ಚಾಮರಾಜನಗರ: ಭಾರತ ಐಕ್ಯತಾ ಯಾತ್ರೆ ಬಿಜೆಪಿ ಹಾಗೂ ಆರ್ ಎಸ್ಎಸ್ ಗೆ ಚಿಂತೆಗೀಡು ಮಾಡಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಭಾರತ ಐಕ್ಯತಾ ಯಾತ್ರೆಯ 23ನೇ ದಿನ. ಈ ಯಾತ್ರೆ ತಮಿಳುನಾಡಿನಲ್ಲಿ 62 ಕಿ.ಮೀ, ಕೇರಳದಲ್ಲಿ 355 ಕಿ.ಮೀ ಕ್ರಮಿಸಿ ಈಗ ಕರ್ನಾಟಕ ರಾಜ್ಯದಲ್ಲಿ ಮುಂದಿನ 21 ದಿನಗಳ ಕಾಲ 511 ಕಿ.ಮೀ ಕ್ರಮಿಸಲು ಪಾದಯಾತ್ರೆ ಆರಂಭವಾಗಿದೆ ಎಂದು ಹೇಳಿದರು.
ಸೆ.7ರಂದು ಈ ಯಾತ್ರೆ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು, ಎರಡು ದಿನ ಮುಂಚಿತವಾಗಿ ಸೆ.5ರಂದು ರಾಹುಲ್ ಗಾಂಧಿ ಅವರು ಅಹಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿಂದ ಕನ್ಯಾಕುಮಾರಿಗೆ ತೆರೆಳಿ ವಿವೇಕಾನಂದ ಸ್ಮಾರಕ, ಗಾಂಧಿ ಮಂಟಪ, ಕಾಮರಾಜ ಮಂಟಪಕ್ಕೆ ಭೇಟಿ ನೀಡಿ ಈ ಯಾತ್ರೆ ಆರಂಭಿಸಿದರು. ಈ ಯಾತ್ರೆಯಲ್ಲಿ ಭಾಗಿಯಾಗಿರುವ ಯಾತ್ರಿಗಳ ಪೈಕಿ 1/3 ರಷ್ಟು ಯಾತ್ರಿಗಳು ಮಹಿಳೆಯರು, ಈ ಯಾತ್ರಿಗಳ ಸರಾಸರಿ ವಯೋಮಾನ 38 ವರ್ಷ. ರಾಹುಲ್ ಗಾಂಧಿ ಅವರು ಈ ಯಾತ್ರೆಯ ಪ್ರಮುಖ ನೇತೃತ್ವ ವಹಿಸಿದ್ದು, ಯಾತ್ರೆ ಇದುವರೆಗೂ ದಿನನಿತ್ಯ ಸರಾಸರಿ 21 ಕಿ.ಮೀ ದೂರದಷ್ಟು ಸಾಗುತ್ತಿದೆ ಎಂದು ತಿಳಿಸಿದರು.
ಈ ಯಾತ್ರೆ ಮಾಡಲು ಪ್ರಮುಖ ಕಾರಣ ಎಂದರೆ, ಮೋದಿ ಅವರ ನಾಯಕತ್ವದಲ್ಲಿ ಅವರ ಸಿದ್ಧಾಂತ, ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಬೆಲೆ ಏರಿಕೆ, ಆರ್ಥಕ ಅಸಮಾನತೆ, ಜಿಎಸ್ಟಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಇನ್ನು ಮೋದಿ ಅವರ ನಾಯಕತ್ವದಲ್ಲಿ ಸಾಮಾಜಿಕ ಧೃವೀಕರಣ ಹೆಚ್ಚುತ್ತಿದ್ದು, ಜಾತಿ, ಧರ್ಮ, ಭಾಷೆ, ಆಹಾರ, ಉಡುಗೆ ವಿಚಾರದಲ್ಲಿ ಸಮಾಜ ಒಡೆಯಲಾಗುತ್ತಿದೆ. ಕೇವಲ ಚುನಾವಣೆ ಗೆಲ್ಲಲು ಇವುಗಳನ್ನು ಮಾಡಲಾಗುತ್ತಿದೆ ಇದಕ್ಕೆ ಕರ್ನಾಟಕ ತಾಜಾ ಉದಾಹರಣೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.
ಇನ್ನು ಮೋದಿ ಆಡಳಿತದಲ್ಲಿ ರಾಜಕೀಯ ಅಧಿಕಾರ ಕೇಂದ್ರೀಕರಣಗೊಳ್ಳುತ್ತಿದ್ದು, ಸಂವಿಧಾನ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಸಂವಿಧಾನಿಕ ಸಂಸ್ಥೆಗಳು ದುರ್ಬಲಗೊಂಡಿದ್ದು, ಎಲ್ಲ ಆಡಳಿತ ಶಕ್ತಿಕೇಂದ್ರಗಳ ಓರ್ವ ವ್ಯಕ್ತಿ ನಿಯಂತ್ರಣದಲ್ಲಿದೆ. ಅವರು ಸರ್ವಜ್ಞಾನಿ, ಸ್ವರ್ವವ್ಯಾಪಿ, ಸರ್ವಶಕ್ತಿಮಾನವನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗಿಸಿದರು.
ರಾಜ್ಯದಳ ಅಧಿಕಾರ ಕಸಿಯಲಾಗಿದೆ. ರಾಜ್ಯಗಳು ಬೇಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ನೆರವು ಕೇವಲ ಪ್ರಧಾನಿಯ ಪ್ರಚಾರಕ್ಕಾಗಿ ಇದೆ. ಇದರಲ್ಲಿ ಪ್ರಧಾನಮಂತ್ರಿಗಳ ಭಾವಚಿತ್ರ ಇಲ್ಲವಾದರೆ ವಿತ್ತ ಸಚಿವರಿಗೆ ಕೋಪ ಬರುತ್ತದೆ. ಕಾಂಗ್ರೆಸ್ ಪಕ್ಷ ಭಾರತ ಜೋಡಿಸಿದರೆ, ಭಾರತವನ್ನು ಒಡೆಯುತ್ತಿರುವವರು ಮೋದಿ ಅವರ ಸಿದ್ಧಾಂತ, ಆಡಳಿತ. ಈ ಕಾರಣಗಳಿಂದಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆ ನಡೆಯುತ್ತಿದೆ. 12 ರಾಜ್ಯಗಳಲ್ಲಿ ಈ ಯಾತ್ರೆ ಸಾಗಲಿದ್ದು, ಹಲವು ರಾಜ್ಯಗಳಲ್ಲಿ ಈ ಯಾತ್ರೆ ಸಾಗದ ಕಾರಣ ಯಾತ್ರೆ ಸಾಗದ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಭಾರತ ಐಕ್ಯತಾ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು
ಭಾರತ ಜೋಡೋ ಯಾತ್ರೆ ಬಿಜೆಪಿ ಚಿತ್ತಗೆಡಿಸಿದ್ದು, ಬಿಜೆಪಿ ಸುಳ್ಳು ಸುದ್ದಿಗಳ ಮೂಲಕ ಈ ಯಾತ್ರೆಯನ್ನು ಟೀಕಿಸುತ್ತಿದೆ. ಬಿಜೆಪಿ ಹಾಗೂ ಆರ್ ಎಸ್ಎಸ್ ಗೆ ಚಿಂತೆಗೀಡು ಮಾಡಿದೆ. ಈ ಯಾತ್ರೆಯಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅವರಿಗೆ ಮನದಟ್ಟಾಗಿದೆ ಎಂದರು.
ರಾಹುಲ್ ಗಾಂಧಿ ಅವರು ಪ್ರತಿನಿತ್ಯ ನಾಗರೀಕ ಸಮಾಜಕ ಒಂದೊಂದು ವರ್ಗಗಳ ಜತೆ ಸಂವಾದ ನಡೆಸಲಿದ್ದಾರೆ. ಇಂದು ಅವರು ಆದಿವಾಸಿಗಳು ಹಾಗೂ ಕೋವಿಡ್ ಸಮಯದಲ್ಲಿ ಜೀವನಕ್ಕೆ ಆಸರೆಯಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರ ಜತೆ ಮಾತುಕತೆ ನಡೆಸಿದರು ಎಂದು ತಿಳಿಸಿದರು.
ಅ.4-5ರಂದು ದಸರಾ ಹಬ್ಬದ ಪ್ರಯುಕ್ತ ಈ ಯಾತ್ರೆಗೆ ಬಿಡುವು ನೀಡಲಾಗುವುದು. 6ರಿಂದ ಮತ್ತೆ ಈ ಯಾತ್ರೆ ಪುನರಾರಂಭವಾಗಲಿದೆ. ಭಾರತ ಐಕ್ಯತಾ ಯಾತ್ರೆ ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಾಗಿದ್ದು, ಇದು ಬ್ಲಾಕ್, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತಿದೆ. ಈ ಯಾತ್ರೆ ಮೂಲಕ ಒಂದು ದೃಷ್ಟಿಕೋನ ನೀಡುತ್ತಿದ್ದು, ಇದು ಕಾಂಗ್ರೆಸ್ ಪಾಲಿಗೆ ಶಕ್ತಿಯಾಗಿದೆ. ಬೇರೆ ರಾಜ್ಯಗಳಲ್ಲಿ ಆಗಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜ. ಇದು ವಿಶ್ವದಲ್ಲೇ ರಾಜಕೀಯ ಪಕ್ಷದಿಂದ ಕೈಗೊಂಡಿರುವ ಅತ್ಯಂತ ದೊಡ್ಡ ಯಾತ್ರೆಯಾಗಿದೆ. ಇದು ದೇಶದ ರಾಜಕಾರಣದಲ್ಲಿ ಬದಲಾವಣೆ ತರಲಿದೆ ಎಂದು ಹೇಳಿದರು
ರಾಹುಲ್ ಗಾಂಧಿ ಅವರು ಇಂದು ಬುಡಕಟ್ಟು ಜನರ ಜತೆ ಸಂವಾದ ಮಾಡುತ್ತಾ, ‘ಇಂದು ವಿಶ್ವ ಹವಾಮಾನ ವೈಪರಿತ್ಯದ ಸಮಸ್ಯೆ ಎದುರಿಸುತ್ತಿದ್ದು, ನಮ್ಮ ಪರಿಸರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಅಂಶವನ್ನು ಬುಡಕಟ್ಟು ಜನರನ್ನು ಕಲಿಯಬೇಕು. ಈ ವಿಚಾರದಲ್ಲಿ ಬುಡಕಟ್ಟು ಜನರಿಗೆ ಇರುವ ಜ್ಞಾನ ನಮಗಿಲ್ಲ. ಅವರು ಶತಮಾನಗಳಿಂದ ಅರಣ್ಯದ ಜತೆ ಸಾಮರಸ್ಯದ ಬದುಕು ಸಾಗಿಸಿದ್ದಾರೆ. ಭಾರತ ತನ್ನ ಅರಣ್ಯ ಹಾಗೂ ಪರಿಸರವನ್ನು ನಿಭಾಯಿಸುವುದನ್ನು ಕಲಿಯಬೇಕಾದರೆ ಬುಡಕಟ್ಟು ಜನರಿಂದ ಕಲಿಯಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರ ರಚಿಸಿರುವ ಆಯುಷ್ ಸಚಿವಾಲಯ ಆಯುರ್ವೇದ, ಯೋಗ, ಸಿದ್ಧ, ಹೋಮಿಯೋಪತಿ ವೈದ್ಯಪದ್ಧತಿ ಇದ್ದು, ಇದರಲ್ಲಿ ಬುಡಕಟ್ಟು ವೈದ್ಯಪದ್ಧತಿಯನ್ನು ಒಳಗೊಳ್ಳಬೇಕು. ಕಾರಣ ಇಂದಿನ ಬಹುತೇಕ ಆಧುನಿಕ ಮದ್ದುಗಳು ಗೀಡಮೂಲಿಕೆಗಳಿಂದ ಮಾಡಲಾಗುತ್ತಿದ್ದು, ಇವುಗಳನ್ನು ಬುಡಕಟ್ಟು ಜನರು ಸಂಗ್ರಹಿಸುತ್ತಿದ್ದಾರೆ. ಕಂಪನಿಗಳು ಇದರ ಲಾಭ ಮಾಡಿಕೊಳ್ಳುತ್ತಿವೆ. ಬೆಂಗಳೂರು ಮೂಲಕ ಕಂಪನಿಯೊಂದು ಲಿವ್ 52 ಎಂಬ ಮದ್ದು ತಯಾರಿಸುತ್ತಿದ್ದು, ಇದನ್ನು ನಮ್ಮ ಅಜ್ಜಿಯಂದಿರು ಗಿಡಮೂಲಿಕೆಗಳಿಂದ ನೀಡುತ್ತಿದ್ದರು. ಕೇರಳದಲ್ಲೂ ಈ ವಿಚಾರ ಚರ್ಚೆಯಾಗಿತ್ತು. ಬುಡಕಟ್ಟು ವೈದ್ಯಪದ್ಧತಿ ಸಾಕಷ್ಟು ಅನುಕೂಲಗಳನ್ನು ಹೊಂದಿವೆ ಎಂದು ಜೈರಾಮ್ ರಮೇಶ್ ತಿಳಿಸಿದರು.