ಬೆಂಗಳೂರು: ಅರಣ್ಯದ ಅಂಚಿನಲ್ಲಿ ವಾಸಿಸುವ ಜನರ ಜೀವನೋಪಾಯವು ಬಹುತೇಕ ಕಾಡಿನ ಮೇಲೆಯೇ ಅವಲಂಬಿತವಾಗಿದ್ದು, ಕೇವಲ ಕಾಡಿನೊಳಗೆ ಪ್ರವೇಶಿಸಿದ್ದಾರೆ ಎಂಬ ಕಾರಣಕ್ಕೆ ಸಮೀಪದಿಂದ ಅವರ ಮೇಲೆ ಗುಂಡು ಹಾರಿಸಿರುವುದು ಅತ್ಯಂತ ದುರದೃಷ್ಟಕರ ಮತ್ತು ಮೇಲ್ನೋಟಕ್ಕೆ ಇದು ಪೂರ್ವಯೋಜಿತ ಕಗ್ಗೊಲೆಯಂತೆ (ಕೋಲ್ಡ್ ಬ್ಲಡೆಡ್ ಮರ್ಡರ್) ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಜನರ ಪ್ರಾಣ ತೆಗೆಯುವುದು ಅಸಂವಿಧಾನಿಕ, ಅನೈತಿಕ ಹಾಗೂ ಕಾನೂನುಬಾಹಿರ ಕೃತ್ಯವಾಗಿದೆ ಎಂದು ಅವರು ಖಂಡಿಸಿದ್ದಾರೆ. ಸಂವಿಧಾನ ಮತ್ತು ಕಾನೂನಿನಲ್ಲಿ ಇಂತಹ ಕೃತ್ಯಗಳಿಗೆ ಯಾವುದೇ ಅವಕಾಶವಿಲ್ಲ ಎಂದಿರುವ ಅವರು, ಈ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಘಟನೆಯ ಸತ್ಯಾಸತ್ಯತೆ ಹೊರಬರಲು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಅವರು ಆಗ್ರಹಿಸಿದ್ದಾರೆ.
