Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಭೀಕರ ಮಳೆಗೆ ತತ್ತರಿಸಿದ ಕರುನಾಡು

ಭೀಕರ ಮಳೆಗೆ ತತ್ತರಿಸಿದ ಕರುನಾಡು

0

ರಾಜ್ಯದಲ್ಲಿ ಅನಿರೀಕ್ಷಿತವಾಗಿ ಶುರುವಾದ ಎರಡನೇ ಹಂತದ ಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಎರಡು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಇರುವ ಜನರಿಗೆ ಆತಂಕ ಸೃಷ್ಟಿಯಾಗಿದೆ. ಇನ್ನೂ ಎರಡ್ಮೂರು ದಿನಗಳ ಭೀಕರ ಮಳೆಯ ಮುನ್ಸೂಚನೆಯಿಂದಾಗಿ ಅನಾಹುತಗಳ ಸರಮಾಲೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಭಾಗಗಳಲ್ಲಿ ದಟ್ಟವಾದ ಮೋಡ ಕವಿದಿದ್ದು ಮಳೆಯ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ. ಅದೇ ರೀತಿ ಅನಾಹುತ ಹೆಚ್ಚಬಹುದು ಎಂದು ಹೇಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಬೆಂಗಳೂರಿನ ಪಕ್ಕದ ಜಿಲ್ಲೆಗಳಾದ ರಾಮನಗರದಲ್ಲಿ ಕೂಡಾ ಮಳೆ ಪ್ರಮಾಣ ಹೆಚ್ಚಿದ್ದು ಕೆರೆ ಕಟ್ಟೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ನದಿ ಪಾತ್ರದ ಕಡೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಅನಾಹುತಗಳ ಆಗರವಾಗಿದೆ. ರಾಮನಗರ ಭಾಗಗಳಲ್ಲಿ 2 ದಶಕಗಳ ನಂತರ ಸುರಿದ ಭಾರೀ ಮಳೆ ಇದು ಎಂದು ಅಂದಾಜಿಸಲಾಗಿದೆ. ರಾಮನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬಹುತೇಕ ರಸ್ತೆಗಳ ಮೇಲೆ ನೀರು ಬಂದಿದ್ದು ಜನರ ಓಡಾಟಕ್ಕೂ ತೊಡಕುಂಟಾಗಿದೆ.

ಬೆಂಗಳೂರಿಗೂ ಸಹ ಇದು ಕಳೆದ 5 ವರ್ಷಗಳಲ್ಲಿ ದಾಖಲೆ ಮಳೆಯಾಗಿದ್ದು ಕೇವಲ ಒಂದೇ ತಿಂಗಳಲ್ಲಿ ಅಂದಾಜು 184 ಮಿಲಿ ಮೀಟರ್ ಮಳೆಯಾಗಿದೆ. ಶನಿವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಿನನಿತ್ಯದ ಓಡಾಟ ದುಸ್ತರವಾಗಿದೆ. ಯಾವೊಂದು ಅಗತ್ಯ ಕೆಲಸಗಳಿಗೂ ಎಲ್ಲೂ ಹೋಗದ ಪರಿಸ್ಥಿತಿ ಉಂಟಾಗಿದೆ.

ಮಳೆ ಕೇವಲ ದಕ್ಷಿಣ ಒಳನಾಡು ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲೂ ಹಲವಷ್ಟು ಅವಾಂತರ ಸೃಷ್ಟಿ ಮಾಡಿದೆ. ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲೂ ಭಾರಿ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ‌ ಮುಂದಿನ 24 ಗಂಟೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಮಧ್ಯಾಹ್ನದ ವೇಳೆಗೆ ದಾಖಲೆ ಮಟ್ಟಕ್ಕೆ ಮಳೆ ಸುರಿಯಲಿದ್ದು, ಸ್ಥಳೀಯ ಆಡಳಿತ ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ.

You cannot copy content of this page

Exit mobile version