ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ರಸಾಸ್ವಾದನೆ ಆಗುವಂತೆ ಬೋಧಿಸಿದರೆ ಬೇರುಗಳಿಂದ ಅರಳುವ ಹೂವಿನಂತೆ ಸುಗಂಧಭರಿತವಾಗಿರುತ್ತದೆ. ಹಾಗೆ ಮಾಡದೆ ಹಳಗನ್ನಡವನ್ನು ದೂರೀಕರಿಸಿದರೆ ಬೇರುಗಳನ್ನು ಕತ್ತರಿಸಿಕೊಂಡ ಮರಗಳಾಗಿ ಒಣಗಿಹೋಗುತ್ತೇವೆ” ಎಂದು ಹಿರಿಯ ವಿದ್ವಾಂಸರೂ ದಾರಿದೀಪ ಶಿಕ್ಷಣ ಕೇಂದ್ರದ ಸಂಸ್ಥಾಪಕರೂ ಆದ ಪ್ರೊ.ಎನ್.ಬೋರಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಅಂತರ್ಜಾಲದ ಮೂಲಕ ಆಯೋಜಿಸಲಾಗಿದ್ದ “ಶಾಸ್ತ್ರೀಯ ಕನ್ನಡ ಪಠ್ಯಗಳ ವಾಚನ-ವ್ಯಾಖ್ಯಾನ-ಅನುಸಂಧಾನ” ಕುರಿತಾದ ೫ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪೂರ್ವದ ಸಾಂಸ್ಕೃತಿಕಹೊನ್ನನ್ನು ತಮ್ಮ ಅಪಾರವಾದ ಪ್ರತಿಭೆಯ ಮೂಲಕ ಕಾಲಕ್ಕೆ ತಕ್ಕಂತೆ ಅನ್ವಯಿಸಿಕೊಂಡ ಪಂಪ, ಕುಮಾರವ್ಯಾಸ ಮೊದಲಾದವರು ಶಾಸ್ತ್ರೀಯ ಕನ್ನಡ ಪರಂಪರೆಯಲ್ಲಿ ಮೇರುಕವಿಗಳೆನಿಸಿದ್ದಾರೆ. ಇಂಥವರಿಂದ ಸರ್ವಸ್ವವನ್ನೂ ಸ್ವೀಕರಿಸಿದ ಕುವೆಂಪು ಅಂಥವರು ಆಧುನಿಕ ಕನ್ನಡ ಸಂದರ್ಭದಲ್ಲಿ ಮಹಾಕವಿಯಾದರು. ಕನ್ನಡ ನೆಲದಿಂದ ಮಾತ್ರವಲ್ಲದೇ ಭಾರತೀಯ ಸಂಸ್ಕೃತಿಯಿಂದ ಹಾಗೂ ವಿಶ್ವಮಟ್ಟದ ಸಾಹಿತ್ಯ-ಸಂಸ್ಕೃತಿಗಳಿAದ ಮಾಲ್ಯಯುತವಾದುದನ್ನು ತಮ್ಮದಾಗಿಸಿಕೊಂಡ ಕುವೆಂಪು ಅವರು ತಮ್ಮ ಎಲ್ಲಾ ಸಾಹಿತ್ಯಕೃತಿಗಳಲ್ಲೂ ಅದನ್ನು ಎರಕಹೊಯ್ದಿದ್ದಾರೆ ಎಂದು ತಿಳಿಸಿದರು.
ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ಬೋಧಿಸಲು ಸಮರ್ಥವಾಗಿ ಸಿದ್ಧರಾಗಬೇಕು ಮತ್ತು ತರಗತಿಗಳಲ್ಲಿ ರಸವತ್ತಾಗಿ ಬೋಧಿಸುವ ಮೂಲಕ ಕನ್ನಡ ನಾಡಿನ ಮಕ್ಕಳ ಹೃದಯಗಳಲ್ಲಿ ರತ್ನಗಳಂತೆ ಹೊಳೆಯಿಸಬೇಕು, ಸುಸಂಸ್ಕೃತರನ್ನಾಗಿ ಮಾಡಬೇಕು. ಹಾಗೆ ಕನ್ನಡ ವಿವೇಕ ಪರಂಪರೆಯ ಬೆಳಗನ್ನು ಬೋಧಿಸುವವರೇ ನಿಜವಾದ ಮನುಷ್ಯರಾಗುತ್ತಾರೆ. ಇಂದು ಮಹಿಳೆಯರನ್ನು ಬೆತ್ತಲುಗೊಳಿಸುವ, ಅಮಾನುಷವಾಗಿ ಅತ್ಯಾಚಾರ ಮಾಡುವ ವಿಕೃತಿಗಳು ಮರೆಯುತ್ತಿರುವಾಗ ನಮ್ಮ ಶಾಸ್ತ್ರೀಯ ಕನ್ನಡದ ಪಠ್ಯಗಳಲ್ಲಿರುವ ವಿವೇಕದ ಮದ್ದನ್ನು ತಂದುಕೊಳ್ಳಬೇಕಿದೆ ಮತ್ತು ಮನುಷ್ಯರ ಮತಿಗೆ ನೀಡಿ ವಿವೇಕವನ್ನು ಬೆಳಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಸಹ ಕುಲಪತಿಗಳಾದ ಡಾ.ಫಾ.ಲಿಜೋ ಪಿ. ಥಾಮಸ್ ಅವರು ಆಶಯ ನುಡಿಗಳನ್ನಾಡಿದರು. ಕರಾಮುವಿ ಕನ್ನಡ ಪ್ರಾಧ್ಯಾಪಕರೂ ಪ್ರಸಿದ್ಧ ಗಮಕಿಗಳೂ ಆದ ಪ್ರೊ.ಜ್ಯೋತಿಶಂಕರ್ ಅವರು ಕನ್ನಡ ಶಾಸನ, ಪಂಪಭಾರತ, ಕುಮಾರವ್ಯಾಸಭಾರತ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಹರಿಹರ ವಿರಚಿತ ಕುಂಬಾರ ಗುಂಡಯ್ಯನ ರಗಳೆ, ಮುದ್ದಣನ ರಾಮಾಶ್ವಮೇಧ, ರತ್ನಾಕರವರ್ಣಿಯ ಭರತೇಶ ವೈಭವ ಕಾವ್ಯಗಳಿಂದ ಆಯ್ದ ಪದ್ಯಭಾಗಗಳನ್ನು ಗಮಕದಲ್ಲಿ ವಾಚನ ಮಾಡಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ.ನೀಲಗಿರಿ ಎಂ.ತಳವಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರಾದ ಡಾ.ಸೈಯದ್ ಮುಯಿನ್ ನಿರ್ವಹಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ರವಿಶಂಕರ್ ಎ.ಕೆ., ಡಾ.ಭೈರಪ್ಪ ಎಂ., ಡಾ.ಕಿರಣಕುಮಾರ್ ಹೆಚ್.ಜಿ. ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ-ಸಹ ಸಂಶೋಧಕರು ಉಪಸ್ಥಿತರಿದ್ದರು. ೨೫೦ಕ್ಕೂ ಹೆಚ್ಚು ಕನ್ನಡ ಅಧ್ಯಾಪಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.