ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಹೇಳಿ, ಈಗ ಎಸ್ಐಟಿ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಚಿನ್ನಯ್ಯ ಅವರ ಜಾಮೀನು ಅರ್ಜಿ ವಜಾ ಆಗಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಬಳಿಕ ನ್ಯಾಯಾಲಯ ಚಿನ್ನಯ್ಯನ ಜಾಮೀನು ಅರ್ಜಿ ವಜಾಗೊಳಿಸಿದೆ.
ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 23 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆ ನಡೆಸಿ ಸೆ.3 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿ ಚಿನ್ನಯ್ಯನನ್ನು ಮತ್ತೆ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಿ ಸೆ.6 ರಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಚಿನ್ನಯ್ಯ ಪರ ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ಪಡೆದುಕೊಂಡು ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಸೆ.12 ಕ್ಕೆ ಜಾಮೀನು ಅರ್ಜಿ ವಾದ ವಿವಾದ ನಡೆಸಿ, ಸೆ.16 ಕ್ಕೆ ಜಾಮೀನು ಅರ್ಜಿ ಆದೇಶಕ್ಕೆ ನಿಗದಿಪಡಿಸಿದ್ದರು.
ಇತ್ತ ಎಸ್ಐಟಿ ತನಿಖೆಯೇ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಹೆಚ್ಚಿನ ತನಿಖೆ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಸೆ.16 ರ ವಿಚಾರಣೆಯಲ್ಲಿ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಸಾಕ್ಷಿ ದೂರುದಾರ ಚಿನ್ನಯ್ಯರ ಜಾಮೀನು ಅರ್ಜಿ ವಜಾ ಮಾಡಿದ್ದಾರೆ.