ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.
ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ ಲಾಲ್ ದಾಸ್ ಅವರನ್ನು. ಇವರನ್ನು ನವೆಂಬರ್ 26, 1993ರಂದು ಗುಂಡಿಕ್ಕಿ ಕೊಲ್ಲಲಾಯಿತು.
ಇವರ ಜೊತೆಗೆ ಕಾಶಿ ವಿಶ್ವನಾಥ ದೇವಾಲಯದ ಮಾಜಿ ಮಹಾಂತ್ ರಾಜೇಂದ್ರ ಪ್ರಸಾದ್ ತಿವಾರಿ ಅವರನ್ನು. ಇಬ್ಬರಲ್ಲಿ ಇರುವ ವ್ಯತ್ಯಾಸವೆಂದರೆ ಓಬ್ಬರನ್ನು ಸಾಯಿಸಲಾಗಿದೆ, ಇನ್ನೊಬ್ಬರು ಬದುಕಿದ್ದಾರೆ. ಆದರೆ ಇಬ್ಬರ ದನಿಯೂ ಒಂದೇ ಆಗಿದೆ.
“ಅಯೋಧ್ಯೆಯ ಜನ ಮಾತ್ರವಲ್ಲ, ಭಾರತದಾದ್ಯಂತ ಜನರು ಇದನ್ನು ವಿರೋಧಿಸಬೇಕು. ನಾವು ಎಂದಿಗೂ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸಬಾರದು ಮತ್ತು ಅವರ ಹೃದಯವನ್ನು ಒಡೆಯಬಾರದು. ನಮ್ಮ ಧರ್ಮ ಇದನ್ನು ಒಪ್ಪುವುದಿಲ್ಲ. ರಾಮನ ರಾಜಕೀಯ ಆದರ್ಶವು ಎಲ್ಲರಿಗೂ ಸಮೃದ್ಧಿಯನ್ನು ತರುತ್ತದೆ … ನಾವು ತಿಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಹಾರ ಸಿಗುತ್ತದೆ, ಆದ್ದರಿಂದ ಎಲ್ಲರೂ ನಮ್ಮವರೇ, ಯಾರೂ ಇಲ್ಲಿ ದೊಡ್ಡವರಲ್ಲ ಅಥವಾ ಚಿಕ್ಕವರಲ್ಲ. ಈ ಆದರ್ಶಗಳನ್ನು ಕೊಲ್ಲಲಾಗಿದೆ….!”
ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ
1990 ರ ದಶಕದಲ್ಲಿ ರಾಮ ಮಂದಿರದ ಗಲಭೆಯಲ್ಲಿ ದೇಶ ಹೊತ್ತಿ ಉರಿಯುತ್ತಿದ್ದಾಗ ಈ ಮಾತುಗಳನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ವಿವಾದಿತ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಹಿಂದೂ ಅರ್ಚಕ ಬಾಬಾ ಲಾಲ್ ದಾಸ್ ಅವರು. ಇದು ರಾಮ್ ಕೆ ನಾಮ್ ಸಾಕ್ಷ್ಯಚಿತ್ರದ ಕೊನೆಯಲ್ಲಿ ನೀವು ಕೇಳಬೇಕಾದ ಮುಂದೆಂದೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಮಾತುಗಳು.
ಭಾರತದ ಭಕ್ತಿ ಪರಂಪರೆಯ ಆತ್ಮದ ಭಾಷೆಗಳಾದ ಪ್ರೇಮ, ಶಾಂತಿ, ಒಳಗೊಳ್ಳುವಿಕೆ ನಶಿಸಿಹೋಗುತ್ತಾ, ದೇಶ ಆದ್ಯಾತ್ಮದಿಂದ ಕಳಚಿಕೊಂಡು ಕರ್ಮಠತನಕ್ಕೆ ದಾಂಗುಡಿ ಇಡುವಾಗ, ಮತೀಯತೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ, ಒಪ್ಪಿಕೊಂಡ ದೇಶದಲ್ಲಿ ಮುನ್ನಲೆಗೆ ಬರುತ್ತಿರುವಾಗ, ದೇಶ ಸಾಂಸ್ಕೃತಿಕವಾಗಿ ಬಹುಮುಖಿಯಾಗಿ ಕಟ್ಟಿಕೊಳ್ಳುವ ತನ್ನ ಪರಂಪರೆಯನ್ನು ನಿಲ್ಲಿಸುತ್ತಿರುವ ಸಂದರ್ಭದಲ್ಲಿ ಬಾಬಾ ಲಾಲ್ ದಾಸ್ ಆವರ ಮಾತುಗಳು ನಮ್ಮ ಹೃದಯವನ್ನು ಆಳವಾಗಿ ನಾಟಿ ಸಂಕಟವನ್ನು ಉಂಟುಮಾಡುತ್ತವೆ.
