“..ಇಡೀದಿನ ಬೈದು ಕುಣಿದು ಸುಸ್ತಾಗಿ, ಮರುದಿನ ಊರಿನ ಭದ್ರಕಾಳಿ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಿದರೆ, ಮರುದಿನದಿಂದ ಒಂದು ವರ್ಷ ಮತ್ತದೇ- ತಾವು ಬೈದ ಧಣಿಗಳ ಮನೆ, ತೋಟ, ಎಸ್ಟೇಟುಗಳಲ್ಲಿ ದುಡಿತ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಒಂದು ದಾರಿಗುರುತಿನ ಸಂಖ್ಯೆಯಾದ 50ನ್ನು ಮುಟ್ಟುವ ಮೊದಲೇ, 49ರಲ್ಲಿಯೇ ಈ ಕಾಲಂ ಕೆಲವು ತಿಂಗಳು ಅನಿವಾರ್ಯವಾದ ಕಾರಣಗಳಿಂದ ನಿಂತದ್ದು ಬೇಸರ ಉಂಟುಮಾಡಿದೆ. ಅದಕ್ಕಾಗಿ, ಅಂದು ನಿಲ್ಲಿಸಿದ್ದಲ್ಲಿಂದಲೇ ಆರಂಭಿಸುತ್ತೇನೆ. ಕರ್ನಾಟಕದಲ್ಲಿ ಆಚರಿಸಲಾಗುತ್ತಿರುವ ಕೆಲವು ಅಮಾನವೀಯ ಪದ್ಧತಿಗಳ ಬಗ್ಗೆ, ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ತೆಳುವಾದ ಗೆರೆ, ಅವುಗಳ ಆಚರಣೆಯಲ್ಲಿ ಸಹನೀಯ ಯಾವುದು, ಅಮಾನವೀಯ ಯಾವುದು ಎಂಬುದನ್ನು ನಿರ್ಧರಿಸುವುದಾದರೂ ಹೇಗೆ ಎಂಬ ವಿಷಯಗಳನ್ನು ಕುರಿತು ಇಲ್ಲಿ ಬರೆದಿದ್ದೆ. ಕರಾವಳಿಯ ಕೊರಗರು ಅನುಭವಿಸುತ್ತಾ ಬಂದಿರುವ ಅಜಲು ಪದ್ಧತಿ, ಎಂಜಲಿಗೆ ಸಂಬಂಧಿಸಿದ ಕೆಲವು ಆಚರಣೆಗಳು, ಮಡೆಸ್ನಾನ, ಮುಟ್ಟಾದ ಗರ್ಭಿಣಿ, ಬಾಣಂತಿಯರನ್ನು ಒಂಟಿಯಾಗಿ ಊರಿಂದ ಹೊರಗಿಡುವುದು ಇತ್ಯಾದಿಗಳ ಬಗ್ಗೆ ಸ್ವಲ್ಪ ವಿವರಗಳನ್ನು ಹಿಂದೆ ನೀಡಿದ್ದೆ.
ಹಕ್ಕಿಪಿಕ್ಕಿ ಸಮುದಾಯದಲ್ಲಿದ್ದ ಒಂದೆರಡನ್ನು ಇಲ್ಲೇ ಬರೆದಿದ್ದೆ. ಮುಂದೆ ಕೆಲವನ್ನು ಈಗ ನೋಡೋಣ. (ಸಮುದಾಯದಲ್ಲಿದ್ದ ಎಂದು ಹೇಳಿರುವುದು ಉದ್ದೇಶಪೂರ್ವಕ. ಇಲ್ಲಿರುವ ಮಾಹಿತಿಗಳು ಎರಡು ದಶಕಗಳಿಗೂ ಹಿಂದೆ ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರ ನಡೆಸಿದ್ದ, ನಾನು ಮುಖ್ಯ ಸಂಯೋಜಕನಾಗಿ ಕೆಲಸ ಮಾಡಿದ್ದ, ಕಿರು ಅಧ್ಯಯನದಲ್ಲಿ ತಿಳಿದಂತವು; ಈ ಆಚರಣೆಗಳು ಈಗ ಎಷ್ಟರ ಮಟ್ಟಿಗೆ ಇವೆ ಅಥವಾ ಇಲ್ಲ ಎಂಬುದು ನನಗೆ ಗೊತ್ತಿಲ್ಲ ಮತ್ತು ಗೊತ್ತಿರುವುದು ಸಾಧ್ಯವೂ ಇಲ್ಲವೆಂದು ಹಿಂದೆ ಹೇಳಿರುವುದನ್ನು ಮತ್ತೆ ನೆನಪಿಸಬೇಕು.)
ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದವರು ಇನ್ನೂರು ವರ್ಷಗಳ ಹಿಂದೆ ರಾಜ್ಯಕ್ಕೆ ಬಂದಿರಬಹುದೆಂದು ಒಂದು ಅಂದಾಜು. ಶಿಕಾರ್ ಎಂದೂ ಕರೆಯಲಾಗುವ ಈ ಜನರು ಮೂಲತ: ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದವರು. ಈ ದಾಖಲೆಯನ್ನು ಹಾಸನದ ಬೇಲೂರು ತಾಲೂಕಿನ ಹಗರೆ ಬಳಿಯ ಬಸವಾಪುರ ಮತ್ತು ಅಂಗಡಿ ಎಂಬಲ್ಲಿ ನೆಲೆನಿಂತಿದ್ದ ಜನರನ್ನು ಮಾತನಾಡಿಸಿ ಮಾಡಲಾಗಿತ್ತು. ಹುಣಸೂರು ಜಿಲ್ಲೆಯ ಪಕ್ಷಿರಾಜಪುರ, ಕಚ್ಚೇನ ಹಳ್ಳಿ, ಚಾಮರಾಜನಗರ ತಾಲೂಕಿನ ತಾಳವಾಡಿ, ಹೆಗ್ಗಡದೇವನಕೋಟೆ ತಾಲೂಕಿನ ಸಡ್ಡೆ, ಶಿವಮೊಗ್ಗ ತಾಲೂಕಿನ ಚಿಕ್ಕಮರಡಿ, ಚೆನ್ನಗಿರಿ ತಾಲೂಕಿನ ಗೋಪನಾಳು, ಅಸ್ತಪನಹಳ್ಳಿ, ಚಿಕ್ಕಮಗಳೂರು ತಾಲೂಕಿನ ಮಲ್ಲೇನ ಹಳ್ಳಿ, ಬೆಂಗಳೂರಿನ ಬನ್ನೇರುಘಟ್ಟ, ರಾಮನಗರ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಚಿನಕುರಳಿ ಮುಂತಾದ ಕಡೆಗಳಲ್ಲಿ ಇವರು ವಾಸವಿದ್ದರು. ಇವರ ನಿಖರ ಸಂಖ್ಯೆಯನ್ನು ಅವರ ಅಲೆದಾಟದ ಜೀವನದಿಂದಾಗಿ ಹೇಳುವುದು ಕಷ್ಟವಾದರೂ, 2,500ರಷ್ಟು ಇತ್ತು. ಬಾಲ್ಯವಿವಾಹ ವ್ಯಾಪಕವಾಗಿದ್ದರೂ, ಕೇಳುವವರೇ ಇಲ್ಲ. ಹತ್ತರ ಆಸುಪಾಸಿನ ಹುಡುಗಿ, ಹದಿನೈದರ ಆಸುಪಾಸಿನ ಹುಡುಗನ ಮದುವೆ ಸಾಮಾನ್ಯವಾಗಿತ್ತು.
ಇವರಲ್ಲಿ ಗುಜರಾತಿಯೋ, ಮೇವಾಡೋ, ಕಾಳೀವಾಡೋ ಎಂಬ ಮೂರು ಮುಖ್ಯ ಪಂಗಡಗಳಿವೆ. ಇವುಗಳಲ್ಲಿ ಶಿವೋ, ಶಂಭೋ, ಘಾಸಿರಾಂ, ನಾಗೋ, ಬಾಳೋ, ಧಾಡರ, ದಂಶಿ… ಹೀಗೆ ಹಲವಾರು ಕುಟುಂಬ ಗಣಗಳಿವೆ. ಒಳಪಂಗಡಗಳ ನಡುವೆ ಮದುವೆ ನಿಷಿದ್ಧ. ಪಂಗಡಗಳ ನಡುವೆ ಮದುವೆ ಸಂಬಂಧ ಇದ್ದರೂ, ಮೇಲುಕೀಳು ಇದೆ. ಹಕ್ಕಿಪಿಕ್ಕಿಯರಲ್ಲಿ ಮರುಮದುವೆ, ಬಹುಪತ್ನಿತ್ವ ಮತ್ತು ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ, ಇದು ಪಂಗಡಗಳ ಒಪ್ಪಿಗೆಯಿಂದ ಸೀರುಡಿಕೆಯಂತಾ ಸಾಮಾಜಿಕ ಮಾನ್ಯತೆಯಿಂದಲೇ ನಡೆಯಬೇಕು. ಜಾತಿ ತಪ್ಪಿದರೆ, ಗಂಡಾಗಲೀ ಹೆಣ್ಣಾಗಲಿ, ಜಾತಿಯಿಂದ ಹೊರಹಾಕಾಗುತ್ತದೆ. ಈ ಜನಾಂಗದಲ್ಲಿ ಮಹಿಳೆಯರಿಗೆ ಕೌಟುಂಬಿಕ ಜೀವನದಲ್ಲಿ ಗಂಡಿನ ಮೇಲೆ ಬಹಳಷ್ಟು ನಿಯಂತ್ರಣಗಳಿವೆ. ಗಂಡ ಹೆಂಡತಿಯನ್ನು ಬಿಡುವುದಕ್ಕಿಂತ ಹೆಂಡತಿ ಗಂಡನನ್ನು ಬಿಟ್ಟುಹೋಗುವುದೇ ಹೆಚ್ಚು.
ವರ್ಷಗಳ ಹಿಂದೆ ಒಂದು ರಾತ್ರಿ ನಾನು ನಮ್ಮ ತಾಲೂಕು ಕೇಂದ್ರದ ಬಸ್ಸು ನಿಲ್ದಾಣದಲ್ಲಿ- ತನ್ನ ಜೊತೆ ಬರಬೇಕೆಂದು ಹೆಂಡತಿಯ ಕಾಲು ಹಿಡಿದು ದಯನೀಯವಾಗಿ ಗೋಗರೆಯುವ ಗಂಡನನ್ನೂ, ತಾನು ಬರುವುದಿಲ್ಲ, ನೀನು ಹೋಗು ಎಂದು ಚಂಡಿ ಹಿಡಿದ ಹೆಂಡತಿಯನ್ನೂ ಕಂಡಿದ್ದೆ. ನಂತರ ಮಧ್ಯಪ್ರವೇಶ ಮಾಡಿ, ನೀವು ಹಕ್ಕಿಪಿಕ್ಕಿಯಲ್ಲಿ ಯಾವ ಪಂಗಡ, ಗುಜರಾತಿಯೋದವರಾ, ಮೇವಾಡೋದವರಾ ಎಂದು ಹಠಾತ್ ಕೇಳಿದೆ. ಅವಕ್ಕಾದ ಅವರು ಬಾಯಿಬಿಟ್ಟುಕೊಂಡು, ನನ್ನನ್ನು ನೋಡಿ ಜಗಳ ನಿಲ್ಲಿಸಿದರು. ಅವಳು ತಾನು ಗುಜರಾತಿಯೋ ಎಂದೂ, ಅವನು ಮೇವಾಡೋದವನೆಂದೂ, ತಮ್ಮ ಪಂಗಡಕ್ಕಿಂತ ಅವನ ಪಂಗಡ ಕೀಳೆಂದೂ, ಅವನಿಗೆ ಅಹಂಕಾರ ಬಂದಿದೆ ಎಂದೂ ಪಟ್ಟಿಯೂದಿದಳು. ಅವರ ಪದ್ಧತಿಗಳ ಬಗ್ಗೆ ನನಗೆ ಗೊತ್ತಿದ್ದ ಅಲ್ಪಸ್ವಲ್ಪವನ್ನು ಉದುರಿಸಿದುದರಿಂದ ನನ್ನ ಮೇಲೆ ವಿಶ್ವಾಸ ಬಂದು, ಕೊನೆಗೆ ಕೆಲವು ಶರತ್ತು ಹಾಕಿ ಅವನ ಜೊತೆಗೆ ಹೋಗಲು ಒಪ್ಪಿಕೊಂಡಳು. ಅವರು ಹಾಸನದ ಬಸ್ಸು ಹತ್ತಿದರು. ಅವರಲ್ಲಿ ವರದಕ್ಷಿಣೆಯ ಬದಲು ಗಂಡೇ ಹೆಣ್ಣಿನ ಮನೆಯವರಿಗೆ ವಧುದಕ್ಷಿಣೆ ಕೊಡಬೇಕು. ಅದರಲ್ಲಿ ಇಂತಿಷ್ಟು ಕೇಸು ಮದ್ಯದ ಬಾಟಲಿ ಮತ್ತು ಬಾಡೂಟದ ಖರ್ಚೂ ಸೇರಿರುತ್ತದೆ. ತಪ್ಪು ಮಾಡಿದವರಿಗೆ ವಿಧಿಸುವ ದಂಡದಲ್ಲೂ ಈ ಐಟಂ ಕಡ್ಡಾಯ! ಅವರ ಮದುವೆ ಇತ್ಯಾದಿ ಪದ್ಧತಿಗಳ ಬಗ್ಗೆ ಇಲ್ಲಿ ಹೇಳಲು ಹೋಗುವುದಿಲ್ಲ. ಬದಲಾಗಿ ಇವೆಲ್ಲವುಗಳಿಗೆ ಹೊರತಾಗಿಯೂ, ಹೆಣ್ಣಿನ ಮೇಲೆ ಹೇರಲಾಗಿರುವ ಕೆಲವು ಕ್ರೂರ ಆಚರಣೆಗಳನ್ನು ಮಾತ್ರವೇ ಇಲ್ಲಿ ಹೇಳುತ್ತೇನೆ.
ವ್ಯಭಿಚಾರ ಈ ಸಮುದಾಯದಲ್ಲಿ ಗುರುತರವಾದ ಅಪರಾಧ. ಕನ್ಯತ್ವಕ್ಕೆ ಬಹಳ ಮಹತ್ವ. ಹೆಣ್ಣಾದರೆ ಅತ್ಯಂತ ಅಶ್ಲೀಲ ಪದವಿಗಳು ಜೀವನ ಪರ್ಯಂತ ಅವಳ ಹೆಸರಿಗೇ ಅಂಟಿಕೊಂಡಿರುತ್ತದೆ. ವಿವಾಹಪೂರ್ವ ಮತ್ತು ವಿವಾಹ ಬಾಹಿರ ಸಂಬಂಧಗಳಿಗೆ ಬೇರೆಬೇರೆ ವಿಶೇಷಣಗಳಿವೆ. ಅವುಗಳನ್ನಿಲ್ಲಿ ಹೇಳುವುದೂ ಸೂಕ್ತವಲ್ಲ. ಗಂಡಿಗೆ ಅಂತದ್ದಿಲ್ಲ. ಆದರೆ, ಇಬ್ಬರೂ ತಮ್ಮ ಕುಲದವರನ್ನು ಸೇರಿಸಿ ವಿವಿಧ ವಿಧಿವಿಧಾನಗಳ ಮೂಲಕ ಶುದ್ಧೀಕರಣ ಮಾಡಿಸಿಕೊಳ್ಳಬೇಕು. ಮದ್ಯ ಮತ್ತು ಬಾಡೂಟದ ಸಮಾರಾಧನೆ ಕಡ್ಡಾಯ!
ಮದುವೆಗಿಂತ ಮೊದಲು ಹೆಣ್ಣು ಲೈಂಗಿಕ ಸಂಬಂಧ ಮಾಡಿದ್ದಾಳೆ ಎಂಬ ಸಂಶಯ ಗಂಡಿನ ಕಡೆಯವರಿಗೆ ಬಂದರೆ, ಅದನ್ನು ಪರೀಕ್ಷಿಸುವ ವಿಧಾನ ತುಂಬಾ ಹೇಯವಾಗಿದೆ. ಹೆಂಗಸರು ಸೇರಿಕೊಂಡು ಆ ಹೆಣ್ಣಿನ ಮರ್ಮಾಂಗಕ್ಕೆ ಮೊಟ್ಟೆ ತೂರಿಸುತ್ತಾರೆ. ಒಳಗೆ ಹೋದರೆ, ಆಕೆ ಕನ್ಯತ್ವ ಕಳೆದುಕೊಂಡಿದ್ದಾಳೆ ಎಂದೂ, ಹೋಗದಿದ್ದರೆ ಇಲ್ಲವೆಂದೂ ತೀರ್ಮಾನವಾಗುತ್ತದೆ. ಪರೀಕ್ಷೆಯಲ್ಲಿ ಹುಡುಗಿ ಫೇಲಾಗಿ ಗಂಡಿನ ಕಡೆಯವರು ಹಿಂದೆ ಹೋದರೆ, ಆಕೆಗೆ ವ್ಯಭಿಚಾರಿಣಿಯ ಕಳಂಕ ಅಂಟಿಕೊಳ್ಳುತ್ತದೆ. ಆಕೆಗೆ “ದೇವೀನ ಟೀಕಾಬಂದ್” ಇಲ್ಲ ಎಂದು ನಿರ್ಧಾರವಾಗುತ್ತದೆ. ನಂತರ ಆಕೆಯನ್ನು ಯಾರೂ ಸಾಮಾನ್ಯ ಮದುವೆ ಆಗುವಂತಿಲ್ಲ. ಸೀರುಡಿಕೆ ಮಾಡಿಕೊಂಡು ಇಟ್ಟುಕೊಳ್ಳಬಹುದು.
ಯಾರಾದರೂ ತಪ್ಪು ವ್ಯಭಿಚಾರ ಮಾಡಿದ್ದಾರೆ ಎಂಬ ಆರೋಪ ಬಂದರೆ, ಒಪ್ಪಲೇ ಬೇಕಾಗುತ್ತದೆ. ಯಾಕೆಂದರೆ, ತಪ್ಪು ಮಾಡಿಲ್ಲವೆಂದು ಸಾಬೀತು ಮಾಡಲು ಕೆಲವು ಕ್ರೂರ ವಿಧಾನಗಳಿವೆ. ಕುಲ ಪಂಚಾಯಿತಿ ಎದುರು ಒಂದು ಮಡಕೆಯಲ್ಲಿ ಸೆಗಣಿ ನೀರನ್ನು ಕಾಯಿಸಿ, ಅದರಲ್ಲಿ ಉಂಗುರ ಅಥವಾ ನಾಣ್ಯವನ್ನು ಹಾಕುತ್ತಾರೆ; ಅದನ್ನು ಕೈಹಾಕಿ ತೆಗೆಯಬೇಕು. ಇಂತಾ ಧೈರ್ಯ ಯಾರಾದರೂ ಮಾಡಲು ಸಾಧ್ಯವೆ?! ಇಲ್ಲವಾದಲ್ಲಿ ಕೊಡಲಿಯನ್ನು ಚೆನ್ನಾಗಿ ಕಾಯಿಸಿ, ವೀಳ್ಯದೆಲೆಯನ್ನು ಆರೋಪಿಯ ಅಂಗೈ ಮೇಲೆ ಇಟ್ಟು ಅದರ ಮೇಲೆ ಕೊಡಲಿ ಅಲಗನ್ನು ಇಡುತ್ತಾರೆ. ತಪ್ಪು ಮಾಡಿದ್ದರೆ, ಸುಡುತ್ತದೆ; ಇಲ್ಲವಾದರೆ, ಇಲ್ಲ ಎಂಬ ನಂಬಿಕೆ!
ಇವರಲ್ಲಿ ಇರುವ- ಹೆಣ್ಣು ತನ್ನ ಹೆರಿಗೆಯನ್ನು ಊರ ಹೊರಗೆ ತಾನೇ ಮಾಡಿಕೊಳ್ಳಬೇಕಾದ ಅಮಾನವೀಯ ಪದ್ಧತಿಯ ಕುರಿತು ಇಲ್ಲಿಯೇ ಕಾಡುಗೊಲ್ಲರ ಇಂತಾ ಆಚರಣೆಗಳ ಕುರಿತು ಬರೆಯುವಾಗ ವಿವರಿಸಿದ್ದೇನೆ. ಅಲ್ಲದೇ ಮದುವೆಯಾದ ಹೆಂಗಸರು ಬೇರೆ ಗಂಡಸರಿಗೆ ತಾಗುವಂತೆ ಲಂಗ ಇಟ್ಟರೆ ದಂಡ, ಜಗಳವಾದಾಗ ಹೆಂಡತಿ ಗಂಡನ ಜುಟ್ಟು ಹಿಡಿದರೆ ದಂಡ, ಮುಸ್ಲಿಮರು ಮತ್ತು ಮಾದಿಗರ ಮನೆಯಲ್ಲಿ ನೀರು ಕುಡಿದರೆ ದಂಡ… ಹೀಗೆಲ್ಲಾ ಚಿತ್ರವಿಚಿತ್ರಗಳು ಇದ್ದವು. ಇವೆಲ್ಲವೂ ಈಗ ಎಷ್ಟರ ಮಟ್ಟಿಗೆ ಉಳಿದಿವೆ ಎಂಬುದು ಗೊತ್ತಿಲ್ಲ.
ಕೊಡಗಿನ ಕುಂಡೆ ಹಬ್ಬ
ಕೊಡಗಿನ ಮೂಲನಿವಾಸಿಗಳು ಎನ್ನಲಾದ ಜೇನುಕುರುಬರು ಅಥವಾ ಬೆಟ್ಟ ಕುರುಬರ ಬದುಕು ಶೋಚನೀಯವಾಗಿದೆ. ಅವರಲ್ಲಿದ್ದ ಆಚರಣೆಗಳಲ್ಲಿ ಕೆಲವು ಸಾಂಕೇತಿಕವಾಗಿ ಉಳಿದುಕೊಂಡಿದ್ದವು. ಅವುಗಳಲ್ಲಿ ಒಂದು ವಿಲಕ್ಷಣ ಆಚರಣೆಯನ್ನು ಕುಂಡೆ ಹಬ್ಬ, ಬೈಗುಳ ಹಬ್ಬ, ಬೋಡು ಹಬ್ಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಪ್ರತೀ ವರ್ಷ ಕೊಡಗಿನ ದೇವರಪುರ, ಪೊನ್ನಂಪೇಟೆ, ನಿಟ್ಟೂರು, ಕಾರ್ಮಾದ, ಪಾಲಿಬೆಟ್ಟ, ನಾಗರಹೊಳೆ, ರಾಜಾಪುರ ಸಮೀಪದ ಮಾಕಲ್ಲು, ತಿತಿಮತಿ ಮುಂತಾದ ಕಡೆಗಳಲ್ಲಿ ಪ್ರತೀ ಮೇ ತಿಂಗಳಲ್ಲಿ ಈ ಆಚರಣೆಯಿತ್ತು. ಇದರ ಮೂಲಸ್ಥಾನ ದೇವರಪುರ ಹೆಬ್ಬಾಲೆ ಅಯ್ಯಪ್ಪ ದೇವಸ್ಥಾನ ಎನ್ನಬಹುದೇನೋ. ಮೇ ತಿಂಗಳಲ್ಲಿ ಇಲ್ಲಿ ನಡೆಯುವ ಜಾತ್ರೆ ದಿನವೇ ಇಲ್ಲಿಯೂ ಸೇರಿದಂತೆ ಎಲ್ಲೆಡೆ ಇದು ನಡೆಯುವುದು.
ಈ ಆಚರಣೆಯ ಮುಖ್ಯಾಂಶ ಎಂದರೆ, ತೀರಾ ಅಶ್ಲೀಲವಾದ ಬೈಗುಳ. ಇದಕ್ಕೆ ಹೆಚ್ಚಾಗಿ ಗಂಡಸರ ಹಿಂಭಾಗವೇ ಗುರಿ. ಲೈಂಗಿಕ ಕ್ರಿಯೆ ಮತ್ತು ಹೆಣ್ಣು ಗಂಡಿನ ಅವಯವಗಳಿಗೆ ಸಂಬಂಧಿಸಿದ ಬೈಗುಳಗಳೂ ಧಾರಾಳವಾಗಿವೆ. ದೇವರುಗಳನ್ನೂ ಕೂಡಾ ಬಿಡದೇ ಬೈದು, ಕುಣಿಯುವುದು ತಪ್ಪೆಂದಾಗಲೀ, ಪಾಪವೆಂದಾಗಲೀ ಯಾರೂ ಭಾವಿಸುವುದಿಲ್ಲ. ಅದು ತಮ್ಮ ಹಕ್ಕು ಎಂದೇ ಅವರ ಭಾವನೆ. ಆಚರಿಸುವವರು ಮುಖಕ್ಕೆ ಬಣ್ಣಬಳಿದುಕೊಂಡು, ಸೊಂಟಕ್ಕೆ ಸೊಪ್ಪು ಸುತ್ತಿಕೊಂಡು ಹೆಂಗಸರು ಗಂಡಸರಂತೆಯೂ, ಗಂಡಸರು ಹೆಂಗಸರಂತೆಯೂ ವೇಷ ಧರಿಸುತ್ತಾರೆ. ಹಿಂದೆ ಸೊಪ್ಪು ಸುತ್ತಿ ಹೊನ್ನೆ ಹೂವನ್ನು ಮುಡಿಯುತ್ತಿದ್ದರು. ಜೇನಿನಿಂದ ಕಲಸಿದ ಮಸಿಯನ್ನು ಹಚ್ಚಿಕೊಳ್ಳುತ್ತಿದ್ದರು. ಹಣತೆಯ ತಟ್ಟೆ, ಉದ್ದನೇ ಕೈಚೀಲ ಇರುತ್ತಿತ್ತು. ಸೋರೆ ಬುರುಡೆ, ಕೆಲವೊಮ್ಮೆ ಕೊಳಲು ಇರುತ್ತಿತ್ತು. ಈಗ ಸಿಕ್ಕಸಿಕ್ಕ ಉಡುಪು, ಒಳ ಉಡುಪುಗಳನ್ನು ಧರಿಸುತ್ತಾರೆ. (ಡಾ. ಡಿ.ಬಿ. ರಾಮಚಂದ್ರ ರಾವ್ ಅವರ ‘ಕೊಡಗು: ಒಂದು ನೋಟ ಎಂಬ ಬರಹದಲ್ಲಿ ವಿವರಗಳಿವೆ.)
ಹಬ್ಬದ ದಿನ ಮನೆಮನೆ ಹೋಗುತ್ತಾರೆ. ಅಂಗಡಿ ಮುಂಗಟ್ಟುಗಳನ್ನೂ ಬಿಡದೆ ವಾಚಾಮಗೋಚರವಾಗಿ ನಿಂದಿಸುತ್ತಾರೆ. ಜನರು ಮುಜುಗರಕ್ಕೆ ಒಳಗಾದರೂ, ತೋರಿಸಿಕೊಳ್ಳದೇ ಹಣಕೊಟ್ಟು ಕಳಿಸುತ್ತಾರೆ. ಬೀದಿಗಳಲ್ಲಿ ಗುಂಪಾಗಿ ನಿಂತು ಅವರಿವರೆನ್ನದೇ ಬೈಯ್ಯುತ್ತಾರೆ. ಹೆಚ್ಚಾಗಿ ಗುರಿಗಳೆಂದರೆ ದೇವರು, ದಣಿ ಮತ್ತು ಮೇಲ್ಜಾತಿಯವರು. ದೇಹದ ಎಲ್ಲಾ ಅವಯವಗಳೂ, ವಿವಿಧ ಲೈಂಗಿಕ ಕ್ರಿಯೆಗಳೂ ತಾಳಬದ್ಧವಾದ, ಅಶ್ಲೀಲ ಸಂಜ್ಞೆಗಳ ಕುಣಿತದೊಂದಿಗೆ ಎಡೆಬಿಡದೇ ಹೊರಬರುತ್ತವೆ. ಅವುಗಳನ್ನು ಇಲ್ಲಿ ಉಲ್ಲೇಖಿಸುವುದೂ ಕಷ್ಟ. ಹೆಣ್ಣುದೇವತೆಯ ಮರ್ಮಾಂಗ, ಕಾಮ ಇತ್ಯಾದಿಗಳೂ ಬೈಗುಳದ ಗುರಿ ಎಂದಷ್ಟೇ ಸಾಕು.
ಇದರ ಹಿಂದೆ ಒಂದು ಪೌರಾಣಿಕ ತಳಕು ಇದೆ. ಅಯ್ಯಪ್ಪ ಬೇಟೆಗೆ ಹೋದಾಗ ಒಮ್ಮೆ ಜೇನುಕುರುಬರನ್ನೂ ಜೊತೆಗೆ ಒಯ್ದನಂತೆ. ಯಾವುದೇ ಪ್ರಾಣಿ ಸಿಗದಿದ್ದರಿಂದ ಜೇನು ಕುರುಬರನ್ನು ಒಂದು ಬಂಡೆಯ ಬಳಿ ನಿಲ್ಲಿಸಿ ಹೋದವನು ಎಷ್ಟು. ಹೊತ್ತಾದರೂ ಬರಲಿಲ್ಲವಂತೆ. ಹುಡುಕಿಕೊಂಡು ಹೋದಾಗ ಅವನು ಇವರನ್ನು ಸಂಪೂರ್ಣವಾಗಿ ಮರೆತೇಬಿಟ್ಟು ಭದ್ರಕಾಳಿಯ ಜೊತೆ ಕಾಮಕೇಳಿಯಲ್ಲಿ ತೊಡಗಿದ್ದನಂತೆ. ಸಿಟ್ಟಾದ ಅವರು ಅಶ್ಲೀಲವಾಗಿ ಬೈಯಲಾರಂಭಿಸಿದಾಗ ಬೈಗುಳ ಬಾಣಗಳನ್ನು ತಡೆಯಲಾರದೆ ಅಯ್ಯಪ್ಪ ಕುಂಡೆ ತೋರಿಸಿ ಓಡಿದನಂತೆ. ಹಾಗಾಗಿ ಕುಂಡೆಯೇ ಮುಖ್ಯವಾಗಿ ಬೈಗುಳದ ವಿಷಯ ಮತ್ತು ಹೆಸರಿಗೆ ಕಾರಣ ಎನ್ನಲಾಗುತ್ತದೆ. ಜೇನು ಕುರುಬರು ಮಾತ್ರ ಇದು ಕುದುರೆ ಹಬ್ಬ ಎನ್ನುತ್ತಾರೆ. ಆದರೆ, ಆ ಹೆಸರು ಜಾಲ್ತಿಯಲ್ಲಿಲ್ಲ. ಅಯ್ಯಪ್ಪನ ಹೆಸರಿನ ಜೊತೆ ಬರುವ ಹರಿಹರರ ಸಲಿಂಗ ಕಾಮವೇ ಕುಂಡೆ ಹಬ್ಬದ ಗುರಿ ಎಂದೂ ಹೇಳಲಾಗುತ್ತದೆ. ಹಬ್ಬದ ಮೆರವಣಿಗೆಯಲ್ಲಿ ಒಂದು ಮರದ ಕುದುರೆಯೂ ಇರುತ್ತದೆ. ಮೇಲ್ಜಾತಿಯವರು ಬಿಟ್ಟು ಹೆಚ್ಚಿನ ಎಲ್ಲರೂ ಇದರಲ್ಲಿ ಭಾಗವಹಿಸುತ್ತಿದ್ದರು. ಕೊಡವರ ಸನ್ನುವಂಡ ಎಂಬ ಕುಟುಂಬ ಹಿಂದಿನಿಂದ ಇದರ ನೇರ ಸಂಪರ್ಕ ಹೊಂದಿದ್ದು, ಜನಸಾಮಾನ್ಯರ ಸಹಾನುಭೂತಿಯೂ ಇತ್ತು. ಬೈಗುಳಗಳನ್ನು ಹೆಚ್ಚಿನವರು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರು.
ಇಡೀದಿನ ಬೈದು ಕುಣಿದು ಸುಸ್ತಾಗಿ, ಮರುದಿನ ಊರಿನ ಭದ್ರಕಾಳಿ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಿದರೆ, ಮರುದಿನದಿಂದ ಒಂದು ವರ್ಷ ಮತ್ತದೇ- ತಾವು ಬೈದ ಧಣಿಗಳ ಮನೆ, ತೋಟ, ಎಸ್ಟೇಟುಗಳಲ್ಲಿ ದುಡಿತ. ನಿತ್ಯವೂ ದುಡಿದು ಧಣಿಗಳಿಂದ ಬೈಗುಳ ತಿಂದ ಜೇನು ಕುರುಬರು, ವರ್ಷಕ್ಕೆ ಒಂದು ದಿನ ತಿರುಗಿ ಬೈದು ಮನದಲ್ಲಿ ಹೆಪ್ಪುಗಟ್ಟಿದ ನೋವನ್ನು ಹೊರಹಾಕಿ, ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ ಎಂಬುದು ಈ ಆಚರಣೆಯ ಸಮರ್ಥನೆ. ಇತ್ತೀಚೆಗೆ ಜೇನು ಕುರುಬರು ಹೆಚ್ಚು ಹೆಚ್ಚು ವಿದ್ಯವಂತರಾಗುತ್ತಿರುವುದರಿಂದ ಆಚರಣೆಯಲ್ಲಿಯೂ ಬದಲಾವಣೆ ಆಗಿರಬಹುದೇನೋ. ಏನಿದ್ದರೂ, ಇದು ಮನೋವೈಜ್ಞಾನಿಕ ವಿಶ್ಲೇಷಣೆಗೆ ಅರ್ಹವಾದ ವಿಷಯವೇನೋ ಹೌದು!