ಲಖನೌ: ಹನುಮಾನ್ ಗಢಿಗೆ ತೆರಳಿ ಹಣೆಗೆ ತಿಲಕ, ಗಂಧ ಹಚ್ಚಿ ಶ್ರೀರಾಮನ ದರ್ಶನ ಪಡೆದ ಬಳಿಕ ತಾವು ಮೀನು ತಿಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಯೋಗಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಳಿಕ ಅವರು ಮಾತನಾಡಿದರು.
ತಾವು ಕಾಶಿಯ ಬಾಬಾ ವಿಶ್ವನಾಥನ ನೆಲದವರಾಗಿದ್ದು, ಮಾಂಸಾಹಾರಿಗಳಲ್ಲ ಎಂದು ಸ್ಪಷ್ಟಪಡಿಸಿದ ಅಜಯ್ ರಾಯ್, “ಮುಖ್ಯಮಂತ್ರಿಗಳು ನನ್ನ ಚಾರಿತ್ರ್ಯ ಮತ್ತು ಆಹಾರ ಪದ್ಧತಿಯ ಬಗ್ಗೆ ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರ ಬಳಿ ಸಾಕ್ಷ್ಯವಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸಾಬೀತುಪಡಿಸಲಿ, ಯಾರು ತಪ್ಪು ಯಾರು ಸರಿ ಎಂಬುದು ಕೋರ್ಟ್‌ನಲ್ಲಿ ತೀರ್ಮಾನವಾಗಲಿ” ಎಂದು ನೇರ ಸವಾಲು ಹಾಕಿದರು.
ನಿಶಾದ್ ಸಮುದಾಯದ ಕಾರ್ಯಕ್ರಮದ ಕುರಿತು ವಿವರಣೆ ನೀಡಿದ ಅವರು, “ಮೀನುಗಾರಿಕೆ, ಮಾರಾಟ ಹಾಗೂ ಸೇವನೆಯೇ ಜೀವನೋಪಾಯವಾಗಿರುವ ನಿಶಾದ್ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಯಾರ ಆಹ್ವಾನವನ್ನೂ ಅವಮಾನಿಸಬಾರದು ಎಂಬ ಕಾರಣಕ್ಕೆ ನಾನು ಭಾಗವಹಿಸಿದ್ದೆ. ಆದರೆ ಶ್ರಾವಣ ಮಾಸದಲ್ಲಿ ನಾನು ಮೀನು ತಿಂದಿದ್ದೇನೆ ಎಂದು ಮುಖ್ಯಮಂತ್ರಿಗಳು ಕಪೋಲಕಲ್ಪಿತ ಆರೋಪ ಮಾಡಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯ ತಂತ್ರಗಳು ಬಿಜೆಪಿಯ ಗುಣವೇ ಹೊರತು ನಮ್ಮದಲ್ಲ” ಎಂದು ವಾಗ್ದಾಳಿ ನಡೆಸಿದರು.
