ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದ್ದ ಮಂದಿ ಬಿ.ಎಲ್.ಸಂತೋಷ್ ನೇತೃತ್ವದಲ್ಲೇ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ ವಿಡಿಯೋ ಸಾಕ್ಷಿಯನ್ನು TRS ನಾಯಕರು ಬಿಡುಗಡೆ ಮಾಡಿದ್ದರು.
ಸದ್ಯ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ (SIT) ಬಿ.ಎಲ್.ಸಂತೋಷ್ ಗೆ ಸಮನ್ಸ್ ನೀಡಿದೆ. ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ.ಆನಂದ್ ನೇತೃತ್ವದ ವಿಶೇಷ ತನಿಖಾ ತಂಡ ಮತ್ತು ನ್ಯಾಯಾಧೀಶರ ಮೇಲ್ವಿಚಾರಣೆ ನಂತರ ಈ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಿದೆ. ಅದರಂತೆ ನವೆಂಬರ್ 29 ರ ಒಳಗೆ ತನಿಖೆಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಮಾತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಈ ಹಿಂದೆಯೇ ವರದಿಯಾದಂತೆ ಟಿಆರ್ಎಸ್ ಶಾಸಕರ ಖರೀದಿಗೆ ಇಳಿದಿದ್ದ ಮೂವರು ಆರೋಪಿಗಳಾದ ಸತೀಶ್ ಶರ್ಮಾ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬುವವರನ್ನು ಅಕ್ಟೋಬರ್ 26 ರಂದು ಹೈದರಾಬಾದ್ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಹಣದ ಮೂಲಕ ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ TRS ಆರೋಪಿಸುತ್ತಲೇ ಬಂದಿತ್ತು, ಆದರೆ ಯಾವುದೇ ಗಟ್ಟಿಯಾದ ಸಾಕ್ಷ್ಯಗಳು ಇರಲಿಲ್ಲ.
ಆ ನಂತರ ಆದ ಮೂವರು ಖದೀಮರ ಬಂಧನದ ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ BJP ಹಿನ್ನೆಲೆಯ ವ್ಯಕ್ತಿಗಳನ್ನು ಹಿಡಿಯಲು TRS ಯಶಸ್ವಿಯಾಗಿತ್ತು.
ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ್ದೂ ಸಹ ವರದಿಯಾಗಿದೆ. ಈಗಾಗಲೇ ತೆಲಂಗಾಣ ಪೊಲೀಸರ ಆತಿಥ್ಯದಲ್ಲಿ ಇರುವ ಮೂವರು ಆರೋಪಿಗಳ ಹೇಳಿಕೆಯ ಅಡಿಯಲ್ಲಿ ತೆಲಂಗಾಣ ಪೊಲೀಸರು ಪುತ್ತೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಸದ್ಯ ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡ ಮೂಲದವರಾಗಿರುವ ಕಾರಣ ಶಾಸಕರ ಖರೀದಿ ಕಾರಣಕ್ಕೆ ಇರಿಸಿಕೊಂಡಿದ್ದರು ಎನ್ನಲಾದ ಹಣ ಮತ್ತು ಇನ್ನುಳಿದ ಆರೋಪಿಗಳ ಶೋಧಕ್ಕೆ ತೀವ್ರ ತಪಾಸಣೆಗೆ ತೆಲಂಗಾಣ ಪೊಲೀಸರು ಇಳಿದಿದ್ದಾರೆ.
ಬಿ.ಎಲ್.ಸಂತೋಷ್ ಗೆ ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಾಗಿದ್ದು, ನವೆಂಬರ್ 21 ರ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ ನಲ್ಲಿ ಸೂಚಿಸಲಾಗಿದೆ. ತೆಲಂಗಾಣ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಷ್ಟು ಸುಲಭವಾಗಿ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಮಾಹಿತಿಯನ್ನು ಟಿಆರ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ತೆಲಂಗಾಣದಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳು ಸೂಚಿಸಿದ ಪ್ರಮುಖ ಹೆಸರುಗಳಲ್ಲಿ ಬಿ.ಎಲ್.ಸಂತೋಷ್ ಮೊದಲಿಗರಾಗಿ ನಂತರ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೆಸರು ಮುಂಚೂಣಿಯಲ್ಲಿದೆ.