“..ಸಂಸಾರದಲ್ಲಿ ಏನೇ ಬಂದರೂ ಗುಟ್ಟಾಗಿಡಬೇಕು, ಸರಿದೂಗಿಸಿಕೊಂಡು ಹೋಗಬೇಕು, ಅದರಲ್ಲೂ ಪತಿ ಪತ್ನಿ ನಡುವಿನ ದೈಹಿಕ ಸಂಬಂಧದ ಕುರಿತಾದರೆ ಅದರ ಕುರಿತು ಮಾತೇ ಆಡಬಾರದು ಎನ್ನುವುದನ್ನು ಮಹಿಳೆಯರ ಮೇಲೆ ಅಯಾಚಿತವಾಗಿ ಹೇರಲಾಗುತ್ತದೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ..
ಪತ್ನಿಗೆ ಒಪ್ಪಿಗೆ ಇಲ್ಲದಿದ್ದರೂ, ಆಕೆಯೊಂದಿಗಿನ ಅಸಹಜ ಲೈಂಗಿಕ ಕ್ರಿಯೆಯು ಅಪರಾಧವಲ್ಲ ಎಂದು ಛತ್ತೀಸ್ ಗಢ್ ಹೈಕೋರ್ಟ್ ತೀರ್ಪು ನೀಡಿದೆ. 2017 ಡಿಸೆಂಬರ್ 11 ರಂದು ಛತ್ತೀಸ್ ಗಡದಲ್ಲಿ ಪುರುಷನೊಬ್ಬ ತನ್ನ ಪತ್ನಿಯ ಜೊತೆಗೆ ಅನೈಸರ್ಗಿಕ ಮತ್ತು ಒಪ್ಪಿತವಲ್ಲದ ಲೈಂಗಿಕ ಕ್ರಿಯೆ ನಡೆಸಿದ್ದು, ಪರಿಣಾಮವಾಗಿ ನೋವಿನಿಂದ ಆಸ್ಪತ್ರೆಗೆ ದಾಖಲಾದ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪೆರಿಟೋನಿಟಿಸ್ (ಪೆರಿಟೋನಿಯಂ ನ ಉರಿಯೂತ, ಸಾಮಾನ್ಯವಾಗಿ ರಕ್ತದ ಮೂಲಕ ಅಥವಾ ಕಿಬ್ಬೊಟ್ಟೆಯ ಅಂಗದ ಛಿದ್ರದ ನಂತರ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ) ಮತ್ತು ಗುದನಾಳದಲ್ಲಿ ರಂಧ್ರವುಂಟಾದುದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಪೋಸ್ಟ್ ಮಾರ್ಟಮ್ ವರದಿ ತಿಳಿಸುತ್ತದೆ.
ಸಾಯುವ ಮುನ್ನ ಆಕೆ ತನ್ನ ಪತಿ ಅಸ್ವಾಭಾವಿಕವಾದ ಲೈಂಗಿಕ ಕ್ರಿಯೆ ನಡೆಸಿದ್ದು, ಇದರಿಂದಾಗಿ ತನ್ನ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿಕೆ ನೀಡಿದ್ದಳು. ಆದರೆ, ಸಾಕ್ಷಿಗಳ ಹೇಳಿಕೆಯಲ್ಲಿ ಆಕೆಗೆ ಮೊದಲೇ ಮೂಲವ್ಯಾಧಿ ಇತ್ತು, ಪತಿಯ ಅಸ್ವಾಭಾವಿಕ ದೌರ್ಜನ್ಯ ಅದಕ್ಕೆ ಕಾರಣವಲ್ಲ ಎಂಬ ಹೇಳಿ ಬದಲಾವಣೆಯಿಂದಾಗಿ ಛತ್ತೀಸ್ ಗಡ ಹೈಕೋರ್ಟ್ ಪತಿಯನ್ನು ನಿರ್ದೋಷಿ ಎಂದಿರುವುದಲ್ಲದೇ, 15 ವರ್ಷ ಮೇಲ್ಪಟ್ಟ ಪತ್ನಿಯ ಜೊತೆಯಲ್ಲಿ ಒಪ್ಪಿತವಲ್ಲದ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಹೇಳಿದೆ.
ಪತಿ ಗೋರಕ್ ನಾಥ್ ಮೇಲೆ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ, ಸೆಕ್ಷನ್ 377 ಅಡಿಯಲ್ಲಿ ಅಸ್ವಾಭಾವಿಕ ಅಪರಾಧ, ಮತ್ತು ಸೆಕ್ಷನ್ 304 ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಕುರಿತು ಕೇಸ್ ದಾಖಲಾಗಿತ್ತು.
ಈ ಕುರಿತು ಪರಿಶೀಲಿಸಿದ ಹೈಕೋರ್ಟ್ ಪತ್ನಿಗೆ 15 ವರ್ಷ ಮೀರಿದ್ದರೆ, ಆಕೆಯ ಜೊತೆ ನಡೆಯುವ ಯಾವುದೇ ರೀತಿಯ ಲೈಂಗಿಕ ಕ್ರಿಯೆಯು ಅತ್ಯಾಚಾರಕ್ಕೆ ಒಳಪಡುವುದಿಲ್ಲ, ಅದು ಒಪ್ಪಿತವಲ್ಲದಿದ್ದರೂ ಅತ್ಯಾಚಾರವೆನಿಸಿಕೊಳ್ಳುವುದಿಲ್ಲ ಎಂದು ಹೇಳಿದೆ. ಸಾವಿಗೆ ಮುನ್ನ ಪತ್ನಿ ನೀಡಿದ ಹೇಳಿಕೆ ಒಂದನ್ನೇ ಪರಿಗಣಿಸಲಾಗದು ಎಂದು ಸಹ ಈ ಸಂದರ್ಭದಲ್ಲಿ ಹೈಕೋರ್ಟ್ ಹೇಳಿದೆ.
ಪದೇ ಪದೇ ವೈವಾಹಿಕ ಅತ್ಯಾಚಾರದಂತಹ ವಿಷಯಗಳು ಚರ್ಚೆಗೆ ಒಳಗಾಗುತ್ತಿರುವಾಗ ಈ ಘಟನೆ ಇನ್ನಷ್ಟು ಗೊಂದಲ, ಆತಂಕ ಮತ್ತು ನಿರಾಸೆ ಮೂಡಿಸಿರುವುದಂತೂ ನಿಜ. UN ವರದಿಯ ಅನುಸಾರ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ತನ್ನ ಸಂಗಾತಿಯಿಂದಲೇ ದೈಹಿಕ / ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಪತ್ನಿ ಮೊದಲೇ ಮೂಲವ್ಯಾಧಿಯಿಂದ ಬಳಲುತ್ತಿದ್ದಳು, ಹಾಗಾಗಿ ಆಕೆಯ ಸಾವಿಗೆ ಪತಿಯ ಅಸ್ವಾಭಾವಿಕ ಕ್ರಿಯೆ ಕಾರಣವಲ್ಲ ಎಂದು ಹೇಗೋ ಮುಚ್ಚಿಹಾಕಬಹುದು. ಆದರೆ ಮೂಲವ್ಯಾಧಿಯಿಂದ ನರಳುತ್ತಿರುವ ಪತ್ನಿಯ ಮೇಲೆ ಆಕೆಯ ಒಪ್ಪಿಗೆಯಿಲ್ಲದೇ ದೌರ್ಜನ್ಯ ನಡೆಸುವುದು ಎಂತಹಾ ಕ್ರೌರ್ಯ. ಆಕೆ ಅನುಭವಿಸಿರಬಹುದಾದ ನೋವನ್ನು ಮಾನವೀಯ ನೆಲೆಯಲ್ಲಿ ಸಹ ಪರಿಗಣಿಸದೇ, ಆಕೆಯ ಸಾವನ್ನು ತೀರಾ ಸಾಮಾನ್ಯ ಎನ್ನುವಂತೆ ಪರಿಗಣಿಸಿರುವುದು ವಿಷಾದನೀಯ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅನುಸಾರ 18ರಿಂದ 49ರ ವಯೋಮಾನದ ಸುಮಾರು 29.3% ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. 6.5% ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ವರದಿಯಾಗಿದ್ದು, ಕಾನೂನು ನೆರವು ಅಥವಾ ಕೌಟುಂಬಿಕ ಬೆಂಬಲದ ಕೊರತೆಯಿಂದ ಕಾನೂನು ಹೋರಾಟ ಮಾಡಲು ಅಥವಾ ದೂರು ನೀಡಲು ಹಿಂಜರಿಯುತ್ತಾರೆ.
ಸಂಸಾರದಲ್ಲಿ ಏನೇ ಬಂದರೂ ಗುಟ್ಟಾಗಿಡಬೇಕು, ಸರಿದೂಗಿಸಿಕೊಂಡು ಹೋಗಬೇಕು, ಅದರಲ್ಲೂ ಪತಿ ಪತ್ನಿ ನಡುವಿನ ದೈಹಿಕ ಸಂಬಂಧದ ಕುರಿತಾದರೆ ಅದರ ಕುರಿತು ಮಾತೇ ಆಡಬಾರದು ಎನ್ನುವುದನ್ನು ಮಹಿಳೆಯರ ಮೇಲೆ ಅಯಾಚಿತವಾಗಿ ಹೇರಲಾಗುತ್ತದೆ. ಹೆಣ್ಣುಮಕ್ಕಳಿಗೆ ಮದುವೆಯಾಗಿ ವರ್ಷದೊಳಗೆ ಮಕ್ಕಳಾಗದಿದ್ದರೆ ಆಕೆಯನ್ನು ಬಂಜೆ ಎನ್ನುವುದು, ಗಂಡು ಹೆರದಿದ್ದರೆ ಆಕೆಗೆ ತೊಂದರೆ ನೀಡುವುದು ಎಲ್ಲವೂ ದೌರ್ಜನ್ಯದ ಭಾಗವೇ. ಗಂಡ ತಾನು ಮದುವೆಯಾಗಿದ್ದೇನೆ ಎನ್ನುವ ಒಂದೇ ಕಾರಣಕ್ಕೆ ಆಕೆಯ ದೈಹಿಕ ಮಾನಸಿಕ ಸ್ಥಿತಿಯನ್ನೂ ಗಮನಿಸದೇ ತನ್ನಿಷ್ಟ ಬಂದ ಹಾಗೆ ನಡೆದುಕೊಳ್ಳುವುದು ಕ್ರೌರ್ಯ ಮತ್ತು ಅದನ್ನು ಮುಚ್ಚಿಡಬೇಕಾಗಿ ಬರುವ ಅನಿವಾರ್ಯತೆ ಉಂಟಾಗುವುದು ಅದಕ್ಕಿಂತಲೂ ಹೀನಾಯ ಸ್ಥಿತಿ.
ಕೇವಲ ಅನಕ್ಷರಸ್ಥರು, ಗ್ರಾಮೀಣ ಮಹಿಳೆಯರು ಮಾತ್ರವಲ್ಲ, ನಗರ ಪ್ರದೇಶದ, ಅಕ್ಷರಸ್ಥ ಮಹಿಳೆಯರು ಸಹ ತಮ್ಮ ಸಂಗಾತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಷ್ಟೋ ಕಡೆಗಳಲ್ಲಿ ಸಮಾಜ, ಕುಟುಂಬ, ಮಕ್ಕಳು ಮುಂತಾದ ಅಸಹಾಯಕತೆಗೆ ಒಳಗಾಗಿ ಯಾರಲ್ಲೂ ಹೇಳಿಕೊಳ್ಳಲಾಗದೇ ನರಕ ಅನುಭವಿಸುತ್ತಾರೆ. ಇನ್ನಷ್ಟು ಕಡೆಗಳಲ್ಲಿ ಸ್ವಂತ ತಾಯಿ ತಂದೆಯರ ಜೊತೆ ಹಂಚಿಕೊಂಡಾಗಲೂ ಮನೆ ಮರ್ಯಾದೆ, ಅಥವಾ ತವರು ಮನೆಗೆ ವಾಪಸ್ ಬಾರದಿರಲಿ ಎನ್ನುವ ಉದ್ದೇಶದಿಂದ ಹೊಂದಿಕೊಂಡು ಹೋಗು ಎನ್ನುವ ಕ್ರೌರ್ಯವೂ ನಡೆಯುತ್ತಲೇ ಬಂದಿದೆ.
