ದೆಹಲಿ: ಕೆಂಪುಕೋಟೆ ಬಳಿ ನಡೆದಿದ್ದ ಕಾರ್ ಬಾಂಬ್ ಸ್ಫೋಟಕ್ಕೆ ಉಗ್ರರಿಗೆ ಹಣಕಾಸು ನೆರವು ನೀಡಿದ್ದೀರಿ ಎಂದು ಬೆದರಿಸಿ, 74 ವರ್ಷದ ನಿವೃತ್ತ ರೈಲ್ವೆ ನೌಕರ ಹಾಗೂ ಅವರ ಪತ್ನಿಯನ್ನು ಸತತ ಏಳು ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ನಲ್ಲಿಟ್ಟು ₹30 ಲಕ್ಷ ಜೀವಮಾನದ ಉಳಿತಾಯವನ್ನು ಲೂಟಿ ಮಾಡಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರ ಅಪರಾಧ ವಿಭಾಗ (ಕ್ರೈಮ್ ಬ್ರಾಂಚ್) ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮೂಲದ ಓರ್ವ ಆರೋಪಿಯನ್ನು ಬಂಧಿಸಿದ್ದು, ವಂಚನೆಗೊಳಗಾದ ಹಣದಲ್ಲಿ ₹12 ಲಕ್ಷವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದ್ವಾರಕಾ ಸೆಕ್ಟರ್-23 ನಿವಾಸಿಯಾದ ನಿವೃತ್ತ ಅಧಿಕಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. “ಕೆಂಪುಕೋಟೆ ಸ್ಫೋಟಕ್ಕೆ ಬಳಸಲಾದ ಕಾರಿನಲ್ಲಿದ್ದ ಉಮರ್ ನಬಿ ಸೇರಿದಂತೆ ಇತರ ಉಗ್ರರಿಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ” ಎಂದು ಹೆದರಿಸಿದ್ದ. ಮರುದಿನ ವಿಡಿಯೋ ಕಾಲ್ ಮೂಲಕ ಎನ್‌ಐಎ ಹಾಗೂ ಎಟಿಎಸ್ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ ಖದೀಮರು, ಸುಪ್ರೀಂ ಕೋರ್ಟ್, ಎಟಿಎಸ್ ಹಾಗೂ ಎನ್‌ಐಎ ಲಾಂಛನವಿರುವ ನಕಲಿ ನೋಟಿಸ್‌ಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ಅಲ್ಲದೆ, ಮಕ್ಕಳಿಗೂ ಈ ವಿಷಯ ತಿಳಿಸದಂತೆ ‘ಗೌಪ್ಯತಾ ಒಪ್ಪಂದ’ಕ್ಕೆ ಸಹಿ ಹಾಕಿಸಿಕೊಂಡು ಮನೆಯಲ್ಲೇ ನಿರಂತರ ವಿಡಿಯೋ ನಿಗಾದಲ್ಲಿ ಇರಿಸಿದ್ದರು.
ಬಳಿಕ ಹಣದ ಮೂಲ ಪರಿಶೀಲನೆ ನೆಪದಲ್ಲಿ ಆರ್‌ಬಿಐ ಅನುಮೋದಿತ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಿ, ಹಂತ-ಹಂತವಾಗಿ ಎಫ್‌ಡಿ ಒಡೆಸಿ ₹30 ಲಕ್ಷ ಹಣವನ್ನು ವರ್ಗಾಯಿಸಿಕೊಂಡು ಸಂಪರ್ಕ ಕಡಿತಗೊಳಿಸಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸರು ಹಣ ವರ್ಗಾವಣೆಯಾದ ‘ಶ್ರೀ ಬಾಲಾಜಿ ಟ್ರ್ಯಾಕ್ಟರ್ಸ್’ ಬ್ಯಾಂಕ್ ಖಾತೆಯ ಜಾಡು ಹಿಡಿದು ಹರಿಯಾಣದ ಫತೇಹಾಬಾದ್ ನಿವಾಸಿ ಸುನಿಲ್ ಸಿಂಗ್ಲಾ ಎಂಬಾತನನ್ನು ಬಂಧಿಸಿದ್ದಾರೆ. ಕಮಿಷನ್ ಆಸೆಗೆ ಬಿದ್ದು ಈತ ತನ್ನ ವ್ಯಾಪಾರದ ಖಾತೆಯನ್ನು ಸೈಬರ್ ವಂಚಕರಿಗೆ ಹಣ ವರ್ಗಾವಣೆಗೆ ನೀಡಿದ್ದ ಎನ್ನಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
