ಬೆಂಗಳೂರು: ಸಾಲ ವಾಪಸ್ ಮಾಡಿಲ್ಲವೆಂಬ ಕಾರಣಕ್ಕೆ 30 ವರ್ಷದ ಗೃಹಕಾರ್ಮಿಕ ಮಹಿಳೆಯೊಬ್ಬರನ್ನು ಅಪಹರಿಸಿ, ಅಕ್ರಮವಾಗಿ ಕೂಡಿಹಾಕಿ, ವಿವಸ್ತ್ರಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ದೂರಿನ ಪ್ರಕಾರ, ಸಂತ್ರಸ್ತೆ ನಜಾತ್ ಎಂಬಾಕೆಯ ಬಳಿ ₹50,000 ಹಾಗೂ ರೇಷ್ಮಾ ಎಂಬಾಕೆಯ ಬಳಿ ₹1 ಲಕ್ಷ ಸಾಲ ಪಡೆದುಕೊಂಡಿದ್ದರು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಕಾಲಕ್ಕೆ ಹಣ ಮರುಪಾವತಿಸಲು ಸಾಧ್ಯವಾಗದಿದ್ದಾಗ ಸಾಲ ನೀಡಿದವರಿಂದ ನಿರಂತರ ಬೆದರಿಕೆಗಳು ಬಂದ ಕಾರಣ ಮಹಿಳೆ ತಮ್ಮ ವಾಸ್ತವ್ಯವನ್ನು ಬೇರೆಡೆಗೆ ಬದಲಾಯಿಸಿದ್ದರು. ಆದರೆ ಆಗಸ್ಟ್ 27 ರಂದು ನಜಾತ್ ತನ್ನ ಮನೆಗೆ ಬರುವಂತೆ ನಂಬಿಸಿ ಮಹಿಳೆಯನ್ನು ಕರೆಸಿಕೊಂಡಿದ್ದಾಳೆ.
ಅಲ್ಲಿಗೆ ನುಗ್ಗಿದ ರೇಷ್ಮಾ, ಆಕೆಯ ಪತಿ ಸುಹೇಲ್ ಹಾಗೂ ಇತರರು ಮಹಿಳೆಯ ಮೇಲೆ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ಮೊಬೈಲ್ ಫೋನ್ ಪುಡಿಮಾಡಿದ್ದಾರೆ. ನಂತರ ಮಹಿಳೆ ಹಾಗೂ ಆಕೆಯ ಪುಟ್ಟ ಮಗನನ್ನು ಬಲವಂತವಾಗಿ ಆಟೋರಿಕ್ಷಾದಲ್ಲಿ ಕುಂಬಳಗೋಡಿನಲ್ಲಿರುವ ರೇಷ್ಮಾ ಮನೆಗೆ ಅಪಹರಿಸಿಕೊಂಡು ಹೋಗಿದ್ದಾರೆ.
ಮರುದಿನ ಸುಹೇಲ್ ಬಾಲಕನನ್ನು ಆತನ ಅಜ್ಜಿಯ ಮನೆಯ ಬಳಿ ಬಿಟ್ಟು ಬಂದಿದ್ದು, ಮಹಿಳೆಯನ್ನು ಮಾತ್ರ ಮನೆಯಲ್ಲೇ ಕೂಡಿಹಾಕಿ ನಿರಂತರವಾಗಿ ದೈಹಿಕ ಹಿಂಸೆ ನೀಡಲಾಗಿದೆ. ಬಡ್ಡಿ ಸೇರಿ ₹11 ಲಕ್ಷ ನೀಡುವಂತೆ ಒತ್ತಾಯಿಸಿ ಮಹಿಳೆಯನ್ನು ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿಕೊಳ್ಳಲಾಗಿತ್ತು. ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ವಕೀಲರೊಬ್ಬರ ಮುಂದೆ ಬಲವಂತವಾಗಿ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲಾಗಿತ್ತು. ಕೊನೆಗೆ ಆಗಸ್ಟ್ 31 ರಂದು ಹೇಗೋ ಪೊಲೀಸರಿಗೆ ಮಾಹಿತಿ ಮುಟ್ಟಿಸಲು ಯಶಸ್ವಿಯಾದ ಮಹಿಳೆಯನ್ನು ಕುಂಬಳಗೋಡಿನ ಮನೆಯಿಂದ ರಕ್ಷಿಸಲಾಗಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ನಜಾತ್ (ಎ1), ರೇಷ್ಮಾ (ಎ2), ಸುಹೇಲ್ (ಎ3) ಮತ್ತು ಸೈಫ್ (ಎ4) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಹಲವು ಕಠಿಣ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66(ಇ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
