ಶಿವಮೊಗ್ಗ: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ. ಇದೇ ನನ್ನ ಕೊನೆಯ ಬಸ್ ಸ್ಟಾಪ್ ಎಂದು ಆಯನೂರು ಮಂಜುನಾಥ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಪಕ್ಷದ ಎಲ್ಲಾ ಮುಖಂಡರು ನನ್ನ ನಿಲುವಿಗೆ ಸಹಮತ ನೀಡಿ, ಸಹಕಾರ ನೀಡುವ ಭರವಸೆ ನೀಡಿದ್ದಾರೆಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ, ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅವಕಾಶ ನೀಡಿತ್ತು. ಜೆಡಿಎಸ್ ನಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರುತ್ತಿದ್ದೇನೆ. ಜೆಡಿಎಸ್ ತೊರೆಯುತ್ತಿರುವುದಕ್ಕೆ ಬೇಸರವಿಲ್ಲ. ರಾಜಕಾರಣವೇ ಒಂದು ಅವಕಾಶ. ಕಾಂಗ್ರೆಸ್ ನನ್ನ ಕೊನೆಯ ಬಸ್ ಸ್ಟಾಪ್ ಎಂದು ಕಾಣುತ್ತದೆ. ಬಿಜೆಪಿಯಿಂದ ನನಗೆ ಆಹ್ವಾನ ಬಂದಿಲ್ಲ ಎಂದು ತಿಳಿಸಿದರು.
ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ. ವಿಧಾನ ಪರಿಷತ್ ಪದವೀಧರ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅವಕಾಶ ನೀಡಿದರೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತೇನೆ. ನನ್ನೊಂದಿಗೆ ಜೆಡಿಎಸ್’ಗೆ ಬಂದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕೂಡ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸೇರಬಹುದು ಎಂದು ಹೇಳಿದರು.