1991ರಲ್ಲಿ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ ರಾಮ್ ಕೆ ನಾಮ್ ಸಾಕ್ಷ್ಯಚಿತ್ರ ಪ್ರಚಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ನವೆಂಬರ್ 26, 1993 ರಂದು, ಬಾಬಾ ಲಾಲ್ ದಾಸ್ ಅವರನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಯಿತು.
ಯಾರು ಈ ಬಾಬಾ ಲಾಲ್ ದಾಸ್?
ಬಾಬಾ ಲಾಲ್ ದಾಸ್ ಅವರನ್ನು 1983 ರಲ್ಲಿ ಲಕ್ನೋ ಹೈಕೋರ್ಟ್ ಅಯೋಧ್ಯೆಯ ಮುಖ್ಯ ಅರ್ಚಕರನ್ನಾಗಿ ನೇಮಿಸಿತು. ಬಾಬರಿ ಮಸೀದಿಯ ಸುತ್ತ ವಿಶ್ವ ಹಿಂದೂ ಪರಿಷತ್ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಇವರು,. ಲಾಲ್ ಕೃಷ್ಣ ಅಡ್ವಾಣಿಯವರಿಗೆ ತಮ್ಮ ರಥಯಾತ್ರೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ರಾಮ ಮಂದಿರ ಚಳವಳಿಯನ್ನು ಕೇವಲ ಹಿಂದೂ ಮತಗಳನ್ನು ಸೆಳೆಯುವ ತಂತ್ರ ಎಂದು ಟೀಕಿಸಿದ್ದರು.
ರಾಮ್ ಕೆ ನಾಮ್ ಡಾಕ್ಯುಮೆಂಟರಿಯಲ್ಲಿ, “ಇದು (ಮಸೀದಿ ಧ್ವಂಸ) ವಿಎಚ್‌ಪಿಯ ರಾಜಕೀಯ ಆಟ. ಇದನ್ನು ಮಾಡುತ್ತಿರುವವರಿಗೆ ಹಿಂದೂ ಮತವನ್ನು ಸೆಳೆಯಲು ಭಾರತದಾದ್ಯಂತ ಉದ್ವಿಗ್ನತೆಯನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ,” ಎನ್ನುತ್ತಾ ಎರಡು ಸಮುದಾಯಗಳ ನಡುವೆ ಇರುವ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ವಿವರಿಸಿದ್ದರು. ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಅವಧ್‌ನ ಮುಸ್ಲಿಂ ರಾಜರ ದೇಣಿಗೆಯಿಂದ ಹೇಗೆ ನಿರ್ಮಿಸಲಾಯಿತು ಮತ್ತು 1855 ರ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೀರರು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದರು ಎಂದು ಈ ಡಾಕ್ಯುಮೆಂಟರಿಯಲ್ಲಿ ಅರ್ಚಕರು ಹೇಳಿದ್ದಾರೆ.
ಬಾಬಾ ಲಾಲ್ ದಾಸ್ ಅವರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಸಾಕ್ಷ್ಯಾಧಾರಗಳು ಇದ್ದವು,1993 ರಲ್ಲಿ ದೆಹಲಿಯ ಸಿಟಿಜನ್ ಟ್ರಿಬ್ಯೂನಲ್‌ಗೆ ಇದನ್ನು ಸಲ್ಲಿಸಿದ್ದರು. ರಾಮಜನ್ಮಭೂಮಿ ನ್ಯಾಸ್ ಪರವಾಗಿ ಸಂಗ್ರಹಿಸಲಾದ ದೊಡ್ಡ ಮೊತ್ತದ ಹಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಆರೋಪ ಕೂಡ ಮಾಡಿದ್ದರು.
ಇದಾಗಿ, 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಕೆಲ ತಿಂಗಳುಗಳ ಮೊದಲು, ಅಂದಿನ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಬಾಬಾ ಲಾಲ್ ದಾಸ್ ಅವರನ್ನು ಅರ್ಚಕ ಸ್ಥಾನದಿಂದ ಅನಧಿಕೃತವಾಗಿ ತೆಗೆದುಹಾಕಿತು. ಕೋರ್ಟಿನಿಂದ ನೇಮಕವಾಗಿರುವ ಕಾರಣ ಕೋರ್ಟಿನ ಆದೇಶ ಇಲ್ಲದೆ ಈ ರೀತಿ ವಜಾಗೊಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದರು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಈ ಪ್ರಕರಣ ಬಾಕಿ ಉಳಿದಿದೆ.
ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ
ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವಾಯಿತು. ಇದಾದ ನಂತರ ತಮ್ಮ ಹತ್ಯೆಯಾಗಬಹುದು ಎಂಬ ಭಯ ಅರ್ಚಕರಿಗೆ ಇತ್ತು. ರಕ್ಷಣೆ ಕೊಡುವಂತೆ ಸರ್ಕಾರಕ್ಕೆ ವಿನಂತಿಸಿದರು. ಆದರೆ ಕಲ್ಯಾಣ್ ಸಿಂಗ್ ಅವರ ಸರ್ಕಾರವು ಅವರ ಅಂಗರಕ್ಷಕರನ್ನು ತೆಗೆದುಹಾಕಿತು. ನವೆಂಬರ್ 26, 1993 ರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ದೇಶ ಕಂಡು ಕೇಳರಿಯದ ಅಮಾನವೀಯ ಘಟನೆಗಳು ಇದರ ಬೆನ್ನಿನಲ್ಲೇ ನಡೆದವು. ಇದರಿಂದ ದೇಶ ಚೇತರಿಸಿಕೊಂಡಿಲ್ಲ. ಆಗ ಉಂಟಾದ ಬೃಹತ್ ಕಂದಕವನ್ನು ಮುಚ್ಚಲು ಶತಮಾನಗಳಷ್ಟು ಪ್ರಯತ್ನಿಸಬೇಕು. ಈಗ ಬಾಬರಿ ಮಸೀದಿ ಇದ್ದಲ್ಲೇ ರಾಮನ ಪ್ರತಿಷ್ಠೆಯನ್ನು ಮಾನನೀಯ ಪ್ರಧಾನಿಗಳ ನೇತೃತ್ವದಲ್ಲಿ ಮಾಡಲಾಗಿದೆ. ದೇಶದ ರಾಜಕಾರಣ ಮಗ್ಗುಲು ಬದಲಿಸಿದ ಈ ಸಂದರ್ಭದಲ್ಲಿ ರಾಮಭಕ್ತ ಲಾಲ್ ದಾಸ್ ಅವರು ನೀಡಿದ ಕೋಮು ಐಕ್ಯತೆಯ ಸಂದೇಶ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ.
ಮೊಘಲ್ ರಾಜಕುಮಾರ ದಾರಾ ಶಿಕೋಹ್ 17 ನೇ ಶತಮಾನದಲ್ಲಿ ವಾರಣಾಸಿಯ ವಿಶ್ವನಾಥ ದೇವಾಲಯದ ಮೇಲ್ವಿಚಾರಣೆಗಾಗಿ ಅಲ್ಲಿನ ಮಹಂತರಿಗೆ ಪಟ್ಟಾ (ಪತ್ರ) ನೀಡುತ್ತಾನೆ. 10 ತಲೆಮಾರುಗಳವರೆಗೆ ಇದು ಮುಂದುವರಿದುಕೊಂಡು ಬಂದಿದೆ. ಕಾಶಿ ವಿಶ್ವನಾಥ ದೇವಾಲಯದ ಆಡಳಿತದ ಅಧಿಕಾರ ಈ ಕುಟುಂಬದ ಕೈಯಲ್ಲೇ ಇತ್ತು. 1983 ರಲ್ಲಿ ಉತ್ತರ ಪ್ರದೇಶ ಸರ್ಕಾರ ಇವರನ್ನು ದೇವಾಲಯದ ಪಾರಂಪರಿಕ ಮೋಕ್ತೇಸರಿಕೆಯಿಂದ ತೆಗೆಯಿತು. ಈ ಮನೆತನದ ಈಗಿನ ತಲೆಮಾರು ಮಹಂತ್ ರಾಜೇಂದ್ರ ಪ್ರಸಾದ್ ತಿವಾರಿ ಸಧ್ಯದ ಕೋಮುವಾದ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಶಾಂತಿ ಸಹಬಾಳ್ವೆಯ ಬಹುಮುಖ್ಯ ದನಿಯಾಗಿ ಕಾಣಿಸಿಕೊಳ್ಳುತ್ತಾರೆ.
