ಬೆಂಗಳೂರು : ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪೊಕ್ಸೋ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳ ಅಡಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿಗಳಿಗೆ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಆಲಿಸಿದ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆದರೆ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಆಗುವುದು ಅನುಮಾನ ಎನ್ನಲಾಗಿದೆ. ಶಿವಮೂರ್ತಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್, ಹರೀಶ್ ಕುಮಾರ್ ಅವರುಗಳಿದ್ದ ಪೀಠ ಈ ಆದೇಶ ನೀಡಿದೆ.
ಷರತ್ತುಬದ್ಧ ಜಾಮೀನಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಒಟ್ಟು ಏಳು ಷರತ್ತುಗಳನ್ನು ವಿಧಿಸಿದೆ. ಅದರಲ್ಲಿ ಮುರುಘಾ ಮಠದ ಶಿವಮೂರ್ತಿಗಳು ಚಿತ್ರದುರ್ಗಕ್ಕೆ ಹೋಗದಂತೆ, ಪಾಸ್ಪೋರ್ಟ್ ಗಳನ್ನು ನ್ಯಾಯಾಲಯದ ವಶಕ್ಕೆ ಕೊಡುವಂತಹ ಪ್ರಮುಖ ಷರತ್ತುಗಳನ್ನು ವಿಧಿಸಿದೆ.