Home ರಾಜ್ಯ ಚಿತ್ರದುರ್ಗ ಆಂಧ್ರಕ್ಕೆ ಮೊಳಕಾಲ್ಮೂರು ಸೇರ್ಪಡೆ ಹೇಳಿಕೆ | ʼಬಳ್ಳಾರಿ ಬದಲು ಆಂಧ್ರ ಎಂದುಬಿಟ್ಟೆʼ: ಶಾಸಕ ಎನ್.ವೈ. ಗೋಪಾಲಕೃಷ್ಣ...

ಆಂಧ್ರಕ್ಕೆ ಮೊಳಕಾಲ್ಮೂರು ಸೇರ್ಪಡೆ ಹೇಳಿಕೆ | ʼಬಳ್ಳಾರಿ ಬದಲು ಆಂಧ್ರ ಎಂದುಬಿಟ್ಟೆʼ: ಶಾಸಕ ಎನ್.ವೈ. ಗೋಪಾಲಕೃಷ್ಣ ಸ್ಪಷ್ಟನೆ

0

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂಬುದು ತಮ್ಮ ಉದ್ದೇಶವಾಗಿರಲಿಲ್ಲ, ಆಂಧ್ರ ಎಂದು ಹೇಳಿದ್ದು ಕೇವಲ ನಾಲಿಗೆ ಜಾರಿ ಆಡಿದ ಮಾತಷ್ಟೇ ಎಂದು ಮೊಳಕಾಲ್ಮೂರು ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ತಾಲೂಕಿನ ಅಭಿವೃದ್ಧಿಯ ಹಿನ್ನಡೆ ಹಾಗೂ ಹಿಂದುಳಿದಿರುವಿಕೆಯನ್ನು ಸರಿಪಡಿಸಲು ಮೊಳಕಾಲ್ಮೂರನ್ನು ಬಳ್ಳಾರಿ ಅಥವಾ ಚಳ್ಳಕೆರೆ ಜೊತೆ ವಿಲೀನಗೊಳಿಸುವ ಸಂದರ್ಭದಲ್ಲಿ ಈ ಮಾತು ಬಂದಿತ್ತು ಎಂದು ಅವರು ವಿವರಿಸಿದ್ದಾರೆ. “ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಿದರೆ 371(ಜೆ) ವಿಶೇಷ ಸ್ಥಾನಮಾನದ ಸೌಲಭ್ಯ ಹಾಗೂ ಹೆಚ್ಚಿನ ಅನುದಾನ ಸಿಗಬಹುದು, ಅಥವಾ ಚಳ್ಳಕೆರೆಗೆ ಸೇರಿಸಿದರೆ ನೀರಾವರಿ ಸೌಲಭ್ಯಗಳು ಉತ್ತಮವಾಗಿ ದೊರೆಯಬಹುದು ಎಂಬ ಉದ್ದೇಶವಿತ್ತು. ಮಾತನಾಡುವ ಭರದಲ್ಲಿ ಬಳ್ಳಾರಿ ಎನ್ನುವ ಬದಲು ಆಂಧ್ರ ಎಂದು ಆಕಸ್ಮಿಕವಾಗಿ ಬಾಯಿತಪ್ಪಿ ಹೇಳಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ನಂಜುಂಡಪ್ಪ ಸಮಿತಿಯ ವರದಿಯಲ್ಲೂ ಮೊಳಕಾಲ್ಮೂರು ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಲಾಗಿದ್ದು, ಪ್ರದೇಶದ ಅಭಿವೃದ್ಧಿಗೆ ಅಗತ್ಯ ಅನುದಾನ ಮತ್ತು ಆದ್ಯತೆ ಸಿಗುತ್ತಿಲ್ಲ ಎಂಬ ಕಳಕಳಿಯಿಂದ ಈ ಮಾತು ಆಡಿದ್ದೇನೆಯೇ ಹೊರತು, ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವ ಉದ್ದೇಶವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ತಮ್ಮ ಹೇಳಿಕೆಗೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ ಎಂದಿರುವ ಶಾಸಕರು, ತಮ್ಮ ಮಾತಿನಿಂದ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಅಥವಾ ತಪ್ಪು ಗ್ರಹಿಕೆ ಉಂಟಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

You cannot copy content of this page

Exit mobile version