್ದಳು, ನಂಬಿಕೆಯನ್ನು ಹುಟ್ಟಿಸಿಕೊಂಡಿದ್ದಳು.
ಹೀಗಿರುವಾಗ ಒಂದು ದಿನ ಹನುಮಕ್ಕನ ಮಾವ ಗಂಗಯ್ಯ ದನದ ಕೊಟ್ಟಿಗೆಯಲ್ಲೇ ಪ್ರಾಣ ಒಗೆದಿದ್ದ. ತನ್ನದೇ ಎತ್ತುಗಳು ಅವನ ತರಡು ಬೀಜಗಳಿಗೆ ಬಲವಾಗಿ ಒದ್ದದ್ದು ಕಾರಣವೆಂದು ತಿಳಿದುಬಂದಿತ್ತು. ಆತ ಸತ್ತು ವರ್ಷೊಪ್ಪತ್ತು ಮುಗಿಯುವುದರೊಳಗೆ ಹನುಮಕ್ಕನ ಒಂಬತ್ತು ಮಕ್ಕಳಲ್ಲಿ ಇಬ್ಬರು ಮಕ್ಕಳು ಫುಡ್‌ ಪಾಯಿಸನ್‌ ಕಾರಣದಿಂದ ತೀರಿಕೊಂಡವು. ಭೂಮಿಯ ಸೂರ್ಯನನ್ನು ಒಂದು ಸುತ್ತು ಹಾಕಿಬರುವಷ್ಟೊತ್ತಿಗೆ ಮತ್ತೆರಡು ಮಕ್ಕಳು ಅದೇ ಫುಡ್‌ ಪಾಯಿಸನ್‌ಗೆ ಬಲಿಯಾಗಿದ್ದವು. ಇಂಥ ಘಟನೆಗಳಿಗೆ ಹೆದರಿದ ಹನುಮಕ್ಕನ ಇಬ್ಬರು ಮೈದುನಂದಿರು ತಮ್ಮ ಮಕ್ಕಳು ಮರಿಗಳ ಸಮೇತವಾಗಿ ತನ್ನ ಹೆಂಡತಿಯರ ಊರುಗಳಿಗೆ ದೌಡುಕಿತ್ತರು. ಕಣ್ಣೀರಿನ ಹನಿಗಳ ಜೊತೆ ಜೊತೆಗೇ ಹೆಗ್ಗುಂದದ ಸಮೀಪದಲ್ಲೇ ಇದ್ದ ದೇವರಾಯ ದುರ್ಗದ ಮೇಲೆ ಮಳೆ ಸುರಿದು, ಮಂಜುಮುಸುಕುವ ವೇಳೆಗಾಗಲೇ ಮತ್ತೆ ಮೂರು ಮಕ್ಕಳು ಕಾಲನ ವಶವಾದವು. ಈ ಮೂರು ಮಕ್ಕಳು ತೀರಿಕೊಂಡಮೇಲಷ್ಟೇ ಹನುಮಕ್ಕನಿಗೆ ತನ್ನ ಮಕ್ಕಳನ್ನು ಯಾರೋ ಕೊಲ್ಲುತ್ತಿರುವ ವಿಷಯ ತಿಳಿದದ್ದು.
ಮೊದಲೇ ಊರುತಿರುಗ ಗಂಡನಾಗಿದ್ದ ನರಸಿಂಹಯ್ಯ ಮಾಗಡಿ ಸಮೀಪದ ಗುಡೇಮಾರನಹಳ್ಳಿಯಲ್ಲಿ ಮತ್ತೊಂದು ಒಲೆ ಒಡ್ಡಿಕೊಂಡು, ಅಲ್ಲೇ ಜಾಡಮಾಲಿ ಕೆಲಸ ಮಾಡಿಕೊಂಡು ಇದ್ದುಬಿಟ್ಟಿದ್ದ. ಒಂದು ಅವನು ಇಟ್ಟುಕೊಂಡಿದ್ದವಳೂ ಯಾರ ಹಿಂದೆಯೋ ಹೊರಟು ಹೋದಳು. ಅಷ್ಟರಲ್ಲಾಗಲೇ ನರಸಿಂಹಯ್ಯ ಅಲ್ಲೇ ಒಂದೆರಡು ಎಕರೆ ಜಮೀನು ಮಾಡಿ, ಒಂದು ಮನೆಯನ್ನೂ ಕಟ್ಟಿಬಿಟ್ಟಿದ್ದ. ಹೆಗ್ಗುಂದದಲ್ಲಿ ಜರುಗುತ್ತಿದ್ದ ಮಕ್ಕಳ ಸಾವಿಗೆ ಹೆದರಿ ಕಂಗಾಲಾಗಿ ನಡುಗುತ್ತಿದ್ದ ತನ್ನ ತಮ್ಮನಿಗೆ ಜಮೀನು, ಮನೆ, ಜಾಡಮಾಲಿ ಕೆಲಸ ಎಲ್ಲವನ್ನೂ ಬಿಟ್ಟುಕೊಟ್ಟು, ಆ ಕೆಲಸವು ಅವನಿಗೆ ಗೂರಲು ರೋಗವನ್ನು ಬಳುವಳಿಯಾಗಿ ನೀಡಿತ್ತು. ಅದನ್ನು ಹೊತ್ತುಕೊಂಡೇ ಹೆಗ್ಗುಂದ ಸೇರಿದ. ತನ್ನ ಗಂಡನ ತ್ಯಾಗವನ್ನು ಕೇಳಿ ಹನುಮಕ್ಕ ಗೋಳಿಟ್ಟಳು.
ಇದರ ನಡುವೆ ಸರಿಯಾದ ನಿರ್ವಹಣೆ ಇಲ್ಲದೆ ಮಾಳಿಗೆ ಮನೆ ಸೋರುತ್ತಿತ್ತು. ಅಡಕೆಪಟ್ಟೆ, ಬಿದಿರು ಗಳ, ಸೋಗೆ, ಜೇಡಿಮಣ್ಣಿನ ಮಣ್ಣಿನ ಮಿಶ್ರಣದ ಮಾಳಿಗೆ ಮನೆಯನ್ನು ಹನುಮಕ್ಕ ಒಬ್ಬಳಿಗೇ ನಿರ್ವಹಿಸುವುದು ಕಷ್ಟವಾಗಿತ್ತು. ವೀಣೆ ಕೆಲಸದ ಜತೆಗೆ ಊರಿನ ತಳವಾರಿಕೆಯನ್ನೂ ಮಾಡುತ್ತಿದ್ದ ಆಂಜಿನಪ್ಪ ಟೈಂ ಹೊಂದಿಸಿಕೊಂಡು ಆಗ್ಗಾಗ್ಗೆ ತನ್ನ ಅಕ್ಕನ ಮನೆಗೆ ಬಂದು ಮಾಳಿಗೆಗೆ ಕೈ ಹಾಕಿ ರಿಪೇರಿ ಮಾಡಿಹೋಗುತ್ತಿದ್ದ. ಸಂಪೂರ್ಣ ಮಾಳಿಗೆಯನ್ನು ಬದಲಾಯಿಸದ ಹೊರತು ಇದು ಸರಿಯಾಗಲ್ಲ ಎಂದರಿತ ತಳವಾರ ಆಂಜಿನಪ್ಪ, ಹೊಸಮನೆ ಕಟ್ಟುವುದೇ ಸೂಕ್ತವೆಂಬ ತೀರ್ಮಾನವನ್ನು ಮುಂದಿಟ್ಟ.
