Saturday, February 14, 2026

ಸತ್ಯ | ನ್ಯಾಯ |ಧರ್ಮ

ಬಂಧನದ ಬೆನ್ನಲ್ಲೇ ಬೈರತಿ ಬಸವರಾಜುವಿಗೆ ಹಾರ್ಟ್ ಸಮಸ್ಯೆ: ಜಯದೇವ ಆಸ್ಪತ್ರೆಗೆ ದಾಖಲು

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಮಾಜಿ ಸಚಿವ ಹಾಗೂ ಶಾಸಕ ಬೈರತಿ ಬಸವರಾಜು ಅವರಿಗೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶನಿವಾರ ಆಂಜಿಯೋಗ್ರಾಮ್ ಪರೀಕ್ಷೆ ನಡೆಯಲಿದೆ.

ಬೈರತಿ ಬಸವರಾಜು ಅವರನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವರದಿ ನೀಡುವಂತೆ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೂಚನೆ ನೀಡಿತ್ತು. ಸಿಐಡಿ ಅಧಿಕಾರಿಗಳು ಗುರುವಾರವಷ್ಟೇ ಬಸವರಾಜು ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು, ವಿಚಾರಣೆಗಾಗಿ ಸಿಐಡಿ ಕಚೇರಿಗೆ ಕರೆತಂದಿದ್ದರು.

ಶುಕ್ರವಾರ ಮಧ್ಯಾಹ್ನ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಸಿಐಡಿ ಪೊಲೀಸರು ಶಾಸಕರನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ, ವೈದ್ಯಕೀಯ ವರದಿಯಲ್ಲಿ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಬಗ್ಗೆ ಉಲ್ಲೇಖಿಸಿರುವುದನ್ನು ಗಮನಿಸಿದ ನ್ಯಾಯಾಲಯ, ಜಯದೇವ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಸಮ್ಮುಖದಲ್ಲಿ ಸಂಪೂರ್ಣ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ ಅವರಿಗೆ ಆದೇಶಿಸಿತು. ನ್ಯಾಯಾಲಯದ ಸೂಚನೆಯಂತೆ ಶಾಸಕರಿಗೆ ಇಸಿಜಿ ಸೇರಿದಂತೆ ವಿವಿಧ ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಲಾಗಿದೆ.

ಫೆಬ್ರವರಿ 14 ಮತ್ತು 15ರಂದು ನ್ಯಾಯಾಲಯಕ್ಕೆ ರಜೆ ಇರುವುದರಿಂದ, ತಪಾಸಣಾ ವರದಿಯನ್ನು ನ್ಯಾಯಾಧೀಶರ ಮನೆಗೆ ಸಲ್ಲಿಸುವ ಸಾಧ್ಯತೆಯಿದೆ. ಈ ವೈದ್ಯಕೀಯ ವರದಿಯನ್ನು ಆಧರಿಸಿ ನ್ಯಾಯಾಲಯವು ಬೈರತಿ ಬಸವರಾಜು ಅವರನ್ನು ಸಿಐಡಿ ವಶಕ್ಕೆ ನೀಡಬೇಕೇ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೇ ಎಂಬುದನ್ನು ನಿರ್ಧರಿಸಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page