ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಇಂದಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಶುಂಡ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆಗಳನ್ನು ಪ್ರಶ್ನಿಸಿದ್ದಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತ ಶೇಖ್ ಅಬ್ದುಲ್ ಹಫೀಜ್ ಅವರ ಮನೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಅವರ ತಂದೆ ಶೇಖ್ ಮೊಹಮ್ಮದ್ ಮಫಿಕ್ (46) ಅವರನ್ನು ಹಲ್ಲೆ ಮಾಡಿ ಕೊಂದ ಘಟನೆ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಬೂತ್ ಅಧ್ಯಕ್ಷ ಅಷ್ಟಮ್ ಮಾಝಿ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಜೆಪಿ ಹಮ್ಮಿಕೊಂಡಿದ್ದ ‘ಸ್ಕೂಲ್ ಠೀಕ್ ಕರೋ’ (ಶಾಲೆ ಸರಿಪಡಿಸಿ) ಅಭಿಯಾನದ ಭಾಗವಾಗಿ ಅಬ್ದುಲ್ ಹಫೀಜ್ ಆಗಸ್ಟ್ 13 ರಂದು ಗ್ರಾಮದ ಕರಿಶುಂಡ ಪಶ್ಚಿಮಪಾರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕುಡಿಯುವ ನೀರು, ಶೌಚಾಲಯದ ಸಮಸ್ಯೆಗಳ ಬಗ್ಗೆ ಶಿಕ್ಷಕರನ್ನು ವಿಚಾರಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಅದೇ ದಿನ ರಾತ್ರಿ ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳೊಂದಿಗೆ ಹಫೀಜ್ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿಯ ವೇಳೆ ಮಗನನ್ನು ರಕ್ಷಿಸಲು ಅಡ್ಡಬಂದ ತಂದೆ ಮಫಿಕ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಫಿಕ್, ಬುರ್ದ್ವಾನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 15 ರ ರಾತ್ರಿ ಮೃತಪಟ್ಟಿದ್ದಾರೆ.
ಹತ್ಯೆಯನ್ನು ಖಂಡಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ (SFI) ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ತಪ್ಪಿತಸ್ಥರನ್ನು ಯಾವುದೇ ಪಕ್ಷದವರಾಗಿದ್ದರೂ ಅಪರಾಧಿಗಳೆಂದೇ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
