ನವದೆಹಲಿ: 2020ರ ದೆಹಲಿ ಗಲಭೆಗಳ ‘ದೊಡ್ಡ ಪಿತೂರಿ’ ಪ್ರಕರಣಕ್ಕೆ ಸಂಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠವು, “ದೀರ್ಘಾವಧಿಯ ಜೈಲು ಶಿಕ್ಷೆಯು ಮಾತ್ರವೇ ಜಾಮೀನಿಗೆ ಆಧಾರವಾಗುವುದಿಲ್ಲ” ಎಂದು ಸ್ಪಷ್ಟಪಡಿಸಿ ಈ ತೀರ್ಪು ನೀಡಿದೆ. ಡಿಸೆಂಬರ್ 10ರಂದು ಆರೋಪಿಗಳು ಹಾಗೂ ದೆಹಲಿ ಪೊಲೀಸರ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಇದೇ ಪ್ರಕರಣದ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ-ಉರ್-ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರ ದೀರ್ಘಾವಧಿಯ ಜೈಲು ವಾಸವನ್ನು ಅನಗತ್ಯವೆಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಅವರಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಪಡೆದ ಆರೋಪಿಗಳನ್ನು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ಈ ಎಲ್ಲಾ ಆರೋಪಿಗಳು ಕಳೆದ ಐದು ವರ್ಷಗಳಿಗೂ ಅಧಿಕ ಕಾಲ ಜೈಲಿನಲ್ಲಿದ್ದು, ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣವು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್ಸಿ) ವಿರುದ್ಧ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲೇ ಭುಗಿಲೆದ್ದ 2020ರ ದೆಹಲಿ ಗಲಭೆಗಳ ‘ದೊಡ್ಡ ಪಿತೂರಿ’ಗೆ ಸಂಬಂಧಿಸಿದೆ. ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
