2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್, ಕೇವಲ ವಾಟ್ಸಾಪ್ ಗುಂಪಿನ ಭಾಗವಾಗಿರುವುದನ್ನು ಅಪರಾಧ ಚಟುವಟಿಕೆಯ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಗುರುವಾರ ಹೈಕೋರ್ಟ್‌ಗೆ ತಿಳಿಸಿರುವುದಾಗಿ ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
“ಒಂದು (ವಾಟ್ಸಾಪ್) ಗುಂಪಿನಲ್ಲಿರುವುದು ಮಾತ್ರ ಯಾವುದೇ ತಪ್ಪಿನ ಸೂಚನೆಯಲ್ಲ, ಈ ಸಂದರ್ಭದಲ್ಲಿ ನಾನು ಏನನ್ನೂ ಹೇಳಿಲ್ಲ” ಎಂದು ಖಾಲಿದ್ ಅವರ ಕಾನೂನು ಸಲಹೆಗಾರರು ನ್ಯಾಯಾಲಯಕ್ಕೆ ತಿಳಿಸಿದರು. “[ನಾನು] ಪ್ರತಿಭಟನಾ ಸ್ಥಳದ ಲೊಕೇಶನ್ ಅನ್ನು ಒಬ್ಬರು ಕೇಳಿದಾಗ ಮಾತ್ರ ಹಂಚಿಕೊಂಡೆ. ಯಾರೋ ನನಗೆ ಮೆಸೆಜ್ ಕಳುಹಿಸಿದ್ದಾರೆ. ಯಾರಾದರೂ ನನಗೆ ಏನನ್ನಾದರೂ ತಿಳಿಸಲು ಬಯಸಿದರೆ, ಅದು ನನಗೆ ಸಂಬಂಧಿಸಿಲ್ಲ. ಏನೇ ಆದರೂ, ಮೆಸೆಜ್‌ನಲ್ಲಿ ಯಾವುದೇ ಅಪರಾಧವಿಲ್ಲ,” ಎಂದು ಅವರು ಹೇಳಿದ್ದಾರೆ.
ಖಾಲಿದ್ ವಾಟ್ಸಾಪ್ ಗುಂಪಿನಲ್ಲಿ ಭಾಗವಹಿಸಿದ್ದನ್ನು ಕ್ರಿಮಿನಲ್ ಪಿತೂರಿಯ ಪುರಾವೆಯಾಗಿ ದೆಹಲಿ ಪೊಲೀಸರು ಉಲ್ಲೇಖಿಸಿದ್ದಕ್ಕೆ ವಕೀಲ ತ್ರಿದೀಪ್ ಪೈಸ್ ಪ್ರತಿಕ್ರಿಯಿಸುತ್ತಿದ್ದರು.
ಆರೋಪಪಟ್ಟಿಯಲ್ಲಿ , ಖಾಲಿದ್ “ಪ್ರಸ್ತುತ ಸರ್ಕಾರಿ ವಿರೋಧಿಗಳ ಒಕ್ಕೂಟವನ್ನು ಒಟ್ಟುಗೂಡಿಸಿ ವಾಟ್ಸಾಪ್‌ನಲ್ಲಿ ದೆಹಲಿ ಪ್ರತಿಭಟನಾ ಸಪೋರ್ಟ್ ಗ್ರೂಪ್ ರಚನೆಗೆ ಕಾರಣವಾಯಿತು,” ಎಂದು ಪೊಲೀಸರು ಆರೋಪಿಸಿದ್ದರು .
“ಜೆಎನ್‌ಯು [ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ]ದ ಮುಸ್ಲಿಂ ವಿದ್ಯಾರ್ಥಿಗಳು” ಎಂಬ ವಿದ್ಯಾರ್ಥಿಗಳ ಗುಂಪಿಗೆ ಖಾಲಿದ್ ಅವರು ಶಾರ್ಜೀಲ್ ಇಮಾಮ್ ಮತ್ತು ಮತ್ತೊಬ್ಬರ ಸಹಾಯದಿಂದ ಹಿಂಸಾಚಾರವನ್ನು ಪ್ರಚೋದಿಸಲು ಮಾರ್ಗದರ್ಶನ ನೀಡಿದ ನಂತರ ಈ ವಾಟ್ಸಾಪ್ ಗುಂಪನ್ನು ರಚಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು.
ದೆಹಲಿ ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್ ಮತ್ತು ಸಾಮಾಜಿಕ ಕಾರ್ಯಕರ್ತೆ ದೇವಾಂಗನಾ ಕಲಿತಾ ಅವರಂತಹ ಇತರರು “ನನಗಿಂತ [ಖಾಲಿದ್] ಹೆಚ್ಚಿನ ಪಾತ್ರಗಳನ್ನು ಹೊಂದಿದ್ದಾರೆ” ಮತ್ತು ಅವರು ಇನ್ನೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪೈಸ್ ಆರೋಪಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಘರ್ಷಣೆಗೆ ಸಂಬಂಧಿಸಿದಂತೆ ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಯಿತು. ಗಲಭೆಯಲ್ಲಿ 53 ಜನರು ಸಾವನ್ನಪ್ಪಿದರು. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರು.
ಖಾಲಿದ್ ಮತ್ತು ಇತರ ಹಲವಾರು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಭಾರತೀಯ ದಂಡ ಸಂಹಿತೆ, ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲಾಯಿತು.
ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರವು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಕೆಣಕುವ ದೊಡ್ಡ ಪಿತೂರಿಯ ಭಾಗವಾಗಿದ್ದು, ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದವರು, ಅದರಲ್ಲಿ ಖಾಲಿದ್ ಕೂಡ ಒಬ್ಬರು ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ.
ಪ್ರತಿಭಟನಾಕಾರರು ಪ್ರತ್ಯೇಕತಾವಾದಿ ಉದ್ದೇಶಗಳನ್ನು ಹೊಂದಿದ್ದರು ಮತ್ತು ಸರ್ಕಾರವನ್ನು ಅಸ್ಥಿರಗೊಳಿಸಲು “ನಾಗರಿಕ ಅಸಹಕಾರದ ಮುಖವಾಡ” ವನ್ನು ಬಳಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು.
ನವೆಂಬರ್ 2020 ರಲ್ಲಿ ಸಲ್ಲಿಸಲಾದ 200 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಖಾಲಿದ್ ದೆಹಲಿ ಗಲಭೆಯನ್ನು “ದೂರದಿಂದಲೇ ನಿಯಂತ್ರಿಸುತ್ತಿದ್ದರು” ಎಂದು ಪೊಲೀಸರು ನಿರ್ದಿಷ್ಟವಾಗಿ ಆರೋಪಿಸಿದ್ದಾರೆ. ಖಾಲಿದ್ “ರಹಸ್ಯ ಸಭೆ” ನಡೆಸಿದ್ದಾರೆ, ಅಲ್ಲಿ ಅವರು ಗಲಭೆ ನಡೆಸಲು ವಿವರಗಳನ್ನು ವಿವರಿಸಿದ್ದಾರೆ ಎಂದು ಹೇಳಲಾಗಿದೆ. ಮಾರ್ಚ್ 4 ರಂದು ಹೈಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.