Home ರಾಜ್ಯ ರಾಮನಗರ ಮತ ಹಾಕಿದ್ದೂ ಆಯಿತು, ಅವರು ಊರು ಬಿಟ್ಟಿದ್ದೂ ಆಯಿತು; ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ...

ಮತ ಹಾಕಿದ್ದೂ ಆಯಿತು, ಅವರು ಊರು ಬಿಟ್ಟಿದ್ದೂ ಆಯಿತು; ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ತಿವಿದ ಡಿಸಿಎಂ ಡಿ.ಕೆ. ಶಿವಕುಮಾರ್

0

ಚನ್ನಪಟ್ಟಣ, ಸೆ. 21: “ನೀವು ಮತ ಹಾಕಿದ್ದೂ ಆಯಿತು, ಅವರು ಊರು ಬಿಟ್ಟಿದ್ದೂ ಆಯಿತು. ಚನ್ನಪಟ್ಟಣದಲ್ಲಿ ಏನಿದ್ದರೂ ನಮ್ಮ ಹಾಗೂ ನಿಮ್ಮ ಸಂಬಂಧ. ನಾನು ಹುಟ್ಟಿದ್ದು ಇಲ್ಲಿ, ಸಾಯುವುದೂ ಇಲ್ಲಿಯೇ” ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿವಿದರು.

ಪಟ್ಟಣದ ಹಳೇ ತಾಲ್ಲೂಕು ಕಚೇರಿ ಮೈದಾನದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಪಟ್ಲು ಗ್ರಾಮದ ಫಲಾನುಭವಿಗಳಿಗೆ ದಾಖಲೆ ಪತ್ರಗಳನ್ನು ವಿತರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ನಾವು ಕೊಟ್ಟಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳಿಗೆ ಬೆಲೆ ಬರಬೇಕು. ಅನ್ನ ಊಟ ಮಾಡಿದವರು ಎಂದೂ ಇಲ್ಲ ಎಂದು ಹೇಳುವುದಿಲ್ಲ. ನಮ್ಮ, ನಿಮ್ಮ ಸಂಬಂಧ ಭಕ್ತ ಭಗವಂತನಿಗೆ ಇರುವ ಸಂಬಂಧ. ಇದನ್ನು ಉಳಿಸಿಕೊಂಡು ಹೋಗೋಣ” ಎಂದು ಹೇಳಿದರು.

“ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮುಖ್ಯಮಂತ್ರಿ ಆಗಿದ್ದಾಗ ಕುಮಾರಣ್ಣ, ಸಚಿವನಾಗಿದ್ದಾಗ ಯೋಗೇಶ್ವರ್ ಏಕೆ ಮಾಡಲಿಲ್ಲ? ನಾನು ನಿಮ್ಮ ಕೈ ಬಿಡುವವನಲ್ಲ. ಚನ್ನಪಟ್ಟಣ ಮಾದರಿಯಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡಲಾಗುವುದು” ಎಂದು ಹೇಳಿದರು.

“ನೂತನ ಚನ್ನಪಟ್ಟಣ ನಮ್ಮ ಕನಸು. ನಾವುಗಳು ಈಗ ಬೆಂಗಳೂರು ದಕ್ಷಿಣ ಜಿಲ್ಲೆಯವರು. ಅಭಿವೃದ್ಧಿಯ ಹೊಸ್ತಿಲಿನಲ್ಲಿ ನಾವಿದ್ದೇವೆ. ನಿಮ್ಮ ಹಾಗೂ ಜಿಲ್ಲೆಯ ಅಭಿವೃದ್ಧಿ ಮಾಡಿಯೇ ತೀರುತ್ತೇನೆ. ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ ನೀಡಲಾಗುವುದು. ಸರ್ಕಾರಿ ಜಮೀನು ಸಿಗದಿದ್ದರೂ ಪರವಾಗಿಲ್ಲ, ಖಾಸಗಿ ಜಮೀನು ಖರೀದಿ ಮಾಡಿ ಹಂಚಿಕೆ ಮಾಡಲಾಗುವುದು” ಎಂದು ಹೇಳಿದರು.

You cannot copy content of this page

Exit mobile version