Home ರಾಜಕೀಯ ಕರ್ನಾಟಕ ಬಿಜೆಪಿಗೆ ಶೀಘ್ರದಲ್ಲೇ ಹೊಸ ಅಧ್ಯಕ್ಷರು; ಪ್ರಲ್ಹಾದ ಜೋಶಿ, ಸೋಮಣ್ಣ ಹೆಸರು ಮುನ್ನೆಲೆಯಲ್ಲಿ

ಕರ್ನಾಟಕ ಬಿಜೆಪಿಗೆ ಶೀಘ್ರದಲ್ಲೇ ಹೊಸ ಅಧ್ಯಕ್ಷರು; ಪ್ರಲ್ಹಾದ ಜೋಶಿ, ಸೋಮಣ್ಣ ಹೆಸರು ಮುನ್ನೆಲೆಯಲ್ಲಿ

0

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಿಂದ ಕರ್ನಾಟಕ ಬಿಜೆಪಿ ವಲಯದಲ್ಲಿ ಮಹತ್ವದ ಸುದ್ದಿಯೊಂದು ಹೊರ ಬಿದ್ದಿದ್ದು, ಬಹು ಕಾಲದಿಂದ ತೂಗುಯ್ಯಾಲೆಯಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಹೊಸ ಮುಖ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ವೇಗ ಪಡೆದುಕೊಂಡಿದೆ. ಈ ಹಿಂದೆ ನಾಲ್ಕು ರಾಜ್ಯಗಳಿಗೆ ಏಕಕಾಲದಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸಿದ ವರಿಷ್ಠರು, ಕರ್ನಾಟಕದ ವಿಷಯದಲ್ಲಿ ಮಾತ್ರ ಮೌನ ವಹಿಸಿದ್ದರು. ಈಗ ಉತ್ತರ ಪ್ರದೇಶ ಮತ್ತು ದೆಹಲಿಗೆ ಕ್ರಮವಾಗಿ ಪಂಕಜ್ ಚೌಧರಿ ಮತ್ತು ಹರ್ಷ ಮಲ್ಹೋತ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ ನಂತರ, ಮುಂದಿನ ಸರದಿ ಕರ್ನಾಟಕದ್ದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

ಜೂನ್ 15-18ರ ನಡುವೆ ಕೇಂದ್ರ ಸಂಪುಟ ಪುನರ್‌ರಚನೆ
ಜೂನ್ 15ರಿಂದ 18ರ ನಡುವೆ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸುಮಾರು 10 ರಿಂದ 12 ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಅಲ್ಲದೇ ಹಲವು ಹಾಲಿ ಸಚಿವರ ಖಾತೆ ಬದಲಾವಣೆಯೂ ಆಗಲಿದೆ ಎಂದು ತಿಳಿದು ಬಂದಿದೆ.

ಕನಿಷ್ಠ ಇಬ್ಬರು ಕ್ಯಾಬಿನೆಟ್ ದರ್ಜೆ ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚು ರಾಜ್ಯ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬುದು ಬಹುತೇಕ ನಿಶ್ಚಿತ ಎಂದು ಮೂಲಗಳು ಹೇಳುತ್ತಿವೆ. ಕೇಂದ್ರ ಸಂಪುಟದಿಂದ ಕೈಬಿಡಲ್ಪಡುವ ಸಚಿವರಿಗೆ ರಾಜ್ಯ ಮಟ್ಟದ ಜವಾಬ್ದಾರಿ ನೀಡಲಾಗುವುದು ಎಂದೂ ಹೇಳಲಾಗುತ್ತಿದೆ.

ಕರ್ನಾಟಕದ ಮೂವರು ಸಚಿವರ ಮೇಲೆ ನಿಗಾ
ಪ್ರಸ್ತುತ ಕೇಂದ್ರ ಸಂಪುಟದಲ್ಲಿ ರಾಜ್ಯದ ನಾಲ್ವರು ಲೋಕಸಭಾ ಸದಸ್ಯರಿದ್ದಾರೆ. ಕ್ಯಾಬಿನೆಟ್ ದರ್ಜೆಯಲ್ಲಿ ಪ್ರಲ್ಹಾದ ಜೋಶಿ ಮತ್ತು ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸಚಿವ ಸ್ಥಾನದಲ್ಲಿ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಇದ್ದಾರೆ. ಬಿಜೆಪಿ ನಾಯಕರ ಮೂವರ ಪೈಕಿ ಒಬ್ಬರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಬಲವಾಗಿ ಹರಿದಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಮತ್ತು ವಿ.ಸೋಮಣ್ಣ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆಯೂ ಇವರಿಬ್ಬರ ಹೆಸರು ಚರ್ಚೆಗೆ ಬಂದಿತ್ತು; ಈಗ ಮತ್ತೆ ಅದೇ ಹೆಸರುಗಳು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಓಟದಲ್ಲಿ ಮುಂಚೂಣಿಯಲ್ಲಿರುವುದು ಗಮನಾರ್ಹ.

ಮೈತ್ರಿ ಪಕ್ಷಗಳಿಗೆ ಹೆಚ್ಚಿನ ಪಾಲು?
ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳಿಗೆ ಹೆಚ್ಚಿನ ಸ್ಥಾನಮಾನ ನೀಡುವ ಸಾಧ್ಯತೆಯೂ ಇದೆ. ಕ್ಯಾಬಿನೆಟ್ ದರ್ಜೆ ನೀಡದಿದ್ದರೂ ರಾಜ್ಯ ಸಚಿವ ಸ್ಥಾನ ನೀಡುವ ಮೂಲಕ ಮಿತ್ರ ಪಕ್ಷಗಳನ್ನು ತುಷ್ಟೀಕರಿಸುವ ತಂತ್ರ ಬಿಜೆಪಿ ವರಿಷ್ಠರು ಅನುಸರಿಸಲಿದ್ದಾರೆ ಎನ್ನಲಾಗಿದೆ.

You cannot copy content of this page

Exit mobile version