(ಈ ವರೆಗೆ…) ಸುಕನ್ಯಾಳ ಮನೆ ಹೊಕ್ಕ ಗಂಗೆ ಅಲ್ಲಿ ನಡೆಯುತ್ತಿರುವ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಿದಳು. ಅಂದವಾಗಿ ಅಲಂಕರಿಸಿದ ಮನೆ, ಕರಿಮಣಿ ಹೊತ್ತ ಸುಕನ್ಯಾ ಅವಳಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದವು. ಸುಕನ್ಯಾ, ಮೋಹನ ಮತ್ತು ಆಕೆಯ ಸಂಬಂಧ, ಅವರಿಬ್ಬರೂ ಮಾಡುತ್ತಿರುವ ಬಿಸಿನೆಸ್ ಬಗ್ಗೆ ವಿವರಿಸಿದಳು. ಹೆತ್ತ ಬಳಿಕ ಗಂಗೆಯನ್ನೂ ಜತೆಯಾಗುವಂತೆ ಕರೆದಳು. ಅಸಹ್ಯ ಅನ್ನಿಸಿ ಅಲ್ಲಿಂದ ಒಂದೇ ಉಸಿರಿಗೆ ಓಡಿ ಮನೆಗೆ ಬಂದ ಗಂಗೆ ಏನು ಮಾಡಿದಳು? ಓದಿ.. ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ತೆರಡನೆಯ ಕಂತು.
ಸುಕನ್ಯಾಳ ಮಾತು ಕೇಳಿ ನಿಗಿ ಕೆಂಡವಾಗಿದ್ದ ಗಂಗೆಯನ್ನು, ಅವಳ ತಲೆ ಮೇಲೆ ಬಿದ್ದ ತಣ್ಣನೆಯ ನೀರಿನ ಹರಿವು ವಾಸ್ತವಕ್ಕೆಳೆದು ತಂದಿತು. ಕತ್ತಿ ಅಲುಗಿನ ಮೇಲೆ ನಿಂತಂತೆನಿಸಿ ಒಮ್ಮೆಗೆ ಕಂಪಿಸಿದಳು. ಒಂಟಿತನದ ಭಾವ ಭೂತದಂತೆ ಆವರಿಸಿ ಅವಳ ಕುತ್ತಿಗೆ ಹಿಸುಕಿದಂತಾಯಿತು. ಆ ಅಪರಿಚಿತ ಊರು, ಜನರ ನಡುವೆ ತನಗೆ ಇಂಬಾಗಿ ನಿಲ್ಲಬಹುದಾದ ಪ್ರೀತಿಯ ಜೀವಕ್ಕಾಗಿ ಹಂಬಲಿಸಿ ನಿರಾಶಳಾದಳು. ತನ್ನ ಬದುಕನ್ನು ಇಂತಹ ದುಸ್ಥಿತಿಗೆ ದೂಡಿದ ಅಣ್ಣಂದಿರ ಬೇಜವಾಬ್ದಾರಿತನ, ಅಪ್ಪನ ಅಸಹಾಯಕತೆ ಅವಳ ಸಂಕಟವನ್ನು ಮತ್ತಷ್ಟು ಇಮ್ಮಡಿಗೊಳಿಸಿ ಹೈರಾಣ ಗೊಳಿಸಿತು. ಮುಂದಿನ ದಾರಿಯ ತಡಕಾಟಕ್ಕಿಳಿದ ಅವಳ ಜೀವ, ದಿಕ್ಕು ಕಾಣದೆ ಬಳಲಿ ಸೋತಿತು.
ಇದ್ದಕ್ಕಿದ್ದಂತೆ ನಿದ್ದೆಯಿಂದ ಎಚ್ಚರಗೊಂಡು ರಚ್ಚೆ ಹಿಡಿದ ಮಗುವಿನಂತೆ ಬುಗ್ಗನೆದ್ದ ಹೊಟ್ಟೆಹಸಿವು, ಗಂಗೆಯ ಕೈ ಕಾಲುಗಳನ್ನೇ ಅದುರಿಸಿ ಕಣ್ಕತ್ತಲಾಗಿಸಿ ಬಿಟ್ಟಿತ್ತು. ಬಸುರು ಕಟ್ಟಿದಾಗಿನಿಂದ ಅವಳಿಗೆ ಹೀಗಾಗುವುದು ಮಾಮೂಲಾಗಿ ಹೋಗಿತ್ತು. ಮೊದಮೊದಲು ಇದಕ್ಕೆ ಸರಿಯಾಗಿಯೆ ತಯಾರಿ ನಡೆಸಿ ಅನ್ನ ಸಾರಿನ ಪಾತ್ರೆ ಸದಾ ತುಂಬಿರುವಂತೆ ಎಚ್ಚರ ವಹಿಸುತ್ತಿದ್ದಳು. ಆದರೆ ಮೋಹನನ ಗೈರು ಹೆಚ್ಚಾದಂತೆಲ್ಲಾ ಅಡಿಗೆ ಮನೆ ಪಾತ್ರೆಗಳು ಬಣಗುಟ್ಟತೊಡಗಿ, ಕೈಕಾಲುಗಳ ನಡುಕ ತಡೆಯಲು ಕಂಬಳಿ ಹೊದ್ದು ಮಲಗಿ ಬಿಡುತ್ತಿದ್ದಳು. ಸಾಧ್ಯವೇ ಆಗದಿದ್ದಾಗ ಅಂಗಳದ ಕೆಮ್ಮಣ್ಣು ಕೆರೆದು ತನ್ನ ಒಡಲನ್ನು ಸಂತೈಸಿಕೊಳ್ಳುವುದನ್ನು ರೂಢಿಸಿಕೊಂಡು ಬಿಟ್ಟಿದ್ದಳು. ಅವತ್ತು ಕೂಡ ಇನ್ನೇನು ಕುಸಿದೇ ಬಿಟ್ಟೆ ಎಂದುಕೊಂಡವಳು, ತನ್ನ ಅಂತರ್ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಚಂಬು ಬಚ್ಚಲ ನೀರನ್ನೆ ಗಟಗಟನೆ ಗುಟುಕರಿಸಿ ಬೆತ್ತಲ ಮೈಗೆ ಸೀರೆ ಸುತ್ತಿ ಅಡಿಗೆ ಕೋಣೆಗೆ ಧಾವಿಸಿದಳು.
ಡಬ್ಬದ ತಳ ಸೇರಿದ್ದ ಹಿಡಿ ಅಕ್ಕಿಯನ್ನೆ ಮುಕ್ಕಿ, ಸಮಾಧಾನವಾಗದೆ ಬಾಗಿಲು ತೆರೆದು ಮೆಲ್ಲನೆ ಹೊರಗಿಣುಕಿದಳು. ಅಕ್ಕಪಕ್ಕದ ಮನೆಗಳೆಲ್ಲ ಬಾಗಿಲು ಬಡಿದುಕೊಂಡು ಮುಗುಮ್ಮಾಗಿ ಕೂತಿದ್ದವು. ಒಂದು ಲೋಟ ನೀರಿಡಿದು ಹೊರಬಂದವಳೇ ಮನೆಯ ಪಕ್ಕದಲ್ಲಿ ತಾನೇ ಕೆರೆದು ಕೆರೆದು ಗುಣಿಯಾಗಿಸಿದ್ದ ನೆಲದ ಬಳಿ ಕೂತು ಒದ್ದೆಯಾದ ಆ ಕೆಮ್ಮಣ್ಣನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿಸಿ ಮುದ್ದೆಯಂತೆ ನುಂಗತೊಡಗಿದಳು.
ಬೆನ್ನು ತಿರುಗಿಸಿ ಕೂತಿದ್ದ ಗಂಗೆಯತ್ತ ಸದ್ದಾಗದಂತೆ ಮೆಲ್ಲನೆ ಹೆಜ್ಜೆ ಇಕ್ಕುತ್ತಾ ಕಣ್ಣುಮುಚ್ಚಲು ಬಂದ ಎದುರು ಮನೆಯ ಎಂಟು ವರ್ಷದ ಚೋಟಿ ಗಂಗೆ ಮಣ್ಣು ತಿನ್ನುವುದನ್ನು ದಂಗಾಗಿ ನೋಡಿ, “ಛೀ ಆಂಟಿ ಯು ಆರ್ ಬ್ಯಾಡ್” ಎಂದು ಕೂಗುತ್ತಾ ಓಡಿ ಹೋಗಿ ತನ್ನ ಮಮ್ಮಿಯನ್ನು ಎಳೆದು ತಂದಿತು. ಹಾಗೆ ಒಬ್ಬೊಬ್ಬರೇ ಸೇರಿ ಒಂದು ಪುಟ್ಟ ಗುಂಪೆ ಅಲ್ಲಿ ಸೇರಿ ಕೊಂಡಿತು. ಹಲವರು ಇತ್ತ ತಲೆ ಹಾಕದ ಮೋಹನನ ಬಗ್ಗೆ ಅಣಕವಾಡಿಕೊಂಡರೆ, ಇನ್ನು ಕೆಲವರು ಬಸುರಿ ಬಯಕೆಯ ಬಗ್ಗೆ ಕಂತೆ ಪುರಾಣಗಳನ್ನೆ ಬಿಚ್ಚಿ ಕೂತರು. ಯಾರು ಹಿಡಿ ಅನ್ನ ನೀಡಿ ಬಸುರಿಯ ಹಸಿವು ತಣಿಸುವ ದೊಡ್ಡ ಮನಸ್ಸು ಮಾಡಲೇ ಇಲ್ಲ.
ಇವರೆಲ್ಲರ ಆಹಾಕಾರ, ಓಹೋಕಾರಗಳ ಸದ್ದು ಕಿವಿಮೇಲೆ ಬಿದ್ದಿತೋ ಎಂಬಂತೆ, ಅಸಮಾಧಾನದ ಕಿಡಿಕಾರುತ್ತಲೇ ಪ್ರತ್ಯಕ್ಷನಾದ ಮೋಹನ, ತನ್ನ ಮನೆ ಮುಂದೆ ಜಮಾಯಿಸಿದ್ದ ಹೆಂಗಸರನ್ನು ಕಂಡು ಕ್ಷಣ ಹಿಂಜರಿದು ನಿಂತ. ಬೆನ್ನು ತಿರುಗಿಸಿ ಕೂತಿದ್ದ ಗಂಗೆಯನ್ನು ಗುರುತಿಸಿ ಸ್ವಲ್ಪ ಸಮಾಧಾನಗೊಂಡು ಸರ್ರನೆ ಒಳನಡೆದುಬಿಟ್ಟ. ಅವನ ಹಿಂದೆಯೆ ಓಡಿಬಂದ ಚೋಟಿ ” ಅಂಕಲ್ ನಿಮ್ಗೆ ಗೊತ್ತಾ ಆಂಟಿ ಮಣ್ ತಿನ್ತಿದ್ರು ಅಂತ.. ಹಾಗೆ ತಿಂದ್ರೆ ಹೊಟ್ಟೆ ನೋವು ಬರುತ್ತೆ ಅಂತ ಮಮ್ಮಿ ಹೇಳ್ತಿದ್ರು. ಈ ಆಂಟಿಗೆ ಬುದ್ದಿನೇ ಇಲ್ಲ. ನೀವು ಪನಿಷ್ ಮಾಡಿ ಅಂಕಲ್ ಆಗ ತಿನ್ನೋದು ಬಿಡ್ತಾರೆ”. ಎಂದು ಹೇಳಿ ಬರ್ರನೆ ಹೊರಗೋಡಿತು. ಅಡಿಗೆ ಮನೆಯನ್ನೆಲ್ಲ ಹೊಕ್ಕಾಡಿ ಬಂದ ಮೋಹನ ಪಶ್ಚಾತಾಪದಿಂದ ಕುಸಿದು ಕುಳಿತ.
ಇತ್ತ ಜನರ ಲೊಚಗುಟ್ಟುವಿಕೆಯಿಂದ ಕಂಗಾಲಾಗಿ ಮುದುಡಿ ಹೋಗಿದ್ದ ಗಂಗೆ, ಅವರೆಲ್ಲರು ಕರಗುತ್ತಲೂ ಅದುವರೆಗೂ ತಡೆದಿಟ್ಟಿದ್ದ ದುಃಖವನ್ನು ಹೊರಚೆಲ್ಲುತ್ತಾ ಬಂದು ತಲೆ ತುಂಬಾ ಕಂಬಳಿ ಗುಬ್ಬರು ಹಾಕಿ ಮಲಗಿ ಬಿಟ್ಟಳು. ಗಂಗೆಯನ್ನು ಮಾತಾಡಿಸುವ ಧೈರ್ಯವಾಗದೆ, ಮೋಹನ ಬಾಗಿಲು ಮುಂದಕ್ಕೆಳೆದುಕೊಂಡು ಹೊರಬಂದವನೇ ಮಾರ್ಕೆಟಿಗೆ ನುಗ್ಗಿ, ಮೊಟ್ಟೆ ಸೊಪ್ಪು ತರಕಾರಿ ಹಣ್ಣು ಹಂಪಲುಗಳೊಂದಿಗೆ ಎರಡು ಬಿರಿಯಾನಿಯನ್ನು ಕಟ್ಟಿಸಿಕೊಂಡು ಮನೆಗೆ ಬಂದ.
ಹಸಿವು ತಾಳಲಾರದೆ ಮುಲುಕುತ್ತಾ ಮಲಗಿದ್ದ ಗಂಗೆಯ ಬಳಿ ಕೂತ ಮೋಹನ, ಅವಳು ಹೊದ್ದ ಮುಸುಕೆಳೆದು ಮುಖದ ತುಂಬಾ ಲೊಚ ಲೊಚನೆ ಮುತ್ತಿನ ಮಳೆಗರೆದ. “ಇನ್ನೊಂದ್ಸಾರಿ ಹೀಗೆ ಮಾಡಲ್ಲ ಪ್ಲೀಸ್ ಅಳ್ಬೇಡ ಗಂಗೂ ಎದ್ದೇಳು ಊಟ ಮಾಡು” ಎಂದು ಅವಳೊಂದಿಗೆ ತಾನು ಕಣ್ಣೀರು ಸುರಿಸುತ್ತಾ ಕುಳಿತ. ಹೆಚ್ಚು ಮೊಂಡಾಟ ಆಡಲು ಅವಕಾಶವನ್ನೇ ಕೊಡದೆ ಭೂತದಂತೆ ಕಾಡುತ್ತಿದ್ದ ಅವಳ ಬಸುರ ಹಸಿವು, ಅವಳು ತಟ್ಟನೆ ರಾಜಿಮಾಡಿಕೊಳ್ಳುವಂತೆ ಮಾಡಿಬಿಟ್ಟಿತು. “ಗಂಡುಸ್ರು ಕಣ್ಣೀರಾಕಿದ್ರೆ ಮನೆಗೆ ದರಿದ್ರ ಬತ್ತದಂತೆ ಅಳ್ಬೇಡಿ ತಗಿರಿ” ಎನ್ನುತ್ತಾ ಮೂಗಿಗೆ ಬಡಿಯುತ್ತಿದ್ದ ಬಿರಿಯಾನಿ ಘಮಲಿನತ್ತ ತನ್ನ ದೃಷ್ಟಿ ಹರಿಸಿದಳು.
ಗರ್ಭನಿಂತ ದಿನದಿಂದಲೂ ಅವಳ ರಾಕ್ಷಸ ಹಸಿವನ್ನು ಕಣ್ಣಾರೆ ಕಂಡಿದ್ದ ಮೋಹನ ತಡಮಾಡದೆ ತಾನು ತಂದ ಬಿರಿಯಾನಿಯ ಎರಡೂ ಪೊಟ್ಟಣವನ್ನು ಅವಳಿಗೆ ತಿನ್ನಿಸಿ ನೀರುಕುಡಿಸಿ ನಿರಾಳಾದ. ಹೊಟ್ಟೆ ತುಂಬಿದ ಗಂಗೆಯ ಮನಸ್ಸೆಲ್ಲಾ ಈಗ ಸುಕನ್ಯಾಳ ಕಡೆಗೆ ಹರಿದು ಮುಖಗಂಟಿಕ್ಕಿದಳು ” ಅಲ್ಲ ಕನಿ ನಾನು ನಿಮ್ಗೆ ಏನ್ ಅನ್ಯಾಯ ಮಾಡಿದ್ದೆ ಅಂತ ನನ್ಗೆ ಮೋಸ ಮಾಡಿದ್ರಿ. ಆ ಸುಕನ್ನಿನ ಮದ್ವೆ ಆಗಿದ್ದೀರಂತೆ..? ನೀವು ಮಾಡಿದ್ದು ತಪ್ಪಲ್ವ” ಎಂದು ಸೊರ ಸೊರ ಮೂಗೆಳೆದು ಕೊಂಡಳು.
ಅವಳನ್ನು ಬಾಚಿ ಇನ್ನಷ್ಟು ತಬ್ಬಿ ಕುಳಿತ ಮೋಹನ ” ಅಯ್ಯೋ ಗಂಗೂ ಅವಳು ಹಠ ಮಾಡ್ತಿದ್ಲು ಅಂತ ನಾಟ್ಕಕ್ಕೆ ತಾಳಿ ಕಟ್ಟಿದ್ದೀನಷ್ಟೆ. ನನ್ಗೆ ಬಿಸ್ನೆಸ್ ಮುಖ್ಯವೆ ಹೊರ್ತು ಈ ಮದುವೆ ಮುಂಜಿ ಅಲ್ಲ. ನೋಡು ಮನಪೂರ್ತಿಯಾಗಿ ನೀನು ಮಾತ್ರ ನನ್ನ್ ಹೆಂಡ್ತಿ ಇನ್ಯಾರ್ ಬಂದು ಹೋದ್ರು ಬಿಸ್ನೆಸ್ ಪರ್ಪಸ್ ಅಷ್ಟೆ ಗಂಗೂ, ಇನ್ಮುಂದೆ ಈ ಯಾವುದ್ರು ಬಗ್ಗೆನು ನೀನು ತಲೆಕೆಡಿಸ್ಕೋಬೇಡ. ನಿನ್ಗೆ ಯಾವ ತೊಂದ್ರೆನೂ ಆಗ್ದಂಗೆ ನೋಡ್ಕೊಳ್ಳೊ ಜವಾಬ್ದಾರಿ ನಂದು. ಇನ್ಯಾವತ್ತೂ ನೀನು ಆ ಮನೆ ಹತ್ರ ಮಾತ್ರ ಕಾಲಿಡೋಕೆ ಕೂಡ್ದು. ನೀನು ಮೈಲಿಗೆ ಆಗೋದು ನನಗೆ ಇಷ್ಟ ಇಲ್ಲ” ಎಂದು ಅವಳ ಹಣೆಗೆ ಗಟ್ಟಿಯಾಗಿ ಮುತ್ತಿಕ್ಕಿದ. ಅವನ ಈ ಮಾತಿನಿಂದ ಇರುಸು ಮುರುಸುಗೊಂಡ ಗಂಗೆ ” ಅಲ್ಕನಿ ಅವ್ರು ನನ್ನಂಗೆ ಹೆಣ್ಮಕ್ಳಲ್ವ… ಅವ್ರ ಬದ್ಕ್ ಹಾಳ್ಮಾಡದು ಎಷ್ಟು ಸರಿ ಹೇಳಿ…. ಅವ್ರ್ ಶಾಪ ನಮ್ಗೆ ತಟ್ಟೋದು ಬ್ಯಾಡ. ಈ ಕುಲ್ಗೆಟ್ ಕೆಲ್ಸ ಬುಟ್ಬುಡಿ. ಇಬ್ರು ಗಟ್ಮುಟ್ಟಾಗಿದ್ದೀವಿ ಯಾವುದಾದ್ರು ಫ್ಯಾಕ್ಟ್ರಿ ಸೇರ್ಕೊಳನ ನಡಿರಿ. ನಮ್ಮಿಬ್ರು ಹೊಟ್ಟೆಗೆ ಇನ್ನೆಷ್ಟು ಬೇಕು ಹೇಳಿ” ಎಂದು ಹೇಳಿದ್ದೆ ತಡ, ಮೋಹನ ತಬ್ಬಿದ್ದ ತನ್ನ ಕೈ ಸಡಿಲಿಸಿ “ನೋಡು ಗಂಗೂ ನೀನು ನನ್ಗೆ ಬುದ್ದಿಹೇಳೋಕ್ ಬರ್ಬೇಡ. ನಿನ್ನ್ ವೇದಾಂತದಿಂದ ಹೊಟ್ಟೆ ತುಂಬೋದೆ ಹೊರ್ತು, ನನ್ನ್ ಕನಸುನ್ನ ನನುಸ್ ಮಾಡ್ಕೊಳ್ಳೋಕೆ ಖಂಡಿತಾ ಆಗಲ್ಲ. ನಾನು ಬಾಳ ದೂರ ಬಂದಾಗಿದೆ. ಈಗಷ್ಟೇ ನಾನು ಅಂದುಕೊಂಡಿದ್ದೆಲ್ಲ ನಡಿಯೋಕೆ ಶುರುವಾಗಿದೆ ಅಂತದ್ರಲ್ಲಿ ಇಂತ ಅಡ್ಮಾತಾಡ್ತಿಯಲ್ಲ. ನೋಡು ನನ್ನ ಒಪ್ಕೊಂಡು ಬದುಕಂಗಿದ್ರೆ ನಂಜೊತೆ ಇರ್ಬಹುದು. ಇಲ್ಲ ಅಂದ್ರೆ ಹೇಳು ನಿಮ್ಮಪ್ಪನ ಮನೆಗೆ ಬಿಟ್ಟು ಬರ್ತೀನಿ ವೇದಾಂತ ಹಾಡ್ಕೊಂಡು ಕೂತ್ಕೊಳಿವಂತೆ” ಎಂದು ಹೇಳಿ ಅವಳ ಕೈ ಕೊಸರಿ ತಟ್ಟನೆ ಮೇಲೆದ್ದ…
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಕಂತು ಓದಿದ್ದೀರಾ? ಸೆಟೆದು ನಿಂತ ಗಂಗೆಯ ಸ್ವಾಭಿಮಾನ