ತಿವಾರಿ ಪ್ರಧಾನಿ ನರೇಂದ್ರ ಮೋದಿಯವರ ಬಹುಪ್ರಿಯ ಯೋಜನೆಯಾದ ವಿಶ್ವನಾಥ ಟೆಂಪಲ್ ಕಾರಿಡಾರ್‌ನ ಕಟು ಟೀಕಾಕಾರರಾಗಿದ್ದರು. ಈ ಯೋಜನೆಯ ಮೂಲಕ ಸುಮಾರು 286 ಶಿವಲಿಂಗಗಳನ್ನು ಹೊಂದಿರುವ ಹಲವಾರು ಪುರಾತನ ದೇವಾಲಯಗಳನ್ನು ಕೆಡವಿ ಹಾಕಲಾಗಿದೆ. ಇವುಗಳನ್ನು ಕಿತ್ತು ಬಿಸಾಡಲಾಯಿತು, ಕೆಲವನ್ನು ಮುರಿದು ಹಾಕಿದರು. ಕೇವಲ 146 ಶಿವಲಿಂಗಗಳನ್ನು ಮಾತ್ರ ಜೀರ್ಣೋದ್ಧಾರಗೊಳಿಸಿ ಬನಾರಸ್‌ನ ಲಂಕಾದ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಸದ್ಯ ಅಲ್ಲಿ ಅವುಗಳಿಗೆ ನಿತ್ಯದ ಪೂಜೆಯನ್ನು ಸಲ್ಲಿಸಲಾಗುತ್ತಿದೆ.
ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯನ್ನು ತುರಾತುರಿಯಲ್ಲಿ ಮಾಡಿರುವುದನ್ನು ಎಲೆಕ್ಷನ್ ಗಿಮಿಕ್ ಎಂದೇ ಟೀಕಿಸಿರುವ ಕಾಶಿಯ ಮಾಜಿ ಮೊಕ್ತೇಸರ ತಿವಾರಿಯವರು, ಇದೊಂದು ʼಸ್ಪಾನ್ಸರ್ಡ್ ಬೈ ಪಿಲಂ ಸ್ಟಾರ್ʼ ಕಾರ್ಯಕ್ರಮ, ಇದು ಮೋದಿಯವರು ತಮ್ಮ ವ್ಯಾನಿಟಿಯನ್ನು ಹೆಚ್ಚಿಸಿಕೊಳ್ಳಲು ಮಾಡಿರುವ ತಂತ್ರ ಎಂದು ಆರೋಪಿಸಿದ್ದಾರೆ.
“ಮೋದಿಯವರು ಓಟಿಗಾಗಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರವೇ ಮೋದಿಯವರ ರಾಮ, ಅವರ ನಂಬಿಕೆ, ಅವರ ವ್ಯಾಪಾರ,” ಎಂದು ತಿವಾರಿ ಹೇಳಿದ್ದಾರೆ.
ಭಾರತದ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುವಲ್ಲಿ ತೋರಿರುವ ನಿರ್ಲಕ್ಷ್ಯ, ತಿರಸ್ಕಾರದ ಬಗ್ಗೆ ತಿವಾರಿಯವರಿಗೆ ಆಕ್ರೋಶ ಇದೆ, ಅವುಗಳನ್ನು ಮಾಲ್‌ಗಳ ರೀತಿಯಲ್ಲಿ ಕಟ್ಟಲಾಗುತ್ತಿದೆ, ಅಲ್ಲಿ ಜನರು ಶಾಪಿಂಗ್ ಮಾಡಲು ಮತ್ತು ಮೋಜು ಮಸ್ತಿಗಾಗಿ ಬರುತ್ತಾರೆ ಅಥವಾ ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಪವಿತ್ರವಾದ ಕ್ಷೇತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನಗಳೇ ಹೊರತು ಭಕ್ತರಲ್ಲಿ ದೇವರ ಮೇಲಿನ ಭಕ್ತಿಯನ್ನು ಮೂಡಿಸುವ ಪ್ರಯತ್ನಗಳಲ್ಲ. “ಇದು ಮಾಲ್, ಅಯೋಧ್ಯೆಯ ರಾಮಮಂದಿರವಲ್ಲ. ಅಂತಹ ಮೊದಲ ಮಾಲ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾಯಿತು. ಮೂರನೆಯದು ಮಥುರಾದಲ್ಲಿ ಆಗಲಿದೆ” ಎಂದು ತಿವಾರಿ ಹೇಳುತ್ತಾರೆ.
ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ
ಇವೆಲ್ಲವನ್ನೂ ಸನಾತನ ಧರ್ಮದ ಮೇಲಿನ ಆಕ್ರಮಣ ಎಂದು ತಿವಾರಿ ಕರೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸನಾತನ ಧರ್ಮ, ಅದರ ತತ್ವಗಳು, ಅದರ ನಿಯಮಗಳು ಮತ್ತು ಭವಿಷ್ಯದಲ್ಲಿ ಹಿಂದೂಗಳ ಧರ್ಮಗ್ರಂಥಗಳನ್ನು ರೂಪಿಸುವ ಅಧಿಕಾರವನ್ನು ಆಚಾರ್ಯರು ಮತ್ತು ಧಾರ್ಮಿಕ ಗುರುಗಳಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. “ಸನಾತನ ಧರ್ಮದ ಮೇಲಿನ ಈ ಸವಾರಿಯೇ ಶಂಕರಾಚಾರ್ಯರನ್ನು ಜನವರಿ 22 ರ ಉದ್ಘಾಟನೆಯ ವಿರುದ್ಧ ಮಾತನಾಡುವಂತೆ ಮಾಡಿತು” ಎಂದು ತಿವಾರಿ ವಾದಿಸುತ್ತಾರೆ.
ಇದು ಮತೀಯತೆ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಘರ್ಷ. ಸಂಘವು ತನ್ನ ರಾಜಕೀಯ ಬಲದ ಜೊತೆಗೆ ಧಾರ್ಮಿಕ ಶಕ್ತಿಯನ್ನು ಪಡೆಯಲು ಯತ್ನಿಸುತ್ತಿದೆ. “ಒಮ್ಮೆ ಇದು ನಡೆದರೆ, ನಮ್ಮ ಸಮಾಜದ ಮೇಲೆ ಸಂಘದ ನಿಯಂತ್ರಣವು ಪೂರ್ಣಗೊಳ್ಳುತ್ತದೆ” ಎಂದು ಅವರು ಭವಿಷ್ಯ ನುಡಿದ್ದಾರೆ.
“ಸತ್ಯಕ್ಕಿಂತ ಅಸತ್ಯವು ಯಾವಾಗಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ” ಎನ್ನುವ ಮಹಂತ್ ತಿವಾರಿ, ಸನಾತನ ಧರ್ಮದ 10 ಮೌಲ್ಯಗಳನ್ನು ಪಟ್ಟಿ ಮಾಡುತ್ತಾರೆ: ಸತ್ಯವನ್ನು ಹೇಳುವುದು, ಅಹಂಕಾರ ಮತ್ತು ಕೋಪವನ್ನು ತೊಡೆದುಹಾಕುವುದು, ಸಹನೆಯನ್ನು ಬೆಳೆಸುವುದು ಇತ್ಯಾದಿ. “ಈ ಎಲ್ಲಾ ಮೌಲ್ಯಗಳು ಕುಸಿಯುತ್ತಿವೆ, ಇವುಗಳಲ್ಲಿ ಯಾವುದನ್ನೂ ಸಾಕಾರಗೊಳಿಸಲಾಗಿಲ್ಲ, ಅವರು ನಮ್ಮನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ” ಎಂದು ಅವರು ತಿವಾರಿ ಹೇಳುತ್ತಾರೆ.
ಕಾಶಿ ವಿಶ್ವನಾಥ ದೇವಾಲಯದ ಪಾರಂಪರಿಕ ಅಧಿಕಾರವನ್ನು ಹೊಂದಿರುವ ಮನೆತನದ ಈಗಿನ ತಲೆಮಾರು, ಯಾವುದೇ ಫಲಾಪೇಕ್ಷೆ ಇಲ್ಲದೆ, ದೇಶದ ಬಹುದೊಡ್ಡ ರಾಜಕೀಯ ಶಕ್ತಿಯೊಂದರ ವಿರುದ್ಧ ತಮ್ಮ ಮಾತುಗಳನ್ನು ನಿರ್ಭಯವಾಗಿ ಹೇಳುತ್ತಿದ್ದಾರೆ. ಇವರ ಮಾತುಗಳು ನಮ್ಮನ್ನು ಮತ್ತೆ ಅಯೋಧ್ಯೆಯ ಮುಖ್ಯ ಅರ್ಚಕ, ಸತ್ಯಕ್ಕಾಗಿ ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್ ದಾಸ್ ಅವರ ನೆನಪನ್ನು ತರುತ್ತದೆ.
ಯಾಕೆ ಅವರು ಈಗ ಪ್ರಶ್ನಿಸುತ್ತಿದ್ದಾರೆ? ಯಾಕೆ ಅದ್ವೈತ ಪೀಠಗಳು, ಅನೇಕ ಧಾರ್ಮಿಕ ನಾಯಕರು ಬಿಜೆಪಿಯ ನಡೆಯನ್ನು ವಿರೋಧಿಸುತ್ತಿದ್ದಾವೆ?
ಅವರ ಮಾತುಗಳು ಸ್ಪಷ್ಟವಾಗಿವೆ: ಬಿಜೆಪಿ – ಸಂಘ ಪರಿವಾರದ ಈ ಎಲ್ಲಾ ನಡೆಗಳೂ ಹಿಂದೂ ಧರ್ಮಕ್ಕೆ ಕಂಟಕಪ್ರಾಯವಾಗಿವೆ. ದೇಶ ಸಹಸ್ರಾರು ವರ್ಷಗಳಿಂದ ರೂಪಿಸಿಕೊಂಡು ಬಂದ ಆಧ್ಯಾತ್ಮಿಕತೆ ಮತ್ತು ಬಹುಮುಖಿ ಸಂಸ್ಕೃತಿಗಳಿಗೆ ಹಿಂದುತ್ವ ಮಾರಕವಾಗಿ ಪರಿಣಮಿಸಿದೆ. ಇದು ಚುನಾವಣೆ ಗೆಲ್ಲುವುದಕ್ಕೆ, ಅನ್ಯ ಮತೀಯರನ್ನು ದ್ವೇಷಿಸುವುದಕ್ಕೆ ತಮ್ಮದೇ ಸಂಪ್ರದಾಯವನ್ನು ಎಷ್ಟರಮಟ್ಟಿಗೆ ಬೇಕಾದರೂ ತಿರುಚಿ, ಕೆಡವಿ ಹಾಕಲು ಮುಂದಾಗುತ್ತಿದೆ.
ಹಿಂದುತ್ವ ಎಂಬುದು ಕೋಮವಾದ+ರಾಜಕಾರಣ. ಹಿಂದೂ ಧರ್ಮ ಎಂಬುದು ಭಾರತೀಯ ಧರ್ಮಗಳ ಒಟ್ಟುಗೂಡುವಿಕೆ ಎಂಬ ಸ್ಪಷ್ಟತೆ ಇವರಲ್ಲಿ ಬರುತ್ತಿದೆ. ಹಿಂದುತ್ವವೇ ಹಿಂದೂ ಧರ್ಮದ ಮುಖವಾಡ ಧರಿಸಿಕೊಂಡು ಬಂದಾಗ ಹಿಂದೂ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಈ ಧಾರ್ಮಿಕ ನಾಯಕರಲ್ಲಿ ಇದೆ. ಹಿಂದುತ್ವ ಎಂಬುದು ಆದ್ಯಾತ್ಮಿಕವಲ್ಲದ್ದು, ಅದು ಆದ್ಯಾತ್ಮಿಕವಾಗಿದ್ದರೆ ಅನ್ಯರನ್ನು ದ್ವೇಷಿಸುವಂತೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ತಿವಾರಿಯಂತ ಪ್ರಜ್ಞಾವಂತೆರು ಬಿಜೆಪಿಯ ನಡೆಯನ್ನು ವಿರೋಧಿಸಿದ್ದಾರೆ. ಬಾಬಾ ಲಾಲ್ ದಾಸ್‌ರಂತ ಅರ್ಚಕರು ತಮ್ಮ ಸಂಪ್ರದಾಯವನ್ನು ಉಳಿಸಲು ಪ್ರಾಣವನ್ನೇ ಕೊಡಬೇಕಾಯ್ತು.
ಲೇಖನ: ಚರಣ್ ಐವರ್ನಾಡು