Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 7 : ಭಗತ್‌ ಸಿಂಗ್‌ನ ಆದರ್ಶವೇ ಸ್ಪೂರ್ತಿ; ಇದು ಎಚ್‌.ಕೆ.ಎಸ್‌. ಸುರ್ಜೀತ್‌...

ಸಂಸತ್ತಿನ ಪೂರ್ವಸೂರಿಗಳು – 7 : ಭಗತ್‌ ಸಿಂಗ್‌ನ ಆದರ್ಶವೇ ಸ್ಪೂರ್ತಿ; ಇದು ಎಚ್‌.ಕೆ.ಎಸ್‌. ಸುರ್ಜೀತ್‌ ಅವರ ಬದುಕು

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಏಳನೇ ಲೇಖನ

ದೇಶದ ಜಾತ್ಯಾತೀತ ತತ್ವಕ್ಕೆ ಕೋಮುವಾದಿ ಶಕ್ತಿಗಳ ಬೆದರಿಕೆಯನ್ನು ಗುರುತಿಸಿದ ಮೊದಲ ನಾಯಕರಲ್ಲಿ ಒಬ್ಬರಾಗಿದ್ದರು ಎಚ್‌.ಕೆ.ಎಸ್.‌ ಸುರ್ಜೀತ್.

1931 ರಲ್ಲಿ ಭಗತ್‌ ಸಿಂಗ್‌ ಮತ್ತು ಸಂಗಾತಿಗಳ ಬಲಿದಾನವು ದೇಶದಲ್ಲಿ ಸಾವಿರಾರು ಜನರ ಮೇಲೆ ಪ್ರಭಾವ ಬೀರಿತ್ತು. ಅವರಲ್ಲಿ ಒಬ್ಬರು ಹರ್ಕಿಶನ್‌ ಸಿಂಗ್‌ ಸುರ್ಜೀತ್.‌ ಅವರು ನಂತರದಲ್ಲಿ ಒಬ್ಬ ಕಟ್ಟಾ ರಾಷ್ಟ್ರೀಯವಾದಿಯಾಗಿಯೂ ರೈತ ನಾಯಕನಾಗಿಯೂ, ಕಮ್ಯುನಿಸ್ಟನಾಗಿಯೂ, ಕಿಂಗ್‌ ಮೇಕರ್ ಆಗಿಯೂ ಹೆಸರಾದವರು.

1916 ಮಾರ್ಚ್ 23 ರಂದು ಬಸ್ಸಿ ಜಾಟ್ ಸಿಖ್ ಕುಟುಂಬದಲ್ಲಿ ಜನಿಸಿದ ಸುರ್ಜೀತ್, ಚಿಕ್ಕ ವಯಸ್ಸಿನಿಂದಲೇ ಭಗತ್ ಸಿಂಗ್‌ನನ್ನು ಹಿಂಬಾಲಿಸಲು ಮತ್ತು ಬೆಂಬಲಿಸಲು ಪ್ರಾರಂಭಿಸಿದ್ದರು. 1930 ರಲ್ಲಿ ತನ್ನ 15ನೇ ವಯಸ್ಸಿಗೇ ಅವರು ಭಗತ್‌ ಸಿಂಗ್‌ ಸ್ಥಾಪಿಸಿದ್ದ ನೌಜವಾನ್‌ ಭಾರತ್‌ ಸಭಾ ಸೇರಿಕೊಂಡಿದ್ದರು.

1936 ರಲ್ಲಿ ಆಗಿನ್ನೂ ಚಿಕ್ಕ ಹುಡುಗನಾಗಿದ್ದಾಗಲೇ, ಆಗಿನ ಕಾಂಗ್ರೆಸ್‌ ಅಧ್ಯಕ್ಷ ಜವಾಹರಲಾಲ್‌ ನೆಹರೂ ಅವರ ಸಭೆ ನಡೆಸಲೆಂದು ತನ್ನ ಹಳ್ಳಿಯಲ್ಲಿ ಬೆಳೆದು ನಿಂತಿದ್ದ ಸುಮಾರು ಎರಡು ಎಕರೆಯಷ್ಟು ಮೆಕ್ಕೆಜೋಳವನ್ನು ನಾಶ ಮಾಡಿ ಮೈದಾನ ಮಾಡಿಕೊಟ್ಟಿದ್ದರು. ನೆಹರೂ ವಿರೋಧಿಗಳು ಸಭೆ ನಡೆಯದಂತೆ ತಡೆಯಲು ಪ್ರಯತ್ನಿಸುತ್ತಿದ್ದ ಕಾರಣ ಸುರ್ಜೀತ್‌ ಈ ನಿರ್ಧಾರ ತಳೆದಿದ್ದರು. ಆ ಸಭೆಗೆ ಆಗಿನ್ನೂ ಯುವತಿಯಾಗಿದ್ದ ಇಂದಿರಾ ಗಾಂಧಿ ಕೂಡ ಬಂದಿದ್ದರು.

ಭಗತ್ ಸಿಂಗ್‌ನಿಂದ ಪ್ರೇರಿತರಾಗಿದ್ದ ಸುರ್ಜೀತ್, ತನ್ನ ಹದಿಹರೆಯದಲ್ಲಿ, ಮಾರ್ಚ್ 1932 ರಲ್ಲಿ ಹೋಶಿಯಾರ್‌ಪುರದ ನ್ಯಾಯಾಲಯದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಆ ಕಾರಣಕ್ಕೆ ಪೊಲೀಸರು ಗುಂಡು ಹಾರಿಸಬೇಕಾಗಿ ಬಂದಿತ್ತು. ಆ ಗುಂಡಿನ ದಾಳಿಯಲ್ಲಿ ಅವರು ಬದುಕುಳಿದರಾದರೂ, ತನ್ನ ಕೃತ್ಯಕ್ಕಾಗಿ ಬಂಧಿಸಲ್ಪಟ್ಟು ಬಾಲಾಪರಾಧಿಗಳ ಸುಧಾರಣೆಗೆಂದು ಮೀಸಲಿರಿಸಿದ್ದ ಶಾಲೆಗೆ ಸೇರಿಸಲ್ಪಟ್ಟರು. ತನ್ನ ಈ ಧೀರತೆಯಿಂದಾಗಿ ಸುರ್ಜೀತ್‌ ಅವರಿಗೆ “ಲಂಡನ್‌ ತೋಡ್‌ ಸಿಂಗ್”‌ (ವಸಾಹತುಶಾಹಿಯ ಕೇಂದ್ರವಾದ ಲಂಡನ್ ನಗರವನ್ನು ಉರುಳಿಸುವವನು) ಎಂಬ ಅಡ್ಡ ಹೆಸರು ಬಿರುದಾಗಿ ಲಭಿಸಿತ್ತು.

ಅಲ್ಲಿಂದ ಬಿಡುಗಡೆಯಾದ ನಂತರ ಸುರ್ಜೀತ್‌ ಪಂಜಾಬಿನ ರಾಜಕಾರಣಕ್ಕೆ ಇಳಿಯುತ್ತಾರೆ. ಆರಂಭಿಕ ಕಮ್ಯುನಿಸ್ಟ್‌ ನೇತಾರರ ಜೊತೆಗೆ ಸಂಪರ್ಕ ಸಾಧಿಸುವ ಅವರು ತನ್ನ ಹದಿನೆಂಟನೇ ವಯಸ್ಸಿನಲ್ಲಿ ಕಮ್ಯುನಿಸಮ್ಮನ್ನು ಅಪ್ಪಿಕೊಳ್ಳುತ್ತಾರೆ. 1934 ರಲ್ಲಿ ಕಾಂಗ್ರೆಸ್‌ನ ನಂತರದ ಸ್ಥಾನದಲ್ಲಿ ಶಕ್ತಿಶಾಲಿ ಪಕ್ಷವಾಗಿದ್ದ ಭಾರತೀಯ ಕಮ್ಯುನಿಸ್ಟ್‌ ಪಕ್ಷವನ್ನು (ಸಿಪಿಐ) ಸೇರುತ್ತಾರೆ. ಮೂರು ದಶಕಗಳ ನಂತರದಲ್ಲಿ ಅವರು ಸಿಪಿಐಯಿಂದ ಬೇರ್ಪಟ್ಟು ಹೊಸ ಪಕ್ಷವಾದ ಸಿಪಿಐ(ಎಂ) ಸ್ಥಾಪಿಸಿದ ಒಂಭತ್ತು ಜನರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ.

ಅವರು ಕಮ್ಯುನಿಸ್ಟ್ ಪಕ್ಷದಲ್ಲಿದ್ದಾಗಲೂ, 1935 ರಲ್ಲಿ ಕಾಂಗ್ರೆಸ್ ಸೋಷ್ಯಲಿಸ್ಟ್ ಪಕ್ಷದಲ್ಲಿ ಸದಸ್ಯರಾಗುತ್ತಾರೆ. 1938 ರಲ್ಲಿ ಪಂಜಾಬ್ ರಾಜ್ಯ ಕಿಸಾನ್ ಸಭಾದ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ಆದರೆ ಅದೇ ವರ್ಷ, ಅವರನ್ನು ಪಂಜಾಬ್‌ನಿಂದ ಗಡೀಪಾರು ಮಾಡಲಾಗುತ್ತದೆ. ಅಲ್ಲಿಂದ ಅವರು ಉತ್ತರ ಪ್ರದೇಶದ ಸಹರಾನ್‌ಪುರಕ್ಕೆ ತಲುಪುತ್ತಾರೆ. ಅಲ್ಲಿ ಚಿಂಗಾರಿ ಮತ್ತು ನಂತರ ದುಃಖಿ ದುನಿಯಾ ಎಂಬ ಮಾಸ ಪತ್ರಿಕೆಗಳನ್ನು ಪ್ರಾರಂಭಿಸುತ್ತಾರೆ.

1940 ರಲ್ಲಿ, ಎರಡನೇ ಮಹಾಯುದ್ಧದ ಕಾಲದಲ್ಲಿ ಸುರ್ಜೀತ್ ಭೂಗತರಾಗಿದ್ದಾಗ ಅವರನ್ನು ಬಂಧಿಸಲಾಗುತ್ತದೆ. ಅವರನ್ನು ಲಾಹೋರಿನ ಕುಖ್ಯಾತ ಕೆಂಪು ಕೋಟೆಯಲ್ಲಿ ಬಂಧಿಸಿಡಲಾಗಿತ್ತು. ಮೂರು ತಿಂಗಳ ಕಾಲ ಭಯಾನಕ ಪರಿಸ್ಥಿತಿಯಲ್ಲಿ ಏಕಾಂತ ಬಂಧನವನ್ನು ಅವರು ಅನುಭವಿಸಿದ್ದರು. ನಂತರ ಅವರನ್ನು ರಾಜಸ್ಥಾನದ ಡಿಯೋಲಿ ಡಿಟೆನ್ಷನ್‌ ಕ್ಯಾಂಪ್‌ ಜೈಲಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅವರು 1944 ರ ತನಕ ಕಳೆದಿದ್ದರು.

1947 ರಲ್ಲಿ ಭಾರತ ಸ್ವತಂತ್ರವಾಗುವಾಗ ಅವರು ಸಿಪಿಐ ಪಕ್ಷದ ಪಂಜಾಬ್‌ ರಾಜ್ಯ ಕಾರ್ಯದರ್ಶಿಯಾಗಿದ್ದರು. ವಿಭಜನೆಯ ಕಾಲದಲ್ಲಿ, ಹಿಂಸಾಚಾರದಲ್ಲಿ ಮುಳುಗಿದ್ದ ಪಂಜಾಬ್‌ ಪ್ರಾಂತ್ಯದಲ್ಲಿ ಕೋಮು ಸಾಮರಸ್ಯಕ್ಕಾಗಿ ಅವರು ಅವಿಶ್ರಾಂತ ಕೆಲಸ ಮಾಡಿದ್ದರು.

ಸ್ವಾತಂತ್ರ್ಯಾ ನಂತರ ಮತ್ತೆ ಕಮ್ಯುನಿಸ್ಟ್‌ ಪಕ್ಷವನ್ನು ನಿಷೇಧಿಸಿದ ಕಾರಣದಿಂದ ಸುರ್ಜೀತ್‌ ಪುನಹ ನಾಲ್ಕು ವರ್ಷಗಳ ಕಾಲ ಭೂಗತರಾಗಬೇಕಾಗಿ ಬರುತ್ತದೆ. ಆ ನಂತರ ಅವರು ಪಂಜಾಬಿನಲ್ಲಿ ರೈತರನ್ನು ಸಂಘಟಿಸುವ ಮೂಲಕ ಮತ್ತೆ ತನ್ನ ಛಾಪು ಮೂಡಿಸುತ್ತಾರೆ. ಪ್ರಭಾವಶಾಲಿಯಾದ ಅಖಿಲ ಭಾರತ ಕಿಸಾನ್‌ ಸಭಾದ ಅಧ್ಯಕ್ಷರೂ ಆಗುತ್ತಾರೆ. ಕೃಷಿ ಕಾರ್ಮಿಕರ ಸಂಘದಲ್ಲೂ ಅವರು ಕೆಲಸ ಮಾಡುತ್ತಾರೆ.

1959 ರಲ್ಲಿ ಪಂಜಾಬಿನಲ್ಲಿ ನಡೆದ ಐತಿಹಾಸಿಕ “ಪ್ರಗತಿ ಸುಂಕ ವಿರೋಧಿ ಚಳುವಳಿ”ಯನ್ನು ಸುರ್ಜೀತ್‌ ಮುನ್ನಡೆಸುತ್ತಾರೆ. ರೈತರೊಂದಿಗೆ ಸೇರಿ ಅವರು ಮಾಡುತ್ತಿದ್ದ ಕೆಲಸಗಳ ಪರಿಣಾಮ ಅವರು ಅಖಿಲ ಭಾರತ ಕಿಸಾನ್‌ ಸಭಾದ ಕಾರ್ಯದರ್ಶಿಯಾಗಿಯೂ ನಂತರ ಅಧ್ಯಕ್ಷರಾಗಿಯೂ ಆಯ್ಕೆಯಾಗುತ್ತಾರೆ.

ಸುರ್ಜೀತ್‌ ಸಿಂಗ್‌ ಒಬ್ಬ ಅಪ್ಪಟ ಕಮ್ಯುನಿಸ್ಟ್‌ ಆಗಿದ್ದರು. 1954 ಜನವರಿಯಲ್ಲಿ ನಡೆದ ಪಕ್ಷದ ಮೂರನೇ ಕಾಂಗ್ರೆಸ್‌ನಲ್ಲಿ ಅವರು ಸಿಪಿಐನ ಕೇಂದ್ರ ಸಮಿತಿ ಮತ್ತು ಪಾಲಿಟ್‌ ಬ್ಯೂರೋಗೆ ಆಯ್ಕೆಯಾಗುತ್ತಾರೆ. 1964 ರಲ್ಲಿ ಪಕ್ಷ ವಿಭಜನೆಯಾಗುವವರೆಗೂ ಅವರು ಸಿಪಿಐನ ನಾಯಕತ್ವದಲ್ಲಿ ಮುಂದುವರಿದಿದ್ದರು. ಪರಿಷ್ಕರಣಾವಾದದ ವಿರುದ್ಧ ಗಟ್ಟಿಯಾಗಿ ನಿಂತ ಮತ್ತು ಸಿಪಿಐ(ಎಂ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗುಂಪನ್ನು ರೂಪಿಸಿದ ನಾಯಕರೂ ಹೌದು.

1964 ರಲ್ಲಿ ಅವರು ಏಳನೇ ಪಾರ್ಟಿ ಕಾಂಗ್ರೆಸ್‌ನಲ್ಲಿ ಸಿಪಿಐ(ಎಂ)ನ ಕೇಂದ್ರ ಸಮಿತಿ ಮತ್ತು ಪಾಲಿಟ್‌ ಬ್ಯೂರೋಗೆ ಆಯ್ಕೆಯಾಗುತ್ತಾರೆ. 2008 ರಲ್ಲಿ ನಡೆದ ಪಕ್ಷದ 19ನೇ ಕಾಂಗ್ರೆಸ್‌ ತನಕ ಅವರು ಆ ಸ್ಥಾನಗಳಲ್ಲಿ ಮುಂದುವರಿದಿದ್ದರು. ರೈತ ಚಳುವಳಿಯನ್ನು ಕಟ್ಟಿದ ಮತ್ತು ಆ ಮೂಲಕ ಪಕ್ಷವನ್ನು ಬೆಳೆಸಿದ ಅನುಭವಗಳ ಕಾರಣದಿಂದ, ಯಾವಾಗೆಲ್ಲ ಎಡ ಚಳುವಳಿಗಳಲ್ಲಿ ವಿಚಲನಗಳು ಉಂಟಾದವೋ ಆಗೆಲ್ಲ ತನ್ನ ಎಡಪಂಥೀಯ ಸ್ಥಾನಮಾನಗಳನ್ನು ಬಿಟ್ಟುಕೊಡಲು ಅವರು ಬಯಸುತ್ತಿದ್ದರು.

ಮೂರು ದಶಕಗಳ ಕಾಲ ಅವರು ಸಿಪಿಐ(ಎಂ) ಪಕ್ಷದ ಅಂತರಾಷ್ಟ್ರೀಯ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಜಾಗತಿಕ ಕಮ್ಯುನಿಸ್ಟ್‌ ಮತ್ತು ಪ್ರಗತಿಪರ ಪಕ್ಷಗಳೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಸಿಪಿಐ(ಎಂ) ಪಕ್ಷವು ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳು ಮತ್ತು ರಾಷ್ಟ್ರೀಯ ವಿಮೋಚನಾ ಹೋರಾಟಗಳ ವಿಚಾರದಲ್ಲಿ ದೃಢವಾದ ಒಗ್ಗಟ್ಟನ್ನು ಪ್ರದರ್ಶಿಸಿತು. ವಿಯೆಟ್ನಾಂ ವಿಮೋಚನಾ ಹೋರಾಟ, ಪ್ಯಾಲೆಸ್ತೀನ್‌ ಚಳುವಳಿ ಮತ್ತು ಕ್ಯೂಬಾ ಚಳುವಳಿಗಳಿಗೆ ಅವರು ನೀಡಿದ ಕೊಡುಗೆಗಳು ಅಪಾರ. ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳ ರಕ್ಷಣೆಗಾಗಿ ಅವರು ಕೆಲಸ ಮಾಡಿದರು. ಭಾರತವು ತನ್ನ ಅಲಿಪ್ತ ನೀತಿ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಅವರು ಅವಿಶ್ರಾಂತ ಶ್ರಮಿಸಿದರು. ರಾಜಕೀಯ ವಲಯದಲ್ಲಿ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಗೌರವಪೂರ್ವಕ ಸ್ವೀಕರಿಸಲಾಗುತ್ತಿತ್ತು.

ಪಕ್ಷದ ಕಾರ್ಯಕ್ರಮ ಮತ್ತು ನೀತಿಗಳಿಗೆ ಸುರ್ಜೀತ್‌ ಬಹಳ ದೊಡ್ಡ ಕೊಡುಗೆ ನೀಡಿದರು. ಪಕ್ಷದ ರಾಜಕೀಯ ತಂತ್ರಗಾರಿಕೆಯನ್ನು ತಾಜಾತನದೊಂದಿಗೆ ಜಾರಿಗೆ ತರಬಲ್ಲ ಒಬ್ಬ ನುರಿತ ರಾಜಕೀಯ ತಂತ್ರಗಾರರಾಗಿದ್ದರು ಅವರು.

ಸಂಸತ್ತಿನಲ್ಲಿ
1954 ರಿಂದ 1959 ರವರೆಗೆ ಸುರ್ಜೀತ್‌ ಅವರು ಸಂಯುಕ್ತ ಸಿಪಿಐ ಪಕ್ಷದಿಂದ ಪಂಜಾಬ್‌ ವಿಧಾನಸಭೆಯ ಸದಸ್ಯರಾಗಿದ್ದರು. 1967 ರಲ್ಲಿ ಸಿಪಿಐ(ಎಂ) ಪಕ್ಷದಿಂದ ಪಂಜಾಬ್‌ ವಿಧಾನಸಭೆಗೆ ಚುನಾಯಿತರಾಗುತ್ತಾರೆ. 1972 ರವರೆಗೆ ಅವರು ಆ ಸ್ಥಾನದಲ್ಲಿ ಮುಂದುವರಿದಿದ್ದರು. 1978 ಏಪ್ರಿಲ್‌ 10 ರಂದು ಅವರು ಸಿಪಿಐ(ಎಂ) ಅಭ್ಯರ್ಥಿಯಾಗಿ ಪಂಜಾಬಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1984 ಏಪ್ರಿಲ 9 ರವರೆಗೆ ಆರು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ್ದರು.

ರಾಷ್ಟ್ರೀಯ ಏಕತೆ ಮತ್ತು ವಿಭಜಕ ಶಕ್ತಿಗಳಿಂದ ದೇಶವನ್ನು ರಕ್ಷಿಸಲೆಂದು ನೀತಿಗಳನ್ನು ರೂಪಿಸುವಲ್ಲಿ ಸುರ್ಜೀತ್‌ ಸಿಂಗ್‌ ಬಹಳ ದೊಡ್ಡ ಕೊಡುಗೆ ನೀಡಿದ್ದರು. ಪಂಜಾಬಿನಲ್ಲಿ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಅವರು ಗಟ್ಟಿಯಾಗಿ ನಿಂತದ್ದು ಮತ್ತು ಉಗ್ರವಾದದ ವಿರುದ್ಧ ಸುಮಾರು 200ಕ್ಕೂ ಹೆಚ್ಚು ಕಮ್ಯುನಿಸ್ಟರು ನೀಡಿದ ಬಲಿದಾನವು ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ.

1950 ರ ದಶಕದ ಕೊನೆಯಿಂದ ಸುರ್ಜೀತ್‌ ಸಿಂಗ್‌ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ತನ್ನನ್ನು ತಾನು ತೊಡಗಿಸಿಕೊಂಡಿದ್ದರು. 1980 ರ ಅಸ್ಸಾಂ ಒಪ್ಪಂದವನ್ನು ರೂಪಿಸುವಲ್ಲಿಯೂ ಅವರು ದೊಡ್ಡ ಪಾತ್ರ ವಹಿಸಿದ್ದರು. ಸಾಮ್ರಾಜ್ಯಶಾಹಿ ವಿರೋಧಿ ಮತ್ತು ರಾಷ್ಟ್ರೀಯತಾವಾದಿ ಮೌಲ್ಯಗಳಿಂದ ತುಂಬಿದ್ದ ಸುರ್ಜೀತ್‌ ಅವರು ರಾಷ್ಟ್ರೀಯ ಏಕತೆಗೆ ಬಾಧಿಸುವ ಎಲ್ಲ ಸಮಸ್ಯೆಗಳನ್ನು ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳ ದೃಷ್ಟಿಕೋನದಿಂದಲೇ ನೋಡುತ್ತಿದ್ದರು.

ಕೋಮುವಾದದ ವಿರುದ್ಧ ಅವರದ್ದು ಜೀವನಮಾನದ ಹೋರಾಟವಾಗಿತ್ತು. ದೇಶದ ಜಾತ್ಯಾತೀತ ತತ್ವಕ್ಕೆ ಕೋಮುವಾದಿ ಶಕ್ತಿಗಳ ಬೆದರಿಕೆಯನ್ನು ಗುರುತಿಸಿದ ಮೊದಲ ನಾಯಕರಲ್ಲಿ ‌ಸುರ್ಜೀತ್ ಒಬ್ಬರಾಗಿದ್ದರು. 1989, 1996 ಮತ್ತು 2004 ರಲ್ಲಿ ಕೋಮುವಾದಿ ಶಕ್ತಿಗಳನ್ನು ಹೊರಗಿಟ್ಟುಕೊಂಡು ಸರಕಾರ ರಚಿಸುವಲ್ಲಿ ಸುರ್ಜೀತ್‌ ಸಿಂಗ್‌ ನಿರ್ಣಾಯಕ ಪಾತ್ರ ವಹಿಸಿದ್ದರು.

ಸುರ್ಜೀತ್‌ ಸಿಂಗ್‌ 1992 ರಿಂದ 2005 ರವರೆಗೆ ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1964 ರಿಂದ 2008 ರವರೆಗೆ ಪಕ್ಷದ ಪಾಲಿಟ್‌ ಬ್ಯೂರೋ ಸದಸ್ಯರೂ ಆಗಿದ್ದರು. ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಅವರು, ದೇಶದ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಅತ್ಯಂತ ಅಧಿಕೃತ ವಕ್ತಾರನಂತೆ ಕೆಲಸ ಮಾಡಿದ್ದರು.

ಅವರ ಸ್ನೇಹಮಯಿ ಸ್ವಭಾವ, ಒಡನಾಡಿಗಳ ಜೊತೆಗೆ ತಮಾಶೆಯಾಗಿರುವ ಗುಣ, ಅವರನ್ನು ಭಾರತದ ರಾಜಕಾರಣದ ಪ್ರಮುಖರೊಂದಿಗೆ ಸ್ನೇಹ ಸಾಧಿಸಿಕೊಳ್ಳಲು ಸಹಾಯ ಮಾಡಿತ್ತು. ಹಾಗಾಗಿಯೇ ದೇಶದಲ್ಲಿ ಸಮ್ಮಿಶ್ರ ರಾಜಕಾರಣದ ಯುಗ ಆರಂಭವಾದಾಗ, ಸಹಜವಾಗಿಯೇ ಅವರು ಪಕ್ಷಗಳ ನಡುವಿನ ರಾಜತಾಂತ್ರಿಕ ಕೊಂಡಿಯಾದರು. ಆದರೂ ಕೂಡ, 1996 ರಲ್ಲಿ ತನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಜ್ಯೋತಿ ಬಸು ಅವರನ್ನು ಪ್ರಧಾನ ಮಂತ್ರಿಯಾಗಿಸುವಂತೆ ಪಕ್ಷದ ಮನವೊಲಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಒಂದು ವೇಳೆ ಅವರು ಅಧಿಕಾರದ ಮದದಲ್ಲಿರುತ್ತಿದ್ದರೆ, ಸಿಪಿಐ(ಎಂ) ಈ ಐತಿಹಾಸಿಕ ಪ್ರಮಾದವನ್ನು ಮಾಡದಂತೆ ತಡೆಯುತ್ತಿದ್ದರೇನೋ.

ಸದಾ ಬಿಳಿ ರುಮಾಲು ತಲೆಗೆ ಸುತ್ತಿಕೊಂಡಿರುತ್ತಿದ್ದ ಸುರ್ಜೀತ್‌ ಸಿಂಗ್‌, ದೇಶವನ್ನು ಸುಮಾರು 1993 ರವರೆಗೆ ಒಂದು ದಶಕ ಕಾಲ ಕಾಡಿದ ರಕ್ತಸಿಕ್ತ ಅಧ್ಯಾಯದ ಸಿಖ್‌ ಪ್ರತ್ಯೇಕತಾವಾದಿ ಹೋರಾಟವನ್ನು ತೀವ್ರವಾಗಿ ವಿರೋಧಿಸಿದ್ದರು. ನಾಸ್ತಿಕರಾಗಿದ್ದ ಅವರು ಸ್ಪಾರ್ಟನ್‌ ಜೀವನ ಶೈಲಿಯನ್ನು ನಡೆಸುತ್ತಿದ್ದರು. ಸರಳ ಮತ್ತು ಕೆಲವೊಮ್ಮೆ ಸುಕ್ಕುಗಟ್ಟಿದ ಬಟ್ಟೆಗಳನ್ನೇ ಧರಿಸುತ್ತಿದ್ದರು. ಆದರೂ ಅವರು ಕಿಂಗ್‌ ಮೇಕರ್‌ ಎಂದು ಗುರುತಿಸಿಕೊಂಡರು. ಪ್ರಧಾನಮಂತ್ರಿಗಳನ್ನು, ಮುಖ್ಯಮಂತ್ರಿಗಳನ್ನು, ರಾಜ್ಯಪಾಲರನ್ನು, ಅಧಿಕಾರಿಗಳನ್ನು ಮತ್ತು ಈಗ ಪಕ್ಷವನ್ನು ಮುನ್ನಡೆಸುತ್ತಿರುವ ಯುವ ಸಂಗಾತಿಗಳನ್ನು ತಯಾರು ಮಾಡಿದ ವ್ಯಕ್ತಿ ಸುರ್ಜೀತ್‌ ಸಿಂಗ್.‌ ಹಲವು ಜನರಿಗೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಿದ್ದರು. ಪಕ್ಷದ ಹಣಕಾಸಿನ ಸಂಗ್ರಹವನ್ನೂ ಅವರು ನೋಡಿಕೊಳ್ಳುತ್ತಿದ್ದರು.

ಸ್ಟಾಲಿನ್‌ರನ್ನು ತನ್ನ ಗುರುವಾಗಿ ಸ್ವೀಕರಿಸಿದ್ದರೂ ಕೂಡ, ಚುನಾವಣಾ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿದ್ದರು. ಮಾಧ್ಯಮಗಳ ಜೊತೆಗೆ ಮಾತನಾಡಲು ಸದಾ ಸಿದ್ಧರಿರುತ್ತಿದ್ದರು. 2008 ಆಗಸ್ಟ್‌ 1 ರಂದು ಸುರ್ಜೀತ್‌ ಸಿಂಗ್‌ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.

ಅವರ ನಿಧನದ ಸಂದರ್ಭದಲ್ಲಿ ಸಿಪಿಐ(ಎಂ) ಪಾಲಿಟ್‌ ಬ್ಯೂರೋ ಈ ಕೆಳಗಿನ ಶ್ರದ್ಧಾಂಜಲಿ ಸಂದೇಶವನ್ನು ಬಿಡುಗಡೆ ಮಾಡಿತ್ತು.
“ಸಿಪಿಐ(ಎಂ) ಪಕ್ಷವನ್ನು ದೇಶದ ಅತಿ ದೊಡ್ಡ ಎಡ ಚಳುವಳಿಯನ್ನಾಗಿ ರೂಪಿಸುವಲ್ಲಿ ಸುರ್ಜೀತ್‌ ಸಿಂಗ್‌ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಸ್ವಯಂ ಕಲಿಕೆ ಮತ್ತು ತನ್ನ ಅನುಭವಗಳ ಮೂಲಕ ಮಾರ್ಕ್ಸ್‌ವಾದ-ಲೆನಿನ್‌ವಾದಗಳನ್ನು ಅಂತರ್ಗತ ಮಾಡಿಕೊಂಡವರು. ಮಾರ್ಕ್ಸ್‌ವಾದದ ತತ್ವಗಳಡಿಯಲ್ಲಿ ಪಕ್ಷದ ಸೈದ್ಧಾಂತಿಕ ಮತ್ತು ರಾಜಕೀಯ ನಿಲುವುಗಳನ್ನು ಒರೆಗಲ್ಲಿಗೆ ಹಚ್ಚಬೇಕಾದುದರ ಮಹತ್ವವನ್ನು ಅವರು ಸದಾ ಒತ್ತಿ ಹೇಳುತ್ತಿದ್ದರು. ಸಾವಿರದೊಂಬೈನೂರ ತೊಂಬತ್ತರ ದಶಕದಲ್ಲಿ ಸೋವಿಯತ್‌ ಪತನದ ನಂತರ, ಪಕ್ಷವು ಸರಿಯಾದ ದಾರಿಯಲ್ಲಿ ಮುನ್ನಡೆಯಲು ಅವರು ತಮ್ಮ ಅನುಭವಗಳ ಮೂಲಕ ಮಾರ್ಗದರ್ಶನ ನೀಡಿದರು. ಅವರ ನಿಧನದಿಂದ ಪಕ್ಷವು ಒಬ್ಬ ಅತ್ಯುತ್ತಮ ನಾಯಕನನ್ನು ಮತ್ತು ದೇಶವು ಎಡ ಮತ್ತು ಜಾತ್ಯಾತೀತೆಯ ಒಬ್ಬ ಅಧಿಕೃತ ಪ್ರತಿನಿಧಿಯನ್ನು ಕಳೆದುಕೊಂಡಿದೆ. ಹರಿಕಿಶನ್‌ ಸಿಂಗ್‌ ಸುರ್ಜೀತ್‌ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ತತ್ವ ಸಿದ್ಧಾಂತಗಳನ್ನು ಪಕ್ಷವು ಸದಾ ಪಾಲಿಸುತ್ತದೆ ಮತ್ತು ಎತ್ತಿ ಹಿಡಿಯುತ್ತದೆ. ಅಪ್ರತಿಮ ಕಮ್ಯುನಿಸ್ಟ್‌ ಮತ್ತು ಪ್ರೀತಿಯ ನಾಯಕನಿಗೆ ಪಾಲಿಟ್‌ ಬ್ಯೂರೋ ಗೌರವಾದರಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ.”
ಲ್ಯಾಂಡ್‌ ರಿಫಾರ್ಮ್ಸ್‌ ಇನ್‌ ಇಂಡಿಯಾ, ಹ್ಯಾಪೆನಿಂಗ್ಸ್‌ ಇನ್‌ ಪಂಜಾಬ್‌ ಮತ್ತು ಔಟ್‌ಲೈನ್‌ ಹಿಸ್ಟರಿ ಆಫ್‌ ಕಮ್ಯುನಿಸ್ಟ್‌ ಪಾರ್ಟಿ ಅವರು ಬರೆದ ಪುಸ್ತಕಗಳು. ಸಮಕಾಲೀನ ರಾಜಕಾರಣದ ಕುರಿತು ಅವರು ಬರೆದ ಕರಪತ್ರಗಳಿಗೆ ಲೆಕ್ಕವೇ ಇಲ್ಲ.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version