ಬೆಂಗಳೂರು: ರಾಜಕೀಯ ಮುಖಂಡರು ಹಾಗೂ ವಿಐಪಿಗಳು (VIP) ಬರುತ್ತಾರೆ ಎಂದರೆ ಸಾಕು, ಅರ್ಧ ಗಂಟೆ ಮುಂಚಿತವಾಗಿಯೇ ಸಂಚಾರವನ್ನು (Traffic) ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಭದ್ರತೆಯ ಕಾರಣ ನೀಡಿ ಪೊಲೀಸರು ರಸ್ತೆಗಳನ್ನು ಬಂದ್ ಮಾಡುವುದರಿಂದ ಎಲ್ಲಿಯ ವಾಹನಗಳು ಅಲ್ಲಲ್ಲೇ ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ.
ಆ ಸಮಯದಲ್ಲಿ ತುರ್ತು ಚಿಕಿತ್ಸೆಯ ಸೈರನ್ ಹಾಕಿಕೊಂಡು ಬರುವ ಅಂಬುಲೆನ್ಸ್‌ಗಳೂ ಸಹ ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಿರುವಾಗ ಹೆರಿಗೆ ಹಾಗೂ ಇತರೆ ಗಂಭೀರ ಆರೋಗ್ಯ ತುರ್ತು ಪರಿಸ್ಥಿತಿಗಳಿಗಾಗಿ ಆಸ್ಪತ್ರೆಗೆ ಧಾವಿಸುವ ಸಾಮಾನ್ಯ ಜನರ ಗತಿಯೇನು? ಇಂತಹದ್ದೇ ಒಂದು ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಕರ್ನಾಟಕ ರಾಜ್ಯಪಾಲರ (Governor) ಕಾನ್ವಾಯ್ ಹಳೆಯ ವಿಮಾನ ನಿಲ್ದಾಣ ರಸ್ತೆಯ (Old Airport Road) ಮಾರ್ಗವಾಗಿ ಚಲಿಸಬೇಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆ ರಸ್ತೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ತಡೆದಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದ ಘಟನೆ ನಡೆದಿದೆ.
ಗರ್ಭಿಣಿಯಾಗಿರುವ ತಮ್ಮ ಪತ್ನಿಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ನಿಲ್ಲಿಸಿದ್ದಕ್ಕೆ ಆ ವ್ಯಕ್ತಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗವರ್ನರ್ ಕಾನ್ವಾಯ್ ಬರುತ್ತಿದ್ದ ರಸ್ತೆಯಲ್ಲೇ ತಮ್ಮ ವಾಹನವನ್ನು ನಿಲ್ಲಿಸಿ, ಕೆಳಗಿಳಿದು ಪೊಲೀಸರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ಅಂಡರ್‌ಪಾಸ್ ಕಾಮಗಾರಿಗಳ ಕಾರಣದಿಂದಾಗಿ ಹಳೆಯ ವಿಮಾನ ನಿಲ್ದಾಣ ರಸ್ತೆಯು ಈಗಾಗಲೇ ನಿರಂತರವಾಗಿ ದಟ್ಟಣೆಯಿಂದ ಕೂಡಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ವಿಐಪಿಗಳಿಗಾಗಿ ಗಂಟೆಗಟ್ಟಲೆ ಸಂಚಾರವನ್ನು ತಡೆದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನನ್ನ ಪತ್ನಿ ಗರ್ಭಿಣಿ, ಆಕೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ನಿಮಗೇನು ಸಾಮಾನ್ಯ ಜನರ ತುರ್ತು ವೈದ್ಯಕೀಯ ಪರಿಸ್ಥಿತಿಗಿಂತ ವಿಐಪಿ ಕಾನ್ವಾಯ್‌ಗಳೇ ಮುಖ್ಯವೇ?” ಎಂದು ಅವರು ಪೊಲೀಸರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ರಸ್ತೆಯನ್ನು ಮುಕ್ತಗೊಳಿಸುವವರೆಗೂ ತಾವು ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಒಂದು ಬದಿಯಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಇಡೀ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ದೇಶದಲ್ಲಿರುವ ‘ವಿಐಪಿ ಸಂಸ್ಕೃತಿ’ (VIP Culture) ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ವಿಐಪಿಗಳ ಸೌಕರ್ಯಗಳಿಗೆ ನೀಡುವ ಮೌಲ್ಯವನ್ನು ಕನಿಷ್ಠ ಪಕ್ಷ ಸಾಮಾನ್ಯ ಜನರ ಪ್ರಾಣಕ್ಕೆ ನೀಡುತ್ತಿಲ್ಲ” ಎಂದು ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಕೆಂಡಕಾರುತ್ತಿದ್ದಾರೆ.
