Sunday, June 16, 2024

ಸತ್ಯ | ನ್ಯಾಯ |ಧರ್ಮ

ಬಡವರ ಬದುಕು ತಿನ್ನುವ ಟಿಬಿ

ಸೂರ್ಯ ಇನ್ನೇನು ಅಂದಿನ ತನ್ನ ಡ್ಯೂಟಿ ಮುಗಿಸಿ ಭೂಮಿಯ ಮುಖಕ್ಕೆ ಕತ್ತಲೆ ಬಳಿದು ಹೊರಡುವುದರಲ್ಲಿದ್ದ. ಆ ಹೊತ್ತಿಗೆ ಆ ಕೆಂಪಾನುಕೆಂಪು ಬೆಳಕಲ್ಲಿ ಧೂಳಿನ ಕಣಗಳೆಲ್ಲ ಚಿನ್ನದಂತೆ ಹೊಳೆಯೋಕೆ ಶುರುವಾಗಿದ್ದವು. ಆ ರಾಶಿ ಧೂಳಿನ ಮಧ್ಯೆ ಸೌಮ್ಯ ಕಿಕ್ಕಿರಿದಿದ್ದ ಜನರ ನಡುವೆ ಜಾಗ ಮಾಡಿಕೊಳ್ಳುತ್ತಾ ಮುಂದೆ ಹೋಗುತ್ತಿದ್ದಳು. ಕೆಂಬಣ್ಣದ ಸೀರೆ, ಸ್ಲೀವ್‌ ಲೆಸ್‌ ರವಿಕೆ ತೊಟ್ಟಿದ್ದ ಅವಳು ಜನರ ನಡುವೆ ತನ್ನ ಚೆಲುವಿನಿಂದ ಎದ್ದು ಕಾಣುತ್ತಿದ್ದಳು. ಉಮಾಗೋಲ್ಡ್‌ ಬಳೆ, ಸರ ತೊಟ್ಟಿದ್ದ ಅವಳು, ಬಹಳ ಗಡಿಬಿಡಿಯಲ್ಲಿರುವಂತೆ ಕಾಣುತ್ತಿತ್ತು. ಅವಳ ಕಣ್ಣುಗಳು ತನ್ನ ಸ್ನೇಹಿತರಿಗಾಗಿ ಚಡಪಡಿಸುತ್ತಾ ಸುತ್ತಮುತ್ತ ನೋಡುತ್ತಿದ್ದವು.


ಹೇಗೋ ಜನರ ನಡುವೆ ನುಸುಳುತ್ತಾ, ಆಗಾಗ ಒತ್ತರಿಸಿ ಬರುತ್ತಿದ್ದ ಕೆಮ್ಮನ್ನು ತಡೆಯುತ್ತಾ ಸೌಮ್ಯ ಗುಂಪನ್ನು ದಾಟಲು ಪ್ರಯತ್ನಿಸುತ್ತಿರುವಾಗ….


ಹಣೆಯ ಮೇಲಿನ ಬೆವರು ಅವಳ ರೆಪ್ಪೆಗಳ ಮೇಲೆ ಇಳಿದು ಹಚ್ಚಿದ್ದ ಗಾಢ ಮೇಕಪ್‌ ಜೊತೆಗೆ ಸೇರಿಕೊಂಡು ಇಲ್ಲದ ಕಿರಿಕಿರಿ ಹುಟ್ಟಿಸುತ್ತಿತ್ತು. ಈ ನಡುವೆ ತನ್ನ ಮೈಮೇಲೆ ಬೀಳಲು ಯತ್ನಿಸುತ್ತಿದ್ದ ಗಂಡಸರ ಕಾಟ ಬೇರೆ. ಇವೆಲ್ಲ ಅವಳನ್ನು ಸಿಟ್ಟಿಗೆಬ್ಬಿಸುತ್ತಿತ್ತು. ಕೊನೆಗೆ ಒಬ್ಬ ತೀರಾ ಮೈಮೇಲೆ ಬಿದ್ದಾಗ ಕೋಪಗೊಂಡ ಅವಳು, “ಬಾ, ಇಲ್ಲೇ ಸೀರೆ ಬಿಚ್ಚಿ ಮಲ್ಕೋತೀನಿ, ನಿನ್ನ ತೀಟೆ ತೀರಿಸ್ಕೊಂಡು ಹೋಗುವಿಯಂತೆ, ಯಾಕ್ರೋ ಹಿಂಗೆ ಸಾಯ್ತೀರಾ? ಹುಟ್ಟಿದ್ಮೇಲೆ ಚಂದ ಇರೋ ಹೆಂಗಸ್ರನ್ನೇ ನೋಡಿಲ್ವಾ? ಮನೇಲಿ ಅಕ್ಕ ತಂಗೀರಿಲ್ವ ನಿಮ್ಗೆ?”ಎನ್ನುತ್ತಾ ಅವನನ್ನು ಬಯ್ಯತೊಡಗಿದಳು. ಅವನು ಕಾಮ ತುಂಬಿದ ಕಣ್ಣುಗಳಿಂದ ಅವಳತ್ತ ನೋಡುತ್ತಾ ಗುಂಪಿನಲ್ಲಿ ಕಣ್ಮರೆಯಾದ…


ಸೌಮ್ಯ ಅವನತ್ತ ಕೂಗಾಡುವುದನ್ನು ಇನ್ನೂ ಮುಂದುವರೆಸಿದ್ದಳು. ಅವಳು ದೇವಸ್ಥಾನ ತಲುಪುವ ಹೊತ್ತಿಗೆ ಅವಳ ಕೋಪಕ್ಕೆ ತುತ್ತಾದ ಗಂಡಸರ ಸಂಖ್ಯೆ ಬೆರಳೆಣಿಕೆಯನ್ನು ಮೀರಿತ್ತು.


ಆಕೆಯ ಸ್ನೇಹಿತರು ಆಕೆಗಾಗಿ ದೇವಸ್ಥಾದ ಬಾಗಿಲಿನಲ್ಲಿ ಕಾಯುತ್ತಿದ್ದರು. ಅವರನ್ನು ನೋಡಿ ಖುಷಿಯಾದ ಅವಳು ದನವನ್ನು ನೋಡಿ ಓಡುವ ಕರುವಿನಂತೆ ಅವರತ್ತ ಓಡಿದಳು. ನಡಿಗೆ, ಸೆಕೆ, ಕಿರುಕುಳ ಇತ್ಯಾದಿಯಿಂದ ದಣಿದಿದ್ದ ಅವಳು ಅಲ್ಲೇ ಒಂದೆಡೆ ಹೂವಿನ ಅಂಗಡಿಯ ಬಳಿಯಿದ್ದ ಮರದಡಿ ಅದರ ಬುಡಕ್ಕೆ ಒರಗಿ ವಿರಮಿಸಲು ಕುಳಿತಳು. ಅವಳ ಸುತ್ತ ಸುತ್ತುತ್ತಿದ್ದ ಸ್ನೇಹಿತರು ಆಕೆಗೆ ಕುಡಿಯಲು ಒಂದಿಷ್ಟು ನೀರು ಕೊಟ್ಟರು.


ಸೌಮ್ಯ ಮತ್ತು ಆಕೆಯ ಗೆಳತಿಯರು ಅಲ್ಲಿ ಇಂದು ಇನ್ನು ಕೆಲವೇ ಕ್ಷಣಗಳಲ್ಲಿ ಸಾಮೂಹಿಕವಾಗಿ ಮದುವೆಯಾಗಲಿದ್ದಾರೆ. ದೇವಸ್ಥಾನದ ಸುತ್ತಲೂ ಈಗಾಗಲೇ ಮದುವೆಯ ಸಲುವಾಗಿ ಪವಿತ್ರ ಬೆಂಕಿಯನ್ನು ಅಲ್ಲಲ್ಲಿ ಹಾಕಲಾಗಿದೆ. ಸೌಮ್ಯ ಮತ್ತು ಆಕೆಯ ಗೆಳತಿಯರು ಮತ್ತು ಅಲ್ಲಿ ನೆರೆದಿರುವ ಬಹಳಷ್ಟು ಜನರು ಮದುವೆಯಾಗಿ ತಮ್ಮ ಕೊರಳಿನಲ್ಲಿ ತಾಳಿ ಧರಿಸಿ ಹೆಮ್ಮೆಯಿಂದ ಬೀಗಲಿದ್ದಾರೆ. ಈ ಮದುವೆಯ ವಿಶೇಷವೆಂದರೆ ಇವರೆಲ್ಲರೂ ಮದುವೆಯಾಗಲಿರುವುದು ಒಬ್ಬನನ್ನೇ! ಅವರನ್ನು ಮದುವೆಯಾಗಲಿರುವ ಗಂಡಿನ ಹೆಸರು ಅರವಣ, ಅವನು ಮದುವೆ ನಡೆಯುವಾಗ ಇವರೊಡನೆ ಇರುವುದಿಲ್ಲ. ಅವನು ಗುಡಿಯೊಳಗೇ ಇರುತ್ತಾನೆ.


ಹೀಗೆ ಈ ವಿಶೇಷ ಮದುವೆ ಮುಗಿಯುತ್ತಿದ್ದಂತೆ ಸೌಮ್ಯ ಮತ್ತು ಆಕೆಯ ಸ್ನೇಹಿತೆಯರು ಚಪ್ಪಾಳೆ ತಟ್ಟುತ್ತಾ ನರ್ತಿಸತೊಡಗುತ್ತಾರೆ. ಒಬ್ಬರಿಗೊಬ್ಬರು ಕಂಗ್ರಾಟ್ಸ್‌ ಹಳುತ್ತಾ ಪರಸ್ಪರ ತಬ್ಬಿಕೊಳ್ಳುತ್ತಾರೆ. “ಮದುವೆ ಎಲ್ಲ ಮುಗೀತು. ಇನ್ನು ನನ್ನ ಫ್ರೆಂಡ್ಸ್‌ಗೆ ಹನಿಮೂನ್‌ ಮಾಡೋ ಹೊತ್ತು. ʼರಿಪೋರ್ಟರ್‌ ಅವ್ರೇ ನಿಮ್ಗೆ ಹನಿಮೂನ್‌ ಹೋಗೋದು ಇಲ್ದಿದ್ರೆ ನನ್ನ ಜೊತೆ ಬನ್ನಿ ನಾವಿಬ್ರೂ ಕೂತು ಮಾತಾಡೋಣ” ಎಂದು ಕಿಚಾಯಿಸುತ್ತ ಸೌಮ್ಯ ನನ್ನನ್ನು ಮಾತುಕತೆಗೆ ಕರೆದಳು.

ಈ ನಡುವೆ ಆಕೆಯ ಸ್ನೇಹಿತೆಯರು ಒಬ್ಬೊಬ್ಬರಾಗಿ ಯಾವುದೇ ʼಪ್ರೊಟೆಕ್ಷನ್‌ʼ ಇಲ್ಲದೆ ಲೈಂಗಿಕ ಕ್ರಿಯೆಗೆ ಸಿದ್ಧರಾಗಿದ್ದ ಪುರುಷರೊಡನೆ ಚೌಕಾಶಿಯಲ್ಲಿ ತೊಡಗಿದ್ದರು. ಒಂದಿಷ್ಟು ಹೊತ್ತಿನ ಚೌಕಾಶಿಯ ನಂತರ ವ್ಯವಹಾರ ಕುದುರಿದವರು ತಮ್ಮ ತಮ್ಮ ಆ ಹೊತ್ತಿನ ಸಂಗಾತಿಗಳೊಡನೆ ಹತ್ತಿರದ ಹೊಲಗಳ ಕಡೆ ನಡೆಯತೊಡಗುತ್ತಾರೆ. ಸೌಮ್ಯ ಗುಂಪಿನಿಂದ ಬೇರಾಗಿ ದೇವಾಲಯದಿಂದ ಒಂದಷ್ಟು ದೂರದಲ್ಲಿದ್ದ ಸಣ್ಣ ತಗಡಿನ ಗೂಡಂಗಡಿಯ ಬಳಿ ನಡೆದಳು.


“ಅಯ್ಯೋ! ನಿಮಗೆ ನಾನು ನನ್ನ ಗಂಡನನ್ನ ಪರಿಚಯ ಮಾಡಿಸ್ಲೇ ಇಲ್ಲ ಅಲ್ವ? ನೀನು ನೋಡಿದ್ದೀಯ ಅವನನ್ನ? ಅವ್ನು ಸಕ್ಕತ್‌ ಚಂದ ನೋಡೋದಕ್ಕೆ ಗೊತ್ತಾ? ಅವ್ನ ಪೊದೆ ಮೀಸೆ ನೋಡೋದೇ ಒಂದು ಚಂದ. ನಾಳೆ ಅವ್ನು ದೇವಸ್ಥಾನದಿಂದ ಹೊರಗೆ ಬರ್ತಾನೆ ಆಗ ನೋಡುವಿಯಂತೆ” ಎಂದು ಸೌಮ್ಯ ಉತ್ಸಾಹದಿಂದ ಹೇಳಿದಳು. ಇಷ್ಟೆಲ್ಲ ನಡೆಯುವ ಹೊತ್ತಿಗೆ ಮಧ್ಯರಾತ್ರಿ ದಾಟಿತ್ತು. ಎದುರಿಗಿದ್ದ ಮೈದಾನಕ್ಕೆ ಮೈದಾನವೇ ಮುಕ್ತ ಲೈಂಗಿಕತೆಗೆ ತೆರೆದುಕೊಂಡಂತಿತ್ತು.

ಇದು ಕೂವಗಮ್‌, ರಾಜ್ಯದ ರಾಜಧಾನಿ ಚೆನ್ನೈನಿಂದ ದಕ್ಷಿಣಕ್ಕೆ 200 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಧೂಳನ್ನೇ ಮೈತುಂಬಿಕೊಂಡ ಈ ಊರಿನಲ್ಲಿ ಪ್ರತಿ ವರ್ಷ ಚಿತ್ರ (ಏಪ್ರಿಲ್/ಮೇ) ಮಾಸದಲ್ಲಿ ಜೀವಕಳೆ ತುಂಬಿಕೊಳ್ಳುತ್ತದೆ, ಆ ದಿನ ಸಾವಿರಾರು ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಅರವಣನನ್ನು (ಕೂತಾಂಡವರ್) ಮದುವೆಯಾಗಲು ಅಲ್ಲಿಗೆ ಬರುತ್ತಾರೆ.


ಈ ಹಬ್ಬವು ಮಂಗಳಮುಖಿಯರು ಅಥವಾ ಅರವಣಿಯರೆಂದು ತಮಿಳುನಾಡಿನಲ್ಲಿ ಕರೆಸಿಕೊಳ್ಳುವ ಈ ಸಮುದಾಯಕ್ಕೆ ಬಹಳ ಮಹತ್ವವಾದದ್ದು. ಹಲವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರಣಗಳಿಗಾಗಿಯೂ ಇದೊಂದು ಮಹತ್ವದ ಹಬ್ಬವಾಗಿದೆ. ಇದನ್ನು ಶ್ರೀ ಕೃಷ್ಣ ಅವತಾರವೆತ್ತಿದ ದಿನವೆಂದೂ ಗುರುತಿಸಲಾಗುತ್ತದೆ. ಒಂದು ಪುರಾಣದ ಕತೆಯ ಪ್ರಕಾರ ಮಹಾಭಾರತ ಯುದ್ಧದ ಸಮಯದಲ್ಲಿ ಪಾಂಡವರು ಕೌರವರೆದುರು ಗೆಲ್ಲಲು ಅರ್ಜುನನ ಮಕ್ಕಳಲ್ಲಿ ಒಬ್ಬನಾದ ಅರವಣನನ್ನು ಬಲಿ ನೀಡಬೇಕಿರುತ್ತದೆ. ಆಗ ಅರವಣ ತಾನು ಬಲಿಪೀಠಕ್ಕೇರುವ ಮೊದಲು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಒಂದು ದಿನದ ಮಟ್ಟಿಗೆ ಹೆಂಡತಿಯಾಗಿ ಮರುದಿನ ವಿಧವೆಯಾಗಲು ಯಾವ ಕನ್ಯೆಯೂ ಸಿದ್ಧಳಿರುವುದಿಲ್ಲ. ಆಗ ಕೃಷ್ಣ ಮೋಹಿನಿಯ ರೂಪ ತಾಳಿ ಅರವಣನನ್ನು ಮದುವೆಯಾಗುತ್ತಾನೆ.

ಹೀಗಾಗಿ ತಮಿಳುನಾಡಿನ ಟ್ರಾನ್ಸ್‌ಜೆಂಡರ್‌ ಸಮುದಾಯವು ತಮ್ಮನ್ನು ತಾವು ಕೃಷ್ಣನ ಮೋಹಿನಿಯ ರೂಪವೆಂದು ಗುರುತಿಸಿಕೊಳ್ಳುತ್ತದೆ. ಅವರು ಅರವಣನನ್ನು ಹುಣ್ಣಿಮೆಯ ರಾತ್ರಿ ಮದುವೆಯಾಗಿ ಮರುದಿನ ಅವನು ಸಾಯುವುದರೊಂದಿಗೆ ಇವರು ವಿಧವೆಯರಾಗುತ್ತಾರೆ.


“ಇದು ನಮಗೆ ಒಂದು ಘನತೆಯನ್ನು ನೀಡುವ ದಿನ, ಈ ದಿನ ನಾವು ನಮ್ಮನ್ನು ಕೃಷ್ಣನ ಒಂದು ಭಾಗವೆಂಬಂತೆ ನೋಡುತ್ತೇವೆ” ಎನ್ನುತ್ತಾರೆ ಸೌಮ್ಯ.


ಏದುಸಿರು ಬಿಡುತ್ತಾ ಸೌಮ್ಯ, ಬೀಡಾ ಮತ್ತು ಹೂ ಮಾರುವ ಅಂಗಡಿಯ ಬಳಿ ಬಂದು ನಿಂತರು, ಆ ಅಂಗಡಿಯವರಿಗೆ ಸೌಮ್ಯಾಳ ಪರಿಚಯವಿತ್ತು. ಆತ ನಮ್ಮನ್ನು ಕರೆದು, “ಬನ್ನಿ, ನೀವಿಲ್ಲಿ ಕೂತು ಮಾತಾಡ್ಬಹುದು. ನಾನು ನಿಮಗೆ ಒಂದೊಂದು ಲೋಟ ಟೀ ಕಳಿಸ್ತೀನಿ” ಎನ್ನುತ್ತಾ ನಮ್ಮನ್ನು ಆಹ್ವಾನಿಸಿದರು. ಒಳಗಿದ್ದ ಕೋಣೆಯೆಡೆಗೆ ನಡೆದ ಸೌಮ್ಯ ಬನ್ನಿ ಎಂದು ಕರೆಯುತ್ತಾ, “ದಯವಿಟ್ಟ ಒಂದಿಷ್ಟು ದೂರ ಕೂತ್ಕೊಳ್ಳಿ,” ಎಂದು ವರದಿಗಾರನನ್ನು ವಿನಂತಿಸಿದಳು. “ಆಮೇಲೆ ನೀವು ಸುಮ್ನೆ ವರದಿಗಾರನಿಗೆ ಟಿಬಿ ಮತ್ತು ಎಚ್‌ಐವಿ ಅಂಟಿಸಿದ ಟ್ರಾನ್ಸ್‌ಜೆಂಡರ್‌ ಸೌಮ್ಯ, ಅದೂ ಸಹ ಲೈಂಗಿಕ ಸಂಪರ್ಕ ಹೊಂದದೆ ಅಂತ ವರದಿ ಮಾಡ್ತೀರಿ” ಎಂದು ನಗುತ್ತಾ ಮಾತು ಮುಂದುವರೆಸಿದ ಆಕೆ, “ನೀವು ನಮ್ಮ ಬದುಕಿನ ರಿಯಾಲಿಟಿ ಅರ್ಥ ಮಾಡ್ಕೊಳ್ಳೋ ಬದ್ಲು ನಮಗೆ ಟಿಬಿ ಮತ್ತೆ ಎಚ್‌ಐವಿ ಬಗ್ಗೆ ಪ್ರವಚನ ನೀಡೋದ್ರಲ್ಲೇ ಜಾಸ್ತಿ ಇಂಟ್ರೆಸ್ಟ್‌ ತೋರಿಸ್ತೀರಿ” ಎಂದು ನಕ್ಕಳು.

“ನಿಂಗೆ HIV ಮತ್ತೆ TB ಇದೆಯಾ?” ನಾನು ಕೇಳಿದೆ

“ಹ್ಹ! ಹ್ಹ! ನನ್‌ ಬದ್ಕಲ್ಲಿ ಎಲ್ಲಾನೂ ಇದೆ. ನನ್ನ ಕತೆ ಬರೆದ್ರೆ ಒಂದೊಳ್ಳೆ ಮಸಾಲೆ ಇರೋ ಸಿನೆಮಾ ಮಾಡ್ಬಹುದು. ಅದ್ರಲ್ಲಿ ಎಮೋಷನ್ಸ್, ಬಡಿದಾಟ ಎಲ್ಲಾ ಇದೆ. ಆದ್ರೆ ನನ್ನ ಲೈಫ್‌ ಬಗ್ಗೆ ಯಾರಿಗೆ ಇಂಟ್ರೆಸ್ಟ್‌ ಇದೆ ಹೇಳು? ಹಾಗೆ ನೋಡಿದ್ರೆ ನನ್‌ ಜೊತೆ ಇಷ್ಟೊಂದು ಮಾತಾಡಿದ ನಿಮಗೆ ನಾನು ತ್ಯಾಂಕ್ಸ್‌ ಹೇಳಬೇಕು. ಇಲ್ದಿದ್ರೆ ಜನರ ಕಣ್ಣಿಗೆ ನಾನೊಂದು ಸೆಕ್ಸ್‌ ಟಾಯ್‌ ಮಾತ್ರ. ಯಾರಿಗೂ ನನ್ಜತೆ ಮಾತಾಡೋದು ಬೇಕಿಲ್ಲ. ಎಲ್ರಿಗೂ ಬೇಕಿರೋದು ನನ್ಜತೆ ಸೆಕ್ಸ್‌ ಮಾಡೋದು ಮಾತ್ರ. ಜನರ ಕಣ್ಣಲ್ಲಿ ನಾವು ಲೈಂಗಿಕವಾಗಿ ಹಸಿದ ಜನರು” ಎಂದು ಆಕೆ ಉಸಿರನ್ನೂ ತೆಗೆದುಕೊಳ್ಳದೆ ಹೇಳಿದಳು.


ಸೌಮ್ಯ ತನ್ನ ಕುಟುಂಬದ ವಿವರಗಳನ್ನು ಹೇಳಲು ಹಿಂಜರಿಯುತ್ತಿದ್ದಳು. ಆಕೆ ಶಾಲೆಗೆ ಹೋಗುತ್ತಿರುವಾಗ ಅವಳಿಗೆ ತಾನು ʼಭಿನ್ನʼ ಎನ್ನುವುದು ಗಮನಕ್ಕೆ ಬಂತು, ತನಗೆ ಹುಡುಗಿಯರಿಗಿರುವ ಭಾವನೆಗಳಿವೆ ಎನ್ನುವುದು ಸೌಮ್ಯಾಳ ಗಮನಕ್ಕೆ ಬರತೊಡಗಿತು. ಅವಳು ಅದನ್ನು ತನ್ನ ಅಮ್ಮನ ಗಮನಕ್ಕೆ ತಂದಾಗ ಅವಳಿಗೆ ಸಿಕ್ಕಿದ್ದು ಪೆಟ್ಟು.


ನಂತರ ಆಕೆಯನ್ನು ಒಬ್ಬ ಗುರುವಿನ ಬಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಮ್ಮ ಮಗನ ಮೇಲೆ ದೇವರ ಕೆಟ್ಟ ಕಣ್ಣು ಬಿದ್ದಿದೆ ಆ ದೇವರನ್ನು ತೃಪ್ತಿಪಡಿಸಲು ಕೆಲವು ಆಚರಣೆಗಳನ್ನು ನಡೆಸಬೇಕಿದೆಯೆಂದು ತಿಳಿಸಿದರು. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಒಂದು ದಿನ ಮನೆಯಿಂದ ಓಡಿ ಹೋದ ಸೌಮ್ಯ, ಬದುಕು ನಡೆಸುವ ಸಲುವಾಗಿ ಚೈನೈ ನಗರದ ಬೀದಿಗಳಲ್ಲಿ ಭಿಕ್ಷೆ ಬೇಡಲಾರಂಭಿಸಿದಳು.ನಗರದ ಬೀದಿಗಳೇ ಆಗ ಅವಳ ಮನೆಯಾಗಿತ್ತು. ಕೊನೆಗೆ ಅಲ್ಲಿನ ಬೀದಿಗಳಲ್ಲಿ ಒಂದಷ್ಟು ಟ್ರಾನ್ಸ್‌ಜೆಂಡರ್ ಸಮುದಾಯದವರ ಪರಿಚಯವಾಗುವುದರೊಂದಿಗೆ ಆಕೆಯ ಪಾಲಿಗೊಂದು ಹೊಸ ಜಗತ್ತು ತೆರದುಕೊಂಡಿತು.


“ಅದು ನನ್ನ ಬದುಕಿಗೆ ದೊರೆತ ತಿರುವಾಗಿತ್ತು. ಈಗ ಅದೆಲ್ಲ ನಡೆದು ಹದಿನೈದು ವರ್ಷಗಳಾಗಿವೆ, ಈಗ ನಾನು ನನ್ನದೇ ಆದ ಬದುಕನ್ನ ಬದುಕ್ತಿದ್ದೀನಿ” ಎಂದು ಆಕೆ ಘೋಷಿಸುತ್ತಾಳೆ. ಕಮರ್ಷಿಯಲ್‌ ಸೆಕ್ಸ್‌ ವರ್ಕ್‌ ಅನ್ನೋದು ಹಲವು ವರ್ಷಗಳಿಂದ ಇವರ ಮೂಲವೃತ್ತಿಯಾಗಿದೆ. “ನಾನು ಮೊದಲಿಗೆ ಕೆಲಸ ಹುಡುಕಿದೆ. ಆದರೆ ಯಾರೂ ಕೆಲಸ ಕೊಡೋದಕ್ಕೆ ರೆಡಿ ಇರ್ಲಿಲ್ಲ. ಮನೆಕೆಲಸ, ಕಸ ಗುಡಿಸೋದು ಹೀಗೆ ಯಾವ ಕೆಲಸ ಸಿಕ್ಕಿದ್ರೂ ಮಾಡ್ತಿದ್ದೆ. ಆದ್ರೆ ಸಿಗ್ಲಿಲ್ಲ. ಜನರು ನನ್ನನ್ನ ಗೇಲಿ ಮಾಡ್ತಿದ್ರು. ಮಂಗಳಮುಖಿಯರಿಗೆ ಯಾರೂ ಕೆಲಸ ಕೊಡೋದಿಲ್ಲ, ಹೀಗಿರೋವಾಗ ನಾವು ಬದುಕೋದಾದ್ರೂ ಹೇಗೆ?” ಎಂದು ಕೇಳುವಾಗ ಆಕೆ ಪೂರ್ತಿಯಾಗಿ ಕುಸಿದುಹೋಗಿದ್ದಳು.


ಸರ್ಕಾರ ಮತ್ತೆ ಎನ್ ಜಿಒಗಳು ಎಚ್‌ಐವಿ ಬಗ್ಗೆ ಗಮನ ಹರಿಸ್ತಿರೋದ್ರಿಂದ ನೀವು ಇಲ್ಲಿಗೆ ಎಚ್‌ಐವಿ ಸ್ಟಡಿಗೆ ಬಂದಿದ್ದೀರಿ. ಆದರೆ ಎಚ್ಐವಿ ಮತ್ತು ಟಿಬಿ ನಮಗೆ ಹೊಸದೇನಲ್ಲ. ಅವು ನಮ್ಮ ಬದುಕಿನ ಭಾಗ ಆಗಿವೆ. ಈ ಕಾಯಿಲೆಗಳ ಜೊತೆ ಬದುಕೋದು ಅನಿವಾರ್ಯ ಅನ್ನೋ ಸತ್ಯವನ್ನು ನಾವು ಅಕ್ಸೆಪ್ಟ್‌ ಮಾಡ್ಕೊಂಡಿದ್ದೀವಿ.


ಟ್ರಾನ್ಸ್‌ಜೆಂಡರ್‌ ಸಮುದಾಯದ ವ್ಯಕ್ತಿಗಳಲ್ಲಿ ಕ್ಷಯರೋಗದ ಸಂಭವನೀಯತೆಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿದಿಲ್ಲ. ಅದರ ಕುರಿತು ಸಂಶೋಧನೆ ನಡೆಯಬೇಕಿದೆ. ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ (RNTCP) ಮೂರು ವರ್ಗಗಳಲ್ಲಿ ಲಿಂಗಗಳನ್ನು ಗುರುತಿಸುತ್ತದೆ: ಮಹಿಳೆಯರು, ಪುರುಷರು, ಮತ್ತು ಟ್ರಾನ್ಸ್‌ಜೆಂಡರ್ಸ್. 2018 ರಲ್ಲಿ, ಒಟ್ಟು 1,676 ತೃತೀಯ ಲಿಂಗಿಗಳು ಕ್ಷಯರೋಗದಿಂದ ಬಳಲುತ್ತಿದ್ದಾರೆಂದು (RNTCP) ವರದಿಯಲ್ಲಿ ಹೇಳಲಾಗಿದೆ.


ಕೆಲವು ವರ್ಷಗಳ ಹಿಂದೆ, ಸೌಮ್ಯಾ ಎಚ್ಐವಿಯಿಂದ ಬಳಲುತ್ತಿದ್ದರು. ಆದರೆ ಅವರು ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯಲಿಲ್ಲ, ಮತ್ತು ನಿಲ್ಲದ ಕೆಮ್ಮು ಮತ್ತು ಜ್ವರ ಕಾಡಲು ಆರಂಭಿಸಿದ ನಂತರ, ಆಕೆಯನ್ನು ಪರೀಕ್ಷಿಸಿದಾಗ ಶ್ವಾಸಕೋಶದ ಟಿಬಿಯಿಂದ ಬಳಲುತ್ತಿರುವುದು ತಿಳಿದುಬಂತು ಎಂದು ಅವರು ಹೇಳುತ್ತಾರೆ. “ನನಗೆ ಬದುಕುವುದು ಕಷ್ಟವಾಗುತ್ತಿದೆ. ಈ ಕಾಯಿಲೆಗಳಿಂದಾಗಿ ಈಗ ನನಗೆ ಸೆಕ್ಸ್‌ವರ್ಕ್ ಇಲ್ಲ. ಒಂದಷ್ಟು ಹಣ ಉಳಿಸಿದ್ದೇನೆ ಆದರೆ ನನ್ನ ಚಿಕಿತ್ಸೆಗಾಗಿ ಎಲ್ಲವನ್ನೂ ಖರ್ಚು ಮಾಡಲು ನನಗೆ ಇಷ್ಟವಿಲ್ಲ. ಉಚಿತ ಚಿಕಿತ್ಸೆ ಇದೆ ಎಂದು ಸರ್ಕಾರ ಹೇಳುತ್ತದೆ, ಆದರೆ ಅವೆಲ್ಲವೂ ಎಲ್ಲ ರೂಪದಲ್ಲೂ ಬಹಳ ಹಿಂದುಳಿದಿವೆ (ಅಸಂಬದ್ಧ). ನಮಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಔಷಧಿಗಳು ಸಿಗುವುದಿಲ್ಲ” ಎಂದು ಅವರು ದೂರುತ್ತಾರೆ.


ಸೌಮ್ಯ ಹೇಳುವಂತೆ ದೇವರಾದ ಆಕೆಯ ಪತಿ ಅರವಣ ಅವರಿಗೆ ಎಚ್‌ಐವಿ ಕಾಯಿಲೆ ನೀಡಿದ್ದಾನೆ. ಎಚ್‌ಐವಿ ತಗುಲಿದ ನಂತರ ತಕ್ಷಣವೇ ಟಿಬಿ ಕಾಯಿಲೆಗೆ ತುತ್ತಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. “ಡಾಕ್ಟರ್‌ ಒಬ್ರು ನಂಗೆ ಹೇಳಿದ್ರು. ಎಚ್‌ಐವಿ ಇದೆ ಅಂದ್ರೆ ನಿಂಗೆ ಟಿಬಿನೂ ಬರುತ್ತೆ. ಅವೆರಡೂ ಒಡಹುಟ್ಟಿದವರಿದ್ದಂತೆ. ಅವು ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ” ಎನ್ನುತ್ತಾರೆ ಸೌಮ್ಯ


ಭಾವೋದ್ವೇಗದಿಂದ ಹೊರಬಂದ ಅವರು ಇದ್ದಕ್ಕಿದ್ದಂತೆ ಕಣ್ಣೀರು ಸುರಿಸತೊಡಗಿದರು. “ಯಾಕೆ ಎಂದು ನನಗೆ ಗೊತ್ತಿಲ್ಲ, ಆದರೆ ಇಂದು ನಾನು ನನ್ನ ತಂಗಿ ಮತ್ತು ನನ್ನ ಹೆತ್ತವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಹೇಗಿದ್ದಾರೆಂದು ನನಗೆ ತಿಳಿದಿಲ್ಲ…,” ಮಾತನಾಡಲು ಸಾಧ್ಯವಾಗದೆ, ಆಕೆ ಒಂದರೆ ಕ್ಷಣ ಮಾತು ನಿಲ್ಲಿಸಿದರು. “… ಆದರೆ ನನ್ನ ಸ್ವಂತ ಬದುಕನ್ನು ನನಗೆ ಬೇಕಿರುವಂತೆ ನಡೆಸುವ ಎಲ್ಲಾ ಹಕ್ಕು ನನಗಿದೆ ಎಂದು ನನಗೆ ಅನ್ನಿಸುತ್ತೆ, ಆ ದಿನಗಳಲ್ಲಿ ಒಬ್ಬ ಹುಡುಗಿಯ ಆತ್ಮವು ಹುಡುಗನ ದೇಹದಲ್ಲಿ ಸಿಕ್ಕಿಹಾಕಿಕೊಂಡಂತೆ ನನಗೆ ಅನ್ನಿಸತೊಡಗಿತ್ತು, ಆದರೆ ಅದನ್ನ ನನ್ನ ಅಪ್ಪ, ಅಮ್ಮ ಮತ್ತು ಸಮಾಜ ನನ್ನನ್ನು ಈ ರೂಪದಲ್ಲಿ ಸ್ವೀಕರಿಸಲು ಸಿದ್ಧವಿರಲಿಲ್ಲ. ಒಬ್ಬರ ಬದುಕನ್ನ ನಿಯಂತ್ರಣ ಮಾಡೋದಕ್ಕೆ ಯಾರಿಗೂ ಅಧಿಕಾರ ಇಲ್ಲ. ಅದು ತಂದೆ ತಾಯಿಯಾದ್ರೂ ಸರಿ, ಊರಿನ ಜನರಾದರೂ ಸರಿ ಅನ್ನೋದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ನಾನು ನನ್ನ ಮನೆಯನ್ನ ಬಿಟ್ಟು ಬಂದೆ. ಸ್ವಾತಂತ್ರ್ಯಕ್ಕೆ ಅದರದೇ ಆದ ಬೆಲೆಯಿರುತ್ತದೆ. ನಾನು ಭಾರಿ ಬೆಲೆಯನ್ನೇ ತೆತ್ತಿದ್ದೇನೆ’. ಬಹುಶಃ ಸೌಮ್ಯರಿಗೆ ತನ್ನ ಬದುಕಿನ ದಿನಗಳು ಮುಗಿಯುತ್ತಾ ಬಂದಿರುವುದು ಗೊತ್ತಾಗಿದೆ. ಅದಕ್ಕಾಗಿಯೇ ಆಕೆ ತನ್ನ ಬದುಕಿನ ಅಂತ್ಯದ ಕಡೆಗೆ ಬದುಕಿನ ಬಂಡಿ ಅಗತ್ಯಕ್ಕಿಂತಲೂ ಹೆಚ್ಚು ವೇಗವಾಗಿ ಓಡುತ್ತಿದೆ ಎಂದು ನಿಡುಸುಯ್ದರು.


(ಇದು Scroll.in ವೆಬ್‌ ಮ್ಯಾಗಜೈನ್‌ನಲ್ಲಿ ಪ್ರಕಟವಾದ ಬರಹದ ಭಾವಾನುವಾದ)

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಮಹಾತ್ಮ ಗಾಂಧಿ- ಕಸ್ತೂರ್ಬಾ ಅವರ ದಾಂಪತ್ಯ ಹೇಗಿತ್ತು ಗೊತ್ತೆ? ಕಸ್ತೂರ್ಬಾ ಅವರ ಕೊನೆಯ ಆಸೆ ಏನಾಗಿತ್ತು? ಗಾಂಧೀಜಿ ಅದನ್ನು ಈಡೇರಿಸಿದರೆ? ಈ ಮನಕಲಕುವ ವಿವರಗಳನ್ನು ಬಿಡಿಸಿಟ್ಟಿದ್ದಾರೆ ಚಿಂತಕ ನಿಕೇತ್ ರಾಜ್ ಮೌರ್ಯ.

Related Articles

ಇತ್ತೀಚಿನ ಸುದ್ದಿಗಳು