ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಸೈಬರ್ ವಂಚನೆ: 74 ವರ್ಷದ ವೃದ್ಧೆಯನ್ನು ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ಲೂಟಿ!

ಬೆಂಗಳೂರಿನಲ್ಲಿ ಸೈಬರ್ ವಂಚಕರು ಹೀನ ಕೃತ್ಯವೊಂದನ್ನು ಎಸಗಿದ್ದು, ಸಿಬಿಐ (CBI) ಮತ್ತು ಇಡಿ (ED) ಅಧಿಕಾರಿಗಳಂತೆ ನಟಿಸಿ 74 ವರ್ಷದ ವೃದ್ಧೆಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ (Digital Arrest) ಮಾಡುವ ಮೂಲಕ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ದೇಶದಲ್ಲೇ ನಡೆದಿರುವ ಅತ್ಯಂತ ದೊಡ್ಡ ಸೈಬರ್ ವಂಚನೆಗಳಲ್ಲಿ ಒಂದಾಗಿರುವ ಈ ಜಾಲವನ್ನು ಬೆಂಗಳೂರಿನ ‘ಸೈಬರ್ ಕಮಾಂಡ್ ಯೂನಿಟ್’ (Cyber Command Unit) ಯಶಸ್ವಿಯಾಗಿ ಭೇದಿಸಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಹಿರಿಯ ನಾಗರಿಕರಾದ ಲಕ್ಷ್ಮಿ ರಾಮಮೂರ್ತಿ ಎಂಬುವವರನ್ನು ಸೈಬರ್ ವಂಚಕರು ತಮ್ಮ ತಂತ್ರದ ಮೂಲಕ ಮಾನಸಿಕವಾಗಿ ಬಲಿಪಶು ಮಾಡಿದ್ದರು. ಅವರ ಮೇಲೆ ತೀವ್ರ ಮಾನಸಿಕ ಒತ್ತಡ ಹೇರಿದ ವಂಚಕರು, ಅವರ ಐಸಿಐಸಿಐ (ICICI) ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ತಮಗೆ ಬೇಕಾದ ಖಾತೆಗಳಿಗೆ ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರು, ಹಣ ಲೇವಾದೇವಿಗೆ (ಮನಿ ಲಾಂಡರಿಂಗ್) ವಂಚಕರು ಬಳಸಿದ್ದ ನಕಲಿ ‘ಮ್ಯೂಲ್ ಖಾತೆಗಳನ್ನು’ (Mule Accounts) ಪತ್ತೆಹಚ್ಚಿದ್ದಾರೆ. ದೋಚಲಾದ ಒಟ್ಟು ಮೊತ್ತದ ಪೈಕಿ 4 ಕೋಟಿಗೂ ಅಧಿಕ ರೂಪಾಯಿಗಳನ್ನು ಆಯಾ ಬ್ಯಾಂಕ್ ಖಾತೆಗಳಲ್ಲೇ ಮುಟ್ಟುಗೋಲು ಹಾಕಿಕೊಳ್ಳುವಲ್ಲಿ (ಫ್ರೀಜ್) ಪೊಲೀಸರು ಯಶಸ್ವಿಯಾಗಿದ್ದಾರೆ ಹಾಗೂ ಮತ್ತೊಂದು ಮೂಲದಿಂದ 1.46 ಕೋಟಿ ರೂಪಾಯಿಗಳನ್ನು ನಗದು ರೂಪದಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಭಾರಿ ಸೈಬರ್ ದರೋಡೆಗೆ ಸಂಬಂಧಿಸಿದಂತೆ ಸದ್ಯ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು