ಇಂಡಿಗೋ ವಿಮಾನದಲ್ಲಿ ಗಗನಸಖಿಯ ಮೈ ಮುಟ್ಟಿ “ಎಷ್ಟು ರೇಟು, ಬರ್ತೀಯಾ?” ಎಂದು ಕೇಳಿ ಲೈಂಗಿಕ ದೌರ್ಜನ್ಯ ನೀಡಿದ ವಿದೇಶಿಯೊಬ್ಬನನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಮಾಲ್ಡೀವ್ಸ್ ಪ್ರಜೆಯಾಗಿರುವ ಅಕ್ರಂ ಮಹಮ್ಮದ್ ಎಂಬ 51 ವಯಸ್ಸಿನ ವ್ಯಕ್ತಿ ತನ್ನ ದೇಶದಿಂದ ಆಗಸ್ಟ್ 18 ರಂದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ. ಈ ಸಂದರ್ಭದಲ್ಲಿ ಆತನ ಸೇವೆಯಲ್ಲಿ ನಿರತಳಾಗಿದ್ದ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇತರ ಇಬ್ಬರು ಮಹಿಳಾ ಸಿಬ್ಬಂದಿಗಳ ಜೊತೆಗೆ ಕೂಡ ಈತ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ವಿಮಾನ ಇಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಪೊಲೀಸರು ಈತನನ್ನು ಬಂಧಿಸಿದ್ದು ಈತನ ವಿರುದ್ಧ ಐಪಿಸಿ ಸೆಕ್ಷನ್ 354 ಹಾಗೂ 409 ರ ಅಡಿಯಲ್ಲಿ ಕೇಸು ದಾಖಲು ಮಾಡಿದ್ದಾರೆ.
ಮಾಲೆ ವೆಲಾನ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ಹೊರಟಿದ್ದ ಈತ ಗಗನಸಖಿಯ ಬಳಿ ಬಿಯರ್ ಹಾಗೂ ಗೋಡಂಬಿ ಕೇಳಿದ್ದ. ಆಕೆಗೆ ನೂರು ಡಾಲರ್ ನೀಡಿ, ಬಿಲ್ ನ ಹತ್ತು ಡಾಲರ್ ಹೊರತಾಗಿ ಉಳಿದ ತೊಂಬತ್ತು ಡಾಲರ್ ಇಟ್ಟುಕೊಳ್ಳುವಂತೆ ಹೇಳಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ದೃಡಕರಿಸಿದೆ.