ಸ್ಟಾಫ್ ಸೆಲೆಕ್ಷನ್ ಕಮಿಟಿ (SSC) ಡಿಸೆಂಬರ್ ನಲ್ಲಿ ನಡೆಸಲಿರುವ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ನೀಡದೆ ಕನ್ನಡಿಗರಿಗೆ ದ್ರೋಹ ಎಸಗಲಾಗಿದ್ದು, ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ನಾಳೆ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು 20 ಸಾವಿರ ಹುದ್ದೆಗಳಿಗೆ ಕೇಂದ್ರ ಸಿಬ್ಬಂದಿ ಆಯೋಗ (SSC) ನಡೆಸುವ ಪರೀಕ್ಷೆಗಳಲ್ಲಿ ‘ಹಿಂದಿ ಮತ್ತು ಇಂಗ್ಲೀಷ್’ನಲ್ಲಿ ಮಾತ್ರ ಉತ್ತರ ಬರೆಯಲು ಅವಕಾಶ ನೀಡಿರುವುದರಿಂದ ಕನ್ನಡ ಮಾಧ್ಯಮದಲ್ಲಿ ‘ಪದವಿ ಶಿಕ್ಷಣ’ ಪಡೆದಿರುವ ಕರ್ನಾಟಕದ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರು ಕೇಂದ್ರ ಸರ್ಕಾರದ ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ. ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಈ ಕುರಿತು ಸರ್ಕಾರ ಕೂಡಲೇ ಪರೀಕ್ಷೆ ಸ್ಥಗಿತಗೊಳಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಕರವೇ ಪ್ರತಿಭಟನೆಗೆ ಮುಂದಾಗಿದೆ.
ದಿನಾಂಕ: 13-10-2022 ಗುರುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಯಲಿದ್ದು, ಕನ್ನಡಿಗರ ಉದ್ಯೋಗದ ಪರವಾಗಿ ನಮ್ಮ ಹೋರಾಟಕ್ಕೆ ಕೈಜೋಡಿಸಿ ಎಂದು ಕರವೇ ಕರೆ ನೀಡಿದೆ.
