Home ದೇಶ ರಾಹುಲ್ ಗಾಂಧಿ ದೇಶದ ಮನೋಬಲ ಕುಗ್ಗಿಸುವ ಗುತ್ತಿಗೆಯನ್ನು ಪಡೆದಿದ್ದಾರೆಯೇ?: ರವಿಶಂಕರ್ ಪ್ರಸಾದ್ ವಾಗ್ದಾಳಿ

ರಾಹುಲ್ ಗಾಂಧಿ ದೇಶದ ಮನೋಬಲ ಕುಗ್ಗಿಸುವ ಗುತ್ತಿಗೆಯನ್ನು ಪಡೆದಿದ್ದಾರೆಯೇ?: ರವಿಶಂಕರ್ ಪ್ರಸಾದ್ ವಾಗ್ದಾಳಿ

0

ದೆಹಲಿ: ಹಣಕಾಸು ವರ್ಷ 2026–27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 7.8 ರಷ್ಟು ದಾಖಲಾಗಿರುವ ಬೆನ್ನಲ್ಲೇ, ಬಿಜೆಪಿಯ ಹಿರಿಯ ನಾಯಕ ಹಾಗೂ ಸಂಸದ ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಾಗತಿಕ ಬಿಕ್ಕಟ್ಟು ಮತ್ತು ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕತೆಯು ಬಲಿಷ್ಠವಾಗಿ ಮುನ್ನಡೆಯುತ್ತಿದ್ದು, ದೇಶದ ಸಾಧನೆಯನ್ನು ಹೀಯಾಳಿಸುವ ಮೂಲಕ ರಾಹುಲ್ ಗಾಂಧಿ ದೇಶದ ಮನೋಬಲವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಬಿಕ್ಕಟ್ಟು ಮತ್ತು ಪೂರೈಕೆ ಸರಪಳಿ ವ್ಯತ್ಯಯಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆರ್ಥಿಕ ನಿರ್ವಹಣೆಯಿಂದಾಗಿ ಭಾರತ 7.8% ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ ಎಂದರು. ಇದೇ ಅವಧಿಯಲ್ಲಿ ಕೆನಡಾ (1.5%), ಜರ್ಮನಿ (1%), ಯುಕೆ (2.1%), ಮಲೇಷ್ಯಾ (6%) ಹಾಗೂ ದಕ್ಷಿಣ ಕೊರಿಯಾ (3.7%) ದಂತಹ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಸಾಧನೆ ಅತ್ಯುತ್ತಮವಾಗಿದೆ ಎಂದು ಅವರು ವಿವರಿಸಿದರು.

ಭಾರತದ ಆರ್ಥಿಕತೆಯನ್ನು ‘ಡೆಡ್ ಎಕಾನಮಿ’ ಎಂದು ಈ ಹಿಂದೆ ರಾಹುಲ್ ಗಾಂಧಿ ಕರೆದಿದ್ದನ್ನು ಸ್ಮರಿಸಿದ ಪ್ರಸಾದ್, ಶೇ. 7.8 ರ ಜಿಡಿಪಿ ಬೆಳವಣಿಗೆಯು ರಾಹುಲ್ ಗಾಂಧಿಯವರ ಸುಳ್ಳು ಆರೋಪಗಳಿಗೆ ಸೂಕ್ತ ಉತ್ತರವಾಗಿದೆ ಎಂದು ಹೇಳಿದರು. ದೇಶದ ಮನೋಬಲ ಕುಗ್ಗಿಸುವ ಗುತ್ತಿಗೆಯನ್ನು ರಾಹುಲ್ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಅವರ ದೂರದರ್ಶಿ ನಾಯಕತ್ವ ಮತ್ತು ಹಣಕಾಸು ಸಚಿವಾಲಯದ ಆರ್ಥಿಕ ನಿರ್ವಹಣೆಯನ್ನು ಶ್ಲಾಘಿಸಿದರು.

You cannot copy content of this page

Exit mobile version