ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿಆಯೋಜಿಸಲಾಗಿದ್ದ ʼಇನ್ವೆಸ್ಟ್ ಕರ್ನಾಟಕ ಬಿಲ್ಡ್ ಫಾರ್ ದ ವರ್ಲ್ಡ್ 2022ʼ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಬಂಡವಾಳ ಹೂಡಿಕೆಗಳ ಒಪ್ಫಂದಗಳು ಕಾರ್ಯಗತಗೊಳ್ಳಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದು ಮಾತನಾಡಿದರು.
ಇನ್ವೆಸ್ಟ್ ಕರ್ನಾಟಕ 2022ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಇಂದು ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಯೋಜನೆಗಳು ವಾಸ್ತವದಲ್ಲಿ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅನುಮತಿಗಳನ್ನು ಹಾಗೂ ಸಹಕಾರವನ್ನು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೂಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ʼಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸರ್ಕಾರ ನಿರ್ಮಿಸಲಿದೆ. ಗರಿಷ್ಟ ಮಟ್ಟದ, ದಕ್ಷ ಹಾಗೂ ಉತ್ತಮ ಗುಣಮಟ್ಟದ ಉತ್ಪಾದಕತೆ ರಾಜ್ಯದಲ್ಲಿ ಆಗಬೇಕಿದೆ. ಆರ್ಥಿಕತೆಯಲ್ಲಿ ಪರಿಣಾಮ ಮಾತ್ರ ಮಹತ್ವದ ಪಾತ್ರ ವಹಿಸುತ್ತದೆ. ಈ ಬಂಡವಾಳಗಳು ವಾಸ್ತವವಾಗಿ ಬದಲಾಯಿಸುವುದೇ ಸರ್ಕಾರದ ಮುಂದಿನ ಗುರಿಯಾಗಿದೆ. ಈಗ ಕಾಗದದ ಮೇಲಿರುವ ಬಂಡವಾಳ, ವಾಸ್ತವವಾಗಬೇಕು. 2.80 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಯೋಜನೆಗಳಿಗೆ ಈಗಾಗಲೇ ಅನುಮೋದನೆಯನ್ನು ಸರ್ಕಾರ ನೀಡಿದೆ. ಮುಂದಿನ ಮೂರು ತಿಂಗಳೊಳಗೆ ಮುಂದಿನ ಬಂಡವಾಳ ಹೂಡಿಕೆಯ ಯೋಜನೆಗಳ ಬಗ್ಗೆ ಸರ್ಕಾರ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಿದೆ. ರಾಜ್ಯಸರ್ಕಾರ ಬಂಡವಾಳ ಹೂಡಿಕೆಯ ಬಗ್ಗೆ ಬಹಳ ಗಂಭೀರವಾಗಿದ್ದು, ಹೂಡಿಕೆದಾರರೂ ಸಹ ಇದೇ ಗಂಭೀರತೆಯನ್ನು ಹೊಂದಬೇಕಾಗುತ್ತದೆʼ ಎಂದರು.
ʼಸಂಶೋಧನೆಗಳಿಗಾಗಿ ಆರ್ ಎಂಡ್ ಡಿ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಸಣ್ಣಗ್ಯಾರೇಜ್ ನಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಸಂಶೋಧನೆಗೆ ಒತ್ತು ನೀಡಲಾಗುವುದು. ಐಐಟಿ, ಐಐಎಂ. ಐಐಎಸ್ ಸಿ, ಡಿಆರ್ ಡಿಓ ಸೇರಿದಂತೆ ಪ್ರಮುಖ ಸಂಸ್ಥೆಗಳು ರಾಜ್ಯದಲ್ಲಿವೆ. 400 ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ಪ್ರಪಂಚದಾದ್ಯಂತ ಸುಮಾರು 10 ಸಾವಿರ ಇಂಜಿನಿಯರ್ಗಳು ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಕಂಪನಿಗಳಲ್ಲಿ ಸಂಶೋಧನಾ ಕಾರ್ಯ ಕೈಗೊಂಡಿದ್ದಾರೆ. ಜಿನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವಲಯದಲ್ಲಿ ಸಂಶೋಧನೆಗಳು ನಡೆಯುತ್ತವೆ. ಕೇವಲ ಕರ್ನಾಟಕ, ಭಾರತ, ವಿಶ್ವವಲ್ಲದೇ, ಇಡೀ ಮಾನವ ಕುಲದ ಅಭಿವೃದ್ಧಿಯೇ ಕರ್ನಾಟಕದಲ್ಲಾಗುತ್ತದೆ. ಕೇಂದ್ರ ನೀತಿ ಆಯೋಗದ ಸೂಚ್ಯಂಕದಂತೆ ಆವಿಷ್ಕಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆʼ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ʼಕೋವಿಡ್ ನಂತರದ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ಮೊದಲಿಗಿಂತ ಹೆಚ್ಚಾಗಿತ್ತು. ಕಳೆದ ವರ್ಷದ ಕೇವಲ ಆರು ತಿಂಗಳ ಒಳಗಾಗಿ ಆದಾಯದ ಗುರಿಗಿಂತ 13000 ಕೋಟಿ ರೂ. ಹೆಚ್ಚಿಗೆ ಆದಾಯ ಸಂಗ್ರಹಿಸಲಾಯಿತು. ಇದು ನಮ್ಮ ರಾಜ್ಯದ ಶಕ್ತಿಯಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಸುಧಾರಿತ ನೀತಿಗಳು, ಕೈಗಾರಿಕಾ ಸ್ನೇಹಿ ಪರಿಸರವನ್ನು ನೀಡುತ್ತಿದೆ. ಪ್ರಗತಿಪರ ಚಿಂತನೆಯ ನೀತಿಗಳು ರಾಜ್ಯದಲ್ಲಿವೆ.ಈಸ್ ಆಫ್ ಡುಯಿಂಗ್ ಬಿಸೆನೆಸ್,ಕೈಗಾರಿಕಾ ಪ್ರೋತ್ಸಾಹಕ ನೀತಿ, ಸೆಮಿಕಂಡಕ್ಟರ್ ನೀತಿ, ಇವಿ ನೀತಿ, ಆರ್ ಎಂಡ್ ಡಿ ನೀತಿ ರಾಜ್ಯದಲ್ಲಿವೆʼ ಎಂದು ತಿಳಿಸಿದರು.
ʼಕರ್ನಾಟಕ ಈ ಕ್ಷೇತ್ರದಲ್ಲಿನ ಸ್ಪರ್ಧೆಗೆ ಸಿದ್ಧವಿದೆ. ಸ್ಪರ್ಧೆಗಳಿಂದ ದಕ್ಷತೆ ಹೆಚ್ಚುವ ಜೊತೆಗೆ ನಾವು ಸದಾ ಕಾರ್ಯೋನ್ಮುಖರಾಗಿರುತ್ತೇವೆ. ನಮ್ಮ ಸ್ಪರ್ಧೆ ವಿಶ್ವಮಟ್ಟದ್ದಾಗಿದೆ. ಕೋವಿಡ್ ನಂತರ ಆರ್ಥಿಕತೆಯಲ್ಲಿ ಮುಂದಿದ್ದ ವಿಶ್ವದ ಅನೇಕ ದೇಶಗಳು ಈಗ ಬೆಲೆ ಏರಿಕೆ ಸೇರಿದಂತೆ ಹಲವು ತೊಂದರೆಗಳನ್ನು ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿಶ್ವದ ಕಣ್ಣು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ನೆಟ್ಟಿದೆ. ಚೈನಾಪ್ಲಸ್ ಒನ್ ಗಮ್ಯಗಳು ಬಹಳ ಕಡಿಮೆಯಿದೆ. ಇದರಲ್ಲಿ ಪ್ರಮುಖವಾದ ಗಮ್ಯವೆಂದರೆ ಭಾರತ. ಆದ್ದರಿಂದಲೇ ಇಲ್ಲಿ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಲಾಗುತ್ತಿದೆʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ ಗೆಲ್ಹೊತ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಪಿಯೂಷ್ ಗೋಯಲ್, ಸಚಿವರಾದ ಡಾ. ಅಶ್ವತ್ಥ್ ನಾರಾಯಣ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಮೈಸೂರು ರಾಜ ವಂಶಸ್ಥರಾದ ರಾಣಿ ಪ್ರಮೋದಾದೇವಿ, ಉದ್ಯಮಿಗಳಾದ ಸಜ್ಜನ್ ಜಿಂದಾಲ್, ವಿಕ್ರಮ ಕಿರ್ಲೊಸ್ಕರ್, ರಿಷಬ್ ಪ್ರೇಮ್ ಜಿ , ಪ್ರತಿಕ್ ಅಗರವಾಲ್, ರಾಜನ್ ಮಿತ್ತಲ್, ಕರಣ್ ಅದಾನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಹಾಜರಿದ್ದರು.