ಬದ್ಲಾಪುರ್ ರೇಪಿಸ್ಟ್ ಎನ್‌ಕೌಂಟರಿನಲ್ಲಿ ಸಾವು

ಮುಂಬೈ, ಸೆಪ್ಟೆಂಬರ್ 23: ದೇಶಾದ್ಯಂತ ಸಂಚಲನ ಮೂಡಿಸಿದ್ದ ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪೊಲೀಸ್ ಫೈರಿಂಗ್‌ನಲ್ಲಿ ಸಾವನ್ನಪ್ಪಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ಶಾಲೆಯಲ್ಲಿ ಇಬ್ಬರು ನಾಲ್ಕು ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಆರೋಪಿ ಶಿಂಧೆ ಸೋಮವಾರ ಸಂಜೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಆತನನ್ನು ಜೈಲಿನಿಂದ ಕರೆದೊಯ್ಯುತ್ತಿದ್ದಾಗ ಪೊಲೀಸರೊಬ್ಬರ ಗನ್ ಹಿಡಿದು ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿರುವ ಶಿಂಧೆ ವಿರುದ್ಧ ಆತನ ಎರಡನೇ ಪತ್ನಿ ಕಳೆದ ವಾರ ಬೋಯಿಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಸೋಮವಾರ ಸಂಜೆ 5.30ಕ್ಕೆ ತಲೋಜಾ ಜೈಲಿನಿಂದ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ಅಲ್ಲಿಂದ ಹತ್ತು ಮಂದಿ ಪೊಲೀಸರ ಬೆಂಗಾವಲು ಪಡೆಯ ಮಧ್ಯೆ ವಾಹನವನ್ನು ಠಾಣೆಗೆ ಕೊಂಡೊಯ್ಯುತ್ತಿದ್ದಾಗ ಮುಂಬ್ರಾ ಬೈಪಾಸ್‌ಗೆ ವಾಹನ ಬಂದಾಗ ಪಕ್ಕದಲ್ಲಿ ಕುಳಿತಿದ್ದ ಎಎಸ್‌ಐನಿಂದ ಗನ್ ಕಿತ್ತುಕೊಂಡ ಆರೋಪಿ ಗುಂಡು ಹಾರಿಸಿದ್ದಾನರ.

ಇದರಿಂದ ಎಎಸ್‌ಐ ಕಾಲಿಗೆ ಗುಂಡುಗಳು ಬಿದ್ದಿವೆ. ಅವರ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಅಧಿಕಾರಿ ತಕ್ಷಣ ಪ್ರತಿಕ್ರಿಯಿಸಿ ಆರೋಪಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿಂಧೆಯನ್ನು ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು