ಯುರೋಪಿಯನ್ನರ ಸಾಕ್ಷರತೆ, ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಸಾಂಸ್ಕೃತಿಕ ಜೀವನದ ಪ್ರಮುಖ ಭಾಗ ಈ ದಿನದ ಲೋಕ ಸುತ್ತಾಟ ಅಂಕಣದಲ್ಲಿ ಮೂಡಿ ಬಂದಿದೆ. ಲೇಖಕರಾದ ಡಾ.ಪ್ರಕಾಶ ಗ.ಖಾಡೆ ಅವರ ಬರಹದಲ್ಲಿ ತಪ್ಪದೇ ಓದಿ
ಯುರೋಪಿನಲ್ಲಿ ಓದುವ ಸಂಸ್ಕೃತಿ ಒಂದೇ ರೀತಿಯದ್ದಲ್ಲ; ದೇಶದಿಂದ ದೇಶಕ್ಕೆ ವ್ಯತ್ಯಾಸವಿದೆ. ಆದರೂ ಪುಸ್ತಕ, ಗ್ರಂಥಾಲಯ, ಪುಸ್ತಕ ಮಳಿಗೆ, ಓದುಗರ ಬಳಗ ಮತ್ತು ಸಾಹಿತ್ಯ ಚರ್ಚೆಗಳಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಇದೆ. ಯುರೋಪಿಯನ್ ಒಕ್ಕೂಟವೂ ಓದು ಮತ್ತು ಸಾಕ್ಷರತೆಯನ್ನು ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಸಾಂಸ್ಕೃತಿಕ ಜೀವನದ ಪ್ರಮುಖ ಭಾಗವೆಂದು ಪರಿಗಣಿಸುತ್ತದೆ. 2026ರಲ್ಲಿ ಯುರೋಪಿಯನ್ ಕಮಿಷನ್ ಓದುವ ಅಭ್ಯಾಸ ಮತ್ತು ಸಾಕ್ಷರತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳಿಗೂ ವಿಶೇಷ ಒತ್ತು ನೀಡಿದೆ.
ನಾವು ಯುರೋಪ್ ಪ್ರವಾಸದ ಸಂದರ್ಭದಲ್ಲಿ ಸ್ವಿಟ್ಜರ್ಲ್ಯಾಂಡ್ನ ಸುಂದರ ನಗರ ಇಂಟರ್ಲಾಕೆನ್ (Interlaken) ನಲ್ಲಿ ಕಂಡ ಈ ದೃಶ್ಯವಂತೂ ಮನಸ್ಸಿಗೆ ವಿಶೇಷವಾಗಿ ಹತ್ತಿರವಾಯಿತು. ಸಾಮಾನ್ಯವಾಗಿ ಇಂಗ್ಲೆಂಡ್ನ ಬೀದಿಗಳಲ್ಲಿ ಕಾಣಸಿಗುವಂತೆ ಇರುವ ಕೆಂಪು ಬಣ್ಣದ ಹಳೆಯ ದೂರವಾಣಿ ಪೆಟ್ಟಿಗೆ ಇಲ್ಲಿ ಹೊಸ ರೂಪ ಪಡೆದುಕೊಂಡಿದೆ, ಅದು ಈಗ ಒಂದು ಪುಟ್ಟ ಸಾರ್ವಜನಿಕ ಪುಸ್ತಕ ವಿನಿಮಯ ಕೇಂದ್ರವಾಗಿದೆ. ಪುಸ್ತಕಗಳಿರುವ ಕೆಂಪು ಪೆಟ್ಟಿಗೆ ಫಲಕದಲ್ಲಿ ಜರ್ಮನ್ ಭಾಷೆಯಲ್ಲಿ “Offener Bücherschrank” ಎಂದು ಬರೆಯಲಾಗಿದೆ. ಇದರ ಅರ್ಥ “ ಎಲ್ಲರಿಗೂ ತೆರೆದಿರುವ ಪುಸ್ತಕದ ಕಪಾಟು” ಎಂದಾಗಿದೆ. ಅದರ ಕೆಳಗೆ, “Nimm ein Buch, bring ein Buch.”
ಅಂದರೆ, “ಒಂದು ಪುಸ್ತಕ ತೆಗೆದುಕೊಳ್ಳಿ, ಒಂದು ಪುಸ್ತಕ ತಂದು ಇಡಿ.” ಎಂಬ ಅತ್ಯಂತ ಸುಂದರ ಸಂದೇಶವಿದೆ.
ಈ ಕೆಂಪು ಪೆಟ್ಟಿಗೆಯ ಗಾಜಿನ ಬಾಗಿಲಿನ ಒಳಗೆ ವಿವಿಧ ಭಾಷೆ ಮತ್ತು ವಿಷಯಗಳ ಅನೇಕ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ಯಾರಿಗಾದರೂ ಇಷ್ಟವಾದ ಪುಸ್ತಕವನ್ನು ತೆಗೆದುಕೊಂಡು ಓದಬಹುದು; ತಮ್ಮಲ್ಲಿರುವ ಓದಿದ ಪುಸ್ತಕವನ್ನು ಮತ್ತೊಬ್ಬರಿಗಾಗಿ ಇಲ್ಲಿ ಇಡಬಹುದು. ಹಣವಿಲ್ಲ, ಸದಸ್ಯತ್ವವಿಲ್ಲ—ಓದುವ ಆಸಕ್ತಿ ಇದ್ದರೆ ಸಾಕು. ಇದು ಪುಸ್ತಕಗಳ ವಿನಿಮಯವಲ್ಲ; “ಓದಿದ ಜ್ಞಾನವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಕು” ಎಂಬ ಮಾನವೀಯ ಹಾಗೂ ಸಾಂಸ್ಕೃತಿಕ ಸಂದೇಶದ ಪ್ರತೀಕವೂ ಹೌದು. ಪೆಟ್ಟಿಗೆಯ ಕೆಳಭಾಗದಲ್ಲಿ “Bödeli Bibliothek Interlaken” ಎಂಬ ಹೆಸರು ಕಾಣಿಸುತ್ತದೆ. ಇಂಟರ್ಲಾಕೆನ್ನ ಸ್ಥಳೀಯ ಗ್ರಂಥಾಲಯದೊಂದಿಗೆ ಈ ಪುಸ್ತಕ ವ್ಯವಸ್ಥೆಗೆ ಸಂಬಂಧವಿರುವುದನ್ನು ಅದು ಸೂಚಿಸುತ್ತದೆ.
ಯುರೋಪಿನ ಸಾರ್ವಜನಿಕ ಗ್ರಂಥಾಲಯಗಳು ಈಗ ಪುಸ್ತಕಗಳನ್ನು ಇಟ್ಟುಕೊಳ್ಳುವ ಸ್ಥಳಗಳಷ್ಟೇ ಅಲ್ಲ. ಅವು ಕಲಿಕೆ, ಸೃಜನಶೀಲತೆ, ಸಾಮಾಜಿಕ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮುದಾಯದ ಒಗ್ಗಟ್ಟಿನ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.ಸಣ್ಣ ಪಟ್ಟಣಗಳಲ್ಲಿಯೂ ಗ್ರಂಥಾಲಯಗಳು ಜನರು ಸೇರಿ ಲೇಖಕರನ್ನು ಭೇಟಿಯಾಗುವ, ಪುಸ್ತಕಗಳ ಬಗ್ಗೆ ಚರ್ಚಿಸುವ ಮತ್ತು ವಿಚಾರಗಳನ್ನು ಹಂಚಿಕೊಳ್ಳುವ ಸ್ಥಳಗಳಾಗಿವೆ. ಯುರೋಪಿಯನ್ ಸಂಸತ್ತೂ ಗ್ರಂಥಾಲಯಗಳು ಮತ್ತು ಪುಸ್ತಕ ಮಳಿಗೆಗಳ ಈ ಸಾಮಾಜಿಕ ಪಾತ್ರವನ್ನು ವಿಶೇಷವಾಗಿ ಗುರುತಿಸಿದೆ. ನಾವು ಇಂಟರ್ಲಾಕೆನ್ನಲ್ಲಿ ನೋಡಿದಂತಹ Open Bookshelf / Bücherschrank ವ್ಯವಸ್ಥೆಯ ಸೌಂದರ್ಯವೇ ಬೇರೆ. ತಾನು ಓದಿ ಮುಗಿಸಿದ ಪುಸ್ತಕವನ್ನು ಮನೆಯಲ್ಲೇ ಇಟ್ಟುಕೊಳ್ಳುವುದಕ್ಕಿಂತ, ಮತ್ತೊಬ್ಬರು ಓದಲಿ ಎಂದು ಸಾರ್ವಜನಿಕ ಪುಸ್ತಕ ಕಪಾಟಿನಲ್ಲಿ ಇಡುತ್ತಾರೆ. ತಮಗೆ ಇಷ್ಟವಾದ ಮತ್ತೊಂದು ಪುಸ್ತಕವನ್ನು ತೆಗೆದುಕೊಂಡು ಹೋಗುತ್ತಾರೆ. ಇದು ಒಂದು ರೀತಿಯಲ್ಲಿ, “ಪುಸ್ತಕ ನನ್ನದು ಮಾತ್ರವಲ್ಲ; ಓದುವ ಪ್ರತಿಯೊಬ್ಬರದ್ದೂ.”ಎಂಬ ಉದಾತ್ತ ಭಾವನೆಯನ್ನು ಬೆಳೆಸುತ್ತದೆ.
ಓದು ಎಂದರೆ ಜೀವನಪರ್ಯಂತ ಕಲಿಕೆ.
ಯುರೋಪಿನ ಶಿಕ್ಷಣ ವ್ಯವಸ್ಥೆಯಲ್ಲೂ lifelong learning – ಜೀವನಪರ್ಯಂತ ಕಲಿಕೆ ಎಂಬ ಪರಿಕಲ್ಪನೆಗೆ ಮಹತ್ವವಿದೆ. ಸಾರ್ವಜನಿಕ ಗ್ರಂಥಾಲಯಗಳು ಈ ಕಲಿಕೆಯ ಪ್ರಮುಖ ಕೇಂದ್ರಗಳಾಗಿವೆ. ಓದುವುದು ಕೇವಲ ಪರೀಕ್ಷೆಗಾಗಿ ಅಲ್ಲ; ಜಗತ್ತನ್ನು ಅರ್ಥಮಾಡಿಕೊಳ್ಳಲು, ವಿಚಾರಶಕ್ತಿಯನ್ನು ಬೆಳೆಸಲು ಮತ್ತು ವಿಭಿನ್ನ ಸಂಸ್ಕೃತಿಗಳನ್ನು ತಿಳಿದುಕೊಳ್ಳಲು ಎಂಬ ಮನೋಭಾವಕ್ಕೆ ಒತ್ತು ನೀಡಲಾಗುತ್ತದೆ. ಆದರೆ ಯುರೋಪಿನಲ್ಲಿ ಓದುವ ಅಭ್ಯಾಸವೂ ಸವಾಲುಗಳನ್ನು ಎದುರಿಸುತ್ತಿದೆ. 2022ರ EU ಮಾಹಿತಿಯಲ್ಲಿ ಪುಸ್ತಕ ಓದದಿರುವ ಪ್ರಮುಖ ಕಾರಣಗಳಲ್ಲಿ ಆಸಕ್ತಿ ಕೊರತೆ ಪ್ರಮುಖವಾಗಿತ್ತು. ಮಕ್ಕಳ ಮತ್ತು ಯುವಜನರ ಓದುವ ಸಾಮರ್ಥ್ಯದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಕುಸಿತ ಕಂಡುಬಂದಿರುವುದರಿಂದ, ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ಅಲ್ಲಿ ನಡೆಯುತ್ತಿವೆ.
ಮುದ್ರಿತ ಪುಸ್ತಕದಿಂದ ಡಿಜಿಟಲ್ ಓದಿನವರೆಗೆ.
ಇಂದಿನ ಯುರೋಪಿಯನ್ ಓದುಗರು ಮುದ್ರಿತ ಪುಸ್ತಕಗಳ ಜೊತೆಗೆ e-book ಮತ್ತು audiobook ಗಳನ್ನೂ ಬಳಸುತ್ತಿದ್ದಾರೆ. 2024ರಲ್ಲಿ EUಯ ಇಂಟರ್ನೆಟ್ ಬಳಕೆದಾರರಲ್ಲಿ ಮುದ್ರಿತ ಪುಸ್ತಕ, ಪತ್ರಿಕೆ ಮತ್ತು ನಿಯತಕಾಲಿಕೆಗಳ ಖರೀದಿ ಡಿಜಿಟಲ್ ಪುಸ್ತಕ/ಆಡಿಯೋಬುಕ್ಗಳಿಗಿಂತ ಹೆಚ್ಚು ಜನಪ್ರಿಯವಾಗಿತ್ತು ಎಂದು Eurostat ವರದಿ ಮಾಡಿದೆ. ಹೀಗಾಗಿ ತಂತ್ರಜ್ಞಾನ ಬೆಳೆದರೂ ಪುಸ್ತಕದ ಮೇಲಿನ ಪ್ರೀತಿ ಸಂಪೂರ್ಣವಾಗಿ ಮಾಯವಾಗಿಲ್ಲ. ಇಂಟರ್ಲಾಕೆನ್ನ ಈ ಕೆಂಪು ಟೆಲಿಫೋನ್ ಬೂತ್ ನನ್ನನ್ನು ವಿಶೇಷವಾಗಿ ಆಕರ್ಷಿಸಿದ ಕಾರಣ, ಅದು ದೂರವಾಣಿ ಸಂಪರ್ಕದ ಹಳೆಯ ನೆನಪನ್ನು ಮಾತ್ರ ಉಳಿಸಿಕೊಂಡಿಲ್ಲ; ಅದನ್ನು ಜ್ಞಾನ ಸಂಪರ್ಕದ ಕೇಂದ್ರವನ್ನಾಗಿ ಮಾಡಿಕೊಂಡಿದೆ.
ನಾನು ಆ ಕೆಂಪು ಪುಸ್ತಕ ಪೆಟ್ಟಿಗೆಯ ಬಾಗಿಲನ್ನು ಮುಟ್ಟಿರುವುದು ಈ ಕ್ಷಣವೂ ಪ್ರವಾಸದ ಒಂದು ಅಪರೂಪದ ನೆನಪಾಗಿ ಉಳಿದಿದೆ. ಐಫೆಲ್ ಟವರ್, ಆಲ್ಪ್ಸ್ ಪರ್ವತಗಳು, ರೈನ್ ಜಲಪಾತಗಳಂತಹ ಭವ್ಯ ದೃಶ್ಯಗಳ ನಡುವೆ, ಒಂದು ಹಳೆಯ ದೂರವಾಣಿ ಪೆಟ್ಟಿಗೆಯೊಳಗೆ ಕಂಡ ಈ ಪುಟ್ಟ ಪುಸ್ತಕಾಲಯವೇ ಮನಸ್ಸಿಗೆ ಹೇಳಿದ ಸಂದೇಶ ದೊಡ್ಡದು, ಪ್ರವಾಸದಲ್ಲಿ ನಾವು ಸ್ಥಳಗಳನ್ನು ಮಾತ್ರ ನೋಡಬಾರದು; ಅಲ್ಲಿನ ಜನರ ಬದುಕು, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನೂ ಓದಬೇಕು.ಇಂಟರ್ಲಾಕೆನ್ನಲ್ಲಿ ಕಂಡ ಈ ‘ಪುಸ್ತಕ ಪೆಟ್ಟಿಗೆ’ ನಮ್ಮ ಯುರೋಪ್ ಪ್ರವಾಸದ ಸ್ಮರಣೆಯಲ್ಲಿ ಒಂದು ಪುಟ್ಟ ಕೆಂಪು ಪೆಟ್ಟಿಗೆಯಾದರೂ, ಅದರೊಳಗೆ ತುಂಬಿದ್ದದ್ದು ಪುಸ್ತಕಗಳಿಗಿಂತಲೂ ದೊಡ್ಡದಾದ ಓದು ಸಂಸ್ಕೃತಿಯ ಸಂದೇಶ.
