ಬೆಂಗಳೂರು: ರಾಜ್ಯದ ಸಿಲಿಕಾನ್ ಸಿಟಿ (ಬೆಂಗಳೂರು) ಗುಂಡಿಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದ್ದು, ಇದಕ್ಕೆ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವೇ ಕಾರಣವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ದ್ವಿಚಕ್ರ ವಾಹನದಲ್ಲಿ ಉಮಾದೇವಿ (50) ಮತ್ತು ಅವರ ಮಗಳು ವನಿತಾ ಸೋಮವಾರಪೇಟೆ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಸಂಚರಿಸುತ್ತಿರುವ ವೇಳೆ, ರಸ್ತೆಗುಂಡಿಯನ್ನು ತಪ್ಪಿಸುವ ಯತ್ನದಲ್ಲಿ ಬಿದ್ದು ಕೆಎಸ್‌ಆರ್‌ಟಿಸಿ ಬಸ್‌ಗೆ ಸಿಲುಕಿದ್ದರು. ಘಟನೆಯಲ್ಲಿ ಉಮಾದೇವಿಯವರಿಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಬೆಳ್ಳಂಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಮಾದೇವಿ ಸಾವನ್ನಪ್ಪಿದ್ದರು.
ಈ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ಗುಂಡಿಗಳಿಂದಾಗುವ ಸಾವುಗಳಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಬಿಜೆಪಿ ಸರ್ಕಾರಕ್ಕೆ ಗುಂಡಿಗಳು ಬೇಕು, ಏಕೆಂದರೆ ಗುಂಡಿಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡರೆ, ಹೆಚ್ಚಿನ ಪ್ರಮಾಣದಲ್ಲಿ ಲಾಭಗಳಿಸಬಹುದು, ಹೀಗಾಗಿ ಸರ್ಕಾರಕ್ಕೆ ಗುಂಡಿಗಳು ಬೇಕು ಎಂದು ಟೀಕಿಸಿದರು.
ಬೆಂಗಳೂರನ್ನು ಉದ್ಯಾನ ನಗರಿ ಮತ್ತು ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತದೆ. ಆದರೆ ಈಗ ಈ ನಗರವನ್ನು ಗುಂಡಿಗಳ ಸಾಮ್ರಾಜ್ಯ ಎಂದು ಟೀಕಿಸಲಾಗುತ್ತಿದೆ. ಇದಕ್ಕೆ ಪರ್ಸೆಂಟೇಜ್ (40%) ವ್ಯವಸ್ಥೆಯೇ ಕಾರಣ ಎಂದು ದೂರಿದರು.
ಈ ಗುಂಡಿಗಳು ಜನರಿಗೆ ಸಾವಿಗೆ ಕಾರಣವಾದರೆ, ಕೆಲವರಿಗೆ ಅವು ಲಾಭದಾಯಕವಾಗಿವೆ. ರಸ್ತೆ ಗುಂಡಿಗಳ ಕುರಿತು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದರೂ ಸರ್ಕಾರಕ್ಕೆ ನಾಚಿಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವಂತೆ ನ್ಯಾಯಾಲಯ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಏನೂ ಮಾಡುತ್ತಿಲ್ಲ ಏಕೆ? ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.