Home ಜನ-ಗಣ-ಮನ ನಾಡು-ನುಡಿ ಸ್ವಾತಂತ್ರ್ಯ ಸಮರ ಸೇನಾನಿ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡ

ಸ್ವಾತಂತ್ರ್ಯ ಸಮರ ಸೇನಾನಿ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡ

0

ಈ ದಂಗೆ ಎದ್ದಿದ್ದು ಸುಳ್ಯ ಸಮೀಪದ ಉಬರಡ್ಕ ಗ್ರಾಮದ ಮದುವೆ ಗದ್ದೆ ಎಂಬ ಸ್ಥಳದಲ್ಲಿ. ಪೂಮಲೆ ಬೆಟ್ಟದ ತಪ್ಪಲಿನಲ್ಲಿದ್ದ ಪ್ರದೇಶದಲ್ಲಿ ಯುದ್ಧವ್ಯೂಹ ನಡೆದಿತ್ತು. ಗೆರಿಲ್ಲಾ ಮಾದರಿಯ ಯುದ್ಧಕ್ಕೆ ಪೂಮಲೆ ಬೆಟ್ಟ ಪ್ರಕೃತಿಯ ವರದಾನವಾಗಿತ್ತು. ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ತಂತ್ರಗಾರಿಕೆ ರೂಪುಗೊಂಡಿದ್ದು, ಗೌಡರು ತಮ್ಮ ವಿಶ್ವಾಸಾರ್ಹರನ್ನು ಯುದ್ಧ ಸನ್ನದ್ಧರಾಗಿಸಿದ್ದರು. ರೈತಾಪಿ ಜನರೇ ಅಧಿಕ ಮಂದಿಯಾಗಿದ್ದರಿಂದ ಅವರನ್ನೇ ಸೈನಿಕರನ್ನಾಗಿ ಸಿದ್ಧಪಡಿಸಿದ್ದರು. ಸುಮಾರು 1500 ಖಡ್ಗಗಳನ್ನು ಕೊಡ್ಲಿಪೇಟೆಯಿಂದ ತರಿಸಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ. ಮುಂದೇನಾಯ್ತು? ಚಂದ್ರಾವತಿ ಬಡ್ಡಡ್ಕ ಅವರ ಲಘು ದಾಟಿಯ ಈ ಬರಹವನ್ನು ಓದಿ.

ಸನ್ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ….

ಇಂದು ನಾವು ಇಷ್ಟನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿದ್ದೇವೆ. ಬ್ರಿಟೀಷರ ದಾಸ್ಯ ಸಂಕೋಲೆಯಿಂದ ನಮಗೆ ಮುಕ್ತಿ ನೀಡಲು ಮಹತ್ಮಾ ಗಾಂಧೀಜಿ, ಬಾಲ ಗಂಗಾಧರ್ ತಿಲಕ್, ತಾತ್ಯಾಟೋಪಿ, ಝಾನ್ಸಿರಾಣಿ ಲಕ್ಷ್ಮೀಬಾಯಿ…. ಎಲ್ಲರೂ ಹೋರಾಡಿದ್ದಾರೆ ಎಂದೆನ್ನುತ್ತಾ ಬ್ರಿಟಿಷರ ಮುಷ್ಠಿಯಲ್ಲಿ ನಮ್ಮ ದೇಶ ಹೇಗೆಲ್ಲ ನರಳಿತು ಎಂದೆಲ್ಲ ಆಕ್ರೋಶಭರಿತರಾಗಿ ಮಾತನಾಡಿ ಸಾಕ್ಷಾತ್ ನಾವೇ ಯುದ್ಧಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂಬಂತೆ ಸೆಟೆದು ಬೀಗುತ್ತಿದ್ದೆವು. ಕೆಲವೊಮ್ಮೆ ಭಾಷಣಕ್ಕೆ ಹೋಗಿ ಸ್ಟೇಜ್ ಮುಂದೆ ನಿಂತಾಗ ಸಭಿಕರ (ಸಹಪಾಠಿಗಳ) ಕಣ್ಣುಗಳು ನಮ್ಮನ್ನೇ ದಿಟ್ಟಿಸುವುದನ್ನು ಕಂಡು ಸಭಾ ಕಂಪನ ಭಸಾಕಂಪನ ಉಂಟಾಗಿ ಉರುಹೊಡೆದದ್ದೆಲ್ಲ ಮರೆತುಹೋಗಿ, ಏನೇನು ಮಾಡಿದರೂ ಮುಂದಿನ ಸಾಲುಗಳು ನೆನಪಾಗದೇ, ತಿಣುಕಿ ತಿಣುಕಿ ಕೊನೆಗೆ ನಮ್ಮ ಮಾಸ್ಟ್ರೋ ಟೀಚರೋ ಸಾಕು ಹೋಗು ಅಂದಾಗ ಸಮರದಲ್ಲಿ ಸೋತು ಹ್ಯಾಪು ಮೋರೆ ಹಾಕಿದ್ದೂ ಉಂಟು!

ಪ್ರೈಮರಿ ಶಾಲೆಯಲ್ಲಿರುವ ವೇಳೆಗೆ ನಮ್ಮ ಸ್ವಾತಂತ್ರ್ಯ (ನಮ್ಮ ವರ್ಶನ್ನಲ್ಲಿ ಅದು ಸ್ವಸಂತ್ರವಾಗಿತ್ತು) ದಿನಾಚರಣೆ ಜೋರಿತ್ತು, ಚೆನ್ನಾಗಿತ್ತು. ಶಾಲೆಯಲ್ಲಿ ಮಾಸ್ಟ್ರು ಧ್ವಜವಂದನೆ ಮಾಡಿಸುವ ಶಿಸ್ತಿನ ತಾಲೀಮನ್ನು ಸುಮಾರು ಹದಿನೈದು ದಿನಗಳಿಂದಲೇ ಕಲಿಸುತ್ತಿದ್ದರು. ತರಗತಿ ಪ್ರಕಾರ ಸಾಲಾಗಿ ನಿಲ್ಲಿಸಿ ಸ್ಕೂಲ್ ಸಾವ್ದಾನ್, ವಿಶ್ರಾಂ ಎಲ್ಲ ಅಭ್ಯಾಸ ಮಾಡಿಸಿ ನಮ್ಮ ಕೈಕಾಲುಗಳು ರಿದಂನಲ್ಲಿ ಚಲಿಸುವಂತಾಗಿಸುತ್ತಿದ್ದರು. ಸ್ವಸಂತ್ರ ದಿನ ಧರಿಸಲೆಂದೇ ಇರೋ ಎರಡು ಡ್ರೆಸ್ಸಲ್ಲಿ ಚೆನ್ನಾಗಿರುವುದನ್ನು ಅವ್ವ ಚೆನ್ನಾಗಿ ಒಗೆದು ಹಾಕುತ್ತಿದ್ದರು. ಬೇಗ ಒಣಗಲೆಂದು ಒಲೆ ಪಕ್ಕದಲ್ಲಿ ಮಣೆ ಇರಿಸಿಯೋ ಅಥವಾ ಬಟ್ಟೆ ಒಣಗಿಸುವ ಹಗ್ಗದಲ್ಲಿಯೋ ಹಾಕಿ ಹೇಗಾದರೂ ಒಣಗಿಸಿ ಕೊಡುತ್ತಿದ್ದರು. ಹೊಗೆಯದ್ದೋ ಮಳೆಗೆ ಅರೆಬರೆ ಒಣಗಿದ ಮುಗ್ಗಲು ವಾಸನೆಯದ್ದೋ ಘಮ ಬೀರುವ ಉಡುಪು ಧರಿಸಿ ಬೆಳಗಾಗುವುದನ್ನೇ ಕಾಯುತ್ತಿದ್ದು ಶಾಲೆಗೆ ಓಡುತ್ತಿದ್ದೆವು.

ಸಾವಿರದ ಒಂಭೈನೂರಾ ನಲವತ್ತೇಳನೆ ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿ ನಮ್ಮ ದೇಶ ಬ್ರಿಟೀಶರ ದಾಸ್ಯ ಸಂಕೋಲೆಯಿಂದ ಮುಕ್ತವಾಗಿ ಸ್ವತಂತ್ರವಾಯಿತು. ಈ ದಿನವನ್ನು ನಾವು ಸ್ವಾತಂತ್ರ್ಯ ದಿನಾಚರಣೆಯಾಗಿ ಆಚರಿಸುತ್ತೇವೆ ಎಂಬುದಾಗಿ ಪ್ರೈಮರಿ ಶಾಲೆಯಲ್ಲಿರುವಾಗ ಸ್ವಾತಂತ್ರ್ಯ ದಿನದ ಬಗ್ಗೆ ಬಾಯಿಪಾಠ ಮಾಡುತ್ತಿದ್ದೆವು. ಸ್ವಾತಂತ್ರ್ಯವೆಂದರೆ ಅದು ದೊಡ್ಡ ಶಾಲಾ ಹಬ್ಬ. ನಂತರದ ಸಮಾಜ ಪಾಠ ಓದುತ್ತಾ ಹೋದಂತೆ ಹೆಚ್ಚು ಹೆಚ್ಚು ವಿವರಗಳು ಲಭಿಸುತ್ತಾ ಹೋದವು. ದೊಡ್ಡ ದೊಡ್ಡ ಕ್ಲಾಸಿಗೆ ಹೋದಂತೆ ಇತಿಹಾಸ ನಮ್ಮ ದೇಶದ ಚರಿತ್ರೆಯನ್ನು ಬಿಚ್ಚಿಟ್ಟಿತ್ತು. ಇಸವಿಗಳನ್ನು ನೆನಪಿಸಿಕೊಳ್ಳಲು ಒದ್ದಾಡಿಸಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಕೋರಿಂಗ್ ಸಬ್ಜೆಕ್ಟ್ ಎಂಬ ಕೀರ್ತಿ ಹೊತ್ತಿತ್ತು.

ಇತಿಹಾಸ ಓದುವಾಗೆಲ್ಲ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣತೆತ್ತ, ದೇಶಾದ್ಯಂತದ ಮಹನೀಯರು ಮಹಿಳೆಯರ ಬಗ್ಗೆ ಓದಿ ಬೆರಗಾಗಿದ್ದೇವೆ, ಹೀಗೂ ಇತ್ತೇ ಎಂಬುದಾಗಿ ದಂಗಾಗಿದ್ದೇವೆ. ಶತಕಗಳ ಕಾಲ ಹೋರಾಡಿ ನಮ್ಮದೇ ನೆಲವನ್ನು ನಾವು ಗೆದ್ದದ್ದು ಅಂತಿಂತ ಸಾಧನೆಯಲ್ಲ. ಸಾವಿರದ ಒಂಭೈನೂರ ನಲವತ್ತೇಳರಲ್ಲಿ ಭಾರತ ವಿದೇಶೀಯರ ಆಳ್ವಿಕೆಯಿಂದ ಮುಕ್ತಿ ಹೊಂದಿ ಸ್ವಾತಂತ್ರ್ಯ ಗಳಿಸಿತು. ಬದುಕಿನಲ್ಲಿ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವ ಮತ್ತು ಈಗಿನ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದೇನೆ. ಎಷ್ಟೋ ಮಹಾತ್ಮರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಆದರೆ ಇದನ್ನು ಎಷ್ಟು ಚೆನ್ನಾಗಿ ಮುನ್ನಡೆಸಿದ್ದೇವೆ ಯಾರೆಲ್ಲ ಸ್ವತಂತ್ರರು ಯಾರೆಲ್ಲ ಅಸ್ವತಂತ್ರರು ಎಂಬುದು ಬೇರೆ ಪ್ರಶ್ನೆ.

ನಾವು ಪಾಠದಲ್ಲಿ ಓದಿರುವಂತೆ 1957ರಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಹೋರಾಟ ನಡೆಯಿತು. ಇದನ್ನು ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆದು ಸ್ವಾತಂತ್ರ್ಯ ಸಮರದ ಸದ್ದಡಗಿಸಲು ಯತ್ನಿಸಿದರಾದರೂ ಇದು ಮುಂದಿನ ಹೋರಾಟಗಳಿಗೆ ಸ್ಫೂರ್ತಿದಾಯಕವೆಂಬುದು ಇತಿಹಾಸ. ಆದರೆ ಇದಕ್ಕಿಂತಲೂ ಇಪ್ಪತ್ತು ವರ್ಷಕ್ಕೂ ಮುಂಚಿತವಾಗೇ ಬ್ರಿಟಿಷರ ವಿರುದ್ಧ ಯುದ್ಧ ಸಾರಿ ಗೆದ್ದ ಕತೆ ಇದೆ. ಈ ದಂಗೆಯಲ್ಲಿ ಬರೀ ಗೆದ್ದುದು ಮಾತ್ರವಲ್ಲದೆ 13 ದಿನಗಳ ಆಡಳಿತ ನಡೆಸಿ ಬ್ರಿಟಿಷರಿಗೆ ಚುರುಕು ಮುಟ್ಟಿಸಿತ್ತು.  ಆದರೆ ಇದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಂತಹ ಸ್ಥಾನ ಪಡೆಯದೇ ಇದ್ದುದು ದುರ್ದೈವ!

ಈ ದಂಗೆ ಎದ್ದಿದ್ದು ಸುಳ್ಯ ಸಮೀಪದ ಉಬರಡ್ಕ ಗ್ರಾಮದ ಮದುವೆಗದ್ದೆ ಎಂಬ ಸ್ಥಳದಲ್ಲಿ. ಪೂಮಲೆ ಬೆಟ್ಟದ ತಪ್ಪಲಿನಲ್ಲಿದ್ದ ಪ್ರದೇಶದಲ್ಲಿ ಯುದ್ಧವ್ಯೂಹ ನಡೆದಿತ್ತು. ಗೆರಿಲ್ಲಾ ಮಾದರಿಯ ಯುದ್ಧಕ್ಕೆ ಪೂಮಲೆ ಬೆಟ್ಟ ಪ್ರಕೃತಿಯ ವರದಾನವಾಗಿತ್ತು. ಕೆದಂಬಾಡಿ ರಾಮಯ್ಯ ಗೌಡರ ಮುಂದಾಳುತ್ವದಲ್ಲಿ ತಂತ್ರಗಾರಿಕೆ ರೂಪುಗೊಂಡಿದ್ದು, ಗೌಡರು ತಮ್ಮ ವಿಶ್ವಾಸಾರ್ಹರನ್ನು ಯುದ್ಧ ಸನ್ನದ್ಧರಾಗಿಸಿದ್ದರು. ರೈತಾಪಿ ಜನರೇ ಅಧಿಕ ಮಂದಿಯಾಗಿದ್ದರಿಂದ ಅವರನ್ನೇ ಸೈನಿಕರನ್ನಾಗಿ ಸಿದ್ಧಪಡಿಸಿದ್ದರು. ಸುಮಾರು 1500 ಖಡ್ಗಗಳನ್ನು ಕೊಡ್ಲಿಪೇಟೆಯಿಂದ ತರಿಸಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ.

1837ನೇ ಇಸವಿ ಮಾರ್ಚ್ ತಿಂಗಳ 31ರಂದು ದಂಡಿಗೆ ಹೊರಟವರು ಮೊದಲಿಗೆ ಸಮೀಪದ ಬೆಳ್ಳಾರೆ ಎಂಬಲ್ಲಿಗೆ ಸಾಗಿ ಬ್ರಿಟಿಷ್ ಕಂಪೆನಿಯ ಖಜಾನೆಯನ್ನು ವಶಪಡಿಸಿ ವಿಜಯದ ಕೇಕೆ ಹಾಕಿತು. ಬಳಿಕ ಕಾಸರಗೋಡಿನತ್ತ ಒಂದು ಭಾಗ ಚಲಿಸಿತು. ಪುತ್ತೂರು ಖಜಾನೆಯನ್ನೂ ವಶಪಡಿಸಿ ಅಲ್ಲಿ ಅಧಿಕಾರಿಗಳನ್ನು ನೇಮಿಸಿ ಮಂಗಳೂರಿನತ್ತ ಸೇನೆ ಹರಿದು ಹೋದಾಗ ಹಾದಿಯುದ್ದಕ್ಕೂ ಅಪಾರ ಜನ ಬೆಂಬಲ ದೊರೆತು ಸೇನೆ ವಿಸ್ತರಿಸಿತು.

ಸೇನೆಗೆ ಬಂಗಾಡಿ ಅರಸರು, ಧರ್ಮಸ್ಥಳದ ಧರ್ಮಾಧಿಕಾರಿಗಳು, ಕೊಡಗಿನವರು ಇತರ ಉಳ್ಳವರು ಹಣಕಾಸು ಹಾಗೂ ಮತ್ತಿತರ ನೆರವನ್ನು ನೀಡಿದರಂತೆ. ಕೆದಂಬಾಡಿ ರಾಮಯ್ಯಗೌಡರ ನೇತೃತ್ವದ ದಂಡನ್ನು ಕಂಡ ಬ್ರಿಟೀಷರು ಕಂಗೆಟ್ಟು ಓಡಿದರು. ಎಪ್ರಿಲ್ ಐದರಂದು ಲೈಟ್‍ಹೌಸ್ ಹಿಲ್‌ನಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಬಾವುಟವನ್ನು ಕಿತ್ತುಹಾಕಿ ರಾಜ ಲಾಂಛನವನ್ನು ಊರಿ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಿ 13 ದಿನಗಳ ಕಾಲ ಆಡಳಿತ ನಡೆಸಿದ್ದರು. ರಾಜಲಾಂಛನವನ್ನು ಊರಿದ ಈ ಸ್ಥಳ ಬಾವುಟ ಗುಡ್ಡೆಯಾಯಿತು.

ಆದರೆ ಇವರನ್ನು ಮಣಿಸಲು ಬ್ರಿಟೀಷ್ ಸೇನೆ ಸರ್ವಸಜ್ಜಿತವಾಗಿ ಅಧಿಕ ಸಂಖ್ಯೆಯಲ್ಲಿ ಬಂದು ಆಕ್ರಮಣ ನಡೆಸಿದಾಗ ಅವರ ಆಧುನಿಕ ರೀತಿಯ ಧಾಳಿಯನ್ನು ಅಪಾರ ಪ್ರಮಾಣದ ಸೇನೆಯನ್ನು ಎದುರಿಸಲಾಗದೆ ಸೋಲೊಪ್ಪಬೇಕಾಯಿತು ಅಲ್ಲದೆ ಕೆಲವರು ನಮ್ಮವರೇ ನಮ್ಮವರ ವಿರುದ್ಧ ನಡೆಸಿದ ಪಿತೂರಿಯೂ ಮಾರಕವಾಯಿತು. ಈ ಸಂದರ್ಭ ಸಾವಿರಾರು ಮಂದಿ ಬಂಧನಕ್ಕೀಡಾಗಿ ಮರಳಿ ಮನೆಗೆ ಬರಲೇ ಇಲ್ಲ. ಕೆಲವರನ್ನು ನೇಣಿಗೇರಿಸಲಾಯಿತು. ಅದೂ ಕ್ರೂರವಾಗಿ ನೇಣಿಗೇರಿಸಿ ಶವವನ್ನು ಹದ್ದುಗಳಿಗೆ ತಿನ್ನಲು ಬಿಟ್ಟಿದ್ದಂತೆ! ಮತ್ತೆ ಕೆಲವು ಮಂದಿಯನ್ನು ಪ್ರಾಣಿಗಳಂತೆ ಬೋನಿನಲ್ಲಿ ತುರಕಿ ಕಡಲಾಚೆಯ ದೇಶಗಳಿಗೆ ಸಾಗಿಸಿ ಚಿತ್ರಹಿಂಸೆ ನೀಡಲಾಯಿತು.

ಇಂತಹ ಈ ಧೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಅದೇ ಬಾವುಟ ಗುಡ್ಡೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದು ಇದಕ್ಕೆ ಸರ್ವ ತಯಾರಿಗಳು ನಡೆದಿವೆ. ಸುಳ್ಯ ತಾಲೂಕಿನವರಾದ ಈ ಸಮರ ಸೇನಾನಿಯ ಪುತ್ಥಳಿ ಬಾವುಟ ಗುಡ್ಡೆಯಲ್ಲಿ ನೆಲೆಯಾಗ ಬೇಕೆಂಬುದರ ಹಿಂದೆ ಹಲವರ ಪ್ರಯತ್ನವಿದೆ. ಚಿನ್ನದ ಬಣ್ಣದಲ್ಲಿ ಹೊಳೆಯುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯು ಅವರ ಅಗಾಧ ಶೌರ್ಯವನ್ನು ಸಾರುತ್ತದೆ. ಹನ್ನೊಂದು ಅಡಿ ಎತ್ತರದ ಈ ಭವ್ಯ ಪ್ರತಿಮೆಯು ನೆರೆಯ ಆಂಧ್ರದ ವಿಜಯವಾಡದಲ್ಲಿ ತಯಾರಾಗಿದ್ದು ಇದೀಗ ಬಾವುಟ ಗುಡ್ಡೆಯತ್ತ ಹೊರಟಿದೆ.

ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿಯ ಜಾಥಾಕ್ಕೆ ನಿಶಾನೆ ತೋರಿಸಿದ ಆದಿಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲನಾಥ ಸ್ವಾಮೀಜಿ

ಆಗಸ್ಟ್ 29ರಂದು ಸುಳ್ಯದ ಮೂಲಕ ಪ್ರತಿಮೆ ಹಾದುಹೋಗಲಿದ್ದು ಇಡೀ ಕೊಡಗು – ದಕ್ಷಿಣ ಕನ್ನಡ ಪುಳಕಗೊಂಡಿದೆ. ಸುಳ್ಯವಂತೂ ರಾಮಯ್ಯ ಗೌಡರ ಪ್ರತಿಮೆ ಅವರದೇ ನೆಲದಲ್ಲಿ ಹಾದು ಹೋಗುವ ಸಂಭ್ರಮದಿಂದ ರೋಮಾಂಚನ ಗೊಂಡಿದೆ. ದಾರಿಯುದ್ಧಕ್ಕೂ ಅಲ್ಲಲ್ಲಿ ಅದ್ದೂರಿಯ ಸ್ವಾಗತಗಳು, ವಾಹನ ಜಾಥಾಗಳು ನಡೆಯಲಿದ್ದು ನೂರಾ ಎಂಬತ್ತೈದು ವರ್ಷದ ಹಿಂದೆ ಉದಿಸಿದ ಈ ಊರಿನ, ಈ ಮಣ್ಣಿನ ಧೀಮಂತ ನಾಯಕನ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಜನತೆ ಕಾತರರಾಗಿದ್ದಾರೆ.

ಚಂದ್ರಾವತಿ ಬಡ್ಡಡ್ಕ, ಅನುವಾದಕರು, ಲೇಖಕರು.

You cannot copy content of this page

Exit mobile version