ಸರಿ ಹೆಂಚಿನ ಮನೆಯನ್ನು ಕಟ್ಟಿಕೊಳ್ಳುವುದು ಎಂದು ತೀರ್ಮಾನ ಮಾಡಿದರು. ತಿಂಗಳುಗಟ್ಟಲೇ ಹೆಗ್ಗುಂದದಲ್ಲೇ ನೆಲೆನಿಂತ ಆಂಜಿನಪ್ಪ ಗೂರಲು ಭಾವನನ್ನು ಕಟ್ಟಿಕೊಂಡು ಇಟ್ಟಿಗೆ ಕೊಯ್ದ. ಮಣ್ಣು ಕಲೆಸಿ, ಅಚ್ಚು ತೆಗೆದು, ಬಿಸಿಲಿಗೆ ಆರಿಟ್ಟು ಮಾಡುವ ಕೆಲಸ ಮಾಡುತ್ತಿದ್ದರು. ಅಷ್ಟರೊಳಗೆ ಮಳಗಾಲ ಆವರಿಸಿಕೊಂಡಿತು. ಜೋಡಿಸಿಟ್ಟಿದ್ದ ಇಟ್ಟಿಗೆಗಳ ಮೇಲೆ ಮಳೆಗೆ ತಡೆಯಾಗಿ ಒಡ್ಡಿದ್ದ ಸೋಗೆಯನ್ನು ಯಾರೋ ರಾತ್ರಿಯ ಹೊತ್ತಿನಲ್ಲಿ ಸರಿಸುತ್ತಿದ್ದರು, ಯಾರೆಂದು ತಿಳಿಯುವ ಹೊತ್ತಿಗೆ ಇಟ್ಟಿಗೆಗಳು ಕರಗಿ ತಮ್ಮ ಮೂಲಗಮ್ಯವನ್ನು ಸೇರಿಕೊಂಡಾಗಿತ್ತು, ಉಳಿದ ಇಬ್ಬರು ಮಕ್ಕಳು ವಯಸ್ಸಿಗೆ ಬಂದಿದ್ದರು. ಇಬ್ಬರಿಗೂ ಒಂದು ದಿನ ಆಮಶಂಕೆ ಬೇಧಿ ಶುರುವಾಯಿತು. ಗಾಡಿಕಟ್ಟಿಕೊಂಡು ನರಸೀಪುರದ ಆಸ್ಪತ್ರೆಗೆ ಹೋದಾಗ ಅಲ್ಲಿದ್ದ ಡಾಕ್ಟರ್‌ ಹೇಳಿದ್ದು ʻಏನ್‌ ತಿನ್ನಿಸಿದ್ರಮ್ಮ? ಫುಡ್‌ ಪಾಯಿಸನ್‌ ಆಗಿದೆʼ ಎಂದರು. ಹನುಮಕ್ಕನಿಗೆ ತನ್ನ, ತನ್ನ ಕುಟುಂಬದ ವಿರುದ್ಧ ನಡೆಯುತ್ತಿರುವ ಶಡ್ಯಂತ್ರದ ಘೋರತೆ ಇನ್ನೂ ಅಂತ್ಯಕಾಣುವುದಿಲ್ಲವೆಂಬ ಅರಿವಾಯ್ತು. ಬಹುಶಃ ಮೊದಲನೇ ಮಗುವಿಗೇ ಹೀಗಾದಾಗ ಆಸ್ಪತ್ರೆಗೆ ಬಂದಿದ್ದರೆ, ಕನಿಷ್ಟ ಎಂಟು ಮಕ್ಕಳಾದರೂ ಉಳಿಯುತ್ತಿದ್ದವೆಂದುವೆಂದು ತಿಳಿದು ಅವಳ ಹೊಟ್ಟೆಯೊಳಗಿನೆ ಕರುಳುಗಳು ಚುರುಗುಟ್ಟಿದವು.
ಇನ್ನು ತಡಮಾಡುವುದು ಸರಿಯಲ್ಲ ಎಂದರಿತ ಹನುಮಕ್ಕ ತನ್ನ ಗಂಡ ನರಸಿಂಹಯ್ಯನನ್ನು ಒಪ್ಪಿಸಿ, ಬೇಕಾದ ಕೆಲವೇ ಕೆಲವು ಸಾಮಾನುಗಳನ್ನು ಕಟ್ಟಿಕೊಂಡು, ಮಳ್ಳುಕಟ್ಟಮ್ಮನನ್ನು ಕಂಕುಳಲ್ಲಿ ಇರುಕಿಕೊಂಡು ರಾಮದೇವರಿಗೂ, ಆತ ನೆಲೆಸಿದ್ದ ಬೆಟ್ಟಕ್ಕೂ ಬೆನ್ನು ಹಾಕಿಕೊಂಡು ನಡೆಯತೊಡಗಿದಳು. ಡಾಕ್ಟರ್‌ ಮಾಡಿದ ಆರೈಕೆಯಿಂದ ಗೆಲುವಾಗಿದ್ದ ಮಕ್ಕಳು ತನ್ನವ್ವನ ಕಂಕುಳಲ್ಲಾಡುತ್ತಿದ್ದ ಮುಳ್ಳುಕಟ್ಟಮ್ಮ ದೇವಿಯೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಾ, ಹನುಮಕ್ಕನ ಸೆರಗ ಹಿಡಿದು ನಲಿಯುತ್ತಿದ್ದವು.
-ಮುಂದುವರೆಯುತ್ತದೆ…

.ವಿ. ಆರ್.ಕಾರ್ಪೆಂಟರ್

You cannot copy content of this page

Exit mobile version