ಧ್ರುವ್ ರಾಠಿ ವಿರುದ್ಧ ಗೃಹ ಸಚಿವಾಲಯಕ್ಕೆ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ದೂರು: ಪೌರತ್ವ ಮತ್ತು ವೀಸಾ ನಿಯಮ ಉಲ್ಲಂಘನೆ ಪರಿಶೀಲನೆಗೆ ಆಗ್ರಹ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ವಿರುದ್ಧ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಮತ್ತು ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಧ್ರುವ್ ರಾಠಿ ಅವರು ವಿದೇಶಿ ಪೌರತ್ವ ಹೊಂದಿರುವ ಹಿನ್ನೆಲೆಯಲ್ಲಿ, ಅವರು ಭಾರತದಲ್ಲಿ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ವೀಸಾ ಮತ್ತು ವಲಸೆ ನಿಯಮಗಳ ಉಲ್ಲಂಘನೆಯೇ ಎಂಬುದನ್ನು ತನಿಖೆ ಮಾಡುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕೇಂದ್ರ ಗೃಹ ಕಾರ್ಯದರ್ಶಿಗೆ ಅಕ್ಟೋಬರ್ 8 ರಂದು ಬರೆದಿರುವ ಅಧಿಕೃತ ಪತ್ರದಲ್ಲಿ ಭಾಸ್ಕರ್ ರಾವ್ ಅವರು, “ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಜೊತೆಗೆ ಧ್ರುವ್ ರಾಠಿ ಅವರು ಚುನಾವಣಾ ಆಯೋಗದ ವಿರುದ್ಧ ನಡೆದ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡು ಸಾರ್ವಜನಿಕವಾಗಿ ಭಾಷಣ ಮಾಡಿದ್ದಾರೆ. ಚುನಾವಣಾ ಆಯೋಗದಲ್ಲಿ ‘ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆ’ ಇದೆ ಎಂದು ಆರೋಪಿಸಿದ್ದಾರೆ. ಇದು ಕೇವಲ ವೈಯಕ್ತಿಕ ಅಥವಾ ಸಾಮಾಜಿಕ ಭೇಟಿಯಾಗಿರದೆ, ಸ್ಪಷ್ಟ ರಾಜಕೀಯ ಪ್ರತಿಭಟನೆಯಾಗಿದೆ” ಎಂದು ಉಲ್ಲೇಖಿಸಿದ್ದಾರೆ.

ಜರ್ಮನ್ ಪೌರತ್ವದ ಪ್ರಶ್ನೆ:

ಧ್ರುವ್ ರಾಠಿ ಪ್ರಸ್ತುತ ಜರ್ಮನ್ ಪೌರತ್ವ (German Citizenship) ಹೊಂದಿರುವ ವಿದೇಶಿ ಪ್ರಜೆ ಎಂದು ತಿಳಿದುಬಂದಿದೆ. ಭಾರತೀಯ ನಾಗರಿಕರಿಗೆ ಶಾಂತಿಯುತ ಪ್ರತಿಭಟನೆ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತುವ ಸಾಂವಿಧಾನಿಕ ಹಕ್ಕಿದೆ, ಆದರೆ ಭಾರತದ ವೀಸಾ ಅಥವಾ ಒಸಿಐ (OCI – ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಆಧಾರದ ಮೇಲೆ ಭಾರತಕ್ಕೆ ಬಂದಿರುವ ಒಬ್ಬ ವಿದೇಶಿ ಪ್ರಜೆಗೆ ದೇಶದ ಆಂತರಿಕ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸಲು ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆಂದೋಲನ ರೂಪಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಠಿ ಯಾವ ವೀಸಾ ಅಥವಾ ಅನುಮತಿಯ ಅಡಿಯಲ್ಲಿ ಭಾರತಕ್ಕೆ ಬಂದಿದ್ದಾರೆ, ಅವರ ಭೇಟಿಯ ಅಧಿಕೃತ ಉದ್ದೇಶವೇನು ಎಂಬುದನ್ನು ವಿದೇಶಿಯರ ಕಾಯ್ದೆ 1946 (Foreigners Act, 1946) ಮತ್ತು ವೀಸಾ ನಿಯಮಾವಳಿಗಳ ಅಡಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದ್ದಾರೆ. ಈ ಅರ್ಜಿಯ ಪ್ರತಿಯನ್ನು ಹೊಸ ದೆಹಲಿಯ ಬ್ಯೂರೋ ಆಫ್ ಇಮಿಗ್ರೇಷನ್ ಕಮಿಷನರ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ರವಾನಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು