ನವದೆಹಲಿ: ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿದ್ದರೂ ಗುರುತಿಸಿಕೊಳ್ಳದ ಸಣ್ಣ ರಾಜಕೀಯ ಪಕ್ಷಗಳ (RUPP – Registered Unrecognised Political Parties) ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಕಪ್ಪುಹಣ ಮತ್ತು ತೆರಿಗೆ ವಂಚನೆಯ ಭಾರೀ ಜಾಲ ನಡೆಯುತ್ತಿರುವುದನ್ನು ಬಿಬಿಸಿ (BBC) ನಡೆಸಿದ ತನಿಖಾ ವರದಿ ಬಯಲಿಗೆಳೆದಿದೆ. ಕಣದಲ್ಲಿ ಕೇವಲ ಬೆರಳೆಣಿಕೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಥವಾ ಚುನಾವಣೆಯೇ ಎದುರಿಸದ ಇಂತಹ ಪೇಪರ್ ಪಕ್ಷಗಳಿಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ನೂರಾರು ಕೋಟಿ ದೇಣಿಗೆ ಹರಿದುಬರುತ್ತಿರುವುದು ಬೆಳಕಿಗೆ ಬಂದಿದೆ.
ಬಿಬಿಸಿ ವರದಿಗಾರ್ತಿ ಶುಭಾಂಗಿ ಮಿಶ್ರಾ ನೇತೃತ್ವದಲ್ಲಿ ಬಿಹಾರ ಮತ್ತು ಗುಜರಾತ್‌ನ ಅಹಮದಾಬಾದ್, ಆನಂದ್ ಸೇರಿದಂತೆ ಹಲವು ನಗರಗಳಲ್ಲಿ ನಡೆಸಿದ ಗ್ರೌಂಡ್ ಇನ್ವೆಸ್ಟಿಗೇಷನ್ ವೇಳೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬಿದ್ದಿವೆ. 2023-24ನೇ ಸಾಲಿನಲ್ಲಿ ಬಿಹಾರ ಮೂಲದ ‘ಆಮ್ ಜನಮತ್ ಪಾರ್ಟಿ’ಗೆ ಬರೋಬ್ಬರಿ 620 ಕೋಟಿ ರೂಪಾಯಿ ಹಾಗೂ ಗುಜರಾತ್‌ನ ‘ಸತ್ಯವಾದಿ ರಕ್ಷಕ್ ಪಾರ್ಟಿ’ಗೆ 330 ಕೋಟಿ ರೂಪಾಯಿ ದೇಣಿಗೆ ಬಂದಿದೆ.
ಆದರೆ, ಈ ಪಕ್ಷಗಳ ನೋಂದಾಯಿತ ವಿಳಾಸಗಳನ್ನು ಹುಡುಕಿ ಹೋದಾಗ ಬಹುತೇಕ ಕಚೇರಿಗಳು ಬೀಗ ಜಡಿದು ಬಿಕೋ ಎನ್ನುತ್ತಿದ್ದವು. ಆಮ್ ಜನಮತ್ ಪಾರ್ಟಿಯ ಮಾಜಿ ಅಧ್ಯಕ್ಷೆ, ಪ್ರಸ್ತುತ ಬಿಹಾರ ಬಿಜೆಪಿ ಉಪಾಧ್ಯಕ್ಷೆಯಾಗಿರುವ ಅನಾಮಿಕಾ ಪಾಸ್ವಾನ್ ತಾನು 2022ರಲ್ಲೇ ರಾಜೀನಾಮೆ ನೀಡಿರುವುದಾಗಿ ಹೇಳಿದರೆ, ಪಕ್ಷದ ನೂತನ ಕಚೇರಿಯೆನ್ನಲಾದ ಅಹಮದಾಬಾದ್‌ನ ವಿಳಾಸ ಹಲವು ತಿಂಗಳುಗಳಿಂದ ಬಂದ್ ಆಗಿರುವುದು ಕಂಡುಬಂದಿದೆ.
ಇದೇ ರೀತಿ ಗರೀಬ್ ಕಲ್ಯಾಣ್ ಪಾರ್ಟಿ (₹138 ಕೋಟಿ ದೇಣಿಗೆ), ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ (₹200 ಕೋಟಿ ದೇಣಿಗೆ) ಮತ್ತು ಸ್ವತಂತ್ರತಾ ಅಭಿವ್ಯಕ್ತಿ ಪಾರ್ಟಿ (₹219 ಕೋಟಿ ದೇಣಿಗೆ) ಕಚೇರಿಗಳೂ ಬಾಗಿಲು ಮುಚ್ಚಿದ್ದವು. ಸ್ವತಂತ್ರತಾ ಅಭಿವ್ಯಕ್ತಿ ಪಾರ್ಟಿಯ ಅಧ್ಯಕ್ಷ ಸುರೇಂದ್ರ ತಿವಾರಿ ಅವರನ್ನು ಸಂಪರ್ಕಿಸಿದಾಗ, ಪಕ್ಷದ ಸಂಪೂರ್ಣ ನಿಯಂತ್ರಣ ಚಾರ್ಟರ್ಡ್ ಅಕೌಂಟೆಂಟ್ (CA) ಕೈಯಲ್ಲಿದ್ದು, ಚುನಾವಣೆ ಹಾಗೂ ಪ್ರಚಾರದ ಹೆಸರಿನಲ್ಲಿ ಸಿಎ ಕಡೆಯಿಂದ ಕೇವಲ ಡಮ್ಮಿ ವಹಿವಾಟು ನಡೆಸಲಾಗುತ್ತಿತ್ತು ಎಂಬ ಆಘಾತಕಾರಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
ಆದಾಯ ತೆರಿಗೆ ಕಾಯ್ದೆಯಡಿ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ಶೇ. 100ರಷ್ಟು ತೆರಿಗೆ ವಿನಾಯಿತಿ (ಸೆಕ್ಷನ್ 80GGC) ಇರುವುದನ್ನು ದುರುಪಯೋಗಪಡಿಸಿಕೊಂಡು, ದೇಣಿಗೆ ನೀಡಿದವರಿಂದ ಚೆಕ್ ಪಡೆದು, ಕಮಿಷನ್ ಕಡಿತಗೊಳಿಸಿ ಉಳಿದ ಹಣವನ್ನು ನಗದು ರೂಪದಲ್ಲಿ ಹಿಂದಿರುಗಿಸುವ (ರೌಂಡ್-ಟ್ರಿಪ್ಪಿಂಗ್) ಅಕ್ರಮ ವ್ಯವಹಾರ ಇಲ್ಲಿ ನಡೆಯುತ್ತಿದೆ ಎಂದು ಲೆಕ್ಕಪರಿಶೋಧಕರು ವಿವರಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಆಂತರಿಕ ದಾಖಲೆಗಳ ಪ್ರಕಾರ, ಇಂತಹ ನಕಲಿ ಪಕ್ಷಗಳ ಮೂಲಕ ಬರೋಬ್ಬರಿ ₹5,500 ಕೋಟಿಗೂ ಅಧಿಕ ಮೊತ್ತದ ನಕಲಿ ದೇಣಿಗೆ ಜಾಲ ಪತ್ತೆಯಾಗಿದೆ. ಸುಮಾರು 36 ಆರ್‌ಯುಪಿಪಿ ಪಕ್ಷಗಳ ಮೂಲಕ ₹665 ಕೋಟಿ ಮೌಲ್ಯದ ಅಂತರರಾಷ್ಟ್ರೀಯ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದ್ದು, 1.62 ಲಕ್ಷ ದೇಣಿಗೆದಾರರನ್ನು ಗುರುತಿಸಿ ₹2,749 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ.
ನಿಯಮಿತವಾಗಿ ಚುನಾವಣೆ ಎದುರಿಸದ ಕಾರಣಕ್ಕೆ ಚುನಾವಣಾ ಆಯೋಗವು ನೂರಾರು ಪಕ್ಷಗಳನ್ನು ಡಿ-ಲಿಸ್ಟ್ ಮಾಡುತ್ತಿದ್ದರೂ, ಹವಾಲಾ ಮತ್ತು ಮನಿ ಲಾಂಡರಿಂಗ್ ದಂಧೆಗೆ ಕಡಿವಾಣ ಬಿದ್ದಿಲ್ಲ. ಕೇವಲ ಕಾಗದದ ಮೇಲೆ ಅಸ್ತಿತ್ವದಲ್ಲಿರುವ ಈ ನಕಲಿ ಪಕ್ಷಗಳಿಗೆ ನೂರಾರು ಕೋಟಿ ಹರಿದುಬರುತ್ತಿದ್ದರೂ ಯಾವುದೇ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗದಿರುವುದು ತನಿಖಾ ಸಂಸ್ಥೆಗಳ ದಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಬಿಬಿಸಿ ವರದಿ ಬೆಟ್ಟುಮಾಡಿದೆ.
