Tuesday, February 17, 2026

ಸತ್ಯ | ನ್ಯಾಯ |ಧರ್ಮ

ಪಾಕ್ ವಿರುದ್ಧ ಸೇಡು; ಯೂಟ್ಯೂಬ್, ನ್ಯೂಸ್ ಚಾನಲ್ ನಿಷೇಧ ಹಾಕೋದು ಪ್ರತಿಕಾರದ ದಾರಿಯೇ?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ನೆರೆಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತ ಈಗ ಪಾಕಿಸ್ತಾನದ ಆಪ್ ಮತ್ತು ಯೂಟ್ಯೂಬ್ ಚಾನಲ್ ಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಗಿದೆ. ಈ ನಡೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ.

ಭಾರತ ನೇರವಾಗಿ ತನ್ನ ಪ್ರತಿಕಾರ ತೀರಿಸಲಾಗದೆ ನ್ಯೂಸ್ ಚಾನಲ್, ಆಪ್ ಗಳು ಮತ್ತು ಯೂಟ್ಯೂಬ್ ಚಾನೆಲ್ ಬಂದ್ ಮಾಡಿ ಏನು ಸಂದೇಶ ಕೊಡಲು ಹೊರಟಿದೆ ಎಂದು ನೆಟ್ಟಿಗರು ಭಾರತ ಸರ್ಕಾರದ ವಿರುದ್ಧ ಜಾಲತಾಣಗಳಲ್ಲಿ ಮಾತನ್ನಾಡಿದ್ದಾರೆ.

ಪಾಕಿಸ್ತಾನದ ಡಾನ್ ನ್ಯೂಸ್, ಎಆರ್‌ವೈ ನ್ಯೂಸ್, ಸಮಾ ಟಿವಿ ಮತ್ತು ಜಿಯೋ ನ್ಯೂಸ್ ಸೇರಿದಂತೆ ಹಲವಾರು ಸುದ್ದಿ ವಾಹಿನಿಗಳ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದರ ಜೊತೆಗೆ ಪಾಕಿಸ್ತಾನದ ಪ್ರಧಾನಿ, ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಸೇರಿದಂತೆ ಪ್ರಮುಖ ಸೆಲೆಬ್ರಿಟಿಗಳ ಚಾನಲ್ಲನ್ನು ಭಾರತ ನಿಷೇಧಿಸಿದೆ.

ಭಾರತ ಸರ್ಕಾರದ ಈ ನಡೆ ಒಂದು ಕಡೆ ಪ್ರಶಂಸೆಗೆ ಪಾತ್ರವಾದರೆ ಇನ್ನೊಂದು ಕಡೆ ತೀವ್ರ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ವಿರುದ್ಧ ನೇರ ಯುದ್ಧಕ್ಕೆ ಭಾರತ ಸರ್ಕಾರ ಯಾಕೆ ಮುಂದಾಗುತ್ತಿಲ್ಲ, ಬದಲಾಗಿ ಆಪ್ ನಿಷೇಧ, ಯೂಟ್ಯೂಬ್ ನಿಷೇಧ ಮಾಡುವುದು ಯಾವ ಮಟ್ಟದ ಪ್ರತಿಕಾರ ಎಂಬ ಪ್ರಮುಖ ಪ್ರಶ್ನೆ ಎದುರಾಗಿದೆ.

ಇತ್ತೀಚೆಗೆ ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿ ನ್ಯೂಸ್ ಗೂ ಕಟುವಾಗಿ ಪ್ರತಿಕ್ರಿಯಿಸಿದ ಭಾರತ ಸರ್ಕಾರ ಪಾಕಿಸ್ತಾನದ ಪರ ನಿಲ್ಲಬೇಡಿ ಎಂದು ಎಚ್ಚರಿಕೆ ನೀಡಿತ್ತು.

ಇತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಮಾಧ್ಯಮಗಳ ಎದುರು ಪಹಲ್ಗಾಮ್ ದಾಳಿಗೆ ಕಾರಣರಾದವರ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂಬ ಮಾತುಗಳು ಕೇವಲ ಭಾಷಣಕ್ಕಷ್ಟೇ ಸೀಮಿತವಾದಂತಾಗಿದೆ. ಯಾರೂ ಇಲ್ಲದ ಮನೆಗಳು ಇರುವ ಜಾಗಕ್ಕೆ ಬಾಂಬ್ ದಾಳಿ ನಡೆಸಿ ಉಗ್ರರ ಮನೆ ಎನ್ನುವ ಮಾತುಗಳು ಸಾಕ್ಷಿ, ತಲೆ ಬುಡ ಇಲ್ಲದ ವರದಿಗಳನ್ನು ಮಾಧ್ಯಮಗಳ ಮೂಲಕ ಬಿತ್ತರಿಸಲಾಗಿದೆ.

ಇನ್ನೊಂದು ಕಡೆ ಕೇಂದ್ರ ಸರ್ಕಾರದ ವೈಫಲ್ಯ ಪ್ರಶ್ನಿಸುವವರ ವಿರುದ್ಧ ಸಾಲು ಸಾಲು ಪ್ರಕರಣ ದಾಖಲಾಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ ಹುಡುಕಿ ಹುಡುಕಿ ಹೊಡೆಯುತ್ತಿರುವುದು ಯಾರನ್ನು? ಉಗ್ರರನ್ನೋ ಅಥವಾ ಪ್ರಶ್ನಿಸುವ ದೇಶ ವಾಸಿಗಳನ್ನೋ ಎಂಬ ಪ್ರಶ್ನೆ ಎದುರಾಗಿದೆ.

ಪ್ರಧಾನಿ ನರೇಂದ್ರ ಮೋದಿ ಏನೋ ಸೇನೆಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ದಿನಂಪ್ರತಿ ಗಡಿ ಭಾಗದಲ್ಲಿ ಸೈನಿಕರ ಮೇಲೆ ದಾಳಿ ಆಗುತ್ತಲೇ ಇದೆ. ಹೀಗಿರುವಾಗ ಭಾರತ ಸರ್ಕಾರ ಮಾತ್ರ ಯೂಟ್ಯೂಬ್, ನ್ಯೂಸ್ ಚಾನಲ್ ಮೇಲೆ ನಿಷೇಧ ಹೇರುತ್ತಿರುವುದನ್ನೇ ಪ್ರತಿಕಾರ, ಮಹತ್ವದ ನಿರ್ಧಾರ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ‌.

ಒಟ್ಟಾರೆ ಪಹಲ್ಗಾಮ್ ದಾಳಿ ನಡೆದು 10 ದಿನ ಕಳೆದರೂ ಸರ್ಕಾರದಿಂದ ಯಾವೊಂದೂ ಮಹತ್ವದ ನಡೆ ನಡೆಯದೇ ಇರುವುದು ನೋಡಿದರೆ ಸರ್ಕಾರ ಪುಲ್ವಾಮ ದಾಳಿಯನ್ನೂ ನಿರ್ಲಕ್ಷಿಸಿದಂತೆ, ಪಹಲ್ಗಾಮ್ ದಾಳಿಯನ್ನೂ ಬಹಳ ಬೇಗನೆ ಜನರ ಮನಸ್ಸಿನಿಂದ ಅಳಿಸಿ ಹಾಕುವ ಕೆಲಸಕ್ಕೆ ಮುಂದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page