ಬೆಂಗಳೂರು: ನವೆಂಬರ್ 5ರಂದು ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಅನುಮತಿಯಿಲ್ಲದೆ ಪ್ಯಾಲೆಸ್ತೀನ್ ಜನರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ ಮೂವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ. ಸುಮಾರು 20 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಎಫ್ಐಆರ್ ಪ್ರಕಾರ, ಸೇಂಟ್ ಮಾರ್ಕ್ಸ್ ರಸ್ತೆ ಬಳಿಯ ಬೌರಿಂಗ್ ಪೆಟ್ರೋಲ್ ಬಂಕ್ ಬಳಿ ಸುಮಾರು 20-25 ಜನರು ಜಮಾಯಿಸಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ‘ಸ್ಟಾಪ್ ದಿ ಜೆನೊಸೈಡ್,’ ‘ಎಂಡ್ ದಿ ಬ್ಲಾಕೇಡ್,’ ‘ಸೇವ್ ಪ್ಯಾಲೆಸ್ಟೈನ್,’ ಮತ್ತು ‘ಸ್ಟ್ಯಾಂಡ್ ವಿತ್ ಪ್ಯಾಲೆಸ್ಟೈನ್’ ಸಂದೇಶಗಳ ಫಲಕಗಳನ್ನು ಪ್ರದರ್ಶಿಸಿದ್ದರು.
ಹೈಕೋರ್ಟ್ ಆದೇಶಕ್ಕೆ ವಿರುದ್ಧವಾದ ಕಾರಣ ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಸಿದರೂ, ಪ್ರತಿಭಟನಾಕಾರರು ಪಾದಚಾರಿ ಮಾರ್ಗದಲ್ಲಿ ಪ್ರತಿಭಟನೆ ಮುಂದುವರಿಸಿದ್ದರಿಂದ ಜನರಿಗೆ ತೊಂದರೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ನಗರದ ಫ್ರೀಡಂ ಪಾರ್ಕ್ ಹೊರತುಪಡಿಸಿ ಯಾವುದೇ ರೀತಿಯ ಪ್ರತಿಭಟನೆಗಳನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಬೈಶಾಲಿ ಡೇ, ಶಶಾಂಕ್ ಜಿ, ಮೊಹಮ್ಮದ್ ಖಲೀಫ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 149 , 188, 283 , 290 ಮತ್ತು 291 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಅನುಮತಿ ಕೋರಿದ್ದವು ಮತ್ತು ಉಪ್ಪಾರಪೇಟೆ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಿದ್ದರು.