ಅಷ್ಟಕ್ಕೂ ಒಬ್ಬ ವಿವಾಹಿತ ಮಹಿಳೆಯ ಸಾವು ಸಮಾಜಕ್ಕೆ ಮುಖ್ಯವಾಗುವುದೇ ಇಲ್ಲ. ಆಕೆಗೆ ಯಾರದೋ ಜೊತೆ ಅನೈತಿಕ ಸಂಬಂಧವಿತ್ತು, ಆಕೆಯನ್ನು ಯಾರೋ ಬಂದು ಭೀಕರವಾಗಿ ಕೊಲೆ ಮಾಡಿದರು, ಮೊದಲನೆಯ ಹೆಂಡತಿ ಎರಡನೆಯ ಹೆಂಡತಿಯ ಜೊತೆ ಜುಟ್ಟು ಹಿಡಿದು ಜಗಳವಾಡಿದಳು, ಅವಿವಾಹಿತ ಹುಡುಗಿಯ ಮೇಲೆ ಈ ಮೊದಲು ಕೇಳಿದ ಘಟನೆಗಿಂತ ಭಯಾನಕವಾಗಿ ಅತ್ಯಾಚಾರವಾಗಿ ಕೊಲೆ ಮಾಡಿದರು ಎನ್ನುವ ಬರ್ಬರ ವಿಷಯಗಳಷ್ಟೇ ಮಾಧ್ಯಮಕ್ಕಾಗಲೀ, ಜನಗಳಿಗಾಗಲೀ ಬೇಕಾಗುವುದು. ಒಬ್ಬ ವಿವಾಹಿತ ಮಹಿಳೆ ಹೇಗೆ ಸತ್ತರೂ ಅದು ಆಕೆಯ ಮಕ್ಕಳಿಗೋ, ಗಂಡನಿಗೋ ಸಂಬಂಧಿಸಿದ ವಿಷಯ ಎಂದು ಜಾಣ ಕುರುಡಾಗಿಬಿಡುತ್ತದೆ ಸಮಾಜ.
ಮದುವೆಯಾದ ಒಂದೇ ಕಾರಣಕ್ಕೆ ದೈಹಿಕವಾಗಿ ಹಿಂಸೆಗೊಳಗಾಗುವುದು ಕೊನೆಗೆ ಒಂದು ಗೌರವಯುತವಾದ ಸಾವು ಕೂಡ ದಕ್ಕದೇ ಹೋಗುವುದು, ಇದೆಲ್ಲದಕ್ಕೂ ಕಾನೂನು ಕುರುಡಾಗಿಬಿಡುವುದು ಬಹಳ ಆತಂಕಕಾರಿ. ಮದುವೆಯಾದ ಒಂದೇ ಕಾರಣಕ್ಕೆ ಹೆಣ್ಣನ್ನು ಒಂದು ಜೀವಿ ಎಂದು ಕೂಡ ಪರಿಗಣಿಸದೇ ಗಂಡನ ಆಸ್ತಿ, ಅವನು ಆಕೆಯ ಜೊತೆ ಏನು ಬೇಕಾದರೂ ಮಾಡಬಹುದು, ಆಕೆ ಪತ್ನಿ ಎನ್ನುವ ಕಾರಣಕ್ಕೆ ಎಂತಹ ನೋವು, ಮುಜುಗರ, ಅವಮಾನ, ದೌರ್ಜನ್ಯ, ಅತ್ಯಾಚಾರಗಳನ್ನು ಬೇಕಾದರೂ ಸಹಿಸಿಕೊಳ್ಳಬೇಕು ಎನ್ನುವುದು ಮದುವೆ ಎನ್ನುವ ಚೌಕಟ್ಟನ್ನೇ ಪ್ರಶ್ನಿಸುವ ಅನಿವಾರ್ಯತೆ ತರುತ್ತದೆ.