ಇಸ್ಲಾಮಾಬಾದ್ : ಪ್ರವಾಹ ಬಿಕ್ಕಟ್ಟಿನ ನಂತರ ಪಾಕಿಸ್ತಾನಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳತ್ತಿವೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಭಾರತ ದೇಶದಿಂದ ಸುಮಾರು 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ನಿರ್ಧಾರ ಮಾಡಿದೆ.
ಪಾಕಿಸ್ತಾನದಲ್ಲಿ ಆದ ಭಾರೀ ಮಳೆಯಿಂದ ಪ್ರವಾಹ ಸಂಕಷ್ಟ ಎದುರಾಗಿತ್ತು. ಪ್ರವಾಹದಿಂದ ಈಗಾಗಲೇ 1600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರವಾಹದ ಬಗ್ಗೆ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಪಾಕಿಸ್ತಾನದ ಪ್ರವಾಹ ಪೀಡಿತ ಸುಮಾರು 32 ಜಿಲ್ಲೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ ಮಲೇರಿಯಾ ರೋಗ ಹರಡುವಿಕೆಯ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಆ ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾಕಿಸ್ತಾನ ಸರ್ಕಾರ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸುವ ನಿರ್ಧಾರ ಕೈಗೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ʼಸೊಳ್ಳೆ ಪರದೆಗಳು ನವೆಂಬರ್ ತಿಂಗಳೊಳಗೆ ಭಾರತದಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತಲುಪಲಿದೆ ಎಂದುʼ ಎಂದು ಹೇಳಿದ್ದಾರೆ.