ನನ್ನ ಹತ್ರ ಇರೋದು ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಅಲ್ಲ, ನಿಮ್ಮ ಭ್ರಷ್ಟಾಚಾರದ ದಾಖಲೆ!: ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್‌ಡಿಕೆ ವಾಗ್ದಾಳಿ

“ಗೃಹ ಸಚಿವರು ನನ್ನ ಬಳಿ ಪೆನ್‌ಡ್ರೈವ್ ಇದೆ ಅಂತ ಹೇಳಿದ್ದಾರೆ. ಆದರೆ ನಾನು ಅವರು ಕಲ್ಪಿಸಿಕೊಂಡಿರುವ ರೀತಿಯ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಇಟ್ಟುಕೊಂಡಿಲ್ಲ. ಇತ್ತೀಚೆಗೆ ನಾನು ಬಿಡುಗಡೆ ಮಾಡುತ್ತಿರುವ ನೈಸ್ (NICE) ಹಗರಣದ ದಾಖಲೆಗಳಂತಹ ಪೆನ್‌ಡ್ರೈವ್ ಮಾತ್ರ ನನ್ನ ಬಳಿ ಇದೆ” ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 15-20 ದಿನಗಳಲ್ಲೇ ಎಂಜಿನಿಯರ್‌ಗಳ ವರ್ಗಾವಣೆ ದಂಧೆಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಬಗ್ಗೆ ತಾವು ಈ ಹಿಂದೆ ಪೆನ್‌ಡ್ರೈವ್ ಪ್ರಸ್ತಾಪಿಸಿದ್ದನ್ನು ನೆನಪಿಸಿದರು.

“ನಾಲ್ಕೈದು ತಿಂಗಳು ಅಧಿಕಾರಾವಧಿ ಬಾಕಿ ಇರುವ ಅಧಿಕಾರಿಗಳಿಂದ ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಬಡ್ಡಿಗೆ ಸಾಲ ತಂದು ಲಂಚ ಕೊಡಲಾಗದೆ ನೊಂದ ಅಧಿಕಾರಿಗಳು ನೀಡಿದ ವರ್ಗಾವಣೆ ಭ್ರಷ್ಟಾಚಾರದ ಆಡಿಯೋ ದಾಖಲೆಯನ್ನು ನಾನು ತೋರಿಸಿದ್ದೆನೆಯೇ ಹೊರತು, ಬೇರೆ ಯಾವುದೇ ಅಶ್ಲೀಲ ಚಿತ್ರಗಳನ್ನಲ್ಲ. ಅದನ್ನೇ ಇಟ್ಟುಕೊಂಡು ಸಚಿವರು ಪೆನ್‌ಡ್ರೈವ್ ಜೇಬಿನಲ್ಲಿದೆ ಎಂದು ಗೇಲಿ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ನೇರ ಆರೋಪ ಮಾಡಿದ ಕುಮಾರಸ್ವಾಮಿ, “ನನ್ನ ನೈತಿಕತೆ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ನೈತಿಕತೆ ಇದ್ದರೆ ಕೆಪಿಎಸ್‌ಸಿ (KPSC) ಮೂಲಕ 24 ಜನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ (AEE) ನೇಮಕಾತಿಗೆ ರುಜು ಹಾಕಿದ್ದರ ಬಗ್ಗೆ ಇದುವರೆಗೂ ಯಾಕೆ ಉತ್ತರಿಸಿಲ್ಲ? ಸದನದಲ್ಲಿ ಹಾಗೂ ಸಾರ್ವಜನಿಕವಾಗಿ ನಾನು ದಾಖಲೆಗಳ ಸಹಿತ ಪ್ರಕ್ರಿಯೆಗಳನ್ನು ಮುಂದಿಟ್ಟರೂ ಚಕಾರ ಎತ್ತದೆ ವಿಷಯಾಂತರ ಮಾಡುತ್ತಿರುವುದು ಯಾಕೆ?” ಎಂದು ಪ್ರಶ್ನಿಸಿದರು.

ಇದೇ ವೇಳೆ ಕೆಐಎಡಿಬಿ ಸಿಎ ನಿವೇಶನ ವಿವಾದವನ್ನು ಪ್ರಸ್ತಾಪಿಸಿದ ಅವರು, “ನಾವು ಸಿದ್ದಾರ್ಥ ಟ್ರಸ್ಟ್ ಹೆಸರಿನಲ್ಲಿ ಸರ್ಕಾರಿ ಭೂಮಿ ಹೊಡೆದಿಲ್ಲ. ಬುದ್ಧನ ಹೆಸರಿಟ್ಟುಕೊಂಡು ಏನೆಲ್ಲಾ ಮಾಡಿದ್ದೀರಿ ಎಂಬ ದೊಡ್ಡ ಕಥೆಯೇ ನಿಮ್ಮ ಬೆನ್ನ ಹಿಂದಿದೆ. ನನ್ನ ನೈತಿಕತೆ ಕೆದಕುವುದನ್ನು ಬಿಟ್ಟು, ನಾವು ಕೇಳಿರುವ ಪ್ರಶ್ನೆಗಳಿಗೆ ಗೌರವಯುತವಾಗಿ ನೇರ ಉತ್ತರ ಕೊಡಿ” ಎಂದು ಸವಾಲು ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು