ಹೊಸಪೇಟೆ: ಕಾಂಗ್ರೆಸ್ ನವರಿಗೆ ರಾಜಕೀಯವಾಗಿ ಭಯವಿದೆ. ಮಾಡಿದುಣ್ಣೋ ಮಹಾರಾಯ ಎನ್ನುವಂತೆ, ನಿಮಗೆ ಅಧಿಕಾರ ಬಂದಾಗ, ಜನರನ್ನು ಮರೆತಿರಿ, ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ವಿಜಯನಗರ ಜಿಲ್ಲೆ, ಹೊಸಪೇಟೆಯ ಡಾ. ಪುನಿತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೀನದಲಿತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರ ಭವಿಷ್ಯ ಭದ್ರಗೊಳಿಸಲಾಗಿದ್ದು ಅವರಿಗೆ ಯಾವುದೇ ಭಯವಿಲ್ಲ. ಆದರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಭಯ ಇದೆ ಎಂದರು.
ಕಾಂಗ್ರೆಸ್ ನ ಭ್ರಷ್ಟಾಚಾರ ಬಣ್ಣ ಬಯಲಾಗುತ್ತದೆ:
ನಿಮ್ಮ ಕಾಲದಲ್ಲಿ ನಡೆದ ಭ್ರಷ್ಟಾಚಾರ ಮುಚ್ಚಿ ಹಾಕಲು ಎಸಿಬಿ ರಚನೆ ಮಾಡಿ ಲೋಕಾಯುಕ್ತ ಮುಚ್ಚುವ ಕೆಲಸ ಮಾಡಿದ್ದಿರಿ.ಈಗ ಲೋಕಾಯುಕ್ತ ಬಲಗೊಂಡಿದೆ. ನೀವು ಮಾಡಿರುವ ಎಲ್ಲ ಹಗರಣಗಳು ಬೆಳಕಿಗೆ ಬರುತ್ತಿವೆ. ನಿಮ್ಮ ವಿರುದ್ದದ ಪ್ರಕರಣಗಳ ತನಿಖೆಯಾಗುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಆಗ ಕಾಂಗ್ರೆಸ್ ನ ಭ್ರಷ್ಟಾಚಾರದ ಬಣ್ಣ ಬಯಲಾಗುತ್ತದೆ ಎಂದರು.
ರಾಜಾಹುಲಿಯ ಘರ್ಜನೆಗೆ ಕಾಂಗ್ರೆಸ್ ತತ್ತರ:
ನಿನ್ನೆ ನಮ್ಮ ರಾಜಾಹುಲಿಯ ಘರ್ಜನೆಗೆ ಕಾಂಗ್ರೆಸ್ ನವರು ತತ್ತರಿಸಿದ್ದಾರೆ ಎಂದರು. ಅದಕ್ಕೆ ಯಡಿಯೂರಪ್ಪ ನವರ ಬಗ್ಗೆ ಒಂದು ಮಾತನಾಡಿದ್ದಾರೆ ಯಡಿಯೂರಪ್ಪ ಅವರಿಗೆ ಅರಳು ಮರಳು ಅಂತ ಹೇಳಿದ್ದಾರೆ. ಆದರೆ ರಾಜಾ ಹುಲಿ ಯಾವುದಕ್ಕೂ ಜಗ್ಗುವುದಿಲ್ಲ ಬಗ್ಗುವುದಿಲ್ಲ. ಅವರನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದ್ದೀರಿ, ಅವರನ್ನು ಅಧಿಕಾರದಿಂದ ದೂರ ಇಡಲು ಅವರ ಮೇಲೆ ಸುಳ್ಳು ಕೇಸ್ ಹಾಕಿಸಿದಿರಿ. ಅವರು ಮತ್ತೆ ಪುಟಿದೆದ್ದು ಮತ್ತೆ ಸಿಎಂ ಆದರು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ ಅರಳು ಮರಳು:
ಮೋದಿಯವರು ನೆಹರು ಅವರ ಪಾದದ ಧೂಳಿನ ಸಮಾನಾನ ಅಂತ ಕೇಳಿದ್ದಾರೆ ನಾವೂ ಕೇಳಬಹುದು ನೆಹರೂ ಗಾಂಧೀಜಿ ಪಾದದ ಧೂಳಿಗೆ ಸಮಾನಾನಾ . ಕೊರೊನಾ ಸಂದರ್ಭದಲ್ಲಿ ಇಡೀ ದೇಶಕ್ಕೆ ಲಸಿಕೆ ಕೊಡಿಸಿ, ವಿಶ್ವವೇ ಮೆಚ್ಚುವ ಕೆಲಸ ಮಾಡಿದ್ದಾರೆ. ಅನೇಕ ದೇಶಗಳಿಗೆ ಲಸಿಕೆ ನೀಡಿದ್ದಾರೆ ಉಜ್ವಲ ಯೋಜನೆ ಬೇಟಿ ಬಚಾವೋ ಬೇಟಿ ಪಢಾವೋ ಅಂತ ಯೋಜನೆ ಮಾಡಿದರು. ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತಂದರು. ಇಡೀ ವಿಶ್ವವೇ ಆರ್ಥಿಕ ಹಿಂಜರಿತ ಕಾಣುತ್ತಿದೆ ಆದರೆ ಭಾರತ ಮಾತ್ರ ಆರ್ಥಿಕವಾಗಿ ಸದೃಢವಾಗಿದೆ. ಸಿದ್ದರಾಮಯ್ಯ ನವರೇ ನಿಮಗೆ ಅರಳು ಮರಳಾಗಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ : ಬಿಜೆಪಿ ಮುಖಂಡರಿಗೆ ಸಿದ್ದು ಸವಾಲು
ಅಧಿಕಾರಕ್ಕಾಗಿ ದೇಶ ಒಡೆದ ಕಾಂಗ್ರೆಸ್:
ರಾಹುಲ್ ಗಾಂಧಿಗೆ ಡಿಕೆಶಿ ಸಿದ್ದರಾಮಯ್ಯ ಅವರನ್ನು ಜೋಡಿಸುವುದರಲ್ಲಿ ಸುಸ್ತಾಗಿ ಹೋಗಿದ್ದಾರೆ. ಎರಡು ದೇಶದ ಕಲ್ಪನೆ ಮೌಂಟ್ ಬ್ಯಾಟನ್ ಹಾಗೂ ಮಹಮದ್ ಅಲಿ ಜಿನ್ನಾ ಇಟ್ಟರು. ಅವರ ಮಾತಿಗೆ ಒಪ್ಪಿ ಅಧಿಕಾರದ ಆಸೆಗೆ ಗಾಂಧಿಜಿ ಮಾತು ದಿಕ್ಕರಿಸಿ ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ನಿಮ್ಮ ಅಧಿಕಾರಕ್ಕಾಗಿ ದೇಶವನ್ನು ಒಡೆದು, ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೀರಿ. ಕಲಿಸ್ತಾನಕ್ಕೆ ಬೆಂಬಲ ಕೊಟ್ಟವರು ಇಂದಿರಾಗಾಂಧಿ , ತಮಿಳುನಾಡಿನಲ್ಲಿ ಎಲ್.ಟಿ.ಟಿ.ಇ ಗೆ ಬೆಂಬಲ ಕೊಟ್ಡವರು ಕಾಂಗ್ರೆಸ್ ನವರು, ನಿಮ್ಮ ಸ್ವಾರ್ಥಕ್ಕಾಗಿ ದೇಶದ ಹೃದಯದ ಮೇಲೆ ಗಾಯದ ಬರೆಗಳನ್ನು ಹಾಕಿದಿರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಗೋವಿಂದ್ ಕಾರಜೋಳ, ಶ್ರೀರಾಮುಲು, ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಶೀಲ್ ನಮೋಶಿ, ಶಾಸಕರಾದ ರಾಜು ಗೌಡ, ಬಸವರಾಜ ದಡೆಸುಗೂರು, ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿಗಳು ಸಿದ್ದೇಶ್ ಯಾದವ್,ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.