ಅಲಹಾಬಾದ್: ಉತ್ತರ ಪ್ರದೇಶದ ನೋಯ್ಡಾ ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ವೇತನಕ್ಕಾಗಿ ಕಾರ್ಮಿಕರು ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಆಕೃತಿ ಚೌಧರಿ (25) ಅವರ ಬಂಧನವನ್ನು ಅಲಹಾಬಾದ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಟ್ಟುಕತೆಗಳ ಆಧಾರದ ಮೇಲೆ ಅಕ್ರಮವಾಗಿ ಜನರನ್ನು ಬಂಧಿಸುತ್ತೀರಾ ಎಂದು ಯುಪಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅಚಲ್ ಸಚ್‌ದೇವ ಅವರಿದ್ದ ಪೀಠ, ಆಕೃತಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಜತೆಗೆ ಅಕ್ರಮ ಬಂಧನಕ್ಕೆ ಪರಿಹಾರವಾಗಿ ಆಕೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಚನೆ ನೀಡಿದೆ. ಸರ್ಕಾರದ ದಾಖಲೆಗಳಲ್ಲಿನ ಗಂಭೀರ ಲೋಪಗಳನ್ನು ಕೋರ್ಟ್ ಬಯಲಿಗೆಳೆದಿದೆ ಎಂದು ಆಕೃತಿ ಪರ ವಕೀಲರಾದ ಚಾರ್ಲಿ ಪ್ರಕಾಶ್ ಮತ್ತು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ತಿಳಿಸಿದ್ದಾರೆ. ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಪ್ರಸಿದ್ಧ ವಕೀಲ ಪ್ರಶಾಂತ್ ಭೂಷಣ್, ದುರುದ್ದೇಶಪೂರಿತ ಆರೋಪಗಳ ಹೊರಿಸಿ ಆಕೃತಿಯನ್ನು ಅಕ್ರಮವಾಗಿ ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಆಕೃತಿ ಚೌಧರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಕಲಿಯುತ್ತಿದ್ದು, ನೆರೆಯ ಹರಿಯಾಣ ಮಾದರಿಯಲ್ಲಿ ಸಮಾನ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೈಗಾರಿಕಾ ಕಾರ್ಮಿಕರು ಏಪ್ರಿಲ್ 10 ರಿಂದ 18 ರವರೆಗೆ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಏಪ್ರಿಲ್ 13 ರಂದು ಪೊಲೀಸರ ಲಾಠಿಚಾರ್ಜ್‌ನಿಂದಾಗಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.
ಈ ವೇಳೆ ಪೊಲೀಸರೇ ಹಿಂಸೆಗೆ ಇಳಿದರೂ, ಕಾರ್ಮಿಕ ಸಂಘಟನೆಗಳ ನಾಯಕರು ಹಾಗೂ ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದರು. ಕಾರ್ಮಿಕರು ಕಲ್ಲು ತೂರಾಟ ಮತ್ತು ವಾಹನ ದಹನಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ, ಒಂದು ತಿಂಗಳ ನಂತರ ಯುಪಿ ಪೊಲೀಸರು ಆಕೃತಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಪ್ರಕರಣ ದಾಖಲಿಸಿದ್ದರು. ಆದರೆ ಏಪ್ರಿಲ್ 13 ರ ಹಿಂಸಾಚಾರ ನಡೆಯುವುದಕ್ಕೂ ಮುನ್ನವೇ ತನ್ನನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು ಎಂದು ಆಕೃತಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ವಿಚಾರಣೆ ವೇಳೆ ಯುಪಿ ಪೊಲೀಸರ ಸುಳ್ಳುಗಳು ಬಯಲಿಗೆ ಬಂದಿವೆ. ಏಪ್ರಿಲ್ 12 ರ ಬೆಳಗ್ಗೆ 10:56ಕ್ಕೆ ಆಕೃತಿಯನ್ನು ಬಂಧಿಸಿ ಬಿಎನ್‌ಎಸ್‌ಎಸ್ ಸೆಕ್ಷನ್ 130ರ ಅಡಿ ಎಚ್ಚರಿಕೆ ನೋಟಿಸ್ ನೀಡಲಾಗಿತ್ತು ಎಂದು ಪೊಲೀಸರು ವಾದಿಸಿದರೂ, ನಿಯಮದ ಪ್ರಕಾರ ಸೆಕ್ಷನ್ 126ರ ಅಡಿ ಶೋಕಾಸ್ ನೋಟಿಸ್ ಏಕೆ ನೀಡಲಿಲ್ಲ ಎಂಬ ಕೋರ್ಟ್ ಪ್ರಶ್ನೆಗೆ ಪೊಲೀಸರು ನಿರುತ್ತರರಾದರು. ಹೈಕೋರ್ಟ್ ತರಿಸಿಕೊಂಡ ಪೊಲೀಸ್ ಜನರಲ್ ಡೈರಿಯನ್ನು ಪರಿಶೀಲಿಸಿದಾಗ, ನೋಟಿಸ್ ನೀಡುವ ಮುನ್ನವೇ ಆಕೆಯನ್ನು ಅಕ್ರಮವಾಗಿ ವಶಕ್ಕೆ ಪಡೆದದ್ದು ಸಾಬೀತಾಯಿತು.
ಜತೆಗೆ ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಯಾವುದೇ ವಿಡಿಯೋ ಅಥವಾ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಒದಗಿಸಲು ಪೊಲೀಸರು ಸಂಪೂರ್ಣವಾಗಿ ವಿಫಲರಾದರು. ಕಟ್ಟುಕತೆಗಳನ್ನು ಸೃಷ್ಟಿಸಿ ಕಾನೂನುಬಾಹಿರವಾಗಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಆಕೆಯನ್ನು ಬಿಡುಗಡೆ ಮಾಡಿ ಪರಿಹಾರ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
