KPSC ಅಕ್ರಮ ಜ್ಞಾನೇಂದ್ರ ಕುಮಾರ್ ನಾಪತ್ತೆ – ತನಿಖೆ ಚುರುಕು ಹೆಚ್ಚಿದ ಕುತೂಹಲ

ಬೆಂಗಳೂರು : ಕರ್ನಾಟಕದ IAS ಅಧಿಕಾರಿ ಹಾಗೂ MSME ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆಯಾಗಿರುವ ಘಟನೆ ರಾಜ್ಯ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದೆ. KPSC ಪರೀಕ್ಷಾ ಅಕ್ರಮಗಳ ಕುರಿತು ED ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಅವರು ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಜ್ಞಾನೇಂದ್ರ ಕುಮಾರ್ ಅವರು ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪಶುವೈದ್ಯಾಧಿಕಾರಿ ನೇಮಕಾತಿ ಸೇರಿದಂತೆ ಹಲವು ಪರೀಕ್ಷೆಗಳ ಜವಾಬ್ದಾರಿ ಅವರ ಮೇಲಿತ್ತು. KPSC ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ED ಇತ್ತೀಚೆಗೆ ಹಲವು ಕಡೆ ದಾಳಿ ನಡೆಸಿತ್ತು. ಮಾಹಿತಿಯ ಪ್ರಕಾರ, ಆಗಸ್ಟ್ 20ರಂದು ಜ್ಞಾನೇಂದ್ರ ಕುಮಾರ್ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ದೆಹಲಿಗೆ ತೆರಳಲು ಇಂಡಿಗೋ ವಿಮಾನದ ಟಿಕೆಟ್ ಅನ್ನು ವಿಮಾನ ಹೊರಡುವ ಸುಮಾರು ಒಂದೂವರೆ ಗಂಟೆ ಮೊದಲು ಬುಕ್ ಮಾಡಿದ್ದರು. ಟಿಕೆಟ್‌ಗಾಗಿ ₹30,253 ಪಾವತಿಸಿದ್ದು, HDFC ಕ್ರೆಡಿಟ್ ಕಾರ್ಡ್ ಬಳಸಿದ್ದರು ಎಂದು ವರದಿಯಾಗಿದೆ.

ವಿಮಾನ ನಿಲ್ದಾಣ ತಲುಪಿದ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಅವರು ದೆಹಲಿಗೆ ತೆರಳುವ ವಿಮಾನ ಹತ್ತಿದ್ದಾರೆಯೇ ಎಂಬುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದವರಿಗೂ ಅವರ ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಅವರ ಚಲನವಲನ ಪತ್ತೆಹಚ್ಚಲು ಮುಂದಾಗಿದ್ದಾರೆ. KPSC ನೇಮಕಾತಿ ಅಕ್ರಮ ಪ್ರಕರಣದ ತನಿಖೆಯ ಭಾಗವಾಗಿ ED ದಾಳಿ ನಡೆಸಿದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಜ್ಞಾನೇಂದ್ರ ಕುಮಾರ್ ಅವರ ಹಿಂದಿನ KPSC ಕಾರ್ಯವೈಖರಿ ಹಾಗೂ ಪರೀಕ್ಷಾ ನಿರ್ವಹಣೆಯ ಪಾತ್ರದ ಬಗ್ಗೆಯೂ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎಂಬ ವರದಿಗಳಿವೆ.

ಆದರೆ, ED ದಾಳಿಗೂ ಜ್ಞಾನೇಂದ್ರ ಕುಮಾರ್ ಅವರ ನಾಪತ್ತೆಗೂ ನೇರ ಸಂಬಂಧವಿದೆ ಎಂಬುದು ಈವರೆಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ನಾಪತ್ತೆಯ ನಿಖರ ಕಾರಣವೇನು ಮತ್ತು ಅವರು ದೆಹಲಿಗೆ ತೆರಳಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಿಮಾನ ನಿಲ್ದಾಣದ CCTV ದೃಶ್ಯಗಳು ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸದ್ಯ ಜ್ಞಾನೇಂದ್ರ ಕುಮಾರ್ ಅವರ ಪತ್ತೆಗೆ ಪೊಲೀಸ್ ಶೋಧ ಮುಂದುವರಿದಿದ್ದು, ಪ್ರಕರಣದ ನಿಜವಾದ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು