ನವದೆಹಲಿ : ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಒಳಗೊಂಡಿರುವ 285 ಲಿಂಕ್‌ಗಳನ್ನು ಸೋಶಿಯಲ್ ಮೇಡಿಯಾಗಳಿಂದ ತೆಗೆದು ಹಾಕಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇಂದ್ರ ರೈಲ್ವೆ ಸಚಿವಾಲಯ ಸೂಚನೆ ನೀಡಿದೆ.
ಫೆಬ್ರವರಿ 17ರಂದು ಈ ಬಗ್ಗೆ ಸಚಿವಾಲಯ ನೋಟಿಸ್ ಕಳುಹಿಸಿದೆ. 36 ಗಂಟೆಗಳಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಎಕ್ಸ್ ಖಾತೆಯಲ್ಲಿ ಇಂಥ ವಿಡಿಯೋಗಳನ್ನು ಪ್ರದರ್ಶನ ಮಾಡುವುದು ನೈತಿಕ ಮಾನದಂಡಗಳಿಗೆ ವಿರುದ್ಧವಾಗಿದೆ, ಜೊತೆಗೆ ನಿಮ್ಮ x.comನ ನೀತಿಗೆ ವಿರುದ್ಧವಾಗಿದೆ. ಏಕೆಂದರೆ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವುದರಿಂದ ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಇವು ಭಾರತೀಯ ರೈಲ್ವೆಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಸಚಿವಾಲಯ ತಿಳಿಸಿದೆ.
ಫೆಬ್ರವರಿ 15ರಂದು ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದರು.