“..ಸಂಶೋಧಕ, ಸಂರಕ್ಷಕ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾಡೊಳಗೆ ಜಾಗ ತೆಗೆದುಕೊಳ್ಳುವುದು, ರೆಸಾರ್ಟ್ ನಡೆಸುವುದು, ಶೋಕಿಗಾಗಿ ಫೋಟೋ ವಿಡಿಯೋ ಮಾಡುವುದು.. ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರ ಸ್ಪಷ್ಟ ಉಲ್ಲಂಘನೆ..” ನಾಗರಾಜ್ ಕೂವೆ ಅವರ ಬರಹದಲ್ಲಿ
ಕಾಳಿಂಗ ಸರ್ಪ ಸಂಶೋಧಕ ಗೌರಿಶಂಕರ್ ಎಂಬ ವ್ಯಕ್ತಿ ಆಗುಂಬೆ ಸಮೀಪದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್ ನಡೆಸುತ್ತಿದ್ದಾನೆ. ಸಂಶೋಧನೆಯ ಮುಖವಾಡದಲ್ಲಿ ವಾಣಿಜ್ಯಿಕ ಚಟುವಟಿಕೆಗಳು ನಡೆಯುತ್ತಿದೆ. ಪರಿಸರ ಜಾಗೃತಿಯ ಹೆಸರಿನಲ್ಲಿ ದಿನವೊಂದಕ್ಕೆ 7 ರಿಂದ 8 ಸಾವಿರ ಚಾರ್ಜ್ ಮಾಡಿ ಕಾಡಿಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಸಂರಕ್ಷಿತ ಅರಣ್ಯದೊಳಗಿನ ಒಂದು ಹುಲ್ಲು ಕಡ್ಡಿಯನ್ನೂ ಮುಟ್ಟದಷ್ಟು ಕಠಿಣ ಕಾನೂನಿರುವಾಗ ಗುಂಪು ಕಟ್ಟಿಕೊಂಡು ರಾತ್ರಿ ಕಾಡು ಪ್ರವೇಶಕ್ಕೆ ಅನುಮತಿ ಎಲ್ಲಿಂದ ದೊರೆಯುತ್ತದೆ?
ಇಲ್ಲಿ ಮುಂಗಾರಿನ ವಾರಾಂತ್ಯಗಳಲ್ಲಿ Herp Tour ಹೆಸರಿನಲ್ಲಿ ಹಾವು, ಕಪ್ಪೆ, ಹಲ್ಲಿ, ಸರಿಸೃಪ ಇತ್ಯಾದಿಗಳನ್ನು ಕಾಡೊಳಗೆ ತೋರಿಸುವ ಚಟುವಟಿಕೆ ನಡೆಯುತ್ತಿದೆ. ಇಂತಹ ಕ್ಯಾಂಪ್ ಗಳಿಗೆ ಹಣವಿರುವವರು ದುಬಾರಿ ಕ್ಯಾಮೆರಾ, ಲೆನ್ಸ್, ಉಪಕರಣ ಗಳನ್ನು ಹೊತ್ತು ಬರುತ್ತಿದ್ದಾರೆ. ರಾತ್ರಿಯ ವೇಳೆ ಅಕ್ರಮವಾಗಿ ವನ್ಯಜೀವಿಗಳ ಛಾಯಾಗ್ರಹಣ, ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇವನ ಕಾಳಿಂಗ ಕೇರ್ ರೆಸಾರ್ಟ್ ಗೆ ಆಗಾಗ ಚಿತ್ರ ನಟ-ನಟಿಯರು, ಸೆಲೆಬ್ರಿಟಿಗಳು, ಪ್ರಭಾವಶಾಲಿ ವ್ಯಕ್ತಿಗಳು ಬರುತ್ತಾರೆ. ಅವರನ್ನು ಕಾಡೊಳಗೆ ಕರೆದುಕೊಂಡು ಹೋಗುತ್ತಾನೆ. ವನ್ಯಜೀವಿಗಳನ್ನು ಮುಟ್ಟುವ, ಫೋಟೋ ಕ್ಲಿಕ್ಕಿಸುವ, ವಿಡಿಯೋ ಮಾಡುವ ಕೆಲಸಗಳು, ಕೆಲವೊಮ್ಮೆ ಶಿಕಾರಿ ಕೂಡಾ ನಡೆಯುತ್ತದೆ ಎಂಬ ಮಾಹಿತಿಯಿದೆ.
ಕಾಳಿಂಗಗಳ ಮೊಟ್ಟೆಗಳನ್ನು ಕೃತಕವಾಗಿ ಮಾರಿ ಮಾಡಿ ಈತ ಪರಿಸರ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾನೆ. ಜೊತೆಗೆ ಕಾಳಿಂಗದ ವಿಷ ಸಂಗ್ರಹದ ಆರೋಪ ಕೂಡಾ ಈತನ ಮೇಲಿದೆ. ಅಲ್ಲದೆ ಕಾಡೊಳಗೆ ಅಕ್ರಮ ರಸ್ತೆ ನಿರ್ಮಾಣ, ವಾಹನ ಪ್ರವೇಶ, ಕ್ಯಾಮೆರಾ ಅಳವಡಿಕೆ ಇತ್ಯಾದಿ ನಡೆಯುತ್ತಿದೆ.
ಈತನು Instagram ನಲ್ಲಿ ಜಾಗೃತಿ ಹೆಸರಿನಲ್ಲಿ ಬೇರೆ ಬೇರೆ ವನ್ಯಜೀವಿಗಳನ್ನು ಮುಟ್ಟುವ, ಅವುಗಳಿಗೆ ಹಿಂಸೆ ಮಾಡುವ ಕೆಲಸಗಳಲ್ಲಿ ನಿರತರಾಗಿದ್ದಾನೆ. ಅಂತರ್ಜಾಲದ ಎಲ್ಲೆಡೆ ಈತ ಮಾಡಿದ ಕಾಳಿಂಗಗಳ ವಿಡಿಯೋ, ಅದರೆದುರಿಗೆ ಈತನ ಫೋಟೋ ಕಂಡುಬರುತ್ತದೆ. ಸಂರಕ್ಷಣೆಯ ಹೆಸರಿನಲ್ಲಿ ವನ್ಯಜೀವಿಯೊಂದನ್ನು ತನ್ನ ರೆಸಾರ್ಟ್ ನ ಪ್ರಮೋಷನ್ ಗೆ ಬಳಸಿಕೊಳ್ಳುತ್ತಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರ ಸ್ಪಷ್ಟ ಉಲ್ಲಂಘನೆ ಇದು.

ಸಂಶೋಧಕ, ಸಂರಕ್ಷಕ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾಡೊಳಗೆ ಜಾಗ ತೆಗೆದುಕೊಳ್ಳುವುದು, ರೆಸಾರ್ಟ್ ನಡೆಸುವುದು, ಶೋಕಿಗಾಗಿ ಫೋಟೋ ವಿಡಿಯೋ ಮಾಡುವುದು, ಅಕ್ರಮವಾಗಿ ಕಾಡು ಪ್ರವೇಶಿಸುವುದು ಅನೈತಿಕ ಮತ್ತು ಅಕ್ಷಮ್ಯ. ಈ ಮಹಾನ್ ಬುದ್ಧಿವಂತರೆಲ್ಲಾ ಈ ನೆಲದ ಕಾನೂನುಗಳನ್ನು ಮೊದಲು ಗೌರವಿಸಲಿ. ಇಷ್ಟೆಲ್ಲಾ ಆಗುತ್ತಿದ್ದರೂ ಅರಣ್ಯ ಇಲಾಖೆ ಸುಮ್ಮನೆ ಕುಳಿತಿರುವುದೇಕೆ? ಕಾನೂನುಗಳು ಬಡರೈತರಿಗೆ ಮಾತ್ರ ಅನ್ವಯವಾಗುವುದೇ?
ದುರಾದೃಷ್ಟವಶಾತ್ ಇವತ್ತು ಗೌರಿಶಂಕರ್ ನನ್ನು ಮಹಾನ್ ಸಂರಕ್ಷಕ ಎಂದು ಹಲವರು ಕೊಂಡಾಡುತ್ತಿದ್ದಾರೆ. ಅವನ ಅಸೂಕ್ಷ್ಮ ನಡವಳಿಕೆಗಳನ್ನು ಸಂರಕ್ಷಣೆ ಎಂದು ಹಲವರು ಭಾವಿಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳೆಲ್ಲಾ ನೆಲಮೂಲದಿಂದ ದೂರವಿರುವವರಿಗೆ ಕಾಳಜಿಯಂತೆ ಭಾಸವಾಗುತ್ತಿದೆ. ಜಾಲತಾಣಗಳ ಭರಾಟೆಯಲ್ಲಿ ನಮ್ಮೊಳಗಿನ ಪರಿಸರ ಸೂಕ್ಷ್ಮತೆ ಉಸಿರು ಕಳೆದುಕೊಂಡಿದೆ.
ಅರಣ್ಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಈತನ ಮೇಲೆ ಕೇಸು ದಾಖಲಿಸಲಿ. ಈತನಿಗೆ ಸಂಶೋಧನೆ ಹೆಸರಿನಲ್ಲಿ ಕೊಟ್ಟಿರುವ ಪರವಾನಗಿ ರದ್ದಾಗಲಿ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಕಠಿಣ ಶಿಕ್ಷೆಯಾಗಲಿ. ಹಿಡಿದು ಹಿಂಸಿಸಿ ಉಳಿಸುವುದೇನಿದೆ?
ಗೌರಿಶಂಕರ್ ರೆಸಾರ್ಟ್ ಪ್ರಮೋಷನ್ಗೆ ಕಾಳಿಂಗಗಳ ಬಳಕೆ
2021 ರ ಮೇ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸ ಸಮೀಪದ ಬಿಳಗಲಿ ಊರಿನಲ್ಲಿ ಕಾಳಿಂಗ ಸರ್ಪದ ಮೊಟ್ಟೆಗಳು ಅಶೋಕ್ ಗೌಡ ಎಂಬುವವರ ತೋಟದಲ್ಲಿ ಸಿಗುತ್ತದೆ. ಅಲ್ಲಿ ಸಿಕ್ಕಿದ 38 ಮೊಟ್ಟೆಗಳನ್ನು ಉರಗ ಸಂಶೋಧಕ ಗೌರಿಶಂಕರ್ ಅರಣ್ಯ ಇಲಾಖೆಯ ಸಮ್ಮುಖದಲ್ಲಿಯೇ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಾನೆ. ವನ್ಯಜೀವಿ ಸಂರಕ್ಷಣೆಯ ಯಾವ ನಿಯಮದಡಿ ಇದಕ್ಕೆ ಅವಕಾಶ ಕೊಡಲಾಗಿದೆ ಎಂಬುದು ಇಲ್ಲಿ ಪ್ರಶ್ನಾರ್ಹ.
ಆಶ್ಚರ್ಯಕರವೆಂದರೆ ಬಿಳಗಲಿಯಿಂದ ಸುಮಾರು 100 ಕಿಲೋಮೀಟರ್ ದೂರವಿರುವ ಶಿವಮೊಗ್ಗ ಜಿಲ್ಲೆಯ ಆಗುಂಬೆಗೆ ಈತ ಮೊಟ್ಟೆ ಸಾಗಿಸುತ್ತಾನೆ. ಇದಂತೂ ಅಕ್ಷಮ್ಯ. ನಂತರ ಇವನೇ ಹೇಳಿಕೊಂಡಂತೆ 85 ದಿನ ಆ ಮೊಟ್ಟೆಗಳನ್ನು ಕೃತಕ ಕಾವಿನಲ್ಲಿ ಇರಿಸಲಾಗುತ್ತದೆ. ಕೊನೆಗೆ 30 ಮರಿಗಳು ಹೊರ ಬರುತ್ತವೆ. ಅದನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬಿಡಲಾಗುತ್ತದೆ. ಈತನೊಂದಿಗೆ ಅರಣ್ಯ ಸಂರಕ್ಷಣಾ ಕಾಯ್ದೆಗಳನ್ನೆಲ್ಲಾ ಬಲ್ಲ ಅರಣ್ಯಾಧಿಕಾರಿಗಳೂ ಇರುತ್ತಾರೆ. ಅವರ ಸಹಕಾರದಲ್ಲಿಯೇ ಈ ಪರಿಸರ ನಿಯಮಗಳಿಗೆ ವಿರುದ್ಧವಾದ ಕೆಲಸ ನಡೆಯುತ್ತದೆ. ಭಾವುಕತೆಯ ಅಬ್ಬರದಲ್ಲಿ ನೈತಿಕತೆ, ನಿಯಮಗಳು ಮಾಯವಾಗುತ್ತದೆ.
ಗೌರಿಶಂಕರ್ ಗೆ ಕೃತಕವಾಗಿ ಹಾವು ಮರಿ ಮಾಡಲು ಯಾವ ನಿಯಮಗಳಡಿಯಲ್ಲಿ ಅವಕಾಶ ಕೊಡಲಾಯಿತು? IUCN ಕೆಂಪು ಪಟ್ಟಿ ಪ್ರಕಾರ ಕಾಳಿಂಗ ಸರ್ಪ Vulnerable. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪರಿಚ್ಛೇದ II ರ ಅಡಿಯಲ್ಲಿ ಬರುವ ಜೀವಿ. ಇದನ್ನು ಕೊಲ್ಲುವುದು, ಕಳ್ಳ ಸಾಗಾಟ, ಹಿಂಸಿಸುವುದು ಇತ್ಯಾದಿ ಘೋರ ಅಪರಾಧ. ಇದನ್ನು ಕೃತಕವಾಗಿ ಮರಿ ಮಾಡಲು ವನ್ಯಜೀವಿ ಕಾಯ್ದೆಯಡಿ ಅವಕಾಶ ಎಲ್ಲಿದೆ? ಇನ್ನು , ಬಿಳಗಲಿಯಲ್ಲಿ ಸಿಕ್ಕ ಮೊಟ್ಟೆಗಳನ್ನು ಇನ್ನೆಲ್ಲೋ ಮರಿ ಮಾಡಿ ಬಿಡಲು ಏನಕ್ಕೆ ಅವಕಾಶ ನೀಡಲಾಯಿತು? ಕಾನೂನುಗಳನ್ನೇನು ಅಧಿಕಾರಿಗಳು ಮನಸ್ಸಿಗೆ ಬಂದಂತೆ ಬಳಸಿಕೊಳ್ಳಬಹುದೇ?
ಕಾಳಿಂಗ ಇಟ್ಟಿರುವ ಮೊಟ್ಟೆಗಳಲ್ಲಿ ಎಷ್ಟು ಮರಿಯಾಗಿ ಹೊರ ಬರಬೇಕೆಂದು ಪ್ರಕೃತಿಯೇ ನಿರ್ಧರಿಸುತ್ತದೆ. ಹೊರ ಬಂದ ಮರಿಗಳಲ್ಲಿ ಹೆಚ್ಚಿನವು ಕೆಂಬೂತ, ನವಿಲು ಇತ್ಯಾದಿಗಳ ಆಹಾರವಾಗಿ ಕೊನೆಗೆ ಉಳಿಯುವುದು ಒಂದೋ ಎರಡೋ ಅಷ್ಟೇ. ಜೀವ ಜಗತ್ತಿನ ನಿಯಮದಂತೆ ಪ್ರಬಲವಾದುದು ಉಳಿಯುತ್ತದೆ. ಆ ಕಾಳಿಂಗ ಏಳೆಂಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಿಕೊಂಡು ಇತರ ಹಾವುಗಳನ್ನು ತಿಂದು ಅವುಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ಇವರ ಅವೈಜ್ಞಾನಿಕ ಚಟುವಟಿಕೆಗಳು ಈ ನಿಸರ್ಗ ನಿಯಮಕ್ಕೆ ಸಂಪೂರ್ಣ ವಿರುದ್ಧ. ಹೀಗೆ ಬಿಟ್ಟ ಕಾಳಿಂಗಗಳ ಆಹಾರಕ್ಕೆ ಬೇಕಾದ ನಾಗರಹಾವು, ಕೇರೆಹಾವು, ಹೆಬ್ಬಾವು, ಉಡಗಳು ಇತ್ಯಾದಿಯನ್ನು ಕೃತಕವಾಗಿ ಸೃಷ್ಟಿಸುತ್ತಾರೋ? ಕನಿಷ್ಠ ಪರಿಸರ ಸತ್ಯವನ್ನು ಅರಿಯದ ಇವರ ಸಂಶೋಧನೆಗೆ ಅರ್ಥವಿದೆಯೇ? ಇದೊಂದು ಶೋಕಿ ಆಗಿಲ್ಲವೇ?ನೈತಿಕತೆ ಬೇಡವೇ?
ಅವತ್ತು ಬಿಟ್ಟ ಮರಿಗಳ ಕಥೆ ಇವತ್ತು ಏನಾಗಿದೆ? ಮಳೆ ಕಾಡುಗಳ ಪರಿಸರ ವ್ಯವಸ್ಥೆಯಲ್ಲಿ ಸಂರಕ್ಷಣೆಯ ಹೆಸರಿನಲ್ಲಿ ಅನಗತ್ಯ ಹಸ್ತಕ್ಷೇಪ ಏನಕ್ಕೆ? ಈ ಕೃತ್ಯ ನಡೆಸಿದ ಗೌರಿಶಂಕರ್, ಅವಕಾಶ ಮಾಡಿಕೊಟ್ಟ ಅರಣ್ಯಾಧಿಕಾರಿಗಳು ಎಲ್ಲರ ಮೇಲೂ ತನಿಖೆ ನಡೆದು ಕಠಿಣ ಕ್ರಮವಾಗಲಿ.
ಗೌರಿಶಂಕರ್ ತಾವು ಕಾಳಿಂಗಗಳನ್ನು ಕೃತಕವಾಗಿ ಮರಿ ಮಾಡಿದ್ದು, ಹಿಡಿದಿದ್ದು, ಕಾಡಿಗೆ ಬಿಟ್ಟಿದ್ದೂ ಎಲ್ಲವನ್ನೂ ವಿಡಿಯೋ ಮಾಡಿಕೊಂಡು, ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರೆಸಾರ್ಟ್ ನ ಪ್ರಮೋಷನ್ ನಲ್ಲಿ ತೊಡಗಿದ್ದಾರೆ. ವಾರಾಂತ್ಯಗಳಲ್ಲಿ ಕ್ಯಾಂಪ್ ಹೆಸರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಅಕ್ರಮ ಕಾಡು ಪ್ರವೇಶ ಮಾಡುತ್ತಾರೆ. ಫೋಟೋ, ವಿಡಿಯೋ ಚಿತ್ರೀಕರಣ ಮಾಡುತ್ತಾರೆ. ಇಷ್ಟಾಗಿಯೂ ಅರಣ್ಯ ಇಲಾಖೆ ಸುಮ್ಮನಿದೆ. ಇಂತಹವರಿಗೆಲ್ಲಾ ವನ್ಯಜೀವಿ ಸಂರಕ್ಷಣೆ ಹಣ ಮಾಡುವ ಒಂದು ದಂಧೆಯಾಗಿದೆ. ಕಾಳಿಂಗ ಸಂರಕ್ಷಣೆಯ ಮುಖವಾಡ ತೊಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಇಂತಹವರು ಮಾಡುವ ಕೆಲವು ವಿಡಿಯೋಗಳು ಯುವ ಜನರಲ್ಲಿ ಸಂರಕ್ಷಣೆ ಬಗೆಗೆ ತಪ್ಪು ಕಲ್ಪನೆ ಹುಟ್ಟು ಹಾಕುತ್ತಿದೆ. ಸಂರಕ್ಷಣೆ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಇಂತಹವರ ಉದ್ಧಟತನಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು.
ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದ ಬಗೆಗೆ ಸಮಗ್ರ ತನಿಖೆ ನಡೆಯಲಿ
ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳು ನಡೆಸುತ್ತಿರುವ ಚಟುವಟಿಕೆಗಳ ಬಗೆಗೆ ವಿರೋಧ, ಅವರ ನಡೆಗಳ ಬಗೆಗೆ ಸಂಶಯ, ಅವರ ನಿಗೂಢತೆಗಳ ಬಗೆಗೆ ಶಂಕೆ ಮೊದಲಿನಿಂದಲೂ ಮಲೆನಾಡಿನಲ್ಲಿ ದೊಡ್ಡದಾಗಿಯೇ ಇದೆ.
ಸಂಶೋಧಕರು ಎಲ್ಲೋ ಹಾವು ಹಿಡಿದು ಇನ್ನೆಲ್ಲೋ ಬಿಟ್ಟಾಗ, ರೇಡಿಯೋ ಟೆಲಿಮಿಟ್ರಿ ಉಪಕರಣ ಹಾಕಿ ಕಾಳಿಂಗ ಸತ್ತಾಗ, ಮೊಟ್ಟೆಗಳಿಗೆ ಕೃತಕ ಕಾವು ಕೊಟ್ಟು ಮರಿ ಮಾಡಿ ಕಾಡಿಗೆ ಬಿಟ್ಟಾಗ, ಕ್ರಮೇಣ ಕೇರೆ ಹಾವು ನಾಗರಹಾವುಗಳ ಸಂಖ್ಯೆ ಕ್ಷೀಣಿಸಿದಾಗ ಸ್ಥಳೀಯರು ಇವರ ಚಟುವಟಿಕೆಗಳ ಬಗೆಗೆ ಸಂಶಯ ಎತ್ತಿದ್ದಾರೆ.
ಮೊದಲೆಲ್ಲಾ ಅಪರೂಪಕ್ಕೆ ಕಾಣಿಸುತ್ತಿದ್ದ ಕಾಳಿಂಗಗಳು ಇವರ ಪ್ರಯೋಗಗಳ ನಂತರವೇ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿರುವುದು ಏನೋ ಆಗಿದೆ ಎಂಬ ಗುಮಾನಿ ಎಬ್ಬಿಸಿದೆ. ಇವರು ಕಾಳಿಂಗದ ವಿಷ ಸಂಗ್ರಹ ಮಾಡುತ್ತಾರೆ ಎಂಬ ಶಂಕೆ ಎಲ್ಲೆಡೆ ಇದೆ.
ಸಂಶೋಧನೆ ಹೆಸರಿನಲ್ಲಿ ರೆಸಾರ್ಟ್ ನಡೆಸೋದು, ಅಧ್ಯಯನದ ಹೆಸರಿನಲ್ಲಿ ಕಾಡಿಗೆ ಅಕ್ರಮ ಪ್ರವೇಶ, ಕಾಳಿಂಗದ ಫೋಟೋ ವಿಡಿಯೋ ಚಿತ್ರೀಕರಣ ಇದರ ಬಗೆಗೆಲ್ಲಾ ಅಸಹನೆಯಿದೆ.
ಇವರುಗಳ ಐಷಾರಾಮಿ ಜೀವನ ಶೈಲಿ, ಲಕ್ಷಾಂತರ ಬೆಲೆಯ ವಾಹನಗಳು, ಕ್ಯಾಮೆರಾ, ಲೆನ್ಸ್, ವೈಜ್ಞಾನಿಕ ಉಪಕರಣಗಳು ಇವೆಲ್ಲ ಸ್ಥಳೀಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಇವರಿಗೆಲ್ಲಾ ಕಾಡೊಳಗೆ ಪ್ರವೇಶಿಸಲು ಅನುಮತಿ ಹೇಗೆ ಎಂದು ಹಳ್ಳಿಗರನ್ನು ಕಾಡಿದೆ.
ಒಟ್ಟಾರೆ ಈ ಎಲ್ಲಾ ಅಂಶಗಳ ಕುರಿತು ತನಿಖೆಯೊಂದು ನಡೆಯಬೇಕೆಂಬುದು ಮಲೆನಾಡಿನ ರೈತಾಪಿ ವರ್ಗದ ಒಂದು ದಶಕದ ಆಶಯ ಮತ್ತು ಬೇಡಿಕೆ. ಅಂತೂ ಈಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ನೇತೃತ್ವದಲ್ಲಿ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಸ್ವಾಗತಾರ್ಹ ನಡೆಯಿದು. ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಲಿ, ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಲಿ, ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿ ಎಂಬುದು ಎಲ್ಲರ ಆಶಯ.