ಮತದಾರರ ಪಟ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಫೋಟೋ: ಪಂಜಾಬ್‌ನಲ್ಲಿ ಭಾರಿ ರಾಜಕೀಯ ವಿವಾದ!

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಪಂಜಾಬ್‌ನ ಮತದಾರರ ಪಟ್ಟಿಯಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಫೋಟೋ ಪ್ರತ್ಯಕ್ಷವಾಗಿರುವುದು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಪಂಜಾಬ್‌ನ ಲುಧಿಯಾನ ಪೂರ್ವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ‘ಭಾಗ 38’ರಲ್ಲಿ (Part 38), ಸರಣಿ ಸಂಖ್ಯೆ 422 ರಲ್ಲಿದ್ದ ಮತದಾರರೊಬ್ಬರ ವಿವರಗಳ ಪಕ್ಕದಲ್ಲಿ ಅವರ ಭಾವಚಿತ್ರದ ಬದಲಾಗಿ ಭಗತ್ ಸಿಂಗ್ ಅವರ ಫೋಟೋ ಮುದ್ರಣಗೊಂಡಿತ್ತು. ಈ ಎಡವಟ್ಟನ್ನು ಗುರುತಿಸಿದ ಲುಧಿಯಾನ ಸಂಸದ ಹಾಗೂ ಕಾಂಗ್ರೆಸ್ ನಾಯಕ ಅಮರೀಂದರ್ ಸಿಂಗ್ ರಾಜಾ ವಾರಿಂಗ್, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ದಾಖಲೆ ಸಮೇತ ಪೋಸ್ಟ್ ಮಾಡಿ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇನ್ನು ಇದೊಂದೇ ನೋಡಲು ಬಾಕಿ ಉಳಿದಿತ್ತು…!” ಎಂದು ವ್ಯಂಗ್ಯವಾಡಿದ ಅವರು, ಚುನಾವಣಾ ಯಂತ್ರಾಂಗದ ಕಾರ್ಯವೈಖರಿ ಮತ್ತು ಪರಿಶೀಲನಾ ವಿಧಾನವನ್ನು ತರಾಟೆಗೆ ತೆಗೆದುಕೊಂಡರು.

ಚುನಾವಣಾ ಅಧಿಕಾರಿಗಳ ಸ್ಪಷ್ಟನೆ:

ವಿವಾದ ತಾರಕಕ್ಕೇರುತ್ತಿದ್ದಂತೆಯೇ ಲುಧಿಯಾನ ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. “ಹಿಂದಿನ ಮತದಾರರ ಪಟ್ಟಿಯಲ್ಲೇ ಈ ತಪ್ಪಾದ ಫೋಟೋ ಇತ್ತು. ಆಗಸ್ಟ್ 13 ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿಯೂ ಅದು ಹಾಗೆಯೇ ಮುಂದುವರಿದಿತ್ತು. ಆದರೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಪರಿಶೀಲನೆ ವೇಳೆ ಈ ತಾಂತ್ರಿಕ ಎಡವಟ್ಟನ್ನು ಗುರುತಿಸಿ ತಕ್ಷಣವೇ ಸರಿಪಡಿಸಲಾಗಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಪಟ್ಟ ಮತದಾರರ ನೈಜ ಭಾವಚಿತ್ರವನ್ನು ಅಳವಡಿಸಿ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಕ್ಟೋಬರ್ 12 ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚುನಾವಣಾ ಇಲಾಖೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು