Home ಇನ್ನಷ್ಟು ಕೋರ್ಟು - ಕಾನೂನು ರಾಹುಲ್‌ ಗಾಂಧಿ ಸಾವರ್ಕರ್‌ ಅವರನ್ನು ಮುಸ್ಲಿಂ ದ್ವೇಷಿಯಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ: ಪುಣೆ ನ್ಯಾಯಾಲಯದಲ್ಲಿ ಸತ್ಯಕಿ ಹೇಳಿಕೆ

ರಾಹುಲ್‌ ಗಾಂಧಿ ಸಾವರ್ಕರ್‌ ಅವರನ್ನು ಮುಸ್ಲಿಂ ದ್ವೇಷಿಯಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ: ಪುಣೆ ನ್ಯಾಯಾಲಯದಲ್ಲಿ ಸತ್ಯಕಿ ಹೇಳಿಕೆ

0

ಪುಣೆ: ವಿನಾಯಕ ದಾಮೋದರ್ ಸಾವರ್ಕರ್ ಅವರು ಎಂದಿಗೂ ಮುಸ್ಲಿಮರನ್ನು ದ್ವೇಷಿಸಿರಲಿಲ್ಲ, ಆದರೆ ಲಂಡನ್ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ‘ತೀವ್ರ ಮುಸ್ಲಿಂ ದ್ವೇಷಿ’ ಹಾಗೂ ‘ಮಾಬ್ ಲಿಂಚರ್’ ಎಂಬಂತೆ ಬಿಂಬಿಸಿ ಅವರ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ರಾಹುಲ್ ಪರ ವಕೀಲ ಮಿಲಿಂದ್ ಪವಾರ್ ಅವರ ಪಾಟಿಸವಾಲಿಗೆ ಉತ್ತರಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಲಂಡನ್‌ನಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ಪುಸ್ತಕವೊಂದರ ಪ್ರಸ್ತಾಪ ಮಾಡಿ, ಸಾವರ್ಕರ್ ಮತ್ತು ಅವರ ಸ್ನೇಹಿತರು ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಘಟನೆಯನ್ನು ಹೆಮ್ಮೆಯಿಂದ ದಾಖಲಿಸಿದ್ದಾರೆ ಎಂದು ಹೇಳಿದ್ದರು. ಈ ಆರೋಪವನ್ನು ತಳ್ಳಿಹಾಕಿದ ಸತ್ಯಕಿ, ಸಾವರ್ಕರ್ ಅಂತಹ ಯಾವುದೇ ವಿಷಯ ಬರೆದಿಲ್ಲ ಹಾಗೂ ಅಂತಹ ಘಟನೆಯೇ ನಡೆದಿಲ್ಲ; ಬದಲಿಗೆ ಮುಸ್ಲಿಮರ ಪ್ರಗತಿಗೆ ಮಾರ್ಗೋಪಾಯಗಳನ್ನು ಸಾವರ್ಕರ್ ತಮ್ಮ ಬರವಣಿಗೆಯಲ್ಲಿ ಸೂಚಿಸಿದ್ದರು ಎಂದು ಪ್ರತಿಪಾದಿಸಿದರು.

ಇದೇ ವೇಳೆ, ಅಂಡಮಾನ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾವರ್ಕರ್ ಪ್ರತಿಮೆ ಅನಾವರಣಗೊಳಿಸಿದ ಕಾರ್ಯಕ್ರಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ಆರ್‌ಎಸ್‌ಎಸ್ ಸಾವರ್ಕರ್ ಅವರ ಸಿದ್ಧಾಂತವನ್ನು ಅನುಸರಿಸುತ್ತದೆಯೇ ಎಂಬುದು ತಮಗೆ ತಿಳಿದಿಲ್ಲ ಎಂದು ಸತ್ಯಕಿ ತಿಳಿಸಿದರು. ‌

ವಿಚಾರಣೆ ವೇಳೆ ನಾಥೂರಾಂ ಗೋಡ್ಸೆ ಸಹೋದರ ಹಾಗೂ ಸತ್ಯಕಿ ಅವರ ತಾಯಿಯ ಕಡೆಯ ಅಜ್ಜ ಗೋಪಾಲ್ ಗೋಡ್ಸೆ ಅವರ ಹಳೆಯ ಸಂದರ್ಶನದ ಪ್ರತಿ ಮತ್ತು ವಿಡಿಯೋವನ್ನು ನ್ಯಾಯಾಲಯದ ದಾಖಲೆಗೆ ಸೇರಿಸಲು ನ್ಯಾಯಾಧೀಶ ಅಮೋಲ್ ಶಿಂಧೆ ಅನುಮತಿ ನೀಡಿದರು. ಆ ಸಂದರ್ಶನದಲ್ಲಿ ಗೋಪಾಲ್ ಗೋಡ್ಸೆ ಅವರು ಹಿಂದೂ ಮಹಾಸಭಾದ ಬೆಳವಣಿಗೆಯನ್ನು ಕಂಡು ಆರ್‌ಎಸ್‌ಎಸ್ ಅಸೂಯೆ ಪಟ್ಟಿತ್ತು ಮತ್ತು ಗಾಂಧಿ ಹತ್ಯೆಯ ಸಂದರ್ಭದಲ್ಲಿ ನಾಥೂರಾಂ ಆರ್‌ಎಸ್‌ಎಸ್ ಸ್ವಯಂಸೇವಕನಾಗಿದ್ದರೂ ಸಂಘವು ದೃಢ ನಿಲುವು ತಳೆಯದೆ ಹಿಂಜರಿಯಿತು ಎಂದು ಟೀಕಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 3ಕ್ಕೆ ಮುಂದೂಡಿಕೆಯಾಗಿದೆ.

You cannot copy content of this page

Exit